ವೈಶಾಲಿ ಕಾಸರವಳ್ಳಿ ಅವರಿಂದ ಡಾಲಿ ಧನಂಜಯ್ ಅವರ ತನಕ ರಂಗಭೂಮಿಯಲ್ಲೊಂದು ವಿಭಿನ್ನ ಪ್ರಯೋಗಕ್ಕೆ ಮುಂದಾದವರೆಲ್ಲ ಸಹಕಾರ ಬಯಸಿದ್ದು ಕೃಷ್ಣಮೂರ್ತಿ ಕವತ್ತಾರು ಅವರಿಂದ. ತಮ್ಮ ಏಕವ್ಯಕ್ತಿ ಪ್ರಯೋಗಗಳಿಂದ ನಾಡಿನ ಮನೆಮತಾಗಿರುವ ಅವರು ಕಿರುತೆರೆಯಲ್ಲಿಯೂ ಜನಪ್ರಿಯ ನಟ. ಅವರ ಒಟ್ಟು ಪಯಣದ ಅನುಭವಗಳ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.
ಸುವರ್ಣ ಎಂಟರ್ಟೇನ್ಮೆಂಟ್ ವಾಹಿನಿಯ ಜನಪ್ರಿಯ ಧಾರಾವಾಹಿ `ಎಡಿಯೂರು ಸಿದ್ದಲಿಂಗೇಶ್ವರ ಮಹಾತ್ಮೆ'. ಅದರಲ್ಲಿನ ಜನಪ್ರಿಯ ಪಾತ್ರಗಳಲ್ಲಿ ಒಂದು ಬಸಯ್ಯ. ಆ ಪಾತ್ರವನ್ನು ನಿರ್ವಹಿಸಿ ಜನಮನ ಗೆದ್ದವರು ಕೃಷ್ಣಮೂರ್ತಿ ಕವತ್ತಾರು. ಕಿರುತೆರೆ ಪ್ರೇಕ್ಷಕರು ಇವರನ್ನು ಬಸಯ್ಯನಾಗಿ ಗುರುತಿಸರಬಹುದು; ಆದರೆ ಕನ್ನಡ ರಂಗಭೂಮಿಯ ಬಗ್ಗೆ ಸರಿಯಾಗಿ ಅರಿತವರು ಕೃಷ್ಣಮೂರ್ತಿ ಕವತ್ತಾರು ಎನ್ನುವ ಹೆಸರನ್ನು ಮರೆಯಲು ಸಾಧ್ಯವೇ ಇಲ್ಲ. ಅದಕ್ಕೆ ಕಾರಣ ನಾಟಕರಂಗದಲ್ಲಿನ ಇವರ ಸೇವೆ ಎಂದೇ ಹೇಳಬೇಕು. ಜೊತೆಗೆ ಧಾರಾವಾಹಿ, ಸಿನಿಮಾಗಳಲ್ಲಿಯೂ ನಟಿಸಿರುವ ಕವತ್ತಾರು ಅವರು `ಗೌಡ್ರ ಸೈಕಲ್' ಚಿತ್ರದಲ್ಲಿ ಗೌಡನ ಪಾತ್ರವನ್ನೇ ನಿಭಾಯಿಸಿದ್ದರು. `ಉದೋ ಉದೋ ಎಲ್ಲವ್ವ', `ಮೋಹನ ತರಂಗಿಣಿ' ನಾಟಕಗಳ ಸುಮಾರು 60ರಷ್ಟು ಹಾಡುಗಳಿಗೆ ಸಂಗೀತ ನೀಡಿರುವ ಬಹುಮುಖ ಪ್ರತಿಭೆ ಇವರು. ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃಷ್ಣಮೂರ್ತಿ ಕವತ್ತಾರು ಅವರು ಇಲ್ಲಿ ರಂಗಭೂಮಿ ಮತ್ತು ಕಿರುತೆರೆಯ ವಿಶೇಷ ಅನುಭವಗಳ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜೊತೆಗೆ ಮಾತನಾಡಿದ್ದಾರೆ.
ಶಶಿಕರ ಪಾತೂರು
undefined
`ಬಸಯ್ಯ'ನ ಪಾತ್ರದಲ್ಲಿ ನಟಿಸಿದ ಅನುಭವ ಹೇಗಿತ್ತು?
ಎಡಿಯೂರು ಸಿದ್ಧಲಿಂಗೇಶ್ವರನ ಒರಿಜಿನಲ್ ಕತೆಯಲ್ಲಿ ಈ ಪಾತ್ರ ಇದ್ದ ಹಾಗಿಲ್ಲ. ಇದು ನಿರ್ದೇಶಕ ನವೀನ್ ಕೃಷ್ಣರ ಕ್ರಿಯಾಶೀಲತೆಗೆ ಒಂದು ಸಾಕ್ಷಿ. ಮಧ್ಯದಲ್ಲಿ ಅನಾರೋಗ್ಯದಿಂದಾಗಿ ಒಂದಷ್ಟು ಧಾರಾವಾಹಿಯಲ್ಲಿ ನನಗೆ ನಟಿಸಲು ಸಾಧ್ಯವಾಗಿರಲಿಲ್ಲ. ತಾತ್ಕಾಲಿಕವಾಗಿ ನನ್ನ ಪಾತ್ರವನ್ನು ಮತ್ತೊಬ್ಬರಿಗೆ ನೀಡಲಾಗಿತ್ತು. ಬಳಿಕ ನಿರ್ದೇಶಕರು ನನ್ನನ್ನೇ ವಾಪಾಸು ಕರೆಸಿಕೊಂಡರು. ಹಿರಿಯ ನಟರಾದ ಶೃಂಗೇರಿ ರಾಮಣ್ಣ, ಶಿವರಾಮಣ್ಣ ಸೇರಿದಂತೆ ಹರೀಶ್ ರಾಜ್‌ನಂಥ ಒಳ್ಳೊಳ್ಳೆಯ ಕಲಾವಿದರ ಜೊತೆಗೆ ನಟಿಸುವ ಅವಕಾಶ ಲಭಿಸಿತು. ಒಟ್ಟಿನಲ್ಲಿ ಒಂದು ಒಳ್ಳೆಯ ಅನುಭವ.
ಬಸಯ್ಯನ ಪಾತ್ರ ಹೆಚ್ಚು ಜನಾಕರ್ಷಕವಾಗಲು ಕಾರಣ ಏನಿರಬಹುದು?
ಇದರಲ್ಲಿ ನನ್ನದು ನಂಬಿಕೆಯ ಕೇಂದ್ರಕ್ಕೆ ಪ್ರತಿರೋಧ ಒಡ್ಡುವಂಥ ಪಾತ್ರ. ಸಕಲ ನಕಾರಾತ್ಮಕ ಅಂಶಗಳನ್ನು ರೂಪಿಸಿಕೊಂಡಂಥ ವ್ಯಕ್ತಿ. ಶಿವಶರಣರ ನಡುವೆ ಉಪಾಫೆಯಿಂದ ಬೆಳೆದಂಥವನು. ಮಠ ಎನ್ನುವುದು ಆತನ ಪ್ರಕಾರ ಭೋಗ ಕೇಂದ್ರ. ಅದೇ ನಿಟ್ಟಿನಲ್ಲಿ ಮಗನನ್ನು ಪಟ್ಟಕ್ಕೇರಿಸುವ ಪ್ರಯತ್ನ ಇರುತ್ತದೆ. ನಟಿ ನಯನಾ ಜೊತೆಗೆ ಸೇರಿ ಇನ್ನಷ್ಟು ನೆಗೆಟಿವ್ ಹರಡುವ ಪಾತ್ರ. ಅದರಲ್ಲಿಯೂ ನಾನು ಶಾಪಗ್ರಸ್ಥನಾಗುವ ಸಂಚಿಕೆಗೆ ತುಂಬ ಒಳ್ಳೆಯ ಪ್ರತಿಕ್ರಿಯೆ ದೊರಕಿತ್ತು. ಇದುವರೆಗೆ ನಾನು ಸುಮಾರು 25ರಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಅವುಗಳಲ್ಲಿ `ಭಾರತಿ' ಎನ್ನುವ ಧಾರಾವಾಹಿ, `ಪಲ್ಲವಿ ಅನುಪಲ್ಲವಿ'ಯ ಕಮಿಷನ್ ಕೋದಂಡಯ್ಯ, `ಅಶ್ವಿನಿ ನಕ್ಷತ್ರ'ದ ಪ್ರೊಡ್ಯೂಸರ್ ಕಾಂತರಾಜು ಎನ್ನುವ ಪಾತ್ರಗಳು ಕೂಡ ಜನಮನ್ನಣೆ ಗಳಿಸಿತ್ತು.
ಇದು ಉಸಿರು ನೀಡುವ ಪ್ರಯತ್ನ- ಕವಿರಾಜ್
ರಂಗಭೂಮಿಯಲ್ಲಿ ನಿಮ್ಮ ಮರೆಯಲಾಗದ ಅನುಭವಗಳು ಯಾವುವು?
ನನಗೆ ಶಿವರಾಮ ಕಾರಂತರ ಒಡನಾಟ ಲಭಿಸಿತ್ತು. ತೇಜಸ್ವಿಯವರೊಂದಿಗೆ ಹದಿನೈದು ದಿನ ಕೆಲಸ ಮಾಡಿದ್ದೇನೆ. ಬೆನೆಡಿಕ್ಟ್ ಜರ್ಮನ್ ನಿರ್ದೇಶಕ , ಕೊಲ್ಕತ್ತಾದ ರುಸ್ತುಂ ಬರೋಚೆ , ಅಲಕನಂದ ಸಮರ್ಥ್ ಎನ್ನುವ ಎನ್ ಎಸ್ ಡಿ ಆಕ್ಟಿಂಗ್ ಟೀಚರ್ ಅವರೊಡನೆಯೂ ಕೆಲಸ ಮಾಡಿದ್ದೇನೆ. ಹೀಗೆ ತುಂಬ ಮಂದಿಯಿಂದ ಉತ್ತಮ ಸಲಹೆಗಳನ್ನು ಪಡೆದಿದ್ದೇನೆ. ನಾಗಾಭರಣ, ಸೀತಾ ಕೋಟೆ, ಸುಂದರ ಶ್ರೀ, ವೈಜಯಂತಿ ಕಾಶಿಗೆ ಮೊದಲಾದವರಿಗೆ ಸೋಲೊ ಡೈರೆಕ್ಟ್ ಮಾಡಿದ್ದೇನೆ. 250 ನಾಟಕಗಳಲ್ಲಿ ಕಲಾವಿದನಾಗಿದ್ದುಕೊಂಡು ಸಾವಿರಾರು ಪ್ರದರ್ಶನಗಳಲ್ಲಿ ನಟಿಸಿದ್ದೇನೆ. ಸುಮಾರು 260 ನಾಟಕಗಳನ್ನು ನಿರ್ದೇಶಿಸಿದ್ದೇನೆ. `ಸಾಯುವವನೇ ಚಿರಂಜೀವಿ' ಎನ್ನುವ ಏಕವ್ಯಕ್ತಿ ಪ್ರದರ್ಶನ ದೇಶಾದ್ಯಂತ ನೂರ ಹದಿನೇಳು ಶೋ ಕಂಡಿವೆ! ಇತ್ತೀಚೆಗೆ ಐದನೇ ಕ್ಲಾಸ್ ಹುಡುಗನಿಗೆ `ಚಿಟ್ಟೆ' ಎನ್ನುವ ಏಕವ್ಯಕ್ತಿ ಪ್ರದರ್ಶನ ಕಲಿಸಿದ್ದೇನೆ. ನನಗಂತೂ ಈ ಪ್ರತಿಯೊಂದು ಅನುಭವಗಳೂ ವಿಭಿನ್ನ.
ಶಿವರಾಜ್ ಕುಮಾರ್ ಬಗ್ಗೆ ರಾಕೇಶ್ ಮಯ್ಯ ಮಾತುಗಳು
ಲಾಕ್ಡೌನ್ ದಿನಗಳನ್ನು ಹೇಗೆ ಕಳೆದಿರಿ?
ಏನೇ ಆದರೂ ಸುಮ್ಮನಿರುವ ಜಾಯಮಾನ ನನ್ನದಲ್ಲ. ಕಳೆದ ಲಾಕ್ಡೌನ್ ನಲ್ಲಿ ಐದು ಪ್ರೊಡಕ್ಷನ್ ಮಾಡಿಸಿದ್ದೇನೆ! ಎಲ್ಲವೂ ಥಿಯೇಟರ್ ಪ್ರೊಡಕ್ಷನ್‌ಗಳು. ಚಿತ್ರನಟ ಧನಂಜಯ್‌ಗೆ ಒಂದು ಸೊಲೊ. ಯಕ್ಷಗಾನ ದಿಗ್ಗಜ ಕೋಳಿಯೂರು ರಾಮಚಂದ್ರ ರಾಯರ ಮಗಳು ವಿದ್ಯಾ ಕೋಳಿಯೂರುಗೆ ನಾಟಕ ಕಲಿಸಿದೆ. ಇನ್ನು ಓದು ಕೂಡ ನನಗೊಂದು ಹವ್ಯಾಸ. ಕೃಷ್ಣ ಆಲನಹಳ್ಳಿ, ಯಶವಂತ ಚಿತ್ತಾಲ, ಕಂಬಾರರು, ಕಾರಂತರ ಪುಕ್ತಗಳನ್ನು ಓದುತ್ತೇನೆ. ಇತ್ತೀಚೆಗೆ ಕಂಬಾರರ ಚಕೋರಿ ಆರಂಭಿಸಿದ್ದೇನೆ. ನಾಟಕಗಳನ್ನಂತೂ ಓದುತ್ತಿರಲೇಬೇಕಾಗುತ್ತದೆ. ಹಾಗೆಯೇ `ನೀನಾಸಂ' ಪುಸ್ತಕಗಳು ಬರುತ್ತವೆ. ಬೇಲೂರು ರಘುನಂದನ್ ಅವರ ಐದಾರು ಕೃತಿಗಳನ್ನು ಓದಿದೆ. ಸಾಹಿತ್ಯದ ನಿಂತ ನೀರಿಗೆ ಸಣ್ಣದಾಗಿ ಮತ್ತೊಂದೆಡೆ ಚಲನೆ ನೀಡಿದ ವ್ಯಕ್ತಿಯಾಗಿ ನನಗೆ ರಘುನಂದನ್ ಕಾಣಿಸುತ್ತಾರೆ. ರಘುನಂದನ್ ಪುತ್ರನಿಗೆ, ಕವಿತಾ ಎನ್ನುವ ಗಾಯಕಿಗೆ, ಮಾಲೂರು ವಿಜಯ್ ಗೆ ನಾಟಕ ಕಲಿಸಿದೆ. ಬದುಕು ಯಾವತ್ತೂ ಹತಾಶೆ ಎಲ್ಲ. ಹತಾಶೆ ನಮ್ಮನ್ನು ಮುಂದೆ ಹೆಜ್ಜೆ ಇಡದಂತೆ ಮಾಡುತ್ತದೆ. ಆಶಾವಾದ ಮುಖ್ಯ. ಪ್ರಕೃತಿಯ ಮುಂದೆ ನಾವೇನೂ ಇಲ್ಲ ಎನ್ನುವುದು ತಿಳಿದಿರಲೇಬೇಕಾದ ಸತ್ಯ. ಆದರೆ ಆ ಕ್ಷಣವನ್ನು ತೀರ್ಮಾನಿಸುವುದು ನಮ್ಮ ಕೈಯ್ಯಲ್ಲೇ ಇರುತ್ತದೆ. ರೋಗ, ರುಜಿನಗಳು ಅಂತಿಮವಲ್ಲ. ಈಗ ಹೇಗೆ ಬದುಕಬೇಕು ಎನ್ನುವುದನ್ನು ಅರಿತು ಹೆಜ್ಜೆ ಇಡಬೇಕು.