Puneeth Rajkumar Lucky Man ಒಪ್ಪದಿದ್ದರೆ ಈ ಚಿತ್ರ ಮಾಡುತ್ತಿರಲಿಲ್ಲ: ನಾಗೇಂದ್ರ ಪ್ರಸಾದ್‌

By Kannadaprabha NewsFirst Published Sep 9, 2022, 9:10 AM IST
Highlights

ಪುನೀತ್‌ ರಾಜ್‌ಕುಮಾರ್‌, ಡಾರ್ಲಿಂಗ್‌ ಕೃಷ್ಣ, ಸಂಗೀತಾ ಶೃಂಗೇರಿ, ರೋಶಿನಿ ಪ್ರಕಾಶ್‌, ಸಾಧು ಕೋಕಿಲ ನಟನೆಯ ಸಿನಿಮಾ ಇಂದು (ಸೆ.9) ಪ್ರೇಕ್ಷಕರ ಮುಂದೆ ಬರುತ್ತಿದೆ. ಈ ಚಿತ್ರವನ್ನು ನಿರ್ದೇಶಿಸಿರುವ ಎಸ್‌. ನಾಗೇಂದ್ರ ಪ್ರಸಾದ್‌ ಅವರೊಂದಿಗಿನ ಮಾತುಗಳು ಇಲ್ಲಿವೆ.

ಆರ್‌. ಕೇಶವಮೂರ್ತಿ

ಈ ಕತೆಯನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ?

ನಿಜ ಹೇಳಬೇಕು ಅಂದರೆ ಈ ಕತೆ ಪುನೀತ್‌ರಾಜ್‌ಕುಮಾರ್‌ ಅವರ ಆಯ್ಕೆ. ಅಪ್ಪು ಒಪ್ಪದೆ ಹೋದರೆ ನಾನು ಈ ಕತೆ ಬಿಟ್ಟು ಬೇರೆ ಕತೆಯ ಸಿನಿಮಾ ಮಾಡುವ ಯೋಚನೆಯಲ್ಲಿದ್ದೆ. ಹೀಗಾಗಿ ಕತೆಗಿಂತ ಮೊದಲು ನನ್ನ ಆಯ್ಕೆ ಅಪ್ಪು ಅವರೇ ಆಗಿದ್ದರು.

ಈ ಚಿತ್ರದಲ್ಲಿ ಪುನೀತ್‌ ಅವರು ಇರಬೇಕು ಅನಿಸಿದ್ದು ಯಾಕೆ?

ಅಣ್ಣಾವ್ರ ಕುಟುಂಬದ ಜತೆಗೆ ಸಿನಿಮಾ ಮಾಡಬೇಕು ಎನ್ನುವ ಕನಸು ಯಾರಿಗೆ ಇರಲ್ಲ ಹೇಳಿ? ನಾನು ಮತ್ತು ಅಪ್ಪು ಸರ್‌ ಒಂದೇ ವಯಸ್ಸಿನವರು ಅನಿಸುತ್ತದೆ. ನನ್ನನ್ನು ತುಂಬಾ ಹತ್ತಿರದಿಂದ ನೋಡಿಕೊಂಡು ಬಂದಿರುವ ಸ್ಟಾರ್‌ ನಟ ಅವರು.

ಮೂಲ ಚಿತ್ರದಲ್ಲಿ ಇರುವಂತೆ ಪುನೀತ್‌ ಪಾತ್ರವನ್ನು ಇಲ್ಲೂ ತಂದಿದ್ದೀರಾ?

ತುಂಬಾ ಬದಲಾವಣೆಗಳನ್ನು ಮಾಡಿದ್ದೇನೆ. ಆದರೆ, ನಾನು ಏನೇ ಬದಲಾವಣೆ ಮಾಡಿರೂ ಪುನೀತ್‌ ಅವರು ಅದಕ್ಕೆ ಬೆಂಬಲ ಕೊಡುತ್ತಿದ್ದರು. ಜತೆಗೆ ಅವರು ಕೂಡ ಒಂದಿಷ್ಟುಸಲಹೆಗಳನ್ನು ಕೊಡುತ್ತಿದ್ದರು.

ಈ ಚಿತ್ರಕ್ಕೆ ಪುನೀತ್‌ ಅವರ ಪಾತ್ರ ಎಷ್ಟುಪ್ರಾಮುಖ್ಯತೆ ಇದೆ?

ಅಪ್ಪು ಅವರ ಪಾತ್ರವೇ ಚಿತ್ರವನ್ನು ಮುನ್ನಡೆಸಿಕೊಂಡು ಹೋಗುತ್ತದೆ. ಚಿತ್ರದ ಮೊದಲ ಭಾಗ ಪೂರ್ತಿ ಅವರ ಪಾತ್ರ ಇದ್ದರೆ, ವಿರಾಮದ ನಂತರ ಅವರ ಮಾತು, ನೆರಳು ಇರುತ್ತದೆ. ಅಲ್ಲೂ ಕೂಡ ಪುನೀತ್‌ ಇಲ್ಲ ಎನ್ನುವ ಕೊರತೆ ಕಾಣಲ್ಲ.

'ಭಕ್ತ ಪ್ರಹ್ಲಾದ' ಚಿತ್ರಕ್ಕೂ ಪವರ್ ಸ್ಟಾರ್ 'ಲಕ್ಕಿ ಮ್ಯಾನ್‌'ಗೂ ಇದೆ ನಂಟು; ಏನದು?

ಈಗ ಜನ ಪುನೀತ್‌ ಅವರನ್ನು ದೇವರಂತೆ ಪೂಜಿಸುತ್ತಿದ್ದಾರೆ. ನೀವು ತೆರೆ ಮೇಲೆ ದೇವರನ್ನಾಗಿಸಿದ್ದೀರಲ್ಲ?

ಅಪ್ಪು ಅವರು ಇದ್ದಾಗಲೇ ನಾನು ಅವರನ್ನು ದೇವರಂತೆ ನೋಡಿದೆ. ಅದನ್ನೇ ತೆರೆ ಮೇಲೆ ತರಬೇಕು ಎಂದುಕೊಂಡೆ. ಈಗ ಅಭಿಮಾನಿಗಳು ಮಾತ್ರವಲ್ಲ, ಕರ್ನಾಟಕದಲ್ಲಿ ಎಲ್ಲೇ ಹೋದರೂ ಅಪ್ಪು ಎಲ್ಲರಿಗೂ ದೇವರಾಗಿ ಕಾಣುತ್ತಿದ್ದಾರೆ. ನಾನು ಅಪ್ಪು ಅವರ ಅಭಿಮಾನಿಗಳ ಮನಸ್ಸನ್ನು ತೆರೆ ಮೇಲೆ ತೋರಿಸಿದ್ದೇನೆ ಅಷ್ಟೆ.

ಡಾರ್ಲಿಂಗ್‌ ಕೃಷ್ಣ ಈ ಚಿತ್ರಕ್ಕೆ ನಾಯಕನಾಗಿದ್ದು ಹೇಗೆ?

ನಾನು ಅವರ ‘ಲವ್‌ ಮಾಕ್ಟೇಲ್‌’ ಚಿತ್ರ ನೋಡುತ್ತಿದ್ದಾಗ ಇವರೊಂದಿಗೆ ಸಿನಿಮಾ ಮಾಡಬೇಕು ಎನ್ನುವ ಯೋಚನೆ ಬಂತು. ಹೀಗಾಗಿ ‘ಲಕ್ಕಿಮ್ಯಾನ್‌’ ಚಿತ್ರಕ್ಕೆ ಅವರು ಹೀರೋ ಆಗಲು ‘ಲವ್‌ ಮಾಕ್ಟೇಲ್‌’ ಚಿತ್ರ ಕಾರಣವಾಯಿತು. ಡಾರ್ಲಿಂಗ್‌ ಕೃಷ್ಣ ನನ್ನ ಕಲ್ಪನೆಯ ಪಾತ್ರಕ್ಕೆ ಜೀವ ತುಂಬುವ ಜತೆಗೆ ಕತೆಗೆ ಸೂಕ್ತವಾಗಿದ್ದಾರೆ.

ಲಕ್ಕಿಮ್ಯಾನ್‌ ಚಿತ್ರದ ಕತೆಯನ್ನು ಒಂದು ಸಾಲಿನಲ್ಲಿ ಹೇಳುವುದಾದರೆ?

ನಾವು ಜೀವನದಲ್ಲಿ ಯಾರಿಗಾದರು ನೋವು ಕೊಟ್ಟಿರುತ್ತೇವೆ, ಅವರ ಕಣ್ಣೀರಿಗೆ, ನಿರಾಸೆಗಳಿಗೆ ಕಾರಣವಾಗಿರುತ್ತೇವೆ. ಒಂದು ವೇಳೆ ದೇವರು ಮತ್ತೊಂದು ಅವಕಾಶ ಕೊಟ್ಟು ನಮ್ಮ ತಪ್ಪುಗಳನ್ನು ತಿದ್ದಿಕೊಂಡರೆ ಹೇಗಿರುತ್ತದೆ, ನೋವು ಕೊಟ್ಟವರ ಬಾಳಲ್ಲಿ ಖುಷಿ ತುಂಬಿದರೆ ಹೇಗಿರುತ್ತದೆ ಎಂಬುದನ್ನು ಇಲ್ಲಿ ನೋಡಬಹುದು. ಜತೆಗೆ ನಮ್ಮೊಂದಿಗೆ ಇದ್ದಾಗ ತಿಳಿಯದ ಸಂಬಂಧಗಳ ಮಹತ್ವ ಇಲ್ಲದಿದ್ದಾಗ ತಿಳಿಯುತ್ತದೆ ಎನ್ನುವ ಆಲೋಚನೆ ಮೇಲೆ ಇಡೀ ಸಿನಿಮಾ ಸಾಗುತ್ತದೆ.

ಪುನೀತ್ ರಾಜ್‌ಕುಮಾರ್- ಡಾರ್ಲಿಂಗ್ ಕೃಷ್ಣ Lucky man ಚಿತ್ರಕ್ಕೆ ಯು ಸರ್ಟಿಫಿಕೇಟ್‌

ನಿಮ್ಮ ವೃತ್ತಿ ಪಯಣದಲ್ಲಿ ನಿಮ್ಮ ಅಣ್ಣಂದಿರ ಮಾರ್ಗದರ್ಶನ, ಸಲಹೆಗಳು ಇರುತ್ತವೆಯೇ?

ಪ್ರಭುದೇವ, ರಾಜು ಅವರು ಏನಾದರೂ ಹೇಳಬೇಕು ಅನಿಸಿದರೆ ಖಂಡಿತಾ ಹೇಳುತ್ತಾರೆ. ಆದರೆ, ನನಗೆ ಏನು ಬೇಕು ಎಂಬುದರ ಸ್ಪಷ್ಟತೆ ಇದೆ. ಹೀಗಾಗಿ ನನಗೆ ಏನೇ ಯೋಚನೆ ಬಂದರೂ ಮೊದಲು ಅದನ್ನು ಶೇರ್‌ ಮಾಡಿಕೊಳ್ಳುವುದು ನನ್ನ ಜತೆಗೇನೇ. ಯಾಕೆಂದರೆ ನನ್ನ ಐಡಿಯಾಗಳು ನನಗೇ ಮೊದಲು ಅರ್ಥ ಆಗಬೇಕು ಎಂಬುದು ನನ್ನ ಪಾಲಿಸಿ.

ಪ್ರಭುದೇವ ಹಾಗೂ ಪುನೀತ್‌ ಕಾಂಬಿನೇಶನ್‌ ಒಂದು ಹಾಡು ಇದೆಯಲ್ಲ?

ಈ ಹಾಡಿಗೆ ಪ್ರಭುದೇವ ಬಂದು ಹೆಜ್ಜೆ ಹಾಕಿದ್ದು ಅವರ ಸೋದರನ ಚಿತ್ರ ಎನ್ನುವುದಕ್ಕಿಂತ ಪುನೀತ್‌ ಇದ್ದಾರೆ ಎನ್ನುವ ಕಾರಣಕ್ಕೆ. ಹಾಡಿನ ಬಗ್ಗೆ ನಾನು ಹೇಳಿದ ಕೂಡಲೇ ಪ್ರಭುದೇವ ಅವರು ಸೆಟ್‌, ಕಾಸ್ಟೂ್ಯಮ್‌, ಹಾಡು ಹೀಗೇ ಇರಲಿ ಎಂದು ಉತ್ಸಾಹದಿಂದ ಒಪ್ಪಿಕೊಂಡರು. ಅಪ್ಪು ಮತ್ತು ಅಣ್ಣಾವ್ರ ಕುಟುಂಬ ಎನ್ನುವ ಕಾರಣಕ್ಕೆ ಪ್ರಭುದೇವ ಈ ಚಿತ್ರದ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ಹೊರತಾಗಿ ಚಿತ್ರದಲ್ಲಿ 8 ಥೀಮ್‌ ಹಾಡುಗಳಿವೆ.

ಎಷ್ಟುಚಿತ್ರಮಂದಿರಗಳಲ್ಲಿ ಸಿನಿಮಾ ಬರುತ್ತಿದೆ?

ನಿರ್ಮಾಪಕ ಸುಂದರಮ್‌ ಕಾಮರಾಜ್‌ ಅವರು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

click me!