ಕೊರೋನಾ ಸಂಕಷ್ಟ ಎದುರಿಸುತ್ತಿರುವ ಕುಟುಂಬ ಹಾಗೂ ಹಳ್ಳಿಗಳಿಗೆ ನೆರವು ನೀಡುವ ಜತೆಗೆ ಜನರಲ್ಲಿ ಅರಿವು ಮೂಡಿಸುತ್ತಿರುವ ಕೆಲಸ ಮಾಡುತ್ತಿದ್ದಾರೆ ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ. ಸದ್ಯ ಬೆಂಗಳೂರು ಬಿಟ್ಟು ಕಳೆದ ಒಂದು ವಾರದಿಂದ ಉತ್ತರ ಕರ್ನಾಟಕದ ಹಳ್ಳಿಗಳಿಗೆ ಭೇಟಿ ನೀಡುತ್ತಿರುವ ಈ ಸೆಲೆಬ್ರಿಟಿ ಜೋಡಿ ತಮ್ಮ ಅನುಭವ ಹೇಳಿಕೊಂಡಿದೆ.
ಉತ್ತರ ಕರ್ನಾಟಕಕ್ಕೆ ಹೋಗಿ ಎಷ್ಟು ದಿನ ಆಯಿತು?
ಬೆಂಗಳೂರು ಬಿಟ್ಟು ಒಂದು ವಾರ ಆಯಿತು. ಬೆಳಗಾವಿಯ ರಾಯಭಾಗ ತಾಲೂಕಿನ ಸವಸುದ್ದಿ ಗ್ರಾಮದಿಂದ ಆರಂಭವಾಗಿ ಈಗ ಬಾಗಲಕೋಟೆಯ ಜಕ್ಕನೂರು ಹಳ್ಳಿಗೆ ಹೋಗುತ್ತಿದ್ದೇವೆ. ಮುಂದೆ ಗದಗ್, ಬಾಗಲಕೋಟೆ, ರಾಯಚೂರು, ಹುಬ್ಬಳ್ಳಿ ಕಡೆ ಹೋಗಲಿದ್ದೇವೆ.
ಕೊರೋನಾದಿಂದ ಯಾವ ರೀತಿ ಸಂಕಷ್ಟಕ್ಕೆ ಗುರಿಯಾಗಿದ್ದಾರೆ?
ನಾವು ಭೇಟಿ ಕೊಟ್ಟ ಸವಸುದ್ದಿ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ 80 ಜನ ಕೊರೋನಾದಿಂದ ಮೃತಪಟ್ಟಿದ್ದಾರೆ. ಈ ವಿಷಯ ಗೊತ್ತಾಗಿಯೇ ನಾವು ಮೊದಲು ಈ ಗ್ರಾಮಕ್ಕೆ ಬರಬೇಕು ಅಂತ ನಿರ್ಧರಿಸಿದ್ದು.
Tap to resizeLatest Videos
undefined
ಈ ಗ್ರಾಮಗಳಲ್ಲಿ ನೀವು ಏನೆಲ್ಲ ಕೆಲಸಗಳನ್ನು ಮಾಡುತ್ತಿದ್ದೀರಿ?
ಕೊರೋನಾ ಕಾರಣಕ್ಕೆ ಸಾವು ಕಂಡಿರುವ ಮನೆಗಳಿಗೆ ಹೋಗಿ ಅವರು ಕಷ್ಟದಲ್ಲಿದ್ದರೆ ಕನಿಷ್ಠ ಒಂದು ತಿಂಗಳಿಗೆ ಆಗುವಷ್ಟು ರೇಷನ್ ಹಾಗೂ ಬೇಸಿಕ್ ಮೆಡಿಸಿನ್‌ಗಳನ್ನು ಕೊಡುತ್ತಿದ್ದೇವೆ. ಜತೆಗೆ ಕೊರೋನಾ ಪಾಸಿಟಿವ್ ಆಗಿದ್ದು, ಅವರಿಗೆ ಚಿಕಿತ್ಸೆ ನೆರವು ಅಗತ್ಯವಿದ್ದಲ್ಲಿ ಅಧಿಕಾರಿಗಳ ಗಮನಕ್ಕೆ ತಂದು ಅವರಿಗೆ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ ಮಾಸ್‌ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರದ ಮಹತ್ವದ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ. ನೆರವು ಮತ್ತು ಅರಿವು ಮೂಡಿಸುವ ಉದ್ದೇಶದಿಂದಲೇ ನಾವು ಉಷಾರ್ ಹೆಸರಿನಲ್ಲಿ ಈ ಕೆಲಸ ಮಾಡುತ್ತಿದ್ದೇವೆ. ಇಲ್ಲಿಯವರೆಗೂ ಈ ಭಾಗದಲ್ಲಿ 100 ಮನೆಗಳಿಗೆ ರೇಷನ್ ನೀಡಿದ್ದೇವೆ.
ಭುವನಂ ತಂಡದಿಂದ "ಉಷಾರ್" ಕರ್ನಾಟಕ ಕೊರೋನ ಜಾಗೃತಿ ಅಭಿಯಾನ
ಸಂಕಷ್ಟಕ್ಕೆ ಗುರಿಯಾದ ಹಳ್ಳಿ, ಮನೆಗಳನ್ನು ನೀವು ಹೇಗೆ ತಲುಪುತ್ತಿದ್ದೀರಿ?
ನಮ್ಮ ಭುವನಂ ಸಂಸ್ಥೆಯಲ್ಲಿ ಒಟ್ಟು 20 ಜನರ ತಂಡ ಹಾಗೂ 24 ಗಂಟೆ ಕಾರ್ಯ ನಿರ್ವಹಿಸುವ ಸಹಾಯವಾಣಿ ಇದೆ. ಇವರ ಮೂಲಕ ಬೆಂಗಳೂರು, ಕೊಡಗು, ಮೈಸೂರು ಸುತ್ತಮುತ್ತ ಪ್ರದೇಶ- ಹಳ್ಳಿಗಳನ್ನು ಪಟ್ಟಿ ಮಾಡಿಕೊಂಡು ಹೋಗುತ್ತಿದ್ದೇವೆ. ಅದೇ ರೀತಿ ಉತ್ತರ ಕರ್ನಾಟಕದ ಭಾಗದಲ್ಲಿ 18 ಹಳ್ಳಿಗಳನ್ನು ಗುರುತಿಸಿದ್ದಾರೆ. ಬಾಗಲಕೋಟೆಯ ಜಕ್ಕನೂರು ಗ್ರಾಮದಲ್ಲಿ ಅತಿ ಹೆಚ್ಚು ಕೊರೋನಾ ಸಾವುಗಳು ಸಂಭವಿಸಿವೆ.
ಕಾರ್ಯನಿರ್ವಹಣೆ ಹೇಗೆ?
ನಾವು ಯಾರ ಬಳಿಯೂ ಹಣ ಕೇಳುತ್ತಿಲ್ಲ. ಕೇಳುವೂದು ಇಲ್ಲ. ನಮ್ಮ ದುಡಿಮೆಯ ಸೇವಿಂಗ್‌ಸ್ ಹಣದಲ್ಲೇ ಇಷ್ಟೆಲ್ಲ ಕೆಲಸಗಳನ್ನು ಮಾಡುತ್ತಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ ನಾವೇ ಮಾಡುತ್ತೇವೆ ಅಂದರೆ ಆಗಲ್ಲ. ಆಯಾ ಗ್ರಾಮದ ಜನಪ್ರತಿನಿಧಿಗಳು, ಜಿಲ್ಲೆ, ತಾಲೂಕು ಅಧಿಕಾರಿಗಳ ಜತೆಗೂ ಮಾತನಾಡಿ ನೆರವು ಕೊಡಿಸುವ ಪ್ರಯತ್ನ ಮಾಡುತ್ತಿದ್ದೇವೆ.
ಇಲ್ಲಿಯವರೆಗೂ ನೀವು ಏನೆಲ್ಲ ಮಾಡಲು ಸಾಧ್ಯವಾಯಿತು?
15000 ಕುಟುಂಬಗಳಿಗೆ ರೇಷನ್ ತಲುಪಿಸಿದ್ದೇವೆ. 400ಕ್ಕೂ ಹೆಚ್ಚು ಮಂದಿಗೆ ವೈದ್ಯಕೀಯ ನೆರವು ಕೊಡಿಸಿದ್ದೇವೆ. ಆಕ್ಸಿಜನ್ ನೆರವಿಗೆ ಶ್ವಾಸ ಹೆಸರಿನ ಬಸ್, ಭಾಂದವ್ಯ ಹೆಸರಿನಲ್ಲಿ ಉಚಿತ ಆಟೋ ಸೇವೆ, ಉಷಾರ್ ಹೆಸರಿನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ನೆರವು ಮತ್ತು ಅರಿವು ಮೂಡಿಸುತ್ತಿದ್ದೇವೆ. ಕೊರೋನಾ ಅರಿವು ಮೂಡಿಸಲು ನಾಲ್ಕು ವಿಡಿಯೋಗಳನ್ನು ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದೇವೆ.
ಈ ಪಯಣದಲ್ಲಿ ನಿಮಗೆ ಸಾರ್ಥಕ ಭಾವನೆ ಮೂಡಿಸಿದ ಘಟನೆ ಅಥವಾ ಸನ್ನಿವೇಶ ಯಾವುದು?
ಬೆಂಗಳೂರಿನಲ್ಲಿ ರಾತ್ರಿ 12 ಗಂಟೆಗೆ ಪ್ರಯತ್ನ ಶುರು ಮಾಡಿ ಬೆಳಗ್ಗೆ 10 ಗಂಟೆಗೆ ತುಂಬು ಗರ್ಭಿಣಿಗೆ ಆಕ್ಸಿಜನ್ ಬೆಡ್ ಕೊಡಿಸಿದ್ದು. ಕೆಆರ್‌ಪುರಂನಲ್ಲಿ ಹಿರಿಯ ಅಜ್ಜಿಯೊಬ್ಬಳು ಮನಸಾರೆ ಆಶೀರ್ವಾದ ಮಾಡಿದ್ದು ನನ್ನ ಜೀವನದಲ್ಲಿ ಮರೆಯಲಾರೆ.
ಜನ ಕಷ್ಟಕ್ಕೆ ಸಿಕ್ಕಿಕೊಂಡಾಗ ನಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಬೇಕು ಎನ್ನುವ ಯೋಚನೆ ಬಂದಿದ್ದು ಪ್ರವಾಹ ಬಂದು ಜನರ ಬದುಕು ನೀರಿನಲ್ಲಿ ಕೊಂಚಿಕೊಂಡು ಹೋಗುತ್ತಿದ್ದಾಗ. ಆಗ ಕೊಡಗಿನ ಸುತ್ತ ಜನರ ನೆರವಿಗೆ ದಾವಿಸುವ ಕೆಲಸ ಮಾಡುತ್ತಲೇ ಮುಂದೆಯೂ ಇದೇ ರೀತಿಯಲ್ಲಿ ನಮ್ಮ ಕರ್ತವ್ಯ ಮಾಡಬೇಕು ಎನ್ನುವ ಯೋಚನೆ ಮೂಡಿತು.
- ಭುವನ್ ಪೊನ್ನಣ್ಣ, ನಟ
ಕೊರೋನಾ ಎರಡನೇ ಅಲೆಗೆ ಸಿಕ್ಕಿ ಎಲ್ಲರು ಒಂದಲ್ಲಾ ಒಂದು ರೀತಿಯಲ್ಲಿ ಸಂಕಷ್ಟಗಳು ಎದುರಿಸುತ್ತಿದ್ದಾರೆ. ಸಾವು- ನೋವುಗಳನ್ನು ನೋಡುತ್ತಿದ್ದಾರೆ. ಈ ಸಮಯದಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುವವರ ಜತೆಗೆ ನಿಲ್ಲಬೇಕು ಎಂದು ನಾನು ಮತ್ತು ಭುವನ್ ಭುವನಂ ಎನ್ನುವ ಸಂಸ್ಥೆ ಮೂಲಕ ಸಹಾಯ ಮಾಡಲು ನಿರ್ಧರಿಸಿದ್ವಿ.
-ಹರ್ಷಿಕಾ ಪೂಣಚ್ಚ, ನಟಿ