ಕನ್ನಡ ಚಿತ್ರರಂಗದ ಮೋಸ್ಟ್ ಹ್ಯಾಂಡ್ಸಮ್ ನಟ ರಮೇಶ್ ಅರವಿಂದ್ ಅಭಿನಯಿಸಿರುವ ಶಿವಾಜಿ ಸುರತ್ಕಲ್ 2 ನಿರ್ದೇಶಕ ಅಕಾಶ್ ಶ್ರೀವತ್ಸ ಸಂದರ್ಶನ ಇಲ್ಲಿದೆ...
ಏ.14ರಂದು ರಮೇಶ್ ಅರವಿಂದ್ ಅಭಿನಯದ ಸೈಕಾಲಜಿಕಲ್ ಥ್ರಿಲ್ಲರ್ ‘ಶಿವಾಜಿ ಸುರತ್ಕಲ್ 2’ ಬಿಡುಗಡೆಯಾಗುತ್ತಿದೆ. ರೇಖಾ ಕೆ.ಎನ್ ಮತ್ತು ಅನೂಪ್ ಗೌಡ ನಿರ್ಮಾಣದ ಈ ಸಿನಿಮಾದ ನಿರ್ದೇಶಕ ಆಕಾಶ್ ಶ್ರೀವತ್ಸ ಜೊತೆ ಮಾತುಕತೆ.
ಭರವಸೆ ಇದೆಯೋ, ಆತಂಕ ಇದೆಯೋ?
ಒಳ್ಳೆಯ ಕಂಟೆಂಟ್ ಕೊಟ್ಟಾಗ ನಮ್ಮ ಪ್ರೇಕ್ಷಕರು ಯಾವತ್ತೂ ಕೈ ಬಿಟ್ಟಿಲ್ಲ. ತಾವೇ ಪ್ರಚಾರ ಕೊಟ್ಟು ಸಿನಿಮಾ ಗೆಲ್ಲಿಸುತ್ತಾರೆ. ಆ ನಂಬಿಕೆ ನನಗಿದೆ. ಈ ಸಿನಿಮಾ ಮಕ್ಕಳ ಸಮೇತ ಕುಟುಂಬಪೂರ್ತಿ ಯಾವುದೇ ಮುಜುಗರ ಇಲ್ಲದೇ ನೋಡಬಹುದಾದ ಸೈಕಾಲಜಿಕಲ್ ಥ್ರಿಲ್ಲರ್. ಈ ಸಿನಿಮಾ ನೋಡಿ ಹೊರಬರುವ ಪ್ರತೀ ಪ್ರೇಕ್ಷಕನಲ್ಲೂ ಮೌನ ಆವರಿಸಿರುತ್ತದೆ ಎಂದು ನಂಬಿದ್ದೇನೆ. ನೋಡುಗರ ಪ್ರತಿಕ್ರಿಯೆಗೆ ಕಾಯುತ್ತಿದ್ದೇನೆ.
ಶಿವಾಜಿ ಸುರತ್ಕಲ್ ಫ್ರಾಂಚೈಸ್ ಆಗತ್ತೆ ಅನ್ನುವ ಐಡಿಯಾ ಮೊದಲೇ ಇತ್ತಾ?
ಶಿವಾಜಿ ಸುರತ್ಕಲ್ ಒಬ್ಬ ಸಾಮಾನ್ಯ ಮನುಷ್ಯ. ನಿದ್ದೆ ಬರದೆ ಒದ್ದಾಡುವ, ಆರೋಗ್ಯಕ್ಕೆ ಟ್ಯಾಬ್ಲೆಟ್ ತೆಗೆದುಕೊಳ್ಳುವ ಮನುಷ್ಯ. ಕೇಸ್ ಪರಿಹರಿಸಿದರೆ ಮಾತ್ರ ಆತ ಅಸಾಮಾನ್ಯ. ಆ ಪಾತ್ರ ಜೇಮ್ಸ್‌ಬಾಂಡ್ ಥರ, ಷೆರ್ಲಾಕ್ ಹೋಮ್ಸ್ ಥರ ಮತ್ತೆ ಮತ್ತೆ ಬರುವ ಪಾತ್ರ ಅಂತ ಅನ್ನಿಸಿತ್ತು. ಆದರೆ ಜನರು ಶಿವಾಜಿ ಸುರತ್ಕಲ್ 1 ಚಿತ್ರಕ್ಕೆ ಕೊಟ್ಟಅಭೂತಪೂರ್ವ ಪ್ರತಿಕ್ರಿಯೆಯಿಂದ ಈ ಸಿನಿಮಾ ಹುಟ್ಟಿಕೊಂಡಿತು.
ಈ ಸಿನಿಮಾದ ವಿಶೇಷತೆ ಏನು?
ಒಂದು ಪರಿಹರಿಸಬೇಕಾದ ಕೇಸ್ ಇರುತ್ತದೆ. ಅದರ ಜೊತೆಗೆ ಭಾವನಾತ್ಮಕ ಸಂಗತಿ ಇರುತ್ತದೆ. ಅಪ್ಪನ ಜೊತೆ ಸರಿಯಾಗಿ ವರ್ತಿಸದ ಒಬ್ಬ ವ್ಯಕ್ತಿಗೆ ತಾನು ತನ್ನ ಮಗುವಿನ ಜೊತೆ ಸರಿಯಾಗಿ ವರ್ತಿಸುತ್ತಿದ್ದೇನಾ ಎಂಬ ಅನುಮಾನ ಇರುತ್ತದೆ. ಅಂಥಾ ನೋವು ಪ್ರತಿಯೊಬ್ಬರಲ್ಲೂ ಇರಬಹುದು. ಹಾಗಾಗಿ ಇದು ನೋಡುಗನಿಗೆ ತನ್ನದೇ ಕತೆ ಅನ್ನಿಸಬಹುದು. ಇದು ಬುದ್ಧಿಗೆ ಕೆಲಸ ಕೊಡುವ, ಹೃದಯಕ್ಕೆ ತಾಕುವ ಸಿನಿಮಾ. ಸೀಟಿನ ತುದಿಗೆ ತಂದು ಕೂರಿಸುವಂತಹ ಥ್ರಿಲ್ಲರ್ ಅಂಶಗಳೂ ಇವೆ. ಮನಸ್ಸಿಗೆ ಆಹ್ಲಾದ ಅನ್ನಿಸುವ ಕೌಟುಂಬಿಕ ಕತೆಯೂ ಇದೆ. ಅವೆರಡರ ಸೊಗಸಾದ ಮಿಶ್ರಣ ಈ ಚಿತ್ರ. ಅದರ ಜೊತೆಗೆ ಇಲ್ಲಿ ಬರುವ ರಘು ರಮಣಕೊಪ್ಪ, ವಿನಾಯಕ ಜೋಶಿ, ರಾಧಿಕಾ ಚೇತನ್, ಮೇಘನಾ ಗಾಂವ್ಕರ್, ಆರಾಧ್ಯ, ನಿಧಿ ಹೆಗಡೆ ಎಲ್ಲಾ ಪಾತ್ರಕ್ಕೂ ಒಂದು ಕತೆ ಇರುತ್ತದೆ. ಹಾಗಾಗಿ ಎಲ್ಲಾ ಪಾತ್ರಗಳೂ ಮನಸ್ಸಲ್ಲಿ ಉಳಿಯುತ್ತವೆ.
ಶಿವಾಜಿ ಪಾತ್ರ ಇನ್ನೂ ಇಂಟರೆಸ್ಟಿಂಗ್ ಆಗಿದೆ : Ramesh Aravind
ಟ್ರೇಲರ್‌ನಲ್ಲಿ ರಮೇಶ್ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಏನದು?
ಅದರಲ್ಲಿ ಒಂದು ಪಾತ್ರ ಶಿವಾಜಿ. ಇನ್ನೊಂದು ಪಾತ್ರ ಏನು ಅಂತ ಸಿನಿಮಾದಲ್ಲಿ ನೋಡಬೇಕು. ರಮೇಶ್ ಸರ್ ಭಾವನೆಗಳನ್ನು ದಾಟಿಸುವುದರಲ್ಲಿ ಸಿದ್ಧಹಸ್ತರು. ಈ ಸಿನಿಮಾದಲ್ಲಿ ಮತ್ತೂ ಒಂದು ಹೆಜ್ಜೆ ಮೇಲೆ ಹೋಗಿ ನಟಿಸಿದ್ದಾರೆ. ಹಾಲಿವುಡ್ ನಟರನ್ನು ಮೀರಿಸಿದ ನಟನೆಯನ್ನು ನೋಡಬಹುದು. ಅವರ ಜೊತೆ ಕೆಲಸ ಮಾಡುವುದೇ ಖುಷಿಯ ಅನುಭವ. ಅವರು ನೆಗೆಟಿವ್ ಶೇಡ್ ಪಾತ್ರ ಮಾಡಿರುವುದು ಅಮೃತವರ್ಷಿಣಿ ನಂತರ ಇದೇ ಸಿನಿಮಾದಲ್ಲಿ.
Shivaji Surathkal 2: ರಮೇಶ್ ಪತ್ನಿಯಾಗಿ ನಟಿಸಿರುವ ರಾಧಿಕಾ ಹೇಳಿದ್ದಿಷ್ಟು
ಸೈಕಾಲಜಿಕಲ್ ಥ್ರಿಲ್ಲರ್ ಯಾಕಿಷ್ಟ?
ನನಗೆ ಸೈಕಾಲಜಿಸ್ಟ್ ಆಗಬೇಕು ಅಂತ ಆಸೆ ಇತ್ತು. ಅದು ನೆರವೇರಲಿಲ್ಲ. ಈಗ ಸಿನಿಮಾ ಮೂಲಕ ಮನುಷ್ಯನ ಮನಸ್ಸಿಗೆ ಸಂಬಂಧಿಸಿದ ತಾಕಲಾಟಗಳನ್ನು ಅರಿಯಲು ಯತ್ನಿಸುತ್ತಾ, ಅದನ್ನು ಪ್ರೇಕ್ಷಕರಿಗೆ ತಲುಪಿಸುತ್ತಿದ್ದೇನೆ.