
ಪ್ರಿಯಾ ಕೆರ್ವಾಶೆ
ಬಾಡಿ ಬಿಲ್ಡರ್, ಜಿಮ್ ಟ್ರೈನರ್ ಆಗಿ ಪ್ರಸಿದ್ಧರಾದವರು ನೀವು, ಈ ಸಿನಿಮಾ ನಿಮಗೆಷ್ಟುಮಹತ್ವದ್ದು?
ನಾನು ಮೊದಲು ಬಾಡಿ ಬಿಲ್ಡರ್ ಆಗಿದ್ದೆ. ಇಂಡೋ ಪಾಕಿಸ್ತಾನ್ ಸ್ಪರ್ಧೆಯಲ್ಲಿ ಗೋಲ್ಡ್ ಮೆಡಲ್, 18 ಅಂತಾರಾಷ್ಟ್ರೀಯ ಮಟ್ಟದ ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಿದ್ದೆ. 4 ಬಾರಿ ಕ್ಯಾಪ್ಟನ್ನೂ ಆಗಿದ್ದೆ. 4 ಬಾರಿ ಇಂಡಿಯಾ ಟೀಮ್ ಕೋಚ್ ಆಗಿದ್ದೆ. ಮಿ. ಇಂಡಿಯಾ ಪ್ರಶಸ್ತಿಯನ್ನು ಎರಡೆರಡು ಬಾರಿ ಪಡ್ಕೊಂಡಿದ್ದೀನಿ. ಏಕಲವ್ಯ ಪ್ರಶಸ್ತಿ ಪಡೆದ ರಾಜ್ಯದ ಮೊಟ್ಟಮೊದಲ ದೇಹದಾಢ್ರ್ಯ ಪಟು ನಾನು. ಇದಾದ ಮೇಲೆ ಜಿಮ್ ಟ್ರೈನರ್ ಆದೆ. ಈ ಸಿನಿಮಾ ನನಗಿಂತಲೂ ಎಲ್ಲ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗುತ್ತೆ. ಕ್ರೀಡೆಯಲ್ಲಿದ್ದವರು ಮನಸ್ಸು ಮಾಡಿದ್ರೆ ಸಿನಿಮಾ ಹೀರೋನೂ ಆಗಬಹುದು ಅನ್ನೋದಕ್ಕೆ ಸಾಕ್ಷಿಯಾಗುತ್ತೆ ಅನ್ನೋ ಅಭಿಮಾನ ನನಗಿದೆ.
ಈ ಚಿತ್ರದಲ್ಲಿ ನಿಮ್ಮ ದೇಹದಾಢ್ರ್ಯತೆಗಾಗಲೀ, ಜಿಮ್‌ಗಾಗಲೀ ಅವಕಾಶ ಇದ್ದ ಹಾಗಿಲ್ಲ?
ನಾನು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಹೆಚ್ಚಿನವರು ಕೇಳ್ತಿದ್ರು, ಏನ್ ಸಾರ್, ಇಷ್ಟುಸಾಧನೆ ಮಾಡಿದ್ದೀರಾ, ಒದೆ ತಿನ್ನೋ ಪಾತ್ರವನ್ನೇ ಮಾಡ್ತಿದ್ದೀರಲ್ಲಾ ಅಂತ. ನನಗೂ ಒಂದು ಸಂದರ್ಭ ಬರುತ್ತೆ, ದೇವ್ರಿದ್ದಾನೆ ಅಂದುಕೊಳ್ತಿದ್ದೆ. ಆ ಕಾಲ ಈಗ ಕೂಡಿಬಂದಿದೆ. ಸ್ನೇಹಿತರೆಲ್ಲರ ಸಹಕಾರದಿಂದ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಈ ಕತೆಗೆ ಫೈಟ್ಸ್ ಬೇಕಾಗಿಲ್ಲ, ಸೇರಿಸಿದ್ರೆ ಕತೆ ಹಾಳಾಗುತ್ತೆ. ಈವರೆಗಿನ ಸಿನಿಮಾದಲ್ಲಿ ನನ್ನ ಫೈಟ್ ಅನ್ನು ಎಲ್ಲರೂ ನೋಡಿದ್ದಾರೆ. ಅದಕ್ಕಿಂತ ಹೊರತಾದ ಪ್ರತಿಭೆ ನನ್ನಲ್ಲಿದೆ, ಭಿನ್ನ ಶೇಡ್‌ನ ಚಿತ್ರಗಳಲ್ಲೂ ನಾನು ಮಾಡಬಲ್ಲೆ ಅನ್ನೋದಕ್ಕೆ ಈ ಚಿತ್ರ ಉದಾಹರಣೆಯಾಗುತ್ತೆ. ಇದರಲ್ಲಿ ಹೀರೋ ವೈಭವೀಕರಣ ಇಲ್ಲ. ಫೈಟ್‌ನ ನಿರೀಕ್ಷೆಯಲ್ಲಿ ಬಂದರೆ ನಿರಾಸೆ ಆಗುತ್ತೆ. ಮುಂದೆ ಅವಕಾಶ ಸಿಕ್ಕರೆ ಆ್ಯಕ್ಷನ್ ಮೂವಿ ಮಾಡ್ತೀನಿ.
ಜಿಮ್ ಬಾಡಿ ಬಿಲ್ಡಿಂಗ್ ಅಥವಾ ಸಿನಿಮಾ ಇವುಗಳಲ್ಲಿ ಸದ್ಯದ ನಿಮ್ಮ ಆಯ್ಕೆ?
ಜಿಮ್! ಒಂದು ಕಡೆ ದೇವ್ರನ್ನ ನಿಲ್ಸಿ, ಇನ್ನೊಂದು ಕಡೆ ಸಿನಿಮಾ ನಿಲ್ಲಿಸಿ, ಮತ್ತೊಂದು ಕಡೆ ಜಿಮ್ ನಿಲ್ಲಿಸಿದ್ರೆ, ನಾನಾಗ್ಲೂ ಜಿಮ್ ಅನ್ನೇ ಆಯ್ಕೆ ಮಾಡ್ಕೊಳ್ತೀನಿ. ಜಿಮ್‌ನಲ್ಲೇ ದೇವರನ್ನು ಕಾಣ್ತೀನಿ, ಅಲ್ಲೇ ಚಿತ್ರಗಳನ್ನೂ ಕಾಣ್ತೀನಿ, ಜಿಮ್ ನನಗೆ ಉಸಿರು, ಊಟ, ನಿದ್ದೆ, ಸರ್ವಸ್ವ.
ಪುರುಷೋತ್ತಮ ಏನು ಹೇಳುತ್ತೆ?
ಹುಡುಗ ಹುಡುಗಿ ಮದ್ವೆ ಆಗೋದಕ್ಕೆ ಸಾವಿರಾರು ಜನ ಬೇಕು. ಆದರೆ ಸೆಪರೇಶನ್‌ಗೆ ಒಂದು ಕ್ಷಣದ ಇಗೋ ಸಾಕು. ಅಂಥವರಲ್ಲಿ ಈ ಸಿನಿಮಾ ಕೇಳುತ್ತೆ, ಡಿವೋರ್ಸ್ ಮಾಡಿ, ಆದರೆ ಅದಕ್ಕೂ ಮೊದಲು ಯಾಕೆ ಮದುವೆ ಆದ್ರಿ ಅನ್ನೋದನ್ನು ಯೋಚ್ನೆ ಮಾಡಿ. ಈ ಚಿತ್ರದಲ್ಲಿ ‘ಸಂಸಾರ ಅಂದ್ಮೇಲೆ..’ ಅನ್ನೋ ಹಾಡಿದೆ, ಇದನ್ನು ಮೂರು ಲಕ್ಷ ಜನ ಮೆಚ್ಚಿಕೊಂಡಿದ್ದಾರೆ. ಒಬ್ಬರೂ ಡಿಸ್‌ಲೈಕ್ ಕೊಟ್ಟಿಲ್ಲ. ಹೆಂಡತಿಗಾಗಿ ಗಂಡ ಯಾವ ತ್ಯಾಗಕ್ಕೂ ಸಿದ್ಧನಿರಬೇಕು, ತ್ಯಾಗಕ್ಕೆ ಮತ್ತೊಂದು ಹೆಸರೇ ಪುರುಷೋತ್ತಮ.
ತ್ರೇತಾಯುಗದ ಪುರುಷೋತ್ತಮ ಇದಕ್ಕೆ ಸ್ಫೂರ್ತಿಯಾ?
ಅದನ್ನು ಸಿನಿಮಾದಲ್ಲೇ ನೋಡಿ. ಸಾಮಾನ್ಯವಾಗಿ ಹೆಂಡ್ತಿ ಬಗ್ಗೆ ಗಂಡನಿಗೆ ಯಾವತ್ತೂ ಅನುಮಾನ. ಹೀಗಾಗಿ ಆಕೆ ತನಗೆ ನೋವಾದಾಗ ಮನಸ್ಸೊಳಗೇ ಬಚ್ಚಿಟ್ಟುಕೊಳ್ತಾಳೆ. ಅಗ್ನಿ ಪರ್ವತ ಹೊತ್ತುಕೊಂಡವಳಂತೆ ಇರುತ್ತಾಳೆ. ಅದರಿಂದ ಪಾರಾಗುವ ಬಗೆ ಹೇಗೆ ಅನ್ನೋ ಮೆಸೇಜ್ ಇದರಲ್ಲಿದೆ.
ಲಾಯರ್ ಪಾತ್ರ ಹೇಗಿತ್ತು?
ಲಾಯರ್ ಕೋಟು ಮೈಮೇಲೆ ಬಂದಾಕ್ಷಣ ಒಂಥರಾ ಸ್ಪಾರ್ಕ್ ಆಯ್ತು. ಲಾಯರ್‌ಗಳೆಲ್ಲ ಖುಷಿ ಪಡೋ, ಹೆಮ್ಮೆ ಪಡೋ ಪಾತ್ರ ಇದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.