ನಟಿ ಆರೋಹಿ ನಾರಾಯಣ್ ಅಭಿನಯಿಸಿರುವ ಚಿತ್ರಗಳು ನಾಲ್ಕು. 'ದೃಶ್ಯ’ದ ಮೂಲಕ ಆರಂಭವಾದ ಪಯಣ ಈಗ `ದೃಶ್ಯ 2’ರಲ್ಲಿಯೂ ಮುಂದುವರಿದಿದೆ. ಇದರ ನಡುವೆ `ಭೀಮಸೇನ ನಳಮಹಾರಾಜ’ ಮತ್ತು ಶಿವಾಜಿ ಸುರತ್ಕಲ್ ಸಿನಿಮಾಗಳಲ್ಲಿ ಗಮನಾರ್ಹ ಪಾತ್ರ ನಿಭಾಯಿಸಿರುವ ಆರೋಹಿಯವರ ಮಾತುಗಳು ಇಲ್ಲಿವೆ.
ಚೆಲುವಿನ ನಟಿ ಆರೋಹಿ ಅಪರೂಪದ ಹೀರೋಯಿನ್! ಅದಕ್ಕೆ ಕಾರಣ ಅವರು ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದು ಕಡಿಮೆಯಾಗಿರುವುದೂ ಒಂದು ಕಾರಣ. ಒಂದು ಹಂತದವರೆಗೆ ಅದಕ್ಕೆ ವಿದ್ಯಾರ್ಥಿ ಜೀವನ ಕಾರಣವಾಗಿದ್ದರೆ, ಕಳೆದ ಎರಡು ವರ್ಷಗಳಿಂದಂತೂ ಕೊರೊನಾ ಕಾರಣ ಯಾವ ಕ್ಷೇತ್ರವೂ ಸಕ್ರಿಯವಾಗಿಲ್ಲ. ಆದರೆ ಆರೋಹಿಯಂಥ ಕ್ರಿಯಾಶೀಲ ನಟಿಗೆ ಕಾಲ ಮತ್ತೊಂದು ಒಳ್ಳೆಯ ಅವಕಾಶ ತಂದುಕೊಟ್ಟಿದೆ. ದೃಶ್ಯ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ಹುಡುಗಿಗೆ ಅದೇ ದೃಶ್ಯದ ಎರಡನೇ ಭಾಗದಲ್ಲಿ ಇನ್ನಷ್ಟು ಪ್ರಮುಖ ಪಾತ್ರವೊಂದು ದೊರಕಿದೆ. ಆ ಖುಷಿಯಲ್ಲಿ ಆರೋಹಿ ನಾರಾಯಣ್ ಅವರು ತಮಗೆ ಇಷ್ಟವಾದಂಥ ಒಂದಷ್ಟು ವಿಚಾರಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಮ್ ಜೊತೆಗೆ ಹಂಚಿಕೊಂಡಿದ್ದಾರೆ.
- ಶಶಿಕರ ಪಾತೂರು
ನಿಮಗೆ ಸಿನಿಮಾ ನಟನೆಯಲ್ಲಿ ಆಸಕ್ತಿ ಮೂಡಿದ್ದು ಹೇಗೆ?
ನನಗೆ ಬಾಲ್ಯದಿಂದಲೂ ಪ್ರಭುದೇವ ಇಷ್ಟವಾಗಿದ್ದರು. ಬಹುಶಃ ನನ್ನ ಪಕ್ಕದ್ಮನೆಯಲ್ಲಿ ತಮಿಳು ಮಾತನಾಡುವವರಿದ್ದ ಕಾರಣದಿಂದ ಇರಬೇಕು; ಅವರ ಫೇವರಿಟ್ ಆಗಿದ್ದ ಪ್ರಭುದೇವ ನನಗೂ ಇಷ್ಟವಾಗಿದ್ದರು. ಅವರು ಡಾನ್ಸ್‌ನಲ್ಲಿ ಮಾಡುವ ಫೇಶಿಯಲ್ ಎಕ್ಸ್‌ಪ್ರೆಶನ್ಸ್ ಎಲ್ಲ ತುಂಬಾನೇ ಕಾಡುತ್ತಿತ್ತು. ತೀರ ಚಿಕ್ಕ ಹುಡುಗಿಯಾಗಿದ್ದಾಗಲೇ ಕನ್ನಡದಲ್ಲಿ ಪ್ರೇಮಾ, ಸೌಂದರ್ಯಾ, ಬಾಲಿವುಡ್‌ನಲ್ಲಿ ಮಾಧುರಿ ದೀಕ್ಷಿತ್, ರಾಣಿ ಮುಖರ್ಜಿಯವರ ಸಿನಿಮಾಗಳನ್ನು ನೋಡಿ ನಾನಾಗಿಯೇ ಕನ್ನಡಿಯ ಮುಂದೆ ಹೋಗಿ ಆಕ್ಟ್ ಮಾಡೋಕೆ ಶುರು ಮಾಡಿದ್ದೆ. ಬಾಲ್ಯದಿಂದಲೇ ರಾಜ್ಯ ಮಟ್ಟದ ಗಾಯಕಿಯಾಗಿ ಗುರುತಿಸಿಕೊಂಡಿದ್ದೆ. ಆಗ ನನ್ನ ನಟನಾಸಕ್ತಿಯ ಬಗ್ಗೆ ಹೇಳೋಕೆ ಅಂಜಿಕೆ ಇತ್ತು. ಆದರೆ ದೊಡ್ಡವಳಾದ ಮೇಲೆ ನನ್ನನ್ನು “ನೋಡೋಕೆ ಚೆನ್ನಾಗಿದ್ದೀಯ” ಎಂದು ಹೇಳುವುದನ್ನು ಕೇಳಿ ಧೈರ್ಯ ಬಂತು. ನಟನೆಯನ್ನು ವೃತ್ತಿಯಾಗಿ ಮಾಡುವಷ್ಟು ಚೆನ್ನಾಗಿ ನಟಿಸುತ್ತಾಳ ಎನ್ನುವ ಸಂದೇಹ ಮನೆಯವರಲ್ಲಿಯೂ ಇತ್ತು. ಆದರೆ ಮೊದಲ ಸಿನಿಮಾದಿಂದಲೇ ಪ್ರಶಂಸೆ ಸಿಕ್ಕಾಗ ಅವರಲ್ಲಿಯೂ ದೈರ್ಯ ಬಂತು.
ನಮ್ಮ ಬಾವುಟ ನೋಡುತ್ತಿದ್ದರೆ ರೋಮಾಂಚನ - ರಮೇಶ್ ಅರವಿಂದ್
ಕನ್ನಡ ಹಾಗೂ ಒಟ್ಟು ಸಿನಿಮಾರಂಗದಲ್ಲಿ ಇಷ್ಟವಾಗುವ ಕಲಾವಿದರು ಯಾರು?
ಡಾ.ರಾಜ್ ಕುಮಾರ್ ಅಂದರೆ ಯಾರಿಗಿಷ್ಟವಿಲ್ಲ ಹೇಳಿ? ನನಗಂತೂ ಅವರು ತುಂಬಾನೇ ಫೇವರಿಟ್. ನನ್ನ ಪ್ರಕಾರ ಅವರನ್ನು ಮೀರಿಸಿದಂಥ ನಟರನ್ನು ನಾನು ಕನ್ನಡದಲ್ಲಿ ಕಂಡಿಲ್ಲ. ಅವರ ಹೊರತಾಗಿ ಇಂದಿನ ಹೀರೋಗಳಲ್ಲಿ ಪುನೀತ್ ರಾಜ್ ಕುಮಾರ್, ಯಶ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರು ನನಗೆ ಇಷ್ಟ. ಹಿರಿಯ ನಟಿಯರಲ್ಲಿ ಲಕ್ಷ್ಮಿಯವರು ತುಂಬಾ ಇಷ್ಟ. ಬಳಿಕ ರಾಧಿಕಾ ಪಂಡಿತ್ ಅವರು ಇಷ್ಟ. ಪರಭಾಷಿಗರ ಬಗ್ಗೆ ಹೇಳುವುದಾದರೆ ನನಗೆ ತಮಿಳು ನಟಿ ತ್ರಿಷಾ ಅವರು ಇಷ್ಟ. ನಾನು ಚಿತ್ರರಂಗ ಪ್ರವೇಶಿಸಲು ಅವರೇ ಸ್ಫೂರ್ತಿ ಎಂದು ಕೂಡ ಹೇಳಬಹುದು. ಅವರ ಆತಡು, ವರ್ಷಂ, ಆರು ಸೇರಿದಂತೆ ಸುಮಾರು ಸಿನಿಮಾಗಳನ್ನು ಇಷ್ಟಪಟ್ಟು ನೋಡಿದ್ದೇನೆ. ತ್ರಿಷಾ ಅವರ ನಟನೆಯ ಜೊತೆಯಲ್ಲೇ ಅವರು ಆಯ್ಕೆ ಮಾಡುವ ಸಿನಿಮಾಗಳು ಮತ್ತು ಆಫ್ ಸ್ಕ್ರೀನ್ ತಮ್ಮನ್ನು ತಾವು ಪ್ರೆಸೆಂಟ್ ಮಾಡುವ ರೀತಿ ನನಗೆ ಅಚ್ಚುಮೆಚ್ಚು. ಅಂದರೆ ತುಂಬ ಡಿಗ್ನಿಫೈ ಆಗಿ ಕ್ಲಾಸಿಯಾಗಿ ಪ್ರೆಸೆಂಟ್ ಮಾಡುತ್ತಾರೆ. ಅದೇ ರೀತಿ ಕನ್ನಡದಲ್ಲಿ ರಾಧಿಕಾ ಪಂಡಿತ್ ಕಾಣಿಸುತ್ತಾರೆ. ಬಾಲಿವುಡ್‌ನಲ್ಲಿ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಅವರು ನನಗೆ ಇಷ್ಟ.
ಭಾರತಿಯೇ ಭಾರತ ಮಾತೆ ಅಂತಾ ಇದ್ರು..!- ಭಾರತಿ ವಿಷ್ಣುವರ್ಧನ್
ನಿಮ್ಮ ಮೆಚ್ಚಿನ ಸಿನಿಮಾಗಳು ಮತ್ತು ಅವುಗಳಲ್ಲಿನ ಇಷ್ಟದ ಬಗ್ಗೆ ಹೇಳುವಿರಾ?
ಕನ್ನಡದಲ್ಲಿ ಡಾ.ರಾಜ್ ಕುಮಾರ್ ಅವರ ಸಿನಿಮಾಗಳು, ಅನಂತನಾಗ್ ಅವರ ಹಳೆಯ ಚಿತ್ರಗಳು ನನಗೆ ಇಷ್ಟ. ಮುಖ್ಯವಾಗಿ `ಹಾಲು ಜೇನು’, ತಮಿಳಿನಲ್ಲಿ ಮಣಿರತ್ನಂ ನಿರ್ದೇಶನದ `ಕಣ್ಣತ್ತಿಲ್ ಮುತ್ತಮಿಟ್ಟಾಲ್’ ಸಿನಿಮಾ ಇಷ್ಟ. ಹಿಂದಿಯಲ್ಲಿ ಪೀಕು ಇಷ್ಟ. ತೆಲುಗುವಲ್ಲಿ ಬಾಹುಬಲಿಯ ಎರಡು ಚಾಪ್ಟರ್‌ಗಳು ಕೂಡ ಅವುಗಳ ಮೇಕಿಂಗ್ ಕಾರಣದಿಂದಾಗಿ ನನಗೆ ಇಷ್ಟ. ಹಾಡುಗಳ ವಿಚಾರಕ್ಕೆ ಬಂದರೆ ರವಿಚಂದ್ರನ್ ಸರ್ ಸಿನಿಮಾ ಹಾಡುಗಳು ತುಂಬ ಇಷ್ಟ. ಇಳಯರಾಜಾ ಅವರ ಸಂಗೀತ ನಿರ್ದೇಶನ ಇಷ್ಟ. ಇತ್ತೀಚೆಗೆ ಗಾಯಕಿ ಸುಕನ್ಯಾ ವರದರಾಜನ್ ಅವರ ಕಂಠ ಇಷ್ಟ. ಇಪ್ಪತ್ತರ ಹರೆಯದ ಗಾಯಕಿಯಾದರೂ ಅವರ ಧ್ವನಿ ಮಾಧುರ್ಯಕ್ಕೆ ನಾನು ಅಭಿಮಾನಿಯಾಗಿದ್ದೇನೆ. ಅರಿಜಿತ್ ಸಿಂಗ್ , ಸಿದ್ ಶ್ರೀರಾಮ್ ಮೊದಲಾದ ಗಾಯಕರೂ ಇಷ್ಟ.
ಯಾರಿಗೆ ಬಂತು ಸ್ವಾತಂತ್ರ್ಯ? - ರಿಯಲ್ ಸ್ಟಾರ್ ಉಪೇಂದ್ರ ನಿರಾಸೆ
ನಿಮ್ಮ ಗುರಿ ಮತ್ತು ಕನಸುಗಳೇನು?
ಸದ್ಯಕ್ಕೆ ದೊಡ್ಡ ಸ್ಟಾರ್ಸ್ ಸಿನಿಮಾಗಳಲ್ಲಿ ನಾಯಕಿಯಾಗುವ ಅವಕಾಶ ಪಡೆಯಬೇಕಾಗಿದೆ. ಒಳ್ಳೆಯ ನಟಿಯಾಗಿ ಗುರುತಿಸಿಕೊಳ್ಳುವುದು ನನ್ನ ಗುರಿ. ದಕ್ಷಿಣ ಭಾರತದ ಶ್ರೇಷ್ಠ ನಟಿಯಾಗಿ ದಕ್ಷಿಣದ ಎಲ್ಲ ಭಾಷೆಗಳಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿ ಗಳಿಸುವುದು ನನ್ನ ಕನಸು. ಯಾವುದಾದರೂ ಮಹಾರಾಣಿಯ ಬಯೋಪಿಕ್‌ನಲ್ಲಿ ನಟಿಸಬೇಕೆನ್ನುವುದು ಸದ್ಯದ ನನ್ನ ಆಕಾಂಕ್ಷೆ.