ದಯವಿಟ್ಟು ನೀನೇ ನನ್ನ ಜೊತೆ ನಟಿಸಬೇಕು ಎಂದು ಮೇಘನಾ ಅಂದಳು, ಒಪ್ಪಿಕೊಂಡೆ: ಪ್ರಜ್ವಲ್ ದೇವರಾಜ್

By Kannadaprabha NewsFirst Published Sep 15, 2023, 9:56 AM IST
Highlights

ಮೇಘನಾ ರಾಜ್, ಪ್ರಜ್ವಲ್ ದೇವರಾಜ್ ನಟನೆಯ ತತ್ಸಮ ತದ್ಭವ ಸಿನಿಮಾ ಇಂದು ತೆರೆ ಕಾಣುತ್ತಿದೆ. ವಿಶಾಲ್ ಆತ್ರೇಯಾ ನಿರ್ದೇಶನದ ಈ ಚಿತ್ರಕ್ಕೆ ಪನ್ನಗಾಭರಣ ಬಂಡವಾಳ ಹೂಡಿದ್ದಾರೆ. ಸಿನಿಮಾ ಬಗ್ಗೆ ಪ್ರಜ್ವಲ್ ದೇವರಾಜ್ ಮಾತು ಇಲ್ಲಿದೆ...

ಪ್ರಿಯಾ ಕೆರ್ವಾಶೆ

‘ಕೆಲವು ಕೇಸ್‌ಗಳು ಎರಡು ಕುರ್ಚಿಗಳ ಮಧ್ಯೆಯೇ ಸಾಲ್ವ್‌ ಆಗುತ್ತೆ’ ಅಂತ ಟ್ರೇಲರ್‌ನಲ್ಲಿ ದೇವರಾಜ್ ಹೇಳಿರುವ ಮಾತಿಗೂ, ನಿಮ್ಮ ಪಾತ್ರ ಕೈಗೆತ್ತಿಕೊಂಡ ಆರಿಕ ಕೇಸ್‌ಗೂ ಸಂಬಂಧ ಇದೆಯಾ?

ಹೌದು. ನಮ್ಮ ಸಿನಿಮಾದಲ್ಲಿ ಕೇಸ್‌ ಬಗೆಹರಿಯೋ ರೀತಿ ಹಾಗೇ ಇರುತ್ತೆ. ಇದು ರಿಯಾಲಿಟಿಗೆ ಬಹಳ ಹತ್ತಿರ ಇರುವ ಸಿನಿಮಾ. ನಾವು ಸಿನಿಮ್ಯಾಟಿಕ್‌ ಸ್ವಾತಂತ್ರ್ಯ ಇಟ್ಟುಕೊಂಡರೆ ಅದರಲ್ಲಿ ನಮಗೆ ಮಾಸ್ ಡೈಲಾಗ್‌ಗಳು, ಕೇಸು, ಫೈಟ್‌ ಎಲ್ಲಾ ಇರುತ್ತೆ. ಇದರಲ್ಲಿ ಅದೇನೂ ಇಲ್ಲ. ಒಂದು ಹಾಡೂ ಇಲ್ಲ. ನಿಜ ಜೀವನದಲ್ಲಿ ಕೇಸ್‌ ಇನ್ವೆಸ್ಟಿಗೇಟ್‌ ಮಾಡೋದಕ್ಕೆ ಹತ್ತಿರದಲ್ಲಿದೆ. ಪೊಲೀಸ್‌ ಅಂದಾಕ್ಷಣ ನೆನಪಾಗೋದೇ ನನ್ನ ತಂದೆ. ಹೀಗಾಗಿ ಅವರ ಮೂಲಕವೇ ಸಿನಿಮಾ ಬಗೆಗಿನ ಈ ಕ್ಲಾರಿಟಿಯನ್ನು ಕೊಟ್ಟು ಬಿಟ್ಟಿದ್ದೀವಿ.

ಎಷ್ಟೆ ರಿಯಾಲಿಟಿ ಅಂದರೂ ಸಿನಿಮಾ ಅಂದಮೇಲೆ ಸ್ವಲ್ಪ ಆದರೂ ವೈಭವೀಕರಣ ಬೇಕೇ ಬೇಕಾಗುತ್ತೆ ಅಲ್ವಾ?

ನಾನು ಎಷ್ಟು ಆಗುತ್ತೋ ಅಷ್ಟು ಕಂಟ್ರೋಲ್ಡ್‌ ಆ್ಯಕ್ಟ್ ಮಾಡಿದ್ದೀನಿ. ಆರಂಭದಲ್ಲಿ ಇಷ್ಟು ನೈಜವಾಗಿ ಮಾಡಿದ್ರೆ ಬೋರಿಂಗ್ ಅನಿಸಲ್ವಾ ಅನ್ನೋ ಯೋಚನೆ ಇತ್ತು. ಈಗ ಸಿನಿಮಾ ನೋಡಿದ್ಮೇಲೆ ನಿರ್ದೇಶಕ ವಿಶಾಲ್‌ ಪ್ರಯತ್ನ ಬೆಸ್ಟ್ ಅನಿಸುತ್ತಿದೆ. ನನ್ನ ಪಾತ್ರ ಅಂತಲ್ಲ, ಯಾವ ಪಾತ್ರದಲ್ಲೂ ವೈಭವೀಕರಣ ಇಲ್ಲ.

ಈ ಕನಸು ಹುಟ್ಟಿದ್ದು ಚಿರುನಿಂದ, ಈಗ ಕನಸು ನನಸಾಗಿದೆ: ಮೇಘನಾ ರಾಜ್

ದೇವರಾಜ್‌ ಸರ್‌ ಅವರನ್ನು ಪೊಲೀಸ್ ಪಾತ್ರಗಳು ಹುಡುಕ್ಕೊಂಡು ಬರ್ತಿದ್ದವು, ಈಗ ನಿಮ್ಮನ್ನ. ಇದು ಕೋ ಇನ್ಸಿಡೆಂಟಾ?

‘ಹುಷಾರು ಮಗ್ನೇ, ಇದೇ ಥರ ಪೊಲೀಸ್‌ ಪಾತ್ರ ಮಾಡ್ತಿದ್ರೆ ನನ್ನ ಥರ ಬರೀ ಆ ಪಾತ್ರಗಳಿಗೆ ಬ್ರಾಂಡ್ ಆಗಿ ಬಿಡ್ತೀಯ’ ಅಂದಿದ್ರು ಅಪ್ಪ. ‘ಸಿಕ್ಸರ್‌’ ಸಿನಿಮಾ ಮಾಡಿದಾಗ ಚಾಕ್ಲೇಟ್‌ ಹೀರೋ ಬಂದಿದ್ದಾನೆ ಅಂತಿದ್ರು. ಅದನ್ನು ಮೀರೋದಕ್ಕೆ ‘ಗೆಳೆಯ’ ಸಿನಿಮಾ ಮಾಡಿದೆ. ಈಗಲೂ ಸಾಕಷ್ಟು ಪೊಲೀಸ್ ಪಾತ್ರ ಬರ್ತಿವೆ. ಅವಾಯ್ಡ್ ಮಾಡ್ತಿದ್ದೀನಿ.

ಈ ಸಿನಿಮಾದ ಅರವಿಂದ್‌ ಅಶ್ವತ್ಥಾಮ ಪಾತ್ರಕ್ಕೆ ಬೇರೆ ಲೇಯರ್‌ಗಳಿವೆಯಾ?

ಇದೆ. ಪೊಲೀಸ್‌ ಆಫೀಸರ್‌ ಆಗಿ ಕೇಸ್‌ ಬಗೆಗಿನ ಆತನ ದೃಷ್ಟಿಕೋನಗಳಿವೆಯಲ್ಲಾ ಅವು ಬಹಳ ಡಿಫರೆಂಟ್‌. ಇವ್ನಿಗೆ ಅಡುಗೆ ಮಾಡೋ ಹವ್ಯಾಸ. ಅವನ ಪ್ರಕಾರ ಎಲ್ಲ ಪದಾರ್ಥಗಳು ಕರೆಕ್ಟ್ ಟೈಮಿಗೆ ಕರೆಕ್ಟಾಗಿ ಬಿದ್ದರೇನೇ ಅಡುಗೆ ರುಚಿಯಾಗಿರೋದು. ಅದೇ ಥರ ಎಲ್ಲ ಪುರಾವೆ ಕರೆಕ್ಟಾಗಿ ಸಿಕ್ಕಿದ್ರೆ ಮಾತ್ರ ಕೇಸ್ ಬಗೆಹರಿಸೋದಕ್ಕಾಗೋದು. ಅವ್ನು ಪ್ರತಿಯೊಂದು ಕೇಸ್ ಬಗ್ಗೆ ಯೋಚನೆ ಮಾಡೋದೇ ಅಡುಗೆ ಮಾಡ್ತಾ ಮಾಡ್ತಾ. ಬಹಳ ಸಟಲ್‌ ವ್ಯಕ್ತಿ. ಏನು ಯೋಚ್ನೆ ಮಾಡುತ್ತಿದ್ದಾನೆ ಅನ್ನೋದನ್ನೂ ಜಡ್ಜ್‌ ಮಾಡೋದು ಕಷ್ಟ. ಈ ಸಿನಿಮಾ ನೋಡ್ತಾ ನೋಡ್ತಾ ಪ್ರೇಕ್ಷಕರೂ ನನ್ನ ಜೊತೆಗೆ ಕೇಸ್‌ ಸಾಲ್ವ್ ಮಾಡ್ತಾರೆ. ಇದು ಇಂಟರ್‍ಯಾಕ್ಟಿವ್‌ ಸಿನಿಮಾವೂ ಹೌದು.

ಈ ಸಿನಿಮಾವನ್ನು ಸ್ನೇಹಿತರಿಗೋಸ್ಕರ ಅಂತ ಒಪ್ಕೊಂಡಿರೋದಾ?

ಹೌದು. ಈ ಸಿನಿಮಾ ಕೆಲಸ ಶುರು ಆಗೋ ಮೊದಲು ಪನ್ನಗ ಒಂದು ಕಥೆ ಕೇಳು ಅಂತ ವಿಶಾಲ್ ಅವರನ್ನ ಕಳಿಸಿದ. ಹೊಸ ಪ್ರೊಡಕ್ಷನ್ ಅಲ್ವಾ, ಏನೋ ಸಲಹೆ ಕೇಳೋದಕ್ಕೆ ಕಳಿಸಿದ್ದಾನೆ ಅಂದುಕೊಂಡೆ. ಕತೆ ಕೇಳಿದ್ಮೇಲೆ, ಇದರಲ್ಲಿ ಬರೋ ಪೊಲೀಸ್ ಆಫೀಸರ್ ಪಾತ್ರ ಯಾರು ಮಾಡ್ತಿದ್ದಾರೆ ಅಂತ ವಿಶಾಲ್‌ ಹತ್ರ ವಿಚಾರಿಸಿದೆ. ಅವ್ರು, ನೀವೇ ಅಂತ ಅಂದ್ಕೊಂಡಿದ್ದೀವಿ ಸರ್ ಅಂದುಬಿಟ್ಟರು. ಮೇಘನಾ, ದಯವಿಟ್ಟು ನೀನೇ ಮಾಡ್ಬೇಕು ಈ ಪಾತ್ರ ಅಂದಳು. ಬೇರೇನೂ ಯೋಚನೆ ಮಾಡದೇ ಒಪ್ಪಿಕೊಂಡೆ. ಆಗ ಸಿನಿಮಾ ಒಪ್ಕೊಂಡಿದ್ದು ಸ್ನೇಹಿತನಾಗಿ. ಆಮೇಲೆ ನಟನಾಗಿಯೂ ತೃಪ್ತಿ, ಖುಷಿ ಕೊಟ್ಟ ಚಿತ್ರ ಇದು.

ಮೇಘನಾ ರಾಜ್​ ಸಿನಿಮಾ ನೋಡಿ, ಸ್ಕ್ಯಾನ್​ ಮಾಡಿ: ವೀಕ್ಷಕರಿಗೆ ಉಡುಗೊರೆಗಳ ಮಹಾಪೂರ!

ಪಾತ್ರಗಳ ಆಯ್ಕೆಯಲ್ಲಿ ನಿಮ್ಮ ಅಪ್ರೋಚ್ ಬದಲಾಗಿದೆಯಾ? ಅಥವಾ ಬದಲಾಯಿಸಬೇಕು ಅನಿಸ್ತಿದೆಯಾ?

ಹೌದು. ಅದು ಕಾಲದ ಅನಿವಾರ್ಯತೆ.

ನಿರ್ಮಾಪಕ ಪನ್ನಗಭರಣ ಮಾತುಗಳು

- ತತ್ಸಮ ತದ್ಭವ ಸಿನಿಮಾ ಶೀರ್ಷಿಕೆ ಸಿನಿಮಾಕ್ಕೆ ಹೇಗೆ ಕನೆಕ್ಟ್‌ ಆಗುತ್ತೆ ಅನ್ನೋ ಪ್ರಶ್ನೆಗೆ ಉತ್ತರ ಚಿತ್ರದ ಕೊನೆಯಲ್ಲಿ ಸಿಗುತ್ತೆ.

- ಈ ಸಿನಿಮಾ ಮಾಡಿದ್ದು ಮೇಘನಾಗಾಗಿ. ನಮ್ಮ ಸ್ನೇಹಿತೆ ಖುಷಿಯಾಗಿರೋದು ಸಿನಿಮಾ ಕ್ಷೇತ್ರದಲ್ಲಿ ಅಂತ ಗೊತ್ತಿತ್ತು. ಪ್ರೊಡಕ್ಷನ್‌ ಹೌಸ್ ಮಾಡುವ ಯೋಚನೆಯೂ ತಲೆಯಲ್ಲಿತ್ತು. ಅದೃಷ್ಟವಶಾತ್ ಏಕಕಾಲಕ್ಕೆ ಇದೆಲ್ಲ ಕೂಡಿಬಂತು. ನಿರ್ಮಾಪಕ, ಸಂಗೀತ ನಿರ್ದೇಶಕ ಅನ್ನೋದನ್ನೆಲ್ಲ ಬಿಟ್ಟು ಗೆಳೆಯರ ತಂಡವಾಗಿ ಈ ಸಿನಿಮಾದಲ್ಲಿ ಕೆಲಸ ಮಾಡಿದ್ದೇವೆ.

- ಜನಪ್ರಿಯ ಚೌಕಟ್ಟು ಮೀರಿ ಕಥೆಗೆ ನಿಷ್ಠವಾಗಿ ಸಿನಿಮಾ ಮಾಡಿದ್ದೇವೆ. ಇದು ಔಟ್‌ ಆ್ಯಂಡ್‌ ಔಟ್‌ ಇನ್ವೆಸ್ಟಿಗೇಶನ್‌ ಕ್ರೈಮ್‌ ಥ್ರಿಲ್ಲರ್‌.

click me!