ಲೂಸ್ ಮಾದ ಯೋಗಿ ಹಾಗೂ ಅದಿತಿ ಪ್ರಭುದೇವ ನಟನೆಯ ‘ಒಂಭತ್ತನೇ ದಿಕ್ಕು’ ಇಂದು ಬಿಡುಗಡೆ ಆಗುತ್ತಿದೆ. ದಯಾಳ್ ಪದ್ಮನಾಭನ್ ನಿರ್ದೇಶನ, ನಿರ್ಮಾಣದ ಚಿತ್ರವಿದು. ಕೋವಿಡ್ ಆತಂಕದ ನಡುವೆಯೂ ಸಿನಿಮಾ ರಿಲೀಸ್ ಮಾಡುತ್ತಿರುವ ಬಗ್ಗೆ,ಸಿನಿಮಾದ ವಿಶೇಷತೆ ಬಗ್ಗೆ ಅವರಿಲ್ಲಿ ಮಾತನಾಡಿದ್ದಾರೆ.
ಪ್ರಿಯಾ ಕೆರ್ವಾಶೆ
ಎಲ್ಲರೂ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹಾಕ್ತಿರುವಾಗ ನೀವು ಸಿನಿಮಾ ರಿಲೀಸ್ ಮಾಡೋ ಧೈರ್ಯ ಮಾಡಿದ್ದೀರಿ..
ಈಎರಡು ವರ್ಷದಲ್ಲಿ ಕೊರೋನಾ ಜೊತೆ ಬದುಕೋದು ಕಲಿತಿದ್ದೀವಿ. ಈ ಸಿನಿಮಾ ಬಿಡುಗಡೆಗೆ ಒಂದೂವರೆ ವರ್ಷ ಕಾದು ಡಿ.31ಕ್ಕೆ ರಿಲೀಸ್ ಮಾಡುವುದಾಗಿ ಹೇಳಿದೆ. ಕರ್ಫ್ಯೂ ಕಾರಣಕ್ಕೆ ಅದನ್ನು ಮುಂದಕ್ಕೆ ಹಾಕಿದೆ. ಆಮೇಲೆ ಅದೇನೋ ಆತ್ಮವಿಶ್ವಾಸದಲ್ಲಿ ಜನವರಿ 28ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಹೇಳಿದೆ. ಈ ಹೊತ್ತಿಗೆ ಅದೃಷ್ಟವಶಾತ್ ವೀಕೆಂಡ್ ಕರ್ಫ್ಯೂ ಹೋಯ್ತು, ಶೇ.50 ಆಸನ ವ್ಯವಸ್ಥೆಯಲ್ಲಿ ಸಿನಿಮಾ ಬಿಡುಗಡೆಗೆ ಮುಂದಾಗಿದ್ದೇವೆ. ಬೆಕ್ಕಿನ ಕತ್ತಿಗೆ ಯಾರಾದ್ರೂ ಗಂಟೆ ಕಟ್ಟಲೇಬೇಕಲ್ವಾ? ಫೆಬ್ರವರಿಯಿಂದ ಸ್ಟಾರ್ ಸಿನಿಮಾಗಳು ಬರುವ ಕಾರಣ ಈ ಬಿಡುಗಡೆ ಅನಿವಾರ್ಯವೂ ಆಗಿತ್ತು.
undefined
ನಿಮ್ಮ ಸಿನಿಮಾದ ಐದು ವಿಶೇಷತೆಗಳು?
1. ಕ್ರೈಮ್ ಸಿನಿಮಾ ಅಂದ್ರೆ ಕತ್ತಲು, ಬ್ಲಡ್ ಶೆಡ್ ಸಾಮಾನ್ಯ. ಆದರೆ ಇದು ಹಗಲಲ್ಲಿ ನಡೆಯುವ ಬ್ಲಡ್ ಶೆಡ್ ಇಲ್ಲದೇ ನಡೆಯುವ ಚಿತ್ರ.2. ಒಂದೇ ರೇಖೆಯಲ್ಲಿ ಸಾಗುವುದಕ್ಕಿಂತ ಭಿನ್ನವಾದ ಅಪರೂಪದ ನಾನ್ ಲೀನಿಯರ್ ನರೇಶನ್ ಇದರಲ್ಲಿದೆ.3. ಮೊದಲ ಬಾರಿಗೆ ಕಂಟೆಂಟ್ ಸಿನಿಮಾವನ್ನು ಕಮರ್ಷಿಯಲ್ ಟ್ರೀಟ್ ಮೆಂಟ್‌ನಲ್ಲಿ ಮಾಡಿದ್ದೇನೆ.4. ಯೋಗಿ ಅವರಾಗಲೀ, ಸಾಯಿ ಕುಮಾರ್ ಅವರಾಗಲೀ ಈ ಹಿಂದೆ ಮಾಡಿರೋ ಸಿನಿಮಾಗಳಿಗಿಂತ ಭಿನ್ನವಾಗಿ ರಿಯಲಿಸ್ಟಿಕ್ ಆಗಿ ಇಲ್ಲಿ ಕಾಣಿಸಿಕೊಂಡಿದ್ದಾರೆ.5. ಎಂಟರ್‌ಟೈನ್‌ಮೆಂಟ್ ಜೊತೆಗೆ ಕಾಡುವ ಗುಣವೂ ಸಿನಿಮಾದಲ್ಲಿದೆ.
ಟೈಟಲ್ ಏನನ್ನು ಸೂಚಿಸುತ್ತೆ?
ಸಿನಿಮಾದಲ್ಲಿ ಬ್ಯಾಗ್ ಮುಖ್ಯ ಪಾತ್ರವಾಗಿ ಬರುತ್ತೆ. ಅದು ಒಂದು ಕೈಯಿಂದ ಇನ್ನೊಂದು ಕೈಗೆ ಟ್ರಾವೆಲ್ ಮಾಡುತ್ತಲೇ ಇರುತ್ತದೆ. ಮೂರು ಸೆಗ್ಮೆಂಟ್‌ನಲ್ಲಿ ನೀವು ಈ ಸಿನಿಮಾ ನೋಡುತ್ತಿದ್ದರೆ ಪ್ರತೀ 45 ನಿಮಿಷಕ್ಕೆ ಬ್ಯಾಗ್ ಒಳಗೇನಿರ ಬಹುದು ಅನ್ನುವ ನಿಮ್ಮ ಊಹೆ ಬದಲಾಗುತ್ತಾ ಹೋಗುತ್ತೆ. ಶೇ.100 ರಷ್ಟು ನೀವು ಬ್ಯಾಗ್‌ನೊಳಗೇನಿದೆ ಅನ್ನೋದನ್ನು ಊಹಿಸೋದಕ್ಕಾಗಲ್ಲ.
ಒಂಭತ್ತನೇ ದಿಕ್ಕು ಅಂದರೆ?
ಜನರಲೀ ನೈನ್‌ತ್ ಡೈರೆಕ್ಷನ್‌ನಲ್ಲಿ ಸೀಕ್ರೆಟ್‌ಗಳು, ಮಿಸ್ಟ್ರಿಗಳು ಅಡಗಿಕೂತಿರುತ್ತವೆ ಎಂಬ ನಂಬಿಕೆ. ತೆರೆದಿಟ್ಟ ಬಯಲಲ್ಲಿ ಗುಟ್ಟುಗಳಿರಲ್ಲ. ಅದಿರುವ ಜಾಗವೇ ಬೇರೆ. ಈ ಒಂಭತ್ತನೆ ದಿಕ್ಕಿನ ಮಿಸ್ಟ್ರಿ ಬಗ್ಗೆ ಸಿನಿಮಾ ಇದೆ.
ಇಂಜಿನಿಯರ್ ಆಗಿದ್ದವರು ನೀವು. ಸ್ಯಾಂಡಲ್ವುಡ್‌ಗೆ ಬಂದು ಹತ್ರತ್ರ ಎರಡು ದಶಕಗಳಾಗಿವೆ. ನಿಮ್ಮ ಸಿನಿಮಾ ಪ್ರೀತಿ ಬಗ್ಗೆ ಹೇಳೋದಾದ್ರೆ?
ಪ್ಯಾಶನೇಟ್ ಆಗಿ ಸಿನಿಮಾ ಮಾಡಬೇಕು ಅನ್ನುವ ಆಸೆ ನನಗೆ. ಕಥೆಗಾರನಾಗಿ ಸಿನಿಮಾಕ್ಕೆ ಬಂದವನು. ನಟನಾಗಿಯೂ ಗುರುತಿಸಿಕೊಳ್ಳುವ ಪ್ರಯತ್ನ ಮಾಡಿದೆ. ಸಿನಿಮಾ ನಿರ್ದೇಶನ ಪ್ರಿಯವಾಯ್ತು. ನಿರ್ಮಾಪಕನೂ ಆದೆ. ಸ್ಯಾಂಡಲ್‌ವುಡ್‌ನ ಉದ್ಧಾರ ಮಾಡ್ತೀನಿ ಅನ್ನೋದು ಅಸಾಧ್ಯದ ಮಾತು. ಉತ್ತಮ ಸಿನಿಮಾ ಮಾಡುವ ಮೂಲಕ ಸ್ಯಾಂಡಲ್‌ವುಡ್ ಬೆಳವಣಿಗೆಗೆ ಕೈಲಾದ ಪ್ರಯತ್ನ ಮಾಡುತ್ತೀನಿ ಅನ್ನೋದು ನನ್ನ ಪ್ರಾಮಾಣಿಕ ನಿರ್ಧಾರ. ಸಿನಿಮಾದಿಂದ ಹಣ ಮಾಡುವ ದುರಾಸೆ ಇಲ್ಲ. ನನ್ನ ಹೊಟ್ಟೆ ತುಂಬುವಷ್ಟು ದುಡಿಮೆ ಮಾಡಿ ಒಳ್ಳೆಯ ಸಿನಿಮಾ ಮಾಡುವ ಅಭಿಲಾಷೆಯಷ್ಟೇ ನನಗಿರೋದು
ಪ್ರೇಕ್ಷಕರ ಬಗೆಗಿನ ನಿಮ್ಮ ನಂಬಿಕೆಗಳೇನು?
ಜನ ಎಷ್ಟು ಅಂತ ಮನೆಯೊಳಗೆ ಟೀವಿ ಮುಂದೆ ಕೂತಿರುತ್ತಾರೆ. ಅವರಿಗೂ ಒಂದೊಳ್ಳೆ ಮನರಂಜನೆ ಬೇಕು. ಒಂದು ತಿಂಗಳ ನಂತರ ರಿಲೀಸ್ ಆಗ್ತಿರೋ ಒಂದೊಳ್ಳೆ ಸಿನಿಮಾವನ್ನು ಜನ ಬಂದು ನೋಡ್ತಾರೆ ಅನ್ನೋ ನಂಬಿಕೆ, ಭರವಸೆ ಇದೆ.