ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಚಿತ್ರದ ಟೀಸರ್ 5 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡಿದೆ. ಐದು ಭಾಷೆಯ ವೀಕ್ಷಕರು ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. 777 ಚಾರ್ಲಿ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸುತ್ತಿರುವ ಕಾಸರಗೋಡು ಹುಡುಗ ನಿರ್ದೇಶಕ ಕೆ. ಕಿರಣ್‌ರಾಜ್ ಸಿನಿಮಾ ಕುರಿತು ಆಡಿದ ಮಾತುಗಳು ಇಲ್ಲಿವೆ.
ರಾಜೇಶ್ ಶೆಟ್ಟಿ
ಕೈ ಹಿಡಿದು ನಡೆಸಿದ್ದು ಮಹಾಭಾರತ
ಕಿರಿಕ್ ಪಾರ್ಟಿ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಕ್ಯಾಂಟೀನ್ ಸೀನ್ ಶೂಟ್ ಮಾಡುತ್ತಿದ್ದೆವು. ಆಗ ಅಲ್ಲೊಂದು ನಾಯಿ ಕುಟುಂಬ ಇತ್ತು. ತಾಯಿ ಮಕ್ಕಳು ಆಟಾಡುತ್ತಿದ್ದ ಕ್ಯೂಟ್ ದೃಶ್ಯ ನೋಡಿ ನಾನು ಮುಂದಿನ ಸಿನಿಮಾದ ವಸ್ತು ಆಯ್ಕೆ ಮಾಡಿಕೊಂಡೆ. ಭಾರತೀಯ ಸಿನಿಮಾದಲ್ಲಿ ನಾಯಿ ಒಂದು ಪಾತ್ರವಾಗಿ ಬಂದಿದ್ದು ಕಡಿಮೆ. ವಿಶ್ವ ಸಿನಿಮಾದಲ್ಲಿ ಅನೇಕ ಸಿನಿಮಾಗಳು ಬಂದಿವೆ. ಅದೆಲ್ಲಕ್ಕಿಂತ ಭಿನ್ನವಾಗಿ ಸಿನಿಮಾ ಮಾಡುವುದು ಹೇಗೆಅಂತ ಯೋಚಿಸುತ್ತಿದ್ದಾಗ ನನಗೆ ನೆರವಾಗಿದ್ದು ಮಹಾಭಾರತ. ಮಹಾಭಾರತದ ಆದಿಯಲ್ಲಿ ನಾಯಿ ಇರುತ್ತದೆ, ಧರ್ಮರಾಯ ಸ್ವರ್ಗಾರೋಹಣ ಮಾಡುವಾಗಲೂ ನಾಯಿ ಇತ್ತು. ಆ ಕತೆ ನೆನಪಾಗಿ ಮಹಾಭಾರತಕ್ಕೆ ಹೋದೆ. ನಾನು ಪಾತ್ರ ಬೆಳೆಸುವಾಗ ನಿಜಕ್ಕೂ ಮಹಾಭಾರತ ನನ್ನ ಕೈ ಹಿಡಿದು ನಡೆಸಿತು. ತರ್ಲೆ ಧರ್ಮನ ಲೈಫಿಗೆ ಚಾರ್ಲಿ ಬಂದ ಮೇಲೆ ಏನಾಗುತ್ತದೆ ಎಂಬ ಕತೆ ನೀವು ನೋಡಬೇಕು.
ನೋಡುಗರ ಮನಸ್ಸಲ್ಲಿ ಉಳಿಯಬೇಕು
ಕತೆ ಹೇಳಿದ ತಕ್ಷಣ ರಕ್ಷಿತ್ ಶೆಟ್ಟಿ ಇಷ್ಟಪಟ್ಟರು. ನಾನೇ ನಿರ್ಮಾಣ ಮಾಡುತ್ತೇನೆ ಎಂದರು. ಆರಂಭದಲ್ಲಿ ಅವರು ನಾಯಕರಾಗುವ ಆಲೋಚನೆ ಇರಲಿಲ್ಲ. ಅವರು ನಾಯಕರಾದ ಮೇಲೆ ಅವರಿಗೆ ನನ್ನ ದೊಡ್ಡ ದೊಡ್ಡ ಐಡಿಯಾಗಳನ್ನು ಹಂಚಿಕೊಂಡೆ. ಅವರು ದುಡ್ಡಿನ ಬಗ್ಗೆ ಯೋಚನೆಯೇ ಮಾಡಬೇಡ, ನಿನಗಿಷ್ಟವಾದ ಹಾಗೆ ಬರಿ ಎಂದರು. ನಾನು ಮತ್ತೆ ನನ್ನ ಸ್ಕ್ರಿಪ್‌ಟ್ನಲ್ಲಿ ಬದಲಾವಣೆ ಮಾಡಿಕೊಂಡು ಹೋದೆ. ಎಲ್ಲರಿಗೂ ಇಷ್ಟವಾಯಿತು. ಎಷ್ಟೇ ಕಷ್ಟವಾದರೂ ನನ್ನ ಮೊದಲ ಸಿನಿಮಾ ಕೆಲವು ಕಾಲಗಳವರೆಗಾದರೂ ಪ್ರೇಕ್ಷಕರ ಮನಸ್ಸಲ್ಲಿ ಉಳಿದಿರಬೇಕು ಅನ್ನುವ ಆಸೆ ಇತ್ತು. ಆ ಕನಸು ನನಸಾಗುವ ಆಸೆ ಶುರುವಾಗಿದೆ.
ಚಾರ್ಲಿಯ ಕಷ್ಟ ನೋಡಿ ಮಗು ಮರುಗಿತು
ಪ್ರಾಣಿ ಮತ್ತು ಮನುಷ್ಯನ ಬಾಂಧವ್ಯ ವಿವರಿಸುವ ಸಿನಿಮಾ ಇದು. ಇಲ್ಲಿ ರಕ್ಷಿತ್ ಶೆಟ್ಟಿ ಅವರಿಗಿಂತ ಚಾರ್ಲಿಯ ಲೈಫಿಗೆ ಮಹತ್ವ ಜಾಸ್ತಿ. ಸ್ಟಾರ್ ನಟ ಈ ಸಿನಿಮಾದಲ್ಲಿ ಇದ್ದಾರೆ ಅಂತ ಹೇಳುವ ಉದ್ದೇಶ ನಮಗಿರಲಿಲ್ಲ. ತಾನು ಸ್ಟಾರ್ ಅಂತ ರಕ್ಷಿತ್ ಶೆಟ್ಟಿ ಅವರು ಕೂಡ ವರ್ತಿಸುವುದಿಲ್ಲ. ಜನರಲ್ಲಿ ತಪ್ಪು ನಿರೀಕ್ಷೆ ಹುಟ್ಟಿಸಬಾರದು ಅನ್ನುವ ನಿರ್ಧಾರ ಸ್ಪಷ್ಟಲಾಗಿತ್ತು. ಅದಕ್ಕೆ ಪುಟಾಣಿ ಚಾರ್ಲಿಯನ್ನು ತೋರಿಸಿದೆವು. ಈ ಟೀಸರ್ ರಿಲೀಸ್ ಆದಮೇಲೆ ಅನೇಕ ಮಕ್ಕಳ ವಿಡಿಯೋಗಳನ್ನು ನೋಡಿದೆ. ಅದರಲ್ಲಿ ಒಂದು ಮಗು ಚಾರ್ಲಿಯನ್ನು ನೋಡುತ್ತಾ ನಗುತ್ತಿತ್ತು. ಯಾವಾಗ ಚಾರ್ಲಿ ಮಳೆಯಲ್ಲಿ ಸಿಕ್ಕಿಕೊಂಡಿತೋ ಅಳುತ್ತಾ ಅಮ್ಮನ ಮಡಿಲಿಗೆ ಹೋಯಿತು. ಪ್ರೇಕ್ಷಕ ಅತ್ತಾಗ ಒಬ್ಬ ನಿರ್ದೇಶಕನಾಗಿ ನಾನು ಹೃದಯಸ್ಪರ್ಶಿ ಸನ್ನಿವೇಶ ಅದು.
ಚಾರ್ಲಿ ಜೊತೆ ಬಂದ ರಕ್ಷಿತ್ ಶೆಟ್ಟಿಗೆ ಪರಭಾಷಾ ಸ್ಟಾರ್‌ಗಳಿಂದಲೂ ಸಾಥ್!
ಬುದ್ಧಿವಂತೆ ಚಾರ್ಲಿ
ಒಂದು ನಾಯಿಗೆ ತರಬೇತಿ ನೀಡುವುದಕ್ಕೆ ಆರು ತಿಂಗಳು ಬೇಕು. ನಾನು ಸಿನಿಮಾ ಶುರು ಮಾಡಿ ರಕ್ಷಿತ್ ಶೆಟ್ಟಿ ಹೀರೋ ಆದ ಹೊತ್ತಿಗೆ ನಮ್ಮ ಮೊದಲ ಚಾರ್ಲಿ ದೊಡ್ಡವಳಾಗಿದ್ದಳು. ಆಮೇಲೆ ಇನ್ನೊಂದು ಮರಿ ತಂದೆವು. ಆ ಮರಿಗೆ ತಿನ್ನುವ ಆಸೆಯೇ ಇರಲಿಲ್ಲ. ನಾಯಿಯನ್ನು ನಟಿಸುವಂತೆ ಮಾಡಬೇಕಾದರೆ ತಿಂಡಿಯ ಆಸೆ ತೋರಿಸಬೇಕಿತ್ತು. ಹಾಗಾಗಿ ಅದರಿಂದ ನಟಿಸುವಂತೆ ಮಾಡಲು ಸಾಧ್ಯವಾಗಲಿಲ್ಲ. ಈಗ ನೀವು ನೋಡುತ್ತಿರುವ ಚಾರ್ಲಿ ಮೂರನೇಯದು. ಇವಳು ಭಾರಿ ತಿಂಡಿಪೋತಿ. ಕವರ್ ಸದ್ದಾದರೂ ಸಾಕು ರೂಮಲ್ಲೆಲ್ಲಾ ಹುಡುಕಾಡುತ್ತಾಳೆ. ಇವಳು ಎಷ್ಟು ಜಾಣೆ ಎಂದರೆ ಸಕಲೇಶಪುರದಲ್ಲಿ ಹೈವೇಯಲ್ಲಿ ಶೂಟಿಂಗ್ ಮಾಡಬೇಕಿತ್ತು. ಅಲ್ಲಿ ಸ್ವಲ್ಪ ತಡವಾದರೂ ಟ್ರಾಫಿಕ್ ಜಾಮ್ ಆಗುತ್ತದೆ. ಟೀಸರ್‌ನಲ್ಲಿ ಕಾಣಿವಂತೆ ಸೇತುವೆಯಲ್ಲಿ ಸಾಗುವಾಗ ಗಾಡಿಯೊಂದರಿಂದ ರಾಚಿದ ನೀರು ಅವಳ ಮುಖಕ್ಕೆ ಬೀಳುತ್ತದೆ. ಅವಳು ವಾಪಸ್ ಓಡುತ್ತಾಳೆ. ಇದು ಸನ್ನಿವೇಶ. ನಾವು ರೆಡಿಯಾಗಿ ಅವಳು ಬರುತ್ತಿದ್ದಾಗ ಮುಖಕ್ಕೆ ನೀರೆರಚಿದೆವು. ಅವಳು ಲುಕ್ ಕೊಟ್ಟಳು. ಆದರೆ ಕ್ಯಾಮೆರಾ ಸರಿಯಾಗಿ ಚಲಿಸಲಿಲ್ಲ. ಮತ್ತೊಮ್ಮೆ ಸ್ವಲ್ಪ ಹೊತ್ತು ಬಿಟ್ಟು ಅದೇ ಸನ್ನಿವೇಶಕ್ಕೆ ರೆಡಿಯಾಗಿ ಅವಳನ್ನು ನಡೆಸುತ್ತಾ ಬಂದೆವು. ನಾನು ಯಾವಾಗ ಆ್ಯಕ್ಷನ್ ಅಂತ ಹೇಳಿದೆನೋ ಅವಳಿಗೆ ನಾವು ನೀರೆರಚುತ್ತೇವೆ ಅಂತ ಗೊತ್ತಾಯಿತು. ಅವಳು ಒಂದೇ ವೇಗದಲ್ಲಿ ಅಲ್ಲಿಂದ ವಾಪಸ್ ಓಡಿಬಿಟ್ಟಳು. ನಾವು ಆ ದೃಶ್ಯ ಶೂಟ್ ಮಾಡಿದ್ದು ಮಾರನೇ ದಿನ.
ಭಾವುಕನಾದ ದೃಶ್ಯ
ಮಳೆ ಸೀನಲ್ಲಿ ಚಾರ್ಲಿ ನಟಿಸುವ ಹಾಗೆ ಮಾಡಬೇಕಿತ್ತು. ಕ್ಯಾಮೆರಾ ರೆಡಿ ಇಟ್ಟು ಮಳೆ ಬರಿಸುವ ಹಾಗೆ ಮಾಡಿದಾಗ ಚಾರ್ಲಿ ಒಂದು ಕಾಲು ಕುಂಟುವ ಹಾಗೆ ಇಟ್ಟುಕೊಂಡು ಭಯಪಟ್ಟುವ ಕೊಳ್ಳುವ ಹಾಗೆ ಆಚೆಈಚೆ ನೋಡಿದಳು. ಅವಳು ನೋಡಿದ ರೀತಿಗೆ, ಭಯದ ಭಾವ ತೋರಿಸಿದ ರೀತಿಗೆ ನನಗೆ ಕಣ್ಣೀರು ಬಂತು. ನಾನು ಅವಳ ಆ ಭಾವವನ್ನು, ಕಾಲು ಕುಂಟುವ ಹಾಗೆ ಮಾಡುವುದನ್ನು ಬರೆದಿರಲೂ ಇಲ್ಲ, ನಿರೀಕ್ಷೆ ಮಾಡಿರಲೂ ಇಲ್ಲ. ಓಡಿ ಹೋಗಿ ತಬ್ಬಿಕೊಂಡೆ. ನಾನು ಅತ್ತ ದೃಶ್ಯ ನೋಡುಗರ ಒಣ್ಣು ಒದ್ದೆ ಮಾಡುತ್ತಿರುವುದೇ ಸಾರ್ಥಕತೆ. ನಾನು ಚಾರ್ಲಿಯನ್ನು ಹುಡುಕಿದ್ದಕ್ಕಿಂತ ಈ ಸ್ಕ್ರಿಪ್‌ಟ್ಗೆ ನಾನೇ ಸರಿ ಎಂದು ಅವಳೇ ನನ್ನನ್ನು ಹುಡುಕಿ ಬಂದಿದ್ದಾಳೆ ಅನ್ನಿಸುತ್ತಿದೆ ಈಗೀಗ.
ದಿಗ್ಗಜರು ಮೆಚ್ಚಿಕೊಂಡ ಖುಷಿ
ಚಾರ್ಲಿಯನ್ನು ಇವತ್ತು ಎಲ್ಲರೂ ಅವರವರ ಮನೆಯ ನಾಯಿಮರಿ ಜೊತೆ ರಿಲೇಟ್ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆಲ್ಲಾ ನನ್ನ ತಂಡ ಕಾರಣ. ಛಾಯಾಗ್ರಾಹಕ ಅರವಿಂದ ಕಶ್ಯಪ್, ಸಂಗೀತ ನಿರ್ದೇಶಕ ನೊಬಿನ್ ಪೌಲ್, ಸಂಕಲನಕಾರ ಪ್ರತೀಕ್ ಶೆಟ್ಟಿ ಇಷ್ಟು ದಿನ ಜೊತೆಯಾಗಿ ಕೆಲಸಮಾಡಿದ್ದಕ್ಕೆ ಈ ಯಶಸ್ಸು ಸಿಕ್ಕಿದೆ. 15 ನಿಮಿಷದ ಶೋರೀಲ್ ನೋಡಿ ತಮಿಳಿನ ಕಾರ್ತಿಕ್ ಸುಬ್ಬರಾಜು, ಮಲಯಾಳಂನಲ್ಲಿ ಪೃಥ್ವಿರಾಜ್ ಅವರು ಥ್ರಿಲ್ ಆಗಿ ವಿತರಣೆಗೆ ಮುಂದಾಗಿದ್ದಾರೆ. ಎಲ್ಲಾ ಕಡೆಯಿಂದ ಪ್ರಶಂಸೆ ಸಿಗುತ್ತಿದೆ. ಈ ಎಲ್ಲಾ ಹೊಗಳಿಕೆಯನ್ನು ನನ್ನ ಚಾರ್ಲಿಗೆ ಅರ್ಪಿಸುತ್ತಿದ್ದೇನೆ.