ವೆಬ್ ಸೀರೀಸ್‌ಗೂ ಮೊದಲು ಹೊಸ ಸಿನಿಮಾ- ರಮೇಶ್ ಅರವಿಂದ್

By Suvarna NewsFirst Published Jun 23, 2021, 5:10 PM IST
Highlights

ಕನ್ನಡದಲ್ಲಿ ಸದಾ ವಿವಾದಗಳಿಂದ ದೂರವಾಗಿರುವ ಒಬ್ಬ ಸ್ಟಾರ್ ಇದ್ದರೆ ಅದು ರಮೇಶ್ ಅರವಿಂದ್ ಎನ್ನಬಹುದು. ಹಾಗಂತ ಅವರ ಕ್ರಿಯಾಶೀಲತೆಯ ಹೆಜ್ಜೆಗಳಿಗೆ ಕೊರತೆಯೇ ಇಲ್ಲ! ತಮ್ಮ ಪಾತ್ರಗಳ ಇಮೇಜ್ ಮತ್ತು ತಮ್ಮ ನಿಜವಾದ ವ್ಯಕ್ತಿತ್ವದ ಬಗ್ಗೆ ಅವರು ಇಲ್ಲಿ ಮಾತನಾಡಿದ್ದಾರೆ.
 

ಇತ್ತೀಚಿನ ವರ್ಷಗಳಲ್ಲಿ ರಮೇಶ್ ಅರವಿಂದ್ ಸಿನಿಮಾಗಳು ಕಡಿಮೆಯಾದ ಹಾಗೆ ಅನಿಸಬಹುದು. ಸರಿಯಾಗಿ ನೋಡಿದರೆ ಯಾವ ದೊಡ್ಡ ಸ್ಟಾರ್ ಸಿನಿಮಾಗಳು ಕೂಡ ದೊಡ್ಡ ಮಟ್ಟದಲ್ಲಿ ಹೊರಗೆ ಬರುತ್ತಿಲ್ಲ. ಅದಕ್ಕೆ ಕಾರಣ, ಈ ಕೋವಿಡ್ ಕಾಲಘಟ್ಟವೇ ಅಂಥ ಪರಿಸ್ಥಿತಿ ತಂದೊಡ್ಡಿದೆ. ಸಂಪೂರ್ಣ ಸಿದ್ಧವಾಗಿರುವ `ಬಟರ್ ಫ್ಲೈ', `ಭೈರಾದೇವಿ', `ಹಂಡ್ರೆಡ್' ಮೊದಲಾದ ಸಿನಿಮಾಗಳು ಒಂದೆಡೆ ಬಿಡುಗಡೆಗೆ ಕಾದು ನಿಂತಿದ್ದರೆ ರಮೇಶ್ ಅವರು ಯಶಸ್ವಿ ಚಿತ್ರವಾದ `ಶಿವಾಜಿ ಸುರತ್ಕಲ್' ಚಿತ್ರದ ಎರಡನೇ ಭಾಗದ ಚಿತ್ರೀಕರಣಕ್ಕೆ ಸಿದ್ಧವಾಗುತ್ತಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಅವರು ಸುವರ್ಣ ನ್ಯೂಸ್.ಕಾಮ್ ಜೊತೆಗೆ ಆಡಿರುವ ಮಾತುಗಳು ಇಲ್ಲಿವೆ.

- ಶಶಿಕರ ಪಾತೂರು

ಹತ್ತಾರು ಪ್ರತಿಭೆಗಳ ರಂಗಭೂಮಿ ಕಲಾವಿದ ಕೃಷ್ಣಮೂರ್ತಿ ಕವತ್ತಾರು
 
ವೈವಿಧ್ಯಮಯ ಪಾತ್ರಗಳ ಆಯ್ಕೆಗೆ ಬಯಸಿದಾಗ ಯಾವತ್ತಾದರೂ ಕಷ್ಟವಾದ ಸಂದರ್ಭ ಬಂದಿತ್ತೇ?
ಒಂದು ಚಿತ್ರ ಹಿಟ್ ಆದಾಗ ನಿರ್ಮಾಪಕರು ಅದೇ ರೀತಿಯ ಪಾತ್ರವಿರುವ ಚಿತ್ರಗಳನ್ನೇ ನಿರ್ಮಿಸಲು ಮುಂದೆ ಬರುತ್ತಾರೆ. ಅದೇ ಸಂದರ್ಭದಲ್ಲಿ ಆ ಚಿತ್ರವೂ ಗೆದ್ದರೆ ನಾಯಕನಿಗೊಂದು ಇಮೇಜ್ಸೃಷ್ಟಿಯಾಗಿಬಿಡುತ್ತದೆ. ಇದು ಬಹುತೇಕ ಎಲ್ಲ ನಾಯಕರ ಬದುಕಿನಲ್ಲಿಯೂ ಸಂಭವಿಸುತ್ತದೆ. ಅದರ ನಡುವೆ ನನ್ನಂಥವರು ಅವಕಾಶವಿದ್ದಾಗಲೆಲ್ಲ ಪ್ರಯೋಗಕ್ಕೆ ತಯಾರಾಗಿರುತ್ತೇವೆ. ಇದಕ್ಕೆ ವೈಪರೀತ್ಯವಾಗಿರುವ ಘಟನೆಯನ್ನು ಹೇಳಬಹುದಾದರೆ ಅದು `ಅಮೃತವರ್ಷಿಣಿ' ಚಿತ್ರದ್ದು.`ನಮ್ಮೂರ ಮಂದಾರ ಹೂವೇ' ಚಿತ್ರ ನಿರ್ಮಿಸಿದ್ದ ಜಯಶ್ರೀದೇವಿಯವರೇ ಅಮೃತವರ್ಷಿಣಿಗೂ ನಿರ್ಮಾಪಕರಾಗಿದ್ದರು. ನಾನು ನಿರ್ದೇಶಕ ದಿನೇಶ್ ಬಾಬು ಅವರಲ್ಲಿ, 'ಈಗತಾನೇ ನನ್ನನ್ನು ಪಕ್ಕದ್ಮನೆ ಹುಡುಗ ಎಂದೆಲ್ಲ ಹೇಳುತ್ತಿದ್ದಾರೆ. ನನ್ನ ಕೈಯ್ಯಲ್ಲಿ ಕೊಲೆಮಾಡಿಸುತ್ತಿದ್ದೀರ. ಬಾಕ್ಸ್‌ ಆಫೀಸಿನಲ್ಲಿ ರಿವರ್ಸ್ ಆಗದಿರುವಂತೆ ನೋಡಬೇಕಿರೋದು ಮುಖ್ಯ' ಎಂದಿದ್ದೆ. ಅವರು ತಂಬ ಸ್ಮಾರ್ಟ್ ಡೈರೆಕ್ಟರ್. "ಹಾಗೇನಿಲ್ಲ ರಮೇಶ್; ಇದರಲ್ಲಿ ನಿಮಗೆ ಐದಾರು ಹಾಡುಗಳಿವೆ. ಮಾತ್ರವಲ್ಲ, ಕೊಲೆ ಮಾಡುವುದಕ್ಕೆ ಪಾತ್ರದ ಪರವಾಗಿ ಒಂದೊಳ್ಳೆಯ ಕಾರಣವೂ ಇದೆ. ಹಳೆಯ ಪ್ರೀತಿಯ ಮರೆಯಲಾಗದ ನೆನಪು ಮತ್ತು ಅದನ್ನು ಉಳಿಸಿಕೊಳ್ಳಲು ದೊರಕಿದಂಥ ಹೊಸ ಪ್ರೀತಿಯನ್ನು ಕಳೆದುಕೊಳ್ಳಲು ಬಯಸದ ಮನೋಭಾವ ಇರುತ್ತೆ" ಎಂದಿದ್ದರು. ಇಂದು ಆ ಸಿನಿಮಾ ನನ್ನ ನಟನೆಯ ಚಿತ್ರಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಅದಕ್ಕಾಗಿ ದಿನೇಶ್ ಬಾಬು ಮತ್ತು ನಿರ್ಮಾಪಕಿ ಜಯಶ್ರೀ ದೇವಿಯವರಿಗೆ ಕೃತಜ್ಞನಾಗಿದ್ದೇನೆ. 

ಸಾಗರ್ ಬಿಳಿಗೌಡ ನಾಯಕನಾಗಿದ್ದು ಹೇಗೆ?

ಕೋವಿಡ್ ವಾತಾವರಣ ಮುಗಿದೊಡನೆ ವೆಬ್ ಸೀರೀಸ್ ಮಾಡುತ್ತೀರಂತೆ.. ನಿಜವೇ?
ನಾನು ವೆಬ್ ಸೀರೀಸ್ ಮಾಡಬೇಕು ಎಂದು ಅಂದುಕೊಂಡಿರುವುದೇನೋ ನಿಜ. ಆದರೆ ಅದಕ್ಕೂ ಮೊದಲು ಕನ್ನಡದಲ್ಲಿ ಒಂದೊಳ್ಳೆಯ ಒಟಿಟಿ ಬರಬೇಕು. ಆಗಲೇ ನಾನು ನಿರೀಕ್ಷಿಸಿದ ರೀತಿಯಲ್ಲಿ ಮಾಡಲು ಸಾಧ್ಯ. ಸದ್ಯಕ್ಕೆ ಅದು ಇನ್ನೂ ಪ್ರಪೊಸಲ್ ಸ್ಟೇಜಲ್ಲೇ ಇದೆ. ಆಲ್ರೆಡಿ ಸುದ್ದಿಯಾಗಿದೆ ಎನ್ನುವುದನ್ನು ಬಿಟ್ಟರೆ ಆ ಬಗ್ಗೆ ಹೆಚ್ಚೇನೂ ಹೇಳಲಿಕ್ಕಾಗಿಲ್ಲ. ಕಳೆದ ಲಾಕ್ಡೌನಲ್ಲೇ `ಶಿವಾಜಿ ಸುರತ್ಕಲ್ ಪಾರ್ಟ್ ಎರಡರ ಸ್ಕ್ರಿಪ್ಟ್ ಕೆಲಸ ಪೂರ್ತಿಯಾಗಿತ್ತು. ಅದರ ಚಿತ್ರೀಕರಣದೊಂದಿಗೆ ಕೆಲಸ ಶುರುವಾಗುತ್ತದೆ. ಅದರ ನಂತರ ಒಂದು ನಟನೆಯ ಚಿತ್ರ ಮತ್ತೊಂದು ನಿರ್ದೇಶನದ ಸಿನಿಮಾ ಹೀಗೆ ಸಾಕಷ್ಟು ಯೋಜನೆ ಹಾಕಿಕೊಂಡಿದ್ದೇನೆ. ಹಾಗಂತ ಕಾಲಕೂಡಿ ಬಂದಾಗ ವೆಬ್ ಸೀರೀಸ್ ಮಾಡುವುದಕ್ಕೂ ತಯಾರಿದ್ದೇನೆ. ಮುಖ್ಯವಾಗಿ ನಮಗೊಂದು ವೇದಿಕೆ ಬೇಕು. ಇನ್ಸ್ಟಗ್ರಾಮಲ್ಲಿ ಒಂದು ಪೋಸ್ಟ್ ಮಾಡುವುದಿದ್ದರೂ ಅದನ್ನು ಸ್ಮಾರ್ಟ್ ಆಗಿ ಮಾಡಬೇಕು ಎನ್ನುವುದು ನನ್ನ ನಿಲುವು.
 

ಇದು ಉಸಿರು ನೀಡುವ ಪ್ರಯತ್ನ- ಕವಿರಾಜ್

`ರಮೇಶ್ ಯಾವುದೇ ವಿಚಾರವನ್ನಾದರೂ ಚೆನ್ನಾಗಿ ನಿಭಾಯಿಸಬಲ್ಲರು' ಎನ್ನುವ ಇಮೇಜ್ ಸೃಷ್ಟಿಯಾಗಿದ್ದು ಹೇಗೆ?
ಪ್ರತಿಯೊಬ್ಬರಿಗೂ ಅವರದೇ ಆದ ಒಂದು ತನ ಇರುತ್ತದಲ್ಲ? ಇದು ನನ್ನತನ. ಬಹುಶಃ ಅದು ನನ್ನ ತಂದೆಯಿಂದಲೇ ನನಗೆ ಬಂದಿರಬಹುದು. ಯಾಕೆಂದರೆ ಬಾಲ್ಯದಲ್ಲಿ "ಆಂಗ್ಲ ಭಾಷೆ ಬರುವುದಿಲ್ಲ" ಎಂದು ಅತ್ತಿದ್ದೆ. "ಅಷ್ಟೇನಾ ಭಾಷೆ ತಾನೇ? ಕಲಿತರಾಯಿತು!" ಎಂದರು ಅಪ್ಪ. ಆಗ ಸಿಕ್ಕ ನಿರಾಳತೆಯೇ ಮುಂದೆ ನಟನೆ, ನಿರೂಪಣೆ, ನಿರ್ದೇಶನ ಎಲ್ಲವೂ ಅಷ್ಟೇನಾ ಎಂದು ಹೇಳಲು ಸಾಧ್ಯವಾಯಿತು. ಅಷ್ಟೇ ಇಲ್ಲಿ ಯಾವುದೂ ಒಂದು ಬ್ರಹ್ಮ ವಿದ್ಯೆ ಅಂತ ಏನೂ ಇಲ್ಲ. ಆದರೆ ಅದರ ಹಿಂದೆ ಸಿಕ್ಕಾಪಟ್ಟೆ ಶ್ರಮ ಇರುತ್ತದೆ ಎನ್ನುವುದನ್ನು ಮರೆಯಬಾರದು. ಹಾಗಂತ ಹೆದರಬೇಕಾದ ಅಗತ್ಯ ಖಂಡಿತವಾಗಿ ಇಲ್ಲ. ಉದಾಹರಣೆಗೆ ಒಂದು ದಪ್ಪಗಿರುವ ಕಾದಂಬರಿಯನ್ನೇ ನೋಡೋಣ. ಅಷ್ಟೊಂದು ಬರೆಯಲು ಎಷ್ಟು ಕಷ್ಟವಾಗಿರಬಹುದು ಎಂದುಕೊಳ್ಳುತ್ತೇವೆ. ಪದಗಳಿಂದ ಶುರು ಮಾಡಿ, ವಾಕ್ಯದಿಂದ ಪುಟ ಮಾಡಿ, ಪುಟಗಳಿಂದ ಅಧ್ಯಾಯ ಮಾಡಿ, ಅಧ್ಯಾಯಗಳಿಂದ ಕಾದಂಬರಿ ಮಾಡುವ ನೈಪುಣ್ಯವಷ್ಟೇ ಅದು. ಅದಕ್ಕೆ ಸಮಯ ತೆಗೆದುಕೊಂಡಿರಬಹುದು. ಆದರೆ ಶ್ರದ್ಧೆಯಿಂದ, ಶಿಸ್ತಿನಿಂದ ಮಾಡಲು ತಯಾರಾಗಿದ್ದರೆ ಖಂಡಿತವಾಗಿಯೂ ಸುಲಭವೆನಿಸುತ್ತದೆ. 

click me!