'ಲವ್ ಮಾಕ್ಟೇಲ್' ಹಿಂದಿದೆ ಈ ಸೋಲಿನ ಕಥೆ; ಡಾರ್ಲಿಂಗ್ ಕೃಷ್ಣ ದಶಕದ ಜರ್ನಿ ಇದು

By Kannadaprabha NewsFirst Published Apr 8, 2020, 10:54 AM IST
Highlights

ಮದರಂಗಿ ಕೃಷ್ಣ ಚಿತ್ರರಂಗಕ್ಕೆ ಬಂದು ಹತ್ತು ವರ್ಷಗಳಾಗಿವೆ. ಈ ಹತ್ತು ವರ್ಷಗಳಲ್ಲಿ ಸೋಲು- ಗೆಲುವು ಎರಡನ್ನೂ ನೋಡಿದ್ದಾರೆ. ಸೋಲಿಗಿಂತ ದೊಡ್ಡ ಪಾಠವಿಲ್ಲ. ಸೋತವನಿಗೆ ಮಾತ್ರ ಗೆಲ್ಲುವ ದಾರಿಗಳನ್ನು ಹುಡುಕಲು ಸಾಧ್ಯ ಎನ್ನುವ ನಟ ಮದರಂಗಿ ಕೃಷ್ಣ ಅವರೊಂದಿಗಿನ ಮಾತುಗಳು ಇಲ್ಲಿವೆ.

ಮದರಂಗಿ ಕೃಷ್ಣ ಚಿತ್ರರಂಗಕ್ಕೆ ಬಂದು ಹತ್ತು ವರ್ಷಗಳಾಗಿವೆ. ಈ ಹತ್ತು ವರ್ಷಗಳಲ್ಲಿ ಸೋಲು- ಗೆಲುವು ಎರಡನ್ನೂ ನೋಡಿದ್ದಾರೆ. ಸೋಲಿಗಿಂತ ದೊಡ್ಡ ಪಾಠವಿಲ್ಲ. ಸೋತವನಿಗೆ ಮಾತ್ರ ಗೆಲ್ಲುವ ದಾರಿಗಳನ್ನು ಹುಡುಕಲು ಸಾಧ್ಯ ಎನ್ನುವ ನಟ ಮದರಂಗಿ ಕೃಷ್ಣ ಅವರೊಂದಿಗಿನ ಮಾತುಗಳು ಇಲ್ಲಿವೆ.

- ಹತ್ತು ವರ್ಷಗಳ ಹಿಂದೆ ಮದರಂಗಿ ಕೃಷ್ಣ ಏನಾಗಿದ್ದರು?

ಕ್ಲಾಪ್‌ಬೋರ್ಡ್‌ ಹಿಡಿದುಕೊಂಡು ಪುನೀತ್‌ ರಾಜ್‌ಕುಮಾರ್‌ ಅಭಿನಯದ ‘ಜಾಕಿ’ ಸಿನಿಮಾ ಸೆಟ್‌ನಲ್ಲಿ ಅಸಿಸೆಂಟ್‌ ಡೈರೆಕ್ಟರ್‌ ಆಗಿದ್ದ. ಹಾಗೆ 2010ರಲ್ಲಿ ಅಸಿಸ್ಟೆಂಟ್‌ ನಿರ್ದೇಶಕನಾಗಿ ಚಿತ್ರರಂಗಕ್ಕೆ ಬಂದೆ.

ನಿಮ್ಮನ್ನ ಚಿತ್ರರಂಗಕ್ಕೆ ಕರೆದಿದ್ದು ಯಾರು?

ಹತ್ತು ವರ್ಷಗಳ ಹಿಂದೆ ನಾನು ಮೈಸೂರಿನಲ್ಲಿ ಇದ್ದೆ. ಆಗ ಪೆಟ್ರೋಲ್‌ ಬಂಕ್‌ ಬಳಿ ದರ್ಶನ್‌ ಕಾರು ಬಂದು ನಿಂತಾಗ ಅವರನ್ನು ಜನ ಮುತ್ತಿಕೊಂಡಿದ್ದು ನೋಡಿದೆ. ಎಲ್ಲರೂ ಅವರಿಗೆ ವಿಶ್‌ ಮಾಡಿ ಶೇಕ್‌ ಹ್ಯಾಂಡ್‌ ಮಾಡುತ್ತಿದ್ದದ್ದನ್ನು ಕಣ್ಣಲ್ಲಿ ತುಂಬಿಕೊಂಡೆ. ಇದು ಜೀವನ ಅಂದರೆ, ಇದು ಸಾಧನೆ ಅಂದರೆ ಅಂತ ದರ್ಶನ್‌ ಅವರನ್ನ ಮುತ್ತಿಕೊಂಡಿದ್ದ ಗುಂಪನ್ನು ನೋಡಿ ಅನಿಸಿತು. ಅವತ್ತೇ ನಿರ್ಧರಿಸಿದೆ ಸಿನಿಮಾ ನನ್ನ ಜೀವನ ಆಗಬೇಕು ಅಂತ.

ಪುತ್ರ ರಣ್ವಿತ್‌ ಮೊದಲ ಬರ್ತಡೇಗೆ ಸ್ಪೆಷಲ್‌ ಗಿಫ್ಟ್‌ ನೀಡಿದ ರಿಷಬ್‌ ಶೆಟ್ಟಿ

ಈ ಹತ್ತು ವರ್ಷಗಳ ನಿಮ್ಮ ಹೆಜ್ಜೆ ಗುರುತನ್ನು ಹಿಂತಿರುಗಿ ನೋಡಿದಾಗ?

ಎರಡು ಚಿತ್ರಗಳಿಗೆ ಅಸಿಸ್ಟೆಂಟ್‌ ಡೈರೆಕ್ಟರ್‌, ಎರಡು ವರ್ಷ ‘ಕೃಷ್ಣ ರುಕ್ಮಿಣಿ’ ಧಾರಾವಾಹಿಯ ನಾಯಕ. 2013ರಲ್ಲಿ ‘ಮದರಂಗಿ’ ಎನ್ನುವ ಚಿತ್ರಕ್ಕೆ ನಾಯಕ. 2020ರಲ್ಲಿ ನನ್ನದೇ ಚಿತ್ರಕ್ಕೆ ನಾನೇ ನಾಯಕ, ನಿರ್ಮಾಪಕ ಮತ್ತು ನಿರ್ದೇಶಕ. ಸೋಲು, ಗೆಲುವು ಎರಡನ್ನೂ ನೋಡಿದೆ. ಖುಷಿ ಕೊಟ್ಟಿದೆ. ದುಃಖಪಟ್ಟಿದ್ದೇನೆ. ಸಂಕಟ ಅನುಭವಿಸಿದ್ದೇನೆ. ಮತ್ತೆ ಮೈ ಕೊಡವಿಕೊಂಡು ಎದ್ದಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ಗೆಲುವಿಗಿಂತ ಸೋಲು, ನನಗೆ ದೊಡ್ಡ ಸ್ಫೂರ್ತಿ ಮತ್ತು ಸವಾಲು ಆಗಿದೆ.

ನಿಮ್ಮನ್ನ ನಿರ್ದೇಶಕನನ್ನಾಗಿಸಿದ ಘಟನೆ ಅಥವಾ ಬೆಳವಣಿಗೆ ಏನು?

ಕೃಷ್ಣ ರುಕ್ಮಿಣಿ ಧಾರಾವಾಹಿ ಮಾಡುವಾಗ ಯಶಸ್ಸಿನ ಉತ್ತುಂಗ ನೋಡಿದೆ. ಮದರಂಗಿ ಚಿತ್ರವೂ ಗೆಲುವು ಕಂಡಿತು. ಆ ನಂತರ ಒಂದೊಂದೇ ಮೆಟ್ಟಿಲು ಇಳಿಯುತ್ತ ಬಂದೆ. ಒಂದು ಕ್ಷಣ ನನ್ನ ನಾನು ನೋಡಿಕೊಳ್ಳುವಷ್ಟರಲ್ಲಿ ಸೋಲಿನ ಕೊನೆಯ ಮೆಟ್ಟಿನಲ್ಲಿ ನಿಂತಿದ್ದೆ. ಭವಿಷ್ಯವೇ ಕಾಣಿಸುತ್ತಿಲ್ಲ. ಏನಾಯಿತು ನನಗೆ, ಯಾಕೆ ಹೀಗೆ ಎಂದು ನನ್ನ ನಾನೇ ಪ್ರಶ್ನೆ ಮಾಡಿಕೊಂಡೆ. ಈ ಸಿನಿಮಾನೇ ಬೇಡ. ಬೇರೆ ಬ್ಯುಸಿನೆಸ್‌ ಮಾಡೋಣ ಅಂತ ಎರಡ್ಮೂರು ಪ್ಲಾನ್‌ ಮಾಡಿಕೊಂಡೆ.

ಆಗೊಂದು ಯೋಚನೆ ಬಂತು. ಆರಂಭದ ದಿನಗಳಲ್ಲಿ ಚಿತ್ರರಂಗದಲ್ಲಿ ದಿನಕ್ಕೆ 100 ರುಪಾಯಿ ಸಂಪಾದಿಸುವಾಗಲೇ ಹೀರೋ ಆಗಬೇಕೆಂದು ಕನಸು ಕಂಡಿದ್ದೆ. ಈಗ ಒಂದು ತಂಡವೇ ನನ್ನೊಂದಿಗೆ ಇದೆ. ಆದರೂ ಸೋಲು ಒಪ್ಪಿಕೊಂಡು ಚಿತ್ರರಂಗ ಬಿಡಲು ಹೊರಟಿರುವೆ. ನಾನು ಅಂದರೆ ಇಷ್ಟೇನಾ, ನನ್ನ ಕನಸು, ಗುರಿ ಇಷ್ಟೇನಾ ಅಂತ ವಿಮರ್ಶೆ ಮಾಡಿಕೊಂಡಾಗ ನನ್ನೊಳಗೆ ಒಬ್ಬ ನಿರ್ದೇಶಕ ಹುಟ್ಟಿಕೊಂಡ. ನನ್ನ ಸೋಲಿಗೆ ನಾನೇ ಉತ್ತರ ಕಂಡುಕೊಳ್ಳಬೇಕು ಎಂದುಕೊಂಡಾಗ ಲವ್‌ ಮಾಕ್ಟೇಲ್‌ ಸಿನಿಮಾ ಜೀವ ಪಡೆಯಿತು.

ಸನ್ನಿವೇಶವನ್ನು ಸ್ವಾಗತಿಸಿ, ಪಾಸಿಟಿವ್‌ ಆಗಿರಿ : ರಮೇಶ್‌ ಅರವಿಂದ್‌

ಒಂದು ವೇಳೆ ನೀವು ನಿರ್ದೇಶಕ ಆಗದೆ ಹೋಗಿದ್ದರೆ?

ಚಿತ್ರರಂಗ ಬಿಟ್ಟು ಹೋಗಬೇಕಿತ್ತು ಅಥವಾ ಯಾರಾದರೂ ಬಂದು ನನ್ನ ಕೈ ಹಿಡಿಯುತ್ತಾರೆಯೇ ಎಂದು ಜೀವನಪೂರ್ತಿ ಕಾಯುತ್ತ ಕೂರಬೇಕಿತ್ತು. ಇವೆರಡು ಆಯ್ಕೆಗಳು ಬಿಟ್ಟರೆ ಬೇರೆ ದಾರಿ ನನ್ನ ಮುಂದೆ ಇರಲಿಲ್ಲ.

ಲವ್‌ ಮಾಕ್ಟೇಲ್‌ ಸಿನಿಮಾ ಮಾಡಿದ್ದು ಗೆಲುವಿಗಾಗಿಯಾ?

ಅಲ್ಲ. ನನ್ನ ಮನಸ್ಸಿನ ಸಮಾಧಾನಕ್ಕೆ. ಈ ಒಂದು ಸಿನಿಮಾ ನನಗೋಸ್ಕರ ಮಾಡಿಬಿಡೋಣ ಅಂದುಕೊಂಡೇ ಸಿನಿಮಾ ಕೈಗೆತ್ತಿಕೊಂಡೆ. ನಿಜ ಹೇಳಬೇಕು ಅಂದರೆ ಲವ್‌ ಮಾಕ್ಟೇಲ್‌ ಮಾಡಿದ್ದು ಪ್ರೇಕ್ಷಕರಿಗೆ ಅಲ್ಲ. ನನಗೆ. ಮೊದಲು ಸಿನಿಮಾ ನಮಗೆ ಇಷ್ಟಆಗಬೇಕು. ಆಮೇಲೆ ಆಡಿಯನ್ಸ್‌ ವಿಚಾರ. ಮೊದಲು ನಿನಗಾಗಿ ಸಿನಿಮಾ ಮಾಡು ಎನ್ನುವ ಪಾಠ ಕಲಿಸಿದ್ದು ಲವ್‌ ಮಾಕ್ಟೇಲ್‌.

ಈ ಯಶಸ್ಸಿನಲ್ಲಿ ನೀವು ಎಷ್ಟುಕತೆಗಳನ್ನು ಕೇಳಿದ್ದೀರಿ?

ನಾಲ್ಕೈದು ಕತೆ ಕೇಳಿದ್ದೇನೆ. ಯಾವುದೂ ಇಷ್ಟವಾಗಿಲ್ಲ. ಲವ್‌ ಮಾಕ್ಟೇಲ್‌-2 ಚಿತ್ರಕ್ಕೆ ನಿರ್ಮಾಪಕರು ಬಂದಿದ್ದಾರೆ. ಆದರೆ, ನಾವೇ ನಿರ್ಮಾಣ ಮಾಡೋಣ ಅಂತಿದ್ದಾರೆ ಮಿಲನಾ ನಾಗರಾಜ್‌. ಹಳೆಯ ಯಶಸ್ಸು ಮರಳಿ ಬಂದ ಸಂಭ್ರಮದಲ್ಲಿದ್ದೇನೆ.

ಸಿನಿಮಾದಿಂದ ಸಂಗಾತಿ ಸಿಕ್ಕಳು

ಸಿನಿಮಾ ನನಗೆ ಸೋಲು, ಗೆಲುವಿನ ಪಾಠ ಹೇಳಿಕೊಟ್ಟಿರೋ ಜೊತೆಗೆ ಮಿಲನ ನಾಗರಾಜ್‌ ಎಂಬ ಸಂಗಾತಿಯನ್ನೂ ಕೊಟ್ಟಿತು. ಅಪ್ಪ, ಅಮ್ಮ ಮತ್ತು ಮಿಲನ ನಾಗರಾಜ್‌ ನನ್ನ ವೈಯುಕ್ತಿಕ ಜೀವನ ಬೆನ್ನೆಲುಬುಗಳು. ನಿಜ ಜೀವನದಲ್ಲಿ ಕಪಲ್‌ ಆಗಿದ್ದವರು ಜತೆಗೂಡಿದರೆ ಏನಾದರೂ ಸಾಧಿಸಬಹುದು ಅಂತ ನಮ್ಮ ಜೋಡಿ ತೋರಿಸಿ ಕೊಟ್ಟಿದೆ. ತುಂಬಾ ಜನ ನನ್ನ ಮತ್ತು ಮಿಲನ ನಾಗರಾಜ್‌ ಅವರನ್ನ ಮಾದರಿಯಾಗಿಟ್ಟುಕೊಂಡಿದ್ದಾರೆ ಎಂದು ಕೇಳಿ ಸಂತೋಷ ಆಯ್ತು. ಜೂನ್‌ಗೆ ಲವ್‌ಮಾಕ್ಟೇಲ್‌ 2 ಸಿನಿಮಾ ಸೆಟ್ಟೇರುತ್ತದೆ. ಆದಿ ಯಾರನ್ನ ಮದುವೆ ಆಗುತ್ತಾನೆ ಅಂತ ಕಾದು ನೋಡಿ.

ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ನನ್ನ ನಿಜ ಜೀವನ ಕತೆಯಲ್ಲ

ಹೀಗೊಂದು ಶೀರ್ಷಿಕೆ ನನ್ನ ಹೆಸರಿನಲ್ಲಿ ಓಡಾಡುತ್ತಿದೆ. ನಿಜ ಹೇಳಬೇಕು ಅಂದರೆ ಅದು ನನ್ನ ನಿಜ ಜೀವನದ ಕತೆಯನ್ನು ಹೇಳುವ ಸಿನಿಮಾ ಅಲ್ಲ. ಈಗಾಗಲೇ ನಾವು ವರ್ಜಿನ್‌ ಹೆಸರಿನ ಸಿನಿಮಾ ಮಾಡಿದ್ದೇವೆ. ವರ್ಜಿನ್‌ ಬದಲಿಗೆ ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಹೆಸರು ಇಡಲು ನಿರ್ದೇಶಕರು ಯೋಚಿಸುತ್ತಿದ್ದಾರೆ ಅಷ್ಟೆ.

 

click me!