ರಕ್ಷಾ ಬಂಧನ ಹಬ್ಬದ ಸಂಭ್ರಮ/ ಕನ್ನಡದ ಸೂಪರ್ ಅಣ್ಣ-ತಂಗಿ/ ಯಶ್ ಸಹೋದರಿಯ ಮನದಾಳ/ ಅಣ್ಣನ ಬಗ್ಗೆ ಗೊತ್ತಿಲ್ಲದ ಸಾಕಷ್ಟು ಮಾಹಿತಿ ಹಂಚಿಕೊಂಡ ತಂಗಿ
ಭಾರತೀಯ ಸಿನಿಮಾ ಸ್ಟಾರ್ ಎಂದರೇನೇ ತನ್ನ ಚಿತ್ರದಲ್ಲಿ ಸಂಬಂಧಗಳಿಗೆ ಬೆಲೆ ಕೊಡುವವನಾಗಿರಬೇಕು. ಆದರೆ ನಿಜ ಜೀವನದಲ್ಲಿ ಕಲಾವಿದನ ಮನೆಯೊಳಗಿನ ಸಂಬಂಧಗಳು ಹೇಗಿವೆ ಎನ್ನುವ ಬಗ್ಗೆ ಯಾರಿಗೂ ಅಂಥ ಕಾಳಜಿ ಇರುವುದಿಲ್ಲ. ಆದರೆ ರಾಕಿಂಗ್ ಸ್ಟಾರ್ ಯಶ್ ಅದಕ್ಕೊಂದು ಅಪವಾದ. ಅವರು ನಿಜ ಜೀವನಲ್ಲಿ ತನ್ನ ತಂಗಿಯನ್ನು ಎಷ್ಟು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದರೆ ಅಣ್ಣ ತಂಗಿ ಸಂಬಂಧಕ್ಕೆ ಇವರೇ ಮಾದರಿ ಎನ್ನುವಂಥ ಜೋಡಿ ಅದು. ಅಂಥ ಅಣ್ಣನ ಅಕ್ಕರೆ, ಪ್ರೀತಿ, ಮಮತೆ, ಕಾಳಜಿಯ ಬಗ್ಗೆ ಸ್ವತಃ ಯಶ್ ತಂಗಿ ನಂದಿನಿಯವರು ಸುವರ್ಣ ನ್ಯೂಸ್.ಕಾಮ್ ಗೆ ನೀಡಿರುವ ವಿಶೇಷ ಮಾಹಿತಿ ಇಲ್ಲಿದೆ. ಇದು ರಕ್ಷಾಬಂಧನದ ವಿಶೇಷ.
ಶಶಿಕರ ಪಾತೂರು
undefined
ನಿಮ್ಮ ಪಾಲಿಗೆ ಈ ಬಾರಿಯ ರಕ್ಷಾ ಬಂಧನ ಎಷ್ಟು ವಿಶೇಷ?
ಖಂಡಿತವಾಗಿಯೂ ನನಗೆ ಯಶ್ ನಂಥ ಅಣ್ಣನಿರಬೇಕಾದರೆ ಪ್ರತಿ ಸಲದ ರಕ್ಷಾಬಂಧನವೂ ವಿಶೇಷವೇ. ಕಳೆದ ವರ್ಷ ಎಲ್ಲೋ ಶೂಟಿಂಗ್‌ಗೆ ಎಂದು ಹೊರಟಿದ್ದವರು ಮಧ್ಯರಾತ್ರಿ ನಮ್ಮನೆಗೆ ಬಂದು ಶುಭ ಕೋರಿದ್ದರು. ಈ ಬಾರಿಯ ಎಲ್ಲಕ್ಕಿಂತ ಯಾಕೆ ವಿಶೇಷ ಅಂದರೆ ನಾನು ಹಾಸನದಲ್ಲಿದ್ದೇನೆ. ಅಣ್ಣ ಬೆಂಗಳೂರಲ್ಲಿರೋದು. ಆದರೆ, ರಕ್ಷಾ ಬಂಧನದಂದು ನನ್ನ ಜತೆಗೆ ಇರಬೇಕು ಎನ್ನುವ ಕಾರಣಕ್ಕಾಗಿ ಇಂದೇ ಅಣ್ಣ ಹೊರಟು ಬರುತ್ತಿದ್ದಾನೆ. ಜತೆಗೆ ನನ್ನ ಮಗ ಹುಟ್ಟಿರುವುದು ಕೂಡ ಈ ಬಾರಿಯ ಮತ್ತೊಂದು ಸ್ಪೆಷಲ್ ವಿಚಾರ.
ನೀವು ಯಶ್ ಅವರಿಗೆ ಕೊಡುವಂಥ ಸರ್‌ಪ್ರೈಸ್‌ಗಳೇನು?
ನಾನು ಎರಡು ಬಾರಿ ತಾಯಿಯಾದಾಗಲೂ ಅಣ್ಣನಿಗೆ ಹೇಳಬೇಕಾದರೆ ತಡವಾಗಿತ್ತು. ಅಂದರೆ ನನ್ನದು ಎರಡು ಕೂಡ ನಾರ್ಮಲ್ ಡೆಲಿವರಿ. ನೋವು ಬಂದು ಅಡ್ಮಿಟ್ ಆಗಿ ಡೆಲಿವರಿ ಆಗೋ ತನಕವೂ ಅಣ್ಣನಿಗೆ ಹೇಳಿರಲಿಲ್ಲ. ಮಗು ಹುಟ್ಟಿದ ಬಳಿಕ ಫೋನ್ ಮಾಡಿ ಹೇಳಿದಾಗ ಚೆನ್ನಾಗಿ ಬೈದಿದ್ದ ಅಮ್ಮಂಗೆ. "ಯಾಕೆ ನೀನು ಹಿಂಗೆಲ್ಲಾ ಮಾಡ್ತೀಯ? ಮೊದಲೇ ಯಾಕೆ ನನಗೆ ಹೇಳಿಲ್ಲ.." ಅಂತ. ಲಾಸ್ಟ್ ಟೈಮ್ ಚಿರಾಗ್ ಹುಟ್ಟಿದಾಗ ಅಣ್ಣ ಮನೆಯಲ್ಲೇ ಇದ್ದ. ಆದರೆ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಡೆಲಿವರಿ ಆದಮೇಲೇನೇ ಫೋನ್ ಮಾಡಿ ಹೇಳಿರೋದು! ಬೆಳಿಬೆಳಿಗ್ಗೆ ಇವೆರೆಲ್ಲಿ ಹೋದ್ರೂ ಅಂತ ಕೇಳಿದ್ದಕ್ಕೆ ಬೆಂಗಳೂರಲ್ಲೇ ಇರೋ ಮತ್ತೊಂದು ಮನೆಗೆ ಹೋಗಿರೋದಾಗಿ ಸುಳ್ಳು ಹೇಳಿದ್ದರಂತೆ ಅಮ್ಮ! ಒಂದು ರೀತಿ ಡೆಲಿವರಿ ಬಳಿಕ ಅಣ್ಣನಿಗೆ ತಿಳಿಸಿ ಮಾತನಾಡಿದ್ದೇ ಸರ್ಪ್ರೈಸ್ ಎನ್ನಬಹುದು. ಆದರೆ ಇದೆಲ್ಲ ಸಾಧ್ಯವಾಗೋದು ನಮ್ಮಮ್ಮನಿಂದ. ಅವನಿಗಾಗಲಿ, ಅಣ್ಣನಿಗಾಗಲೀ ಡೆಲಿವರಿ ಮೊದಲೇ ಗೊತ್ತಾದರೆ ತುಂಬಾನೇ ಟೆನ್ಷನ್ ಮಾಡ್ಕೋತಾರೆ; ಆ ಸಿಚುಯೇಶನ್ ಹ್ಯಾಂಡಲ್ ಮಾಡೋದು ಕಷ್ಟ ಆಗುತ್ತೆ ಅಂತ ಅಮ್ಮಾನೇ ಅವರಿಗೆ ಹೇಳ್ತಿರಲಿಲ್ಲ. ಅಮ್ಮ ತುಂಬ ಡೇರಿಂಗ್. ಅವರು ಹೇಗೆ ಎಂದರೆ ಎಲ್ಲಾನೂ ಅವರೇ ಫೇಸ್ ಮಾಡ್ತಾರೆ.
ಯಾವ ರಾಶಿಯವರಿಗೆ ಯಾವ ಬಣ್ಣದ ರಾಖಿ ಕಟ್ಟಬೇಕು
ಈ ಬಾರಿ ಮಗುವನ್ನು ನೋಡಿ ಯಶ್ ಹೇಳಿದ್ದೇನು?
ನನಗೆ ಮೊನ್ನೆ ದಿನ ಅಷ್ಟು ಬೇಗ ಅಣ್ಣ ಬರೋದು ಬೇಡ ಅಂತಾನೇ ಇತ್ತು. ಯಾಕೆಂದರೆ, ಬೆಂಗಳೂರಲ್ಲಿ ಕೊರೊನಾ ಹೆಚ್ಚಾಗಿದೆ. ರಿಸ್ಕ್ ತಗೊಂಡು ಓಡಾಡೋದು, ಇಲ್ಲಿ ತನಕ ಬರೋದು ಎಲ್ಲ ಬೇಡ ಎಂದೇ ಅಂದುಕೊಂಡಿದ್ದೆವು. ಆದರೆ ರಾತ್ರಿ ನನ್ನ ಡೆಲಿವರಿ ವಿಷಯ ಕೇಳಿದಾಗಿನಿಂದ ಅಣ್ಣ ಪದೇ ಪದೆ ಫೋನ್ ಮಾಡುತ್ತಿದ್ದ. ಅವನಿಗೆ ಅಳಿಯ ಹುಟ್ಟಿರುವ ಖುಷಿ ತಡೆಯೋಕೇನೇ ಆಗ್ತಿರಲಿಲ್ಲ. ತಡೆದು, ತಡೆದು ಇನ್ನೇನು ಎರಡು ದಿನಕ್ಕೆ ಬಂದೇ ಬಿಟ್ಟ. ಮಗೂನ ನೋಡ್ಕೊಂಡೇ ಹೋದ. ಗಿಫ್ಟ್ ತಂದಿದ್ದ.
ನೀವಿಬ್ಬರು ಜಗಳವಾಡಿದ್ದೇ ಇಲ್ಲವೇ?
ಸಾಮಾನ್ಯವಾಗಿ ಅಣ್ತಂಗೀರು ಚಿಕ್ಕಂದಿನಲ್ಲಿ ಜಗಳವಾಡೋದು ಸಹಜ. ಆದರೆ ನಮ್ಮ ವಿಚಾರ ಹಾಗಲ್ಲ. ನನಗೆ ಬುದ್ಧಿ ಬಂದಾಗಿನಿಂದ ನೆನಪು ಮಾಡೋದಾದ್ರೆ ನಾವಿಬ್ಬರು ಜಗಳವಾಡಿರುವುದೇ ಕಡಿಮೆ. ನಮ್ಮಿಬ್ಬರ ನಡುವೆ ವಯಸ್ಸಲ್ಲಿ ಒಂದೇ ವರ್ಷದ ಡಿಫರೆನ್ಸ್ ಇದ್ದರೂ, ಹತ್ತು ವರ್ಷ ದೊಡ್ಡ ಅಣ್ಣ ಹೇಗೆ ಕೇರ್ ಮಾಡುತ್ತಾನೋ ಅಷ್ಟೇ ಕಾಳಜಿಯಿಂದ ನೋಡುತ್ತಾನೆ ಪಾಪ. ಕೇರ್ ಲೈಕ್ ಎನಿಥಿಂಗ್ ಅಂದರೆ ಎಲ್ಲ ವಿಷಯದಲ್ಲಿಯೂ ಅಷ್ಟೇ. ಹಾಗಾಗಿ ನಾವು ಜಗಳವಾಡಿರೋದು ತುಂಬ ಕಡಿಮೆ ಯಾಕೆಂದರೆ, ಅವನಿಗೆ ನಮ್ಮ ಡ್ಯಾಡಿ ಭಯ ತುಂಬಾನೇ ಇತ್ತು. ನನಗೆ ಸಣ್ಣಗೇನಾದ್ರೂ ಕಾಟ ಕೊಟ್ಟರೂ ತಕ್ಷಣ ಡ್ಯಾಡಿಗೆ ಹೇಳಿಬಿಡುತ್ತಿದ್ದೆ. ಆ ಭಯಕ್ಕೆ ಆವಾಗೆಲ್ಲ ತುಂಬಾನೇ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಈಗ ಅಂಥ ಯಾವ ಭಯ ಇಲ್ಲವಾದರೂ ನಿಜವಾದ ಪ್ರೀತಿ, ಕಾಳಜಿ ಮಾತ್ರ ಹಾಗೆಯೇ ಮುಂದುವರಿಸಿದ್ದಾನೆ.