ಕ್ರೇಜಿಸ್ಟಾರ್ 'ಕನ್ನಡಿಗ':ನಿರ್ದೇಶಕ ಬಿಎಂ ಗಿರಿರಾಜ್‌ಗೆ ಏಳು ಪ್ರಶ್ನೆಗಳು!

By Kannadaprabha NewsFirst Published Jun 19, 2021, 9:11 AM IST
Highlights

ನಿರ್ದೇಶಕ ಬಿಎಂ ಗಿರಿರಾಜ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಕಾಂಬಿನೇಷನ್‌ನಲ್ಲಿ ‘ಕನ್ನಡಿಗ’ ಸಿನಿಮಾ ಸೆಟ್ಟೇರಿ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿದೆ. ಈ ಚಿತ್ರದ ಕುರಿತು ಮಾತನಾಡಿದ್ದಾರೆ ಗಿರಿರಾಜ್.

ಆರ್ ಕೇಶವಮೂರ್ತಿ

1. ಕನ್ನಡಿಗ ಚಿತ್ರದ ಚಿತ್ರೀಕರಣ ಇನ್ನೂ ಇದೆಯೇ?

ಮಾತಿನ ಭಾಗ ಚಿತ್ರೀಕರಣ ಮುಕ್ತಾಯ ಆಗಿದೆ. ಹಾಡುಗಳು ಮಾತ್ರ ಉಳಿದುಕೊಂಡಿದೆ. ಕೆಲವು ದೃಶ್ಯಗಳು ಹಾಗೂ ಎಲ್ಲಾ ಹಾಡುಗಳು ಬಾಕಿ ಇದೆ.

2. ಎಲ್ಲೆಲ್ಲಿ ಹಾಗೂ ಎಷ್ಟು ದಿನ ಚಿತ್ರೀಕರಣ ಮಾಡಿದ್ರಿ?

ಸಾಗರ ಹಾಗೂ ಚಿಕ್ಕಮಗಳೂರು ಸುತ್ತಮುತ್ತ 40 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಆ ದಿನಗಳ ಹಿನ್ನೆಲೆಯನ್ನು ಮರುಸೃಷ್ಟಿ ಮಾಡುವುದಕ್ಕಾಗಿ ಒಂದು ಸೆಟ್ ಕೂಡ ಹಾಕಿದ್ದೇವೆ.

ಪವರ್‌ಗೆ ಮುತ್ತಿಟ್ಟ ಲಿಟಲ್‌ ಬಾಯ್; ನಿರ್ದೇಶಕ ಗಿರಿರಾಜ್‌ ಪುತ್ರನ ವಿಡಿಯೋ ವೈರಲ್! 

3. ರವಿಚಂದ್ರನ್ ಅವರ ಜತೆಗೆ ಕೆಲಸದ ಅನುಭವ ಹೇಗಿತ್ತು?

ತುಂಬಾ ಚೆನ್ನಾಗಿತ್ತು. ನನಗೆ ಈ ಹಂತದಲ್ಲಿ ತಾಂತ್ರಿಕವಾಗಿ ಬೆನ್ನೆಲುಬಾಗಿ ನಿಂತಿದ್ದು ಛಾಯಾಗ್ರಾಹಕ ಜಿ.ಎಸ್.ವಿ. ಸೀತಾರಾಮ್. ಅವರು ಮೊದಲಿನಿಂದಲೂ ರವಿಚಂದ್ರನ್ ಅವರ ಚಿತ್ರಗಳಿಗೆ ಕೆಲಸ ಮಾಡುತ್ತಿದ್ದವರು. ಹೀಗಾಗಿ ಯಾವುದೇ ಗೊಂದಲ, ಸಮಸ್ಯೆಗಳು ಆಗಲಿಲ್ಲ. ಸೆಟ್‌ನಲ್ಲಿ ನಾನು ನಿರ್ದೇಶಕ, ರವಿಚಂದ್ರನ್ ಅವರು ಹೀರೋ.

4. ರವಿಚಂದ್ರನ್ ಅವರಿಗೆ ಕತೆ ಒಪ್ಪಿಸಿದ್ದು ಹೇಗೆ?

ನನಗೆ ಕತೆ ಹೇಳುವುದು ಗೊತ್ತು. ಒಪ್ಪಿಸುವುದು ಗೊತ್ತಿಲ್ಲ. ಯಾಕೆಂದರೆ ಒಪ್ಪಿಸುವುದು ಎಂದರೆ ಬಲವಂತ ಮಾಡಿದಂತೆ. ಒಬ್ಬ ಲಿಪಿಕಾರನ ಜೀವನ ಪುಟಗಳನ್ನು ತೆರೆ ಮೇಲೆ ತರಬೇಕು ಎಂದುಕೊಂಡೆ. ಆ ಕತೆ ಬರೆದುಕೊಂಡು ನಿರ್ಮಾಪಕ ಎನ್‌ಎಸ್ ರಾಜ್‌ಕುಮಾರ್ ಅವರಿಗೆ ಹೇಳಿದೆ. ಅವರು ಇಷ್ಟಪಟ್ಟು ಇದಕ್ಕೆ ದೊಡ್ಡ ಸ್ಟಾರ್ ನಟ ಇದ್ದರೆ ಚೆನ್ನಾಗಿರುತ್ತದೆ ಅನಿಸಿತು. ಆಗ ರವಿಚಂದ್ರನ್ ಬಳಿ ಹೋಗಿ ಕತೆ ಹೇಳಿದ್ವಿ. ಅವರಿಗೂ ಇಷ್ಟ ಆಯಿತು.

5. ಲಿಪಿಕಾರನ ಕತೆ ಹೇಳಬೇಕು ಅನಿಸಿದ್ದು ಯಾಕೆ?

ಇತಿಹಾಸಕ್ಕೆ ಇವರ ಕೊಡುಗೆ ತುಂಬಾ ದೊಡ್ಡದು. ಇತಿಹಾಸ ಎಂದರೆ ರಾಜ ರಾಣಿಯರ ಕತೆ ಮಾತ್ರವಲ್ಲ. ಆಯಾ ಕಾಲಘಟ್ಟದಲ್ಲಿ ಆದ ಸಾಂಸ್ಕೃತಿಕ ಪಲ್ಲಟಗಳು, ಅಕ್ಷರ ಕ್ರಾಂತಿ, ತಾಳೆಗರಿಗಳು, ಜನರೇ ಕಾಪಾಡಿಕೊಂಡು ಬಂದ ಜನ ಸಂಸ್ಕೃತಿ ಇವೆಲ್ಲವೂ ಸೇರಿರುತ್ತವೆ. ಈ ಕಾರಣಕ್ಕೆ ನಾನು ಲಿಪಿಕಾರನ ಜೀವನ ಪುಟಗಳನ್ನು ಹೇಳಬೇಕು ಅನಿಸಿತು.

"

6. ಈ ಕತೆ ಹೊಳೆದಿದ್ದು ಹೇಗೆ?

ಎಂಎಂ ಕಲ್ಬುರ್ಗಿ ಅವರು ಬರೆದ ಲಿಪಿಕಾರರ ಕುರಿತು ಬರಹಗಳನ್ನು ಓದುವಾಗ. ಲಿಪಿಕಾರರ ಕೊಡುಗೆ ಎಂಥದ್ದು, ಅವರ ಜೀವನ ತಿಳಿದ ಮೇಲೆ ಫರ್ಡಿನಾಂಡ್ ಕಿಟ್ಟಲ್ ಬಯೋಗ್ರಫಿ ಸಿನಿಮಾ ಮಾಡುವ ಯೋಚನೆ ಬಂತು. ಇತಿಹಾಸ ಮತ್ತು ದಂತಕತೆಯನ್ನು ಒಳಗೊಂಡ ಸಿನಿಮಾ ಇದು. ಆ ಕಾರಣಕ್ಕೆ ಇದನ್ನು ಐತಿಹಾಸಿಕ ಡ್ರಾಮಾ ಸಿನಿಮಾ ಎನ್ನುತ್ತಿರುವುದು. ಸಿನಿಮ್ಯಾಟಿಕ್ ಅನುಭವಕ್ಕಾಗಿ ರೋಚಕತೆಯನ್ನು ಬಳಸಿಕೊಂಡಿದ್ದೇವೆ.

7. ಮುಂದಿನ ಸಿನಿಮಾ ಯಾವುದು?

ಕತೆ ಬರೆಯುವ ಹಂತದಲ್ಲಿದೆ. ಯಾವುದೂ ಫೈನಲ್ ಆಗಿಲ್ಲ. ಈ ನಡುವೆ ಕತೆಗೆ ಸಾವಿಲ್ಲ ಎನ್ನುವ ಪುಸ್ತಕ ಬರೆದೆ. ಕತೆಗಳನ್ನು ಒಳಗೊಂಡು ಈ ಪುಸ್ತಕ ಓದುಗರ ಮೆಚ್ಚುಗೆ ಗಳಿಸುತ್ತಿದೆ.
 

click me!