ನಮ್ಮ ಬಾವುಟ ನೋಡುತ್ತಿದ್ದರೆ ರೋಮಾಂಚನ: ರಮೇಶ್ ಅರವಿಂದ್

By Suvarna News  |  First Published Aug 8, 2021, 2:57 PM IST

ಸ್ವತಂತ್ರ ಭಾರತದಲ್ಲಿರುವ  ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂದರೆ ನೈತಿಕತೆ! ಸಮಾಜ ಎಂದರೇನು? ನಾನು, ನೀವು, ಅವರು ಸೇರಿದಾಗಲೇ ಸಮಾಜ. ಇಂಡಿಯಾ ಗ್ರೇಟ್ ಆಗಬೇಕು ಅಂದರೆ ನಮ್ಮ ಕೆಲಸದಲ್ಲಿ ನಾವು ಗ್ರೇಟ್ ಆಗಬೇಕು ಅಷ್ಟೇ ಎನ್ನುತ್ತಾರೆ ರಮೇಶ್ ಅರವಿಂದ್.


ರಮೇಶ್ ಅರವಿಂದ್ ಅವರು ಬಾಲ್ಯದ ನೆನಪುಗಳ ಮೂಲಕ ತಮ್ಮ ಸ್ವಾತಂತ್ರ್ಯ ದಿನದ ಅನುಭವಗಳನ್ನು ಹಂಚಿಕೊಳ್ಳತೊಡಗಿದರು. “ಎರಡು ವಾರಕ್ಕೆ ಮೊದಲೇ ಅಭ್ಯಾಸ ಮಾಡುವ ಮಾರ್ಚ್ ಫಾಸ್ಟ್‌ಗಳು, ಸ್ಕೂಲಲ್ಲಿ ಯುನಿಫಾರ್ಮ್ ಹಾಕ್ಕೊಂಡು  ಟ್ರಂಪೆಟ್ ಬಾರಿಸಿಕೊಂಡು ಪೆರೇಡ್ ಮಾಡುತ್ತಿದ್ದುದು ನೆನಪಾಗುತ್ತೆ. ಆನಂತರ ಒಂದು ಸರ್ಕಲ್ ಆಯ್ತು. ನಾವು ಸೀನಿಯರ್ಸ್ ಆಗಿ ಎಷ್ಟೊಂದು ಶಾಲೆಗಳಿಗೆ ಹೋಗಿ ಇಂಡಿಪೆಂಡೆಂಟ್‌ ಡೇ ಮಾಡಿದ್ದೇವೆ. ಈಗ ನಮ್ಮನೆ ಮುಂದೆಯೇ ಒಂದು ಸ್ಕೂಲ್ ಇರೋದರಿಂದ ಪ್ರತಿ ಬಾರಿ ಸ್ವಾತಂತ್ರ್ಯ ದಿನ ಹತ್ತಿರವಾಗುತ್ತಿದ್ದಂತೆ ಮಕ್ಕಳ ಸಡಗರ, ಸಂಭ್ರಮ ಶುರುವಾಗುವುದು ಗೊತ್ತಾಗುತ್ತದೆ. ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣ ಆ ಟ್ರಂಫೆಟ್‌ ಶಬ್ದ ಕೇಳಿಸಿಲ್ಲ” ಎಂದು ಕಾಲಘಟ್ಟದಲ್ಲಾದ ಸಹಜ ಬದಲಾವಣೆಗಳ ಬಗ್ಗೆ ಪ್ರಸ್ತಾಪಿಸುತ್ತಾ ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಮ್ ಪ್ರಶ್ನೆಗಳಿಗೆ ಉತ್ತರಿಸಲು ಶುರು ಮಾಡಿದರು.

- ಶಶಿಕರ ಪಾತೂರು

Tap to resize

Latest Videos

ನಿಮಗೆ ಭಾರತೀಯನಾಗಿ ಹೆಮ್ಮೆ ತರುವ ವಿಚಾರಗಳೇನು?

ದೆಹಲಿಯಲ್ಲಿ ಇಂದಿರಾಗಾಂಧಿಯವರ ಮ್ಯೂಸಿಯಮ್ಮಲ್ಲಿ ಒಂದು ಕಡೆ “ಐ ಕಾಂಟ್ ಅಂಡರ್‌ಸ್ಟಾಂಡ್‌, ಹೌ ಎನಿಯೊನ್‌ ಕ್ಯಾನ್ ಬಿ ಎನ್ ಇಂಡಿಯನ್  ಬಿ ನಾಟ್ ಬಿ ಪ್ರೌಡ್” ಎಂದು ಬರೆಯಲಾಗಿದೆ. ಅಂದರೆ “ಭಾರತೀಯನಾಗಿದ್ದು ಹೆಮ್ಮೆ ಪಡದೇ ಇರಲು ಹೇಗೆ ಸಾಧ್ಯ”ಅಂತ. ಅದಕ್ಕಿಂತ ಇನ್ನೇನು ಬೇಕು! ಅಂದರೆ ಅದೊಂಥರ ಪ್ಯಾಕೇಜ್ ಡೀಲ್‌ ಇದ್ದಂತೆ! ಭಾರತೀಯನಾಗಿ ಹುಟ್ಟಿದ್ದಿ ಅಂದಮೇಲೆ ಹೆಮ್ಮೆ ಪಡಲೇಬೇಕು ಅಂತ. ಏನೇ ಹೇಳಿ, ನಮ್ಮ ಬಾವುಟ ನೋಡುವಾಗ ಬರುವ ಹೆಮ್ಮೆ ಇದೆ ಅಲ್ವಾ? ಅದು ತಾನೇ ತಾನಾಗಿ ಬರೋದು! ಅದಕ್ಕೊಂದು ವಿಚಿತ್ರ ಅಭಿಮಾನ ಎಲ್ಲಿಂದ ಬರುತ್ತೋ ನಮಗೆ ಬಾವುಟ ನೋಡುವಾಗಲೇ ಒಂದು ಪುಳಕ ಆಗಿಬಿಡೋದು. `ಅಮೆರಿಕಾ ಅಮೆರಿಕಾ’ ಸಿನಿಮಾದಲ್ಲಿ ನೋಡಿರ್ತೀರ ನಮ್ಮ ಬಾವುಟಕ್ಕೆ ಅವಮಾನ ಮಾಡೋನಿಗೆ ಹೊಡೆದು ಬಿಡುವ ಒಂದು ದೃಶ್ಯ.. ಹಾಗೆ ಅನಿಸೋದು ಸಹಜ.

`ಪಾರು' ಧಾರಾವಾಹಿ ಅಪರೂಪದ ನೀಡಿದ್ದು ಅವಕಾಶ - ಶರತ್

ನಿಮ್ಮನ್ನು ಸ್ಫೂರ್ತಿಯಾದ ಸ್ವಾತಂತ್ರ್ಯ ಹೋರಾಟಗಾರ ಯಾರು?

ಗಾಂಧಿ ಸಿನಿಮಾವನ್ನು ನಾನು ಶಾಲೆಯಲ್ಲಿದ್ದಾಗ ನೋಡಿದ್ದೆ. ಅದರಲ್ಲಿ ಒಂದುಕಡೆ ಲಾಟಿಯಲ್ಲಿ ಹೊಡೆಯುವ ದೃಶ್ಯವಿತ್ತು. ಅವೆಲ್ಲ ನನ್ನ ಮೇಲೆ ತುಂಬಾನೇ ಪ್ರಭಾವ ಬೀರಿತ್ತು. ಗಾಂಧಿ ಸಿನಿಮಾ ನೋಡಿ ಹುಚ್ಚನಾಗಿದ್ದೆ. ನಮ್ಮ ಶಾಲೆಯ ಮುಂದೆ ಒಂದು ದೊಡ್ಡ ಬೋರ್ಡ್ ಇತ್ತು. ಅದರಲ್ಲಿ “ಒಂದು ಕಣ್ಣಿಗೆ ಒಂದು ಕಣ್ಣು ತೆಗೆಯುತ್ತೇವೆ ಎಂದು ಶುರು ಮಾಡಿದರೆ ಪ್ರಪಂಚವೆಲ್ಲ ಕುರುಡಾಗುತ್ತೆ” ಎಂದು ದೊಡ್ಡದಾಗಿ ಬರೆದಿತ್ತು. ಎಷ್ಟೊಂದು ಅರ್ಥಪೂರ್ಣ ಮಾತು ಹೇಳಿದ್ದಾರೆ ಎಂದು ಗಾಂಧಿಯ ಬಗ್ಗೆ ಗೌರವ ಉಕ್ಕಿತ್ತು. ದೇಶಪ್ರೇಮ, ಸ್ವಾತಂತ್ರ್ಯ ಹೋರಾಟ ಅಂದರೆ ಇಂದಿಗೂ ಮಹಾತ್ಮಾ ಗಾಂಧಿಯ ಹೆಸರೇ ಮೊದಲು ಜ್ಞಾಪಕವಾಗುತ್ತದೆ.

ಕ್ರೇಜಿಸ್ಟಾರ್ ಮೆಚ್ಚುಗೆ ಕೊನೆ ತನಕ ಮರೆಯಲ್ಲ - ಕಾವ್ಯ ಶ್ರೀ ನೂರಿತ್ತಾಯ

ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ವಿವಾದ ಮಾಡುವವರಿಗೆ ಏನು ಹೇಳುತ್ತೀರಿ?

“ಯಾವ ಸತ್ಯವೂ ಪೂರ್ಣ ಸತ್ಯವಲ್ಲ. ಎಲ್ಲ ಸತ್ಯಗಳೂ ಅರ್ಧ ಸತ್ಯಗಳೇ. ಅರ್ಧ ಸತ್ಯಗಳನ್ನು ಪೂರ್ಣ ಸತ್ಯಗಳೆಂದು ಪ್ರತಿಬಿಂಬಿಸಲು ಹೋದಾಗ ಸಮಸ್ಯೆ ಶುರುವಾಗುತ್ತವೆ” ಎನ್ನುವುದು ಒಂದು ಅರ್ಥಪೂರ್ಣ ಮಾತು. ಅದು ಯಾರ ಹೇಳಿಕೆ ಎನ್ನುವುದು ಈ ಕ್ಷಣ ನನಗೆ ನೆನಪಾಗುತ್ತಿಲ್ಲ. ಎಲ್ಲವೂ ಅವರವರ ದೃಷ್ಟಿಕೋನಕ್ಕೆ ಸಂಬಂಧಿಸಿದ ವಿಚಾರಗಳಾಗಿರುತ್ತವೆ. ನೋಡಿರುವ ಗುಂಪಿನ ಮಾತುಗಳನ್ನು ನೋಡದ ಗುಂಪಿನವರು ನಂಬಲೇಬೇಕಾಗುತ್ತದೆ. ಯಾಕೆಂದರೆ ಪ್ರಪಂಚ ನಡೆಯುವುದೇ ನಂಬಿಕೆಯ ಮೇಲೆ. ಆ ನಂಬಿಕೆಯ ಬಗ್ಗೆಯೇ ಅಪನಂಬಿಕೆ ಶುರು ಮಾಡಿದರೆ ಅದಕ್ಕೆ ಕೊನೆಯೇ ಇಲ್ಲ. ಅದು ಗಂಡ ಹೆಂಡತಿ ಸಂಬಂಧದಿಂದ ಹಿಡಿದು ನ್ಯಾಶನಲ್ ಲೆವೆಲ್ ವಿಚಾರಗಳವರೆಗೆ ನಂಬಿಕೆ ಮುಖ್ಯವಾಗುತ್ತದೆ. ಅಂಥವುಗಳಿಗೆಲ್ಲ ಉತ್ತರಿಸುತ್ತಾ ಹೋದರೆ ಅರ್ಥವೇ ಇರುವುದಿಲ್ಲ. ಯಾರೋ ಒಬ್ಬ ಮಹನೀಯರು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಕಾಣಿಸಿದರೆ ಅದನ್ನು ಒಪ್ಪಿಕೊಂಡು ಮುಂದುವರಿಯುವುದೇ ಬೆಟರ್. ಎಲ್ಲವನ್ನೂ ಅನುಮಾನದಿಂದ ಕೆಣಕುತ್ತಾ ಹೋದರೆ ನಮ್ಮ ಕೆಲಸ ಮಾಡೋದು ಯಾವಾಗ?!

`ಬ್ರಹ್ಮಗಂಟು' ಹೆಚ್ಚಿಸಿತು ಬಣ್ಣದ ನಂಟು - ಹರ್ಷಗೌಡ 

ಹೆಸರಿನ ಜೊತೆಗೆ ರಾಷ್ಟ್ರೀಯವಾದಿ ಎಂದು ಸೇರಿಸಿದರಷ್ಟೇ ರಾಷ್ಟ್ರಭಕ್ತರಾಗಬಹುದೇ?

ಇಂಥ ವ್ಯಕ್ತಿತ್ವದವರಿಗೆ ಉತ್ತರಿಸಿದಾಗ ಅನಿವಾರ್ಯವಾಗಿ ನನ್ನನ್ನು ಕೂಡ ಒಂದು ಬಣವಾಗಿ ಕಾಣುವಂತಾಗುತ್ತದೆ. ನಾನು ನನ್ನಷ್ಟಕ್ಕೇ ಇರುತ್ತೇನೆ. ಹಾಗಂತ ಉಳಿದವರು ಕೂಡ ನನ್ನ ಹಾಗೆಯೇ ಇರಬೇಕು ಎಂದು ನಾನು ಅಪೇಕ್ಷಿಸುವುದು ತಪ್ಪಾಗುತ್ತದೆ. ಅವರವರಿಗೆ ಏನು ಸರಿ ಎನ್ನುವುದನ್ನು ಅವರವರಿಗೆ ನಿರ್ಧರಿಸುವ ಹಕ್ಕಿದೆ. ನನ್ನ ಪ್ರಕಾರ ಗ್ರೇಟೆಸ್ಟ್ ದೇಶಭಕ್ತಿ ಏನೆಂದರೆ ನಮ್ಮ ನಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುವುದೇ ಆಗಿದೆ. ನೀವು ಯಾವುದೇ ವೃತ್ತಿಯಲ್ಲಿದ್ದರೂ ನಿಮ್ಮ ನಿಮ್ಮ ಕೆಲಸವನ್ನು ಅತ್ಯಂತ ಶ್ರೇಷ್ಠವಾಗಿ ಪ್ರತಿದಿನ ಮಾಡಿ. ನಿಮ್ಮ ವ್ಯಕ್ತಿತ್ವ ಪ್ರತಿದಿನ ಚೆನ್ನಾಗುತ್ತಾ ಹೋಗಬೇಕು. ನಿನ್ನೆಯ ರಮೇಶ್‌ಗೂ ಇವತ್ತಿನ ರಮೇಶ್‌ಗೂ ವ್ಯತ್ಯಾಸವೇ ಇಲ್ಲ ಅಂದರೆ ಏನು ಬೆಳವಣಿಗೆ ಅದು?! ಬೆಳವಣಿಗೆ ಎನ್ನುವುದು ಮೂಲಭೂತವಾಗಿರುವಂಥದ್ದು. ಶಾಲೆಯಿಂದ ಆಗುವ ಬೆಳವಣಿಗೆ ಒಂದು ಹಂತದಲ್ಲಿ ನಿಂತುಬಿಡುತ್ತದೆ. ಆದರೆ ಸರಿಯಾದ ದಿಕ್ಕಿನಲ್ಲಿ  ಆಗುವ ಬೆಳವಣಿಗೆ ನಮ್ಮನ್ನು ಶ್ರೇಷ್ಠರನ್ನಾಗಿ ಮಾಡುತ್ತದೆ. ಹೊರಗಡೆ ಬೋಧನೆ ಮಾಡಿಕೊಂಡು ನಮ್ಮ ಕೆಲಸದಲ್ಲೇ ಅನ್ಯಾಯ ನಡೆಯುತ್ತಿದ್ದರೆ ಅದು ಸರಿಯಾಗುವುದಿಲ್ಲ. ಮೊದಲು ನಾವು ಸರಿಯಾಗಿರಬೇಕು.

click me!