ಬಡವರ ನೆನೆದು ಹಾಡಲ್ಲೇ ಕಣ್ಣೀರಾದ ರವಿಶಂಕರ್ ಗೌಡ

Suvarna News   | Asianet News
Published : Apr 08, 2020, 08:38 PM ISTUpdated : Apr 08, 2020, 08:47 PM IST
ಬಡವರ ನೆನೆದು ಹಾಡಲ್ಲೇ ಕಣ್ಣೀರಾದ ರವಿಶಂಕರ್ ಗೌಡ

ಸಾರಾಂಶ

ರವಿಶಂಕರ್ ಗೌಡ ಎಷ್ಟು ಒಳ್ಳೆಯ ನಟರೋ ಅಷ್ಟೇ ಒಳ್ಳೆಯ ಗಾಯಕ ಕೂಡ ಹೌದು. ಆದರೆ ಅದೇನೇ ಬಹುಮುಖ ಪ್ರತಿಭೆಗಳಿದ್ದರೂ ಈಗ ಎಲ್ಲರಂತೆ ಮನೆಯೊಳಗಿರಬೇಕಾದ ಪರಿಸ್ಥಿತಿ. ಆದರೆ ಸಂಜೆ ಹೊತ್ತಿಗೆ ಮನೆಯಲ್ಲೇ ಒಂದು ಸಣ್ಣ ರಸಮಂಜರಿ ಅಭ್ಯಾಸ ಮಾಡಿಕೊಂಡಿದ್ದಾರೆ. ಪತ್ನಿ ಸಂಗೀತ ಖ್ಯಾತ ಗಾಯಕಿ ಮಂಜುಳಾ ಗುರುರಾಜ್ ಪುತ್ರಿ. ಸೂರ್ಯ ತೇಜಸ್ವಿ ಮತ್ತು ಶೌರ್ಯ ತೇಜಸ್ವಿ ಎನ್ನುವ ಇಬ್ಬರು ಗಂಡು ಮಕ್ಕಳು. ಇದರ ನಡುವೆ ರವಿಶಂಕರ್ ಹಾಡಿದ ಗೀತೆಯೊಂದು ಫೇಸ್ಬುಕ್‌ನಲ್ಲಿ ಸಕತ್ ವೈರಲ್ ಆಗಿತ್ತು. ಆ ಎಲ್ಲ ವಿಚಾರಗಳ ಬಗ್ಗೆ ಅವರು ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.  

ರವಿಶಂಕರ್ ಗೌಡ ಅವರು ಇಷ್ಟೊಂದು ಸಿನಿಮಾಗಳಲ್ಲಿ ನಟಿಸಿದರೂ ಜನ ಅವರ ಧಾರಾವಾಹಿಯ ಪಾತ್ರವನ್ನು ಮರೆಯುವುದೇ ಸಾಧ್ಯವಿಲ್ಲವೇನೋ! ಯಾಕೆಂದರೆ ಇದೀಗ ಕೊರೋನ ಕಾಯಿಲೆಗೆ ಔಷಧಿಯೇ ಇಲ್ಲ  ಎನ್ನುವ ಸುದ್ದಿ ಹರಡಿದಾಗಲೂ, ಔಷಧಿ ಡಾಕ್ಟರ್ ವಿಠಲ್ ರಾವ್ ಅವರಲ್ಲಿದೆ ಎನ್ನುವಂತೆ ಟ್ರೋಲ್‌ಗಳು ಹರಡಿದ್ದವು.  ಸಿನಿಮಾಗಳಲ್ಲಿ ತಮ್ಮ ಗಮನಾರ್ಹ ನಟನೆಯ ಗುರುತಿಸಿಕೊಂಡಿದ್ದ ರವಿಶಂಕರ್ ಎಷ್ಟು ಒಳ್ಳೆಯ ನಟರೋ ಅಷ್ಟೇ ಒಳ್ಳೆಯ ಗಾಯಕ ಕೂಡ ಹೌದು. ಆದರೆ ಅದೇನೇ ಬಹುಮುಖ ಪ್ರತಿಭೆಗಳಿದ್ದರೂ ಈಗ ಎಲ್ಲರಂತೆ ಮನೆಯೊಳಗಿರಬೇಕಾದ ಪರಿಸ್ಥಿತಿ. ಆದರೆ ಸಂಜೆ ಹೊತ್ತಿಗೆ ಮನೆಯಲ್ಲೇ ಒಂದು ಸಣ್ಣ ರಸಮಂಜರಿ ಅಭ್ಯಾಸ ಮಾಡಿಕೊಂಡಿದ್ದಾರೆ. ಪತ್ನಿ ಸಂಗೀತ ಖ್ಯಾತ ಗಾಯಕಿ ಮಂಜುಳಾ ಗುರುರಾಜ್ ಪುತ್ರಿ. ಸೂರ್ಯ ತೇಜಸ್ವಿ ಮತ್ತು ಶೌರ್ಯ ತೇಜಸ್ವಿ ಎನ್ನುವ ಇಬ್ಬರು ಗಂಡು ಮಕ್ಕಳು. ಇದರ ನಡುವೆ ರವಿಶಂಕರ್ ಹಾಡಿದ ಗೀತೆಯೊಂದು ಫೇಸ್ಬುಕ್‌ನಲ್ಲಿ ಸಕತ್ ವೈರಲ್ ಆಗಿತ್ತು. ಆ ಎಲ್ಲ ವಿಚಾರಗಳ ಬಗ್ಗೆ ಅವರು ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.

- ಶಶಿಕರ ಪಾತೂರು

ಮನೆಯೊಳಗೆ ಸಮಯ ಕಳೆಯಲು ಏನು ಉಪಾಯ ಮಾಡಿದ್ದೀರಿ? 
ಅದೇ ಸಮಸ್ಯೆಯಾಗಿದೆ. ಇಡೀ ದಿನ ಬಾಲ್ಕನಿಯಿಂದ ಬಾಲ್ಕನಿಗೆ ನಡೆದಾಡುವುದೇ ಆಗಿದೆ. ಸಮಯ ಇದ್ದರೂ ನಾನು ಗಡ್ಡ ತೆಗೆಸುತ್ತಿಲ್ಲ. ಯಾಕೆಂದರೆ ಸುಮ್ಮನಿರುವಾಗ ಕೆರೆಯೋದಕ್ಕಾದರೂ ಅನುಕೂಲವಾಗುತ್ತೆ ಎಂದು ಗಡ್ಡ ಬಿಟ್ಟುಕೊಂಡಿದ್ದೇನೆ. (ನಗು) ನಮ್ಮ ಮನೆ  ಏಳನೇ ಮಹಡಿಯಲ್ಲಿದೆ. ಆದರೆ ನನಗೆ ಕೆಳಗೆ ಇಳಿಯುವುದಕ್ಕೇನೇ ಮನಸಾಗುತ್ತಿಲ್ಲ. ಯಾಕೆಂದರೆ ಯಾರಿಗೆ ಕೊರೋನ ಇದೆ ಎನ್ನುವುದು ಯಾರಿಗೂ ಗೊತ್ತಿಲ್ಲವಲ್ಲ? ಕಾಲವೇ ಎಲ್ಲವನ್ನು ಹೇಳುತ್ತದೆ. ಆದರೆ ನಮ್ಮ ಎಚ್ಚರಿಕೆಯಲ್ಲಿ ನಾವು ಇರಲೇಬೇಕಾಗುತ್ತದೆ. ನಮಗಂತೂ ದಿನದ ಆಹಾರಕ್ಕೆ ತೊಂದರೆಯಿಲ್ಲ. ಆದರೆ ಅದು ಕೂಡ ಇಲ್ಲದವರ ಬಗ್ಗೆ ಯೋಚಿಸಿದಾಗ ಚಿಂತೆಯಾಗುತ್ತದೆ.

ನನ್ನ ಆಲೋಚನೆ, ಕೆಲಸ ನಿಲ್ಲಿಸೋಲ್ಲ: ರಕ್ಷಿತ್ ಶೆಟ್ಟಿ

ನಿಮ್ಮ ಎಲ್ಲ ಭಾವಗಳಿಗೂ ಈಗ ಸಂಗೀತವೇ ಮಾಧ್ಯಮವಾದಂತಿದೆ?
ಖಂಡಿತವಾಗಿ. ಪತ್ನಿ ಮಕ್ಕಳೊಂದಿಗೆ ಸೇರಿ ದಿನವೂ ಸಂಜೆ ಒಂದು ಆರ್ಕೆಸ್ಟ್ರಾ ತರಹ ಮಾಡುತ್ತೀವಿ. ನಾನು ಹಳೆಯ ಹಾಡು ಹಾಡುತ್ತೇನೆ. ಇತ್ತೀಚೆಗಂತೂ ನನಗೆ ಬಡವರ ಮಕ್ಕಳು ಒಪ್ಪೊತ್ತಿನ ತುತ್ತು ಸಿಗದೆ ಎಷ್ಟು ಕಷ್ಟಪಡುತ್ತಿರಬಹುದು ಎಂದು ಯೋಚಿಸಿ ಗಳಗಳ ಅತ್ತುಬಿಟ್ಟಿದ್ದೇನೆ. ದೊಡ್ಡವರಾಗಿ ನನಗೆ ಈಗಲೂ ಸಹ ಒಂದು ಹೊತ್ತಿನ ಊಟ ತಡವಾದರೇನೆ ಸಹಿಸಲು ಕಷ್ಟವಾಗುತ್ತದೆ. ಅಂಥದ್ದರಲ್ಲಿ ಚಿಕ್ಕ ಮಕ್ಕಳು ಪಾಪ ಏನು ಮಾಡಬೇಕು? ಅದೇ ಯೋಚನೆಯಲ್ಲಿ ಮಧ್ಯರಾತ್ರಿ ತನಕ ನಿದ್ದೆಯೇ ಬರಲಿಲ್ಲ. ಆಗ ನನಗೆ ನನ್ನ ಸಮಾಧಾನಕ್ಕೆ ಅವರಿಗಾಗಿ `ಚಿನ್ನ ನಿನ್ನ ಮುದ್ದಾಡುವೆ' ಸಿನಿಮಾದ `ಜೋ ಜೋ ಲಾಲಿ ನಾ ಹಾಡುವೆ' ಗೀತೆ ಹಾಡೋಣ ಅನಿಸಿತು. ವಿಚಿತ್ರ ಅಂದರೆ ಹಾಡಿನ ಟ್ರ್ಯಾಕ್ ಕನ್ನಡದಲ್ಲಿ ಯಾರಲ್ಲಿಯೂ ಸಿಗಲಿಲ್ಲ. ಅಂತರ್ಜಾಲದಲ್ಲಿ ಒಂದು ನಿಮಿಷದ ಟ್ರ್ಯಾಕ್ ಹಾಕಿ ಕಾಂಟ್ಯಾಕ್ಟ್ ಎಂದು ನಂಬರ್ ಹಾಕಿದ್ದರು. ಆ ಹೊತ್ತಲ್ಲೇ ನಂಬರ್ ಗೆ ಕರೆ ಮಾಡಿದಾಗ ಅದು ಕೇರಳಕ್ಕೆ ಹೋಯಿತು. ರಮೇಶ್ ಎನ್ನುವವರು ಮಾತನಾಡಿದರು. ಬರಿಯ ಟ್ರ್ಯಾಕ್ ಗೆ 250 ಇದೆ.  ವಿಡಿಯೋ ಜತೆಗೆ ಬೇಕಾದರೆ 350 ಆಗುತ್ತೆ ಎಂದರು. ನಾನು ಒಪ್ಪಿದೆ. ಅವರಿಗೆ ಪೇಟಿಎಮ್ ಮಾಡಿ ಟ್ರ್ಯಾಕ್ ತರಿಸಿ ಹಾಡಿದೆ!

ಮಾರ್ಕೆಟ್‌ನಲ್ಲಿ ಒಳ್ಳೇ ಹುಡುಗನದ್ದೇ ಹವಾ

ನಿಮ್ಮ ಗೀತೆಗೆ ಫೇಸ್ಬುಕ್ ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆಯಲ್ಲ?
ಹೌದು. ಅದರಲ್ಲಿಯೂ  `ಜೋ ಜೋ ಲಾಲಿ ನಾ ಹಾಡುವೆ' ಗೀತೆಗೆ ತುಂಬ ಒಳ್ಳೆಯ ಮೆಚ್ಚುಗೆಯ ಸುರಿ ಮಳೆ ಬಂತು. ವಿಷ್ಣು ಸರ್ ಮಗಳು ಕೀರ್ತಿಕೂಡ ಮಾತನಾಡುವಾಗ ಆ ಹಾಡಿನ ಬಗ್ಗೆ ನೆನಪಿಸಿಕೊಂಡರು. `ನಾನು ಚಿಕ್ಕವಳಿದ್ದಾಗ ಅಪ್ಪ ಯಾವಾಗಲೂ ಈ ಹಾಡನ್ನೇ ಹಾಡುತ್ತಿದ್ದರು.' ಎಂದು ಕೀರ್ತಿ ಹೇಳಿ ಸಂಭ್ರಮಿಸಿದಾಗ ಇನ್ನಷ್ಟು ಖುಷಿಯಾಯಿತು. ನಾನು ಚಿಕ್ಕೋನಾಗಿದ್ದಾಗ ನನ್ನಮ್ಮನೂ ಹಾಡುತ್ತಿದ್ದರು. ಬಹುಶಃ ನಮ್ಮ ಕಾಲಘಟ್ಟದಲ್ಲಿ ಎಲ್ಲರ ತಾಯಂದಿರೂ ಈ ಹಾಡನ್ನೇ ಹಾಡಿ ಮಲಗಿಸಿರಬಹುದು ಅನ್ಸುತ್ತೆ. ನಾನು ತುಂಬ ಕೆಟ್ಟ ಬಡತನದಿಂದ ಬೆಳೆದು ಬಂದವನು. ಊಟ ಇಲ್ಲದೆ ಹಸಿವಲ್ಲಿ ಮಲಗುವ ಬಡತನದ ಬಗ್ಗೆಯೂ ಗೊತ್ತಿದೆ ನನಗೆ. ನಾನು ನನ್ನ ತಂಗಿ ನಮ್ಮಮ್ಮ ಎಲ್ಲ ಹಸಿವಲ್ಲೇ ಮಲಗಿದ ದಿನಗಳು ನನಗೆ ನೆನಪಿವೆ. ದುಡ್ಡಿಲ್ಲದೆ, ಅಡುಗೆಗೆ ವಸ್ತುಗಳಿಲ್ಲದೆ ಆತಂಕದಲ್ಲಿ ದಿನ ದೂಡಿದ್ದೇವೆ. ಆ ದಿನಗಳಲ್ಲಿ ನಮ್ಮ ತಂದೆ ಡ್ರೈವರ್ ಆಗಿದ್ದರು. ಅವರು ಯಾರದೋ ಕಾರು ತೆಗೆದುಕೊಂಡು ತಿರುಪತಿ, ಧರ್ಮಸ್ಥಳ ಹೋಗುವವರನ್ನು ಕರೆದೊಯ್ದು ಎಲ್ಲ ಮುಗಿಸಿಕೊಂಡು ಬರುವಾಗ ವಾರ ದಾಟುತ್ತಿತ್ತು. ವಾರದಲ್ಲಿ ಮೂರು ದಿನ ಎಲ್ಲ ಹಸಿವಲ್ಲಿ ಮಲಗಬೇಕಾಗುತ್ತಿತ್ತು. ನನ್ನ ಹದಿನೈದು ವರ್ಷಗಳ ತನಕ ಬದುಕು ಹೀಗೆ ಇತ್ತು. ಈಗ ಎಲ್ಲ ಆರಾಮವಾಗಿದ್ದೇವೆ. ಆದರೆ ಲಾಕ್ಡೌನ್ ಸಂದರ್ಭದಲ್ಲಿ ದಿನಗೂಲಿ ಕಾರ್ಮಿಕರ ಬದುಕಿನ ಬಗ್ಗೆ ಯೋಚಿಸಿದಾಗ ಈ ವಿಚಾರ ಎಲ್ಲ ನೆನಪಾಯಿತು. ಹಾಗಾಗಿ ಗೀತೆ ಹಾಡುವಾಗ ನಿಜಕ್ಕೂ ನಾನು ಭಾವುಕನಾಗಿದ್ದೆ.

ಮೊದಲು ಮಾನವನಾಗು ಎಂದ ಶಿವರಾಜ್ ಕುಮಾರ್

ನಿಮ್ಮ ತಾಯಿ ತಂದೆಯ ಜತೆಗಿನ ಒಳ್ಳೆಯ ನೆನಪುಗಳನ್ನು ಹಂಚಿಕೊಳ್ಳುತ್ತೀರ?
ಅಮ್ಮ ಈಗ ಚೆನ್ನಾಗಿದ್ದಾರೆ. ಆರಾಮಾಗಿ ಮನೆಯಲ್ಲಿದ್ದಾರೆ. ಆದರೆ ನನ್ನ ತಂದೆ ಸ್ವಲ್ಪ ವರ್ಷಗಳ ಕೆಳಗೆ ತೀರಿಕೊಂಡರು. ಅವರು ಡ್ರೈವರ್ ಆಗಿ ಕೆಲಸ ಮಾಡುವ ಮುನ್ನ ಮಂಡ್ಯದ ನಂದ ಥಿಯೇಟರಲ್ಲಿ ಆಪರೇಟರ್ ಆಗಿದ್ದರು. ನನ್ನ ತಾಯಿ ಹೇಳುವ ಪ್ರಕಾರ ಅವರು ಕೊನೆಯದಾಗಿ ಪ್ರೊಜೆಕ್ಟ್ ಮಾಡಿದ ಸಿನಿಮಾ ಬಬ್ರುವಾಹನ. ನನ್ನ ಸಿನಿಮಾಸಕ್ತಿ ಅಲ್ಲಿಂದಲೇ ಶುರುವಾಯಿತು. ಆ ದಿನಗಳಲ್ಲಿ ಜಂಬೋ ರೀಲ್ ಅಂತ ಬರುತ್ತಿತ್ತು. ಆ ರೀಲ್‌ನ ದೊಡ್ಡ ಬಾಕ್ಸ್‌ನಲ್ಲಿ ಕಡ್ಲೆಪುರಿ ಹಾಕಿಕೊಟ್ಟು ನನ್ನ ಕೂರಿಸೋರು. ಎರಡು ಪ್ರಾಜೆಕ್ಟರ್ ಇರುತ್ತಿತ್ತು. ಒಂದರಲ್ಲಿ ಲೋಡಾಗಿರೋದು. ಎರಡರಲ್ಲಿಯೂ ಮಾನಿಟರ್‌ಗಾಗಿ ಒಂದು ಸಣ್ಣ ಸ್ಪೀಕರ್ ಇರುತ್ತಿತ್ತು. ಮಾನಿಟರ್‌ ಪಕ್ಕ ಕುಳಿತು ಆಪರೇಟರ್‌ ನೋಡುವ ಕಿಂಡಿಯಿಂದ ಚಿತ್ರ ನೋಡುತ್ತಿದ್ದೆ. ನಾನು ಮುದ್ದಾಗಿದ್ದೆ ಎಂದು ಚಿತ್ರಮಂದಿರದ ಮಾಲೀಕರು, ವಾಚ್‌ಮನ್‌ಗಳು ಸೇರಿದಂತೆ ಎಲ್ಲರೂ ನನ್ನನ್ನು ಎತ್ತಿಕೊಳ್ಳುತ್ತಿದ್ದರು. ನಮ್ಮ ಮನೆಯಲ್ಲಿ ನಾಟಕದ ಆಸಕ್ತಿ ಇರುವವರು ಹೆಚ್ಚು ಇದ್ದರು. ನಮ್ಮ ಮನೆಯಲ್ಲೇ ನಾಟಕ ಪ್ರ್ಯಾಕ್ಟೀಸ್ ನಡೆಯುತ್ತಿತ್ತು. ನನ್ನ ಸೋದರ ಮಾವಂದಿರು ನಾಟಕ ಮಾಡುತ್ತಿದ್ದರು.  ಹಾರ್ಮೋನಿಯಂ ಎಲ್ಲ ನಮ್ಮ ಮನೆಯಲ್ಲೇ ಇರುತ್ತಿತ್ತು. ಮೇಕಪ್‌ ಕೂಡ ನಮ್ಮ ಮನೆಯಲ್ಲೇ ಮಾಡಿಕೊಂಡು ಹೋಗುತ್ತಿದ್ದರು. ಹಾಗೆ ಇವೆಲ್ಲದರ ಪ್ರಭಾವ ನನ್ನನ್ನು ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂದು ಹೇಳಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು