ಜಾಗತಿಕ ಸಮುದಾಯ ಪಾಕಿಸ್ತಾನವನ್ನು ಭಯೋತ್ಪಾದನೆ, ಸಂಘಟಿತ ಅಪರಾಧ, ಮತ್ತು ಅಕ್ರಮ ಗಡಿಯಾಚೆಗಿನ ಚಟುವಟಿಕೆಗಳ ನೆಲೆ ಎಂದೇ ಪರಿಗಣಿಸಿದೆ. ಭಾರತ ಮತ್ತು ಇತರ ರಾಷ್ಟ್ರಗಳು ಭಯೋತ್ಪಾದನೆ ಮತ್ತು ಹಿಂಸಾಚಾರದೊಡನೆ ಇಷ್ಟೊಂದು ಆತ್ಮೀಯ ಸಂಬಂಧ ಹೊಂದಿರುವುದು ಕೊನೆಗೊಂದು ದಿನ ಪಾಕಿಸ್ತಾನಕ್ಕೇ ಅನಾಹುತಕಾರಿಯಾಗಿ ಪರಿಣಮಿಸಲಿದೆ, ಪಾಕಿಸ್ತಾನದ ಪತನಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಕೆಯನ್ನೂ ನೀಡಿವೆ.
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಕುಖ್ಯಾತ ಉಗ್ರಗಾಮಿ ಸಂಘಟನೆ ಲಷ್ಕರ್ ಇ ತಯ್ಬಾ (ಎಲ್ಇಟಿ) ಮುಖ್ಯಸ್ಥ, ಹಫೀಜ್ ಸಯೀದ್ ತೀವ್ರವಾಗಿ ಅಸೌಖ್ಯಗೊಂಡಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ. ಈ ವಿಚಾರ ಹೊರಬರುತ್ತಿದ್ದ ಹಾಗೆಯೇ, ಹಲವಾರು ಗಾಳಿಸುದ್ದಿಗಳು ಮತ್ತು ಅನುಮಾನಗಳಿಗೆ ಹಾದಿಮಾಡಿಕೊಟ್ಟಿವೆ. ಪಾಕಿಸ್ತಾನದಲ್ಲಿ ವ್ಯಕ್ತಿಗಳನ್ನು ಗುರಿಯಾಗಿಸಿ ಹತ್ಯೆ ನಡೆಸುವುದು ಸೇರಿದಂತೆ, ವಿವಿಧ ರಹಸ್ಯ ಕಾರ್ಯಾಚರಣೆಗಳಲ್ಲಿ ಭಾರತ ಭಾಗವಹಿಸಿದೆ ಎಂದು ಹಲವು ಮಾತುಗಳು ಹರಿದಾಡುತ್ತಿವೆ. ಅಮೆರಿಕಾ ಮತ್ತು ಕೆನಡಾಗಳಲ್ಲಿಯೂ ಭಾರತೀಯ ಗುಪ್ತಚರ ಸಂಸ್ಥೆಗಳು ಭಾರತೀಯ ಮೂಲದ ವ್ಯಕ್ತಿಗಳ ಹತ್ಯೆ ನಡೆಸಲು ಪ್ರಯತ್ನ ನಡೆಸಿವೆ ಎಂಬ ಆರೋಪಗಳೂ ಕೇಳಿ ಬಂದಿದ್ದವು. ಇಂತಹ ಬೆಳವಣಿಗೆಗಳು ಈ ರಾಷ್ಟ್ರಗಳೊಡನೆ ಭಾರತದ ರಾಜತಾಂತ್ರಿಕ ಸಂಬಂಧಗಳನ್ನು ಹಾಳುಗೆಡವತೊಡಗಿವೆ ಎಂದು ವರದಿಗಳು ಹೇಳಿವೆ.
undefined
ಪಾಕಿಸ್ತಾನದಲ್ಲಿ ಭಯೋತ್ಪಾದನೆಯೊಡನೆ ಅತ್ಯಂತ ನಿಕಟ ನಂಟು ಹೊಂದಿರುವ, ಆ ದೇಶದ ಪ್ರಮುಖ ಉಗ್ರಗಾಮಿಯಾಗಿರುವ ಹಫೀಜ್ ಸಯೀದ್ ಅನಿರೀಕ್ಷಿತವಾಗಿ ಆಸ್ಪತ್ರೆಗೆ ದಾಖಲಾದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡತೊಡಗಿದೆ. ಇದ್ದಕ್ಕಿದ್ದ ಹಾಗೇ ಹಫೀಜ್ ಸಯೀದ್ ಗಂಭೀರವಾಗಿ ಅಸೌಖ್ಯಗೊಂಡಿರುವುದು ಪಾಕಿಸ್ತಾನದಲ್ಲಿ ಭಾರತದ ರಹಸ್ಯ ಕಾರ್ಯಾಚರಣೆಗಳು ನಡೆಯುತ್ತಿವೆ ಎಂಬ ಅನುಮಾನ ಮೂಡಿಸಿದ್ದು, ಎರಡು ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ತಲೆದೋರುವಂತೆ ಮಾಡಿದೆ.
ಭಾರತದ ಪರಮಾಣು ಪಯಣ: ಅಣ್ವಸ್ತ್ರ ಸಜ್ಜಿತ ಭಾರತ ನಿರ್ಮಾಣದ ಕಥನ
ಉಗ್ರ ಹಫೀಜ್ ಸಯೀದ್ ಆಸ್ಪತ್ರೆ ವಾಸ: ದೀರ್ಘಕಾಲದಿಂದ ಲಷ್ಕರ್ ಇ ತಯ್ಬಾ ಉಗ್ರಗಾಮಿ ಸಂಘಟನೆಗೆ ನಾಯಕತ್ವ ಒದಗಿಸುತ್ತಾ ಬಂದಿರುವ ಹಫೀಜ್ ಸಯೀದ್ ಆರೋಗ್ಯ ಸ್ಥಿತಿ ಗಂಭೀರಗೊಂಡು, ಐಸಿಯುನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ. ಆದರೆ ಆತನ ಆರೋಗ್ಯ ಸಮಸ್ಯೆಯ ಕುರಿತು ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಆತನ ಅನಿರೀಕ್ಷಿತ ಅಸ್ವಸ್ಥತೆ ವ್ಯಾಪಕ ಊಹಾಪೋಹಗಳು ಮತ್ತು ವಿವಿಧ ಪಿತೂರಿ ಆರೋಪಗಳನ್ನು ಹುಟ್ಟುಹಾಕಿವೆ. ಆತನ ಅಸ್ವಸ್ಥತೆಯ ಹಿಂದೆ ಕಾಣದ ಕೈಗಳ ಆಟವೇನಾದರೂ ಇರಬಹುದೇ ಎಂಬ ಪ್ರಶ್ನೆಗಳು ಈಗಾಗಲೇ ಮೂಡಿವೆ.
ಟ್ವಿಟರ್‌ನಲ್ಲಿ ಪ್ರತಿಕ್ರಿಯೆ: ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಬಳಕೆದಾರರು ವಿವಿಧ ರೀತಿಯ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ. ಹಲವಾರು ಜನರು ಆತ ಹಿಂದಿನಿಂದ ಮಾಡುತ್ತಾ ಬಂದಿರುವ ಪಾಪಗಳ ಕರ್ಮಕ್ಕಾಗಿ ಈಗ ಅನಾರೋಗ್ಯ ಪೀಡಿತನಾಗಿದ್ದಾನೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇನ್ನೂ ಕೆಲವರು ಆತನಿಂದ ಎದುರಾಗಬಹುದಾದ ಅಪಾಯವನ್ನು ತಡೆಯುವ ನಿಟ್ಟಿನಲ್ಲಿ ಕೈಗೊಂಡಿರುವ ಕಾರ್ಯತಂತ್ರದ ಫಲವೂ ಇದಾಗಿರಬಹುದು ಎಂದು ಭಾವಿಸಿದ್ದಾರೆ.
ಭಾರತದ ಪಾತ್ರದ ಕುರಿತು ಆರೋಪಗಳು: ಪಾಕಿಸ್ತಾನದ ಒಳಗಿರುವ ಭಯೋತ್ಪಾದಕರನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸುವ, ಅಂತಹ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿರುವ ಆರೋಪಗಳನ್ನು ಭಾರತ ಸ್ಪಷ್ಟವಾಗಿ ತಳ್ಳಿಹಾಕಿದೆ. ಭಾರತೀಯ ಅಧಿಕಾರಿಗಳು ಇಂತಹ ಆರೋಪಗಳನ್ನು ಪಾಕಿಸ್ತಾನದ ಅಪಪ್ರಚಾರವಷ್ಟೇ ಎಂದಿದ್ದಾರೆ.
ಜಾಗತಿಕ ಸಮುದಾಯ ಪಾಕಿಸ್ತಾನವನ್ನು ಭಯೋತ್ಪಾದನೆ, ಸಂಘಟಿತ ಅಪರಾಧ, ಮತ್ತು ಅಕ್ರಮ ಗಡಿಯಾಚೆಗಿನ ಚಟುವಟಿಕೆಗಳ ನೆಲೆ ಎಂದೇ ಪರಿಗಣಿಸಿದೆ. ಭಾರತ ಮತ್ತು ಇತರ ರಾಷ್ಟ್ರಗಳು ಭಯೋತ್ಪಾದನೆ ಮತ್ತು ಹಿಂಸಾಚಾರದೊಡನೆ ಇಷ್ಟೊಂದು ಆತ್ಮೀಯ ಸಂಬಂಧ ಹೊಂದಿರುವುದು ಕೊನೆಗೊಂದು ದಿನ ಪಾಕಿಸ್ತಾನಕ್ಕೇ ಅನಾಹುತಕಾರಿಯಾಗಿ ಪರಿಣಮಿಸಲಿದೆ, ಪಾಕಿಸ್ತಾನದ ಪತನಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಕೆಯನ್ನೂ ನೀಡಿವೆ. ಜನವರಿ ತಿಂಗಳಲ್ಲಿ ಭಾರತದ ವಿದೇಶಾಂಗ ಸಚಿವಾಲಯ ನೀಡಿರುವ ಹೇಳಿಕೆಯಲ್ಲೂ ಇದೇ ಅಭಿಪ್ರಾಯ ದಾಖಲಾಗಿದೆ.
ಜನವರಿ ತಿಂಗಳಲ್ಲಿ, ಮಾಧ್ಯಮಗಳ ಜೊತೆ ಮಾತನಾಡುವ ಸಂದರ್ಭದಲ್ಲಿ, ಪಾಕಿಸ್ತಾನದ ಹಿರಿಯ ರಾಜತಂತ್ರಜ್ಞರು ಪಾಕಿಸ್ತಾನದಲ್ಲಿನ ಸರಣಿ ಹತ್ಯೆಗಳ ಹಿಂದೆ ಭಾರತದ ಪಾತ್ರ ಇರುವ ಕುರಿತು ತಮ್ಮ ಬಳಿ ನಂಬಿಕಾರ್ಹ ಪುರಾವೆಗಳಿವೆ ಎಂದಿದ್ದರು. ವಿದೇಶಾಂಗ ಕಾರ್ಯದರ್ಶಿ ಮುಹಮ್ಮದ್ ಸೈರಸ್ ಸಜಾದ್ ಕಾಜಿ಼ ಈ ಹತ್ಯೆಗಳನ್ನು ಗುತ್ತಿಗೆ ಹತ್ಯೆ ಎಂದು ಕರೆದಿದ್ದು, ಇದಕ್ಕಾಗಿ ಜಗತ್ತಿನಾದ್ಯಂತ ವಿವಿಧ ಪ್ರದೇಶಗಳಲ್ಲಿ ಜಾಗತಿಕ ಜಾಲವೊಂದು ಕಾರ್ಯಾಚರಿಸುತ್ತಿದೆ ಎಂದು ಆರೋಪಿಸಿದ್ದರು.
ಕಾಜಿ಼ ಅವರ ಆರೋಪದ ಪ್ರಕಾರ, ಸೆಪ್ಟೆಂಬರ್ 2023ರಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕೊಲೆಯಾದ ಮುಹಮ್ಮದ್ ರಿಯಾಜ್, ಅದಾದ ಒಂದು ತಿಂಗಳ ಬಳಿಕ, ಪಾಕಿಸ್ತಾನದ ಪಂಜಾಬ್‌ನ ಸಿಯಾಲ್‌ಕೋಟ್‌ನಲ್ಲಿ ಹತ್ಯೆಯಾದ ಶಹೀದ್ ಲತೀಫ್ ಭಾರತದ ಕೈವಾಡದಲ್ಲಿ ಸಾವಿಗೀಡಾದವರ ಸಾಲಿಗೆ ಸೇರಿದ್ದಾರೆ. ಭಾರತೀಯ ಮಾಧ್ಯಮಗಳು ಮುಹಮ್ಮದ್ ರಿಯಾಜ್ ಲಷ್ಕರ್ ಇ ತಯ್ಬಾ ಸಂಘಟನೆಯ ಮುಖ್ಯ ಉಗ್ರಗಾಮಿಯಾಗಿದ್ದು, 2008ರ ಮುಂಬೈ ದಾಳಿಗೆ ಸಂಬಂಧ ಹೊಂದಿದ್ದ ಎಂದು ವರದಿ ಮಾಡಿವೆ. ಅದೇ ವೇಳೆ, ಶಹೀದ್ ಲತೀಫ್ ಜೈಷ್ ಎ ಮುಹಮ್ಮದ್ (ಜೆಇಎಂ) ಸಂಘಟನೆಯೊಡನೆ ಸಂಪರ್ಕ ಹೊಂದಿದ್ದು, 2016ರ ಪಠಾಣ್‌ಕೋಟ್ ವಾಯುನೆಲೆಯ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ಜಾಗತಿಕ ಪರಿಣಾಮಗಳು: ಪಾಕಿಸ್ತಾನದ ಜೊತೆಗಿನ ಉದ್ವಿಗ್ನತೆಯನ್ನೂ ಮೀರಿ ಭಾರತ ಹಲವು ಆರೋಪಗಳನ್ನು ಎದುರಿಸುತ್ತಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಕೆನಡಾದ ಅಧಿಕಾರಿಗಳು ಈಗಾಗಲೇ ತಮ್ಮ ದೇಶದ ಗಡಿಯೊಳಗೆ ಜೀವಿಸುತ್ತಿರುವವರನ್ನು ಗುರಿಯಾಗಿಸಿ, ಭಾರತೀಯ ಗುಪ್ತಚರ ಸಂಸ್ಥೆಗಳು ಕಾರ್ಯಾಚರಣೆ ನಡೆಸಲು ಪ್ರಯತ್ನಿಸಿವೆ ಎಂದು ಆರೋಪಿಸಿವೆ. ಇಂತಹ ಆರೋಪಗಳು ಭಾರತದ ಅಂತಾರಾಷ್ಟ್ರೀಯ ರಾಜತಾಂತ್ರಿಕ ಸಂಬಂಧಗಳ ಮೇಲೆ ಹೆಚ್ಚಿನ ಸಂಕೀರ್ಣತೆಯನ್ನು ಉಂಟುಮಾಡಿವೆ.
ವಿದೇಶಗಳಲ್ಲಿ ಭಾರತದ ಚಟುವಟಿಕೆಗಳ ಆರೋಪಗಳು: ಭಾರತ ತನ್ನ ಗಡಿಯಾಚೆಗೆ ತನಗಾಗದ ವ್ಯಕ್ತಿಗಳನ್ನು ಗುರಿಯಾಗಿಸಿ ಹತ್ಯೆ ನಡೆಸುವ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದೆ ಎಂದು ಹೊಸ ಆರೋಪಗಳು ಎದುರಾಗಿವೆ. ಅಮೆರಿಕಾ ಮತ್ತು ಕೆನಡಾಗಳು ಭಾರತದ ಕಾರ್ಯಾಚರಣೆಗಳ ಕುರಿತು ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನಿ ನಾಗರಿಕರ ಸಾವಿನ ಹಿಂದೆ ಭಾರತದ ಕೈವಾಡ ಇರುವ ಕುರಿತ ಕಥೆಗಳು ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿದ್ದು, ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆಯುತ್ತಿವೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧದ ಆರೋಪಗಳು: ಭಾರತ ತನ್ನ ಗಡಿಯಾಚೆಗಿನ ಶತ್ರುಗಳನ್ನು ಗುರಿಯಾಗಿಸಿ, ಅವರ ಹತ್ಯೆ ನಡೆಸುವಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸಾಧ್ಯತೆಗಳಿವೆ ಎನ್ನುವ ಆರೋಪಗಳು ಇತ್ತೀಚೆಗೆ ದಾಖಲಾಗಿವೆ. ಪಾಕಿಸ್ತಾನೀಯರ ಹತ್ಯೆಯ ಹಿಂದೆ ಭಾರತದ ಚಟುವಟಿಕೆಗಳು ಕಾರಣವಾಗಿರುವ ಸಾಧ್ಯತೆಗಳು ಈಗ ಜಾಗತಿಕವಾಗಿ ಪರಿಶೀಲನೆಗೊಳಗಾಗುತ್ತಿವೆ. ಅದರಲ್ಲೂ ಅಮೆರಿಕಾ ಮತ್ತು ಕೆನಡಾಗಳಂತೂ ಭಾರತದ ಮೇಲೆ ಹೆಚ್ಚಿನ ಗಮನ ಹರಿಸಿವೆ.
ಆಗಸ್ಟ್ ತಿಂಗಳಲ್ಲಿ, ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು ಕೆನಡಾದ ವ್ಯಾಂಕೋವರ್ ನಲ್ಲಿ ಸಿಖ್ ಪ್ರತ್ಯೇಕತಾವಾದಿ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ನೇರವಾಗಿ ಆರೋಪಿಸಿದ್ದರು. ಇದು ಭಾರತ ಮತ್ತು ಕೆನಡಾದ ಸಂಬಂಧವನ್ನು ಉದ್ವಿಗ್ನಗೊಳಿಸಿತ್ತು.
ನಿಜ್ಜರ್ ಹತ್ಯೆಯ ಹಿಂದೆ ತನ್ನ ಕೈವಾಡವಿದೆ ಎಂಬ ಆರೋಪಗಳನ್ನು ಭಾರತ ಬಲವಾಗಿ ತಳ್ಳಿ ಹಾಕಿದ್ದು, ತಾನು ಅಮೆರಿಕಾದ ಕಾನೂನು ಅಧಿಕಾರಿಗಳು ಮಾಡಿರುವ ಆರೋಪಗಳನ್ನು ಗಮನಿಸುತ್ತಿರುವುದಾಗಿ ಹೇಳಿತ್ತು. ಭಾರತದ ವಿದೇಶಾಂಗ ಸಚಿವರಾದ ಎಸ್ ಜೈಶಂಕರ್ ಅವರು ವಿದೇಶಗಳಲ್ಲಿ ಯಾರನ್ನಾದರೂ ಗುರಿಯಾಗಿಸಿ ಹತ್ಯೆ ನಡೆಸುವುದು ಭಾರತ ಅನುಸರಿಸುವ ಕ್ರಮವಲ್ಲ ಎಂದು ಒತ್ತಿ ಹೇಳಿದ್ದರು.
ಹಳೆಯದಾಗುತ್ತಿರುವ ಮಿಗ್-29ಕೆ: ಹೊಸ ಯುದ್ಧ ವಿಮಾನಗಳಿಗೆ ನೌಕಾಪಡೆಯ ಹುಡುಕಾಟ
ಪಾಕಿಸ್ತಾನದ ಮೇಲಿನ ಪರಿಣಾಮಗಳು: ಒಂದು ವೇಳೆ ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದಿರುವ ಹತ್ಯೆಗಳ ಹಿಂದೆ ಭಾರತದ ಕೈವಾಡವಿದೆ ಎಂದಾದರೆ, ಅದು ಪಾಕಿಸ್ತಾನಿ ಭದ್ರತಾ ಪಡೆಗಳ ವೈಫಲ್ಯವನ್ನು ಎತ್ತಿ ತೋರುತ್ತದೆ. ಒಂದೊಮ್ಮೆ ಭಾರತೀಯ ರಕ್ಷಣಾ ಪಡೆಗಳು ನಿಜವಾಗಿಯೂ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ, ಕಾಶ್ಮೀರದಲ್ಲಿ ಅಸ್ಥಿರತೆ ಉಂಟುಮಾಡುವ ಪಾಕಿಸ್ತಾನದ ಪ್ರಯತ್ನವನ್ನು ತಡೆಗಟ್ಟುವ ನಿಟ್ಟಿನಲ್ಲಿ ಬದಲಾದ ಭಾರತದ ಕಾರ್ಯತಂತ್ರ ಇದಾಗಿರಬಹುದು.
ಹಫೀಜ್ ಸಯೀದ್ ತೀವ್ರ ಅನಾರೋಗ್ಯ ಇನ್ನೂ ಸಾರ್ವಜನಿಕರ ಚರ್ಚೆ ಮತ್ತು ಆಸಕ್ತಿಯ ವಿಚಾರವಾಗಿದ್ದರೂ, ಇದರ ವ್ಯಾಪಕ ಪರಿಣಾಮಗಳು ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಬಂಧ ಮತ್ತು ಪ್ರಾದೇಶಿಕ ಸ್ಥಿರತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಸನ್ನಿವೇಶಗಳು ಇನ್ನೂ ನಿರಂತರವಾಗಿ ಬದಲಾಗುತ್ತಿದ್ದು, ಸಾಮಾಜಿಕ ಜಾಲತಾಣಗಳು ಸ್ಥಳೀಯ ಭಾವನೆಗಳು ಮತ್ತು ಜಾಗತಿಕ ದೃಷ್ಟಿಕೋನಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ.