ಮಾಸ್ಕೋ ಮಾರಣಹೋಮ: ಪುಟಿನ್ - ಐಎಸ್-ಕೆ ಪರಸ್ಪರ ದೋಷಾರೋಪಣೆ!

By Ravi Janekal  |  First Published Mar 26, 2024, 4:51 PM IST

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ರಷ್ಯಾ ಸರ್ಕಾರಿ ನಿಯಂತ್ರಿತ ಮಾಧ್ಯಮಗಳು ಶುಕ್ರವಾರ ಮಾಸ್ಕೋ ನಗರದ ರಂಗಮಂದಿರದಲ್ಲಿ ನಡೆದ ಭಯೋತ್ಪಾದನಾ ದಾಳಿಯ ಹಿಂದೆ ಉಕ್ರೇನ್ ಕೈವಾಡವಿದೆ ಎಂದು ಆರೋಪಿಸಿದ್ದವು. ಅದರೊಡನೆ, ಹೆಚ್ಚುವರಿ ಮಾಹಿತಿಗಳು ಈ ದಾಳಿಯ ಜವಾಬ್ದಾರಿ ಹೊತ್ತಿರುವ ಐಎಸ್-ಕೆ ಪಾತ್ರದ ಕುರಿತು ಮಾಹಿತಿ ನೀಡಿವೆ.



(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ರಷ್ಯಾ ಸರ್ಕಾರಿ ನಿಯಂತ್ರಿತ ಮಾಧ್ಯಮಗಳು ಶುಕ್ರವಾರ ಮಾಸ್ಕೋ ನಗರದ ರಂಗಮಂದಿರದಲ್ಲಿ ನಡೆದ ಭಯೋತ್ಪಾದನಾ ದಾಳಿಯ ಹಿಂದೆ ಉಕ್ರೇನ್ ಕೈವಾಡವಿದೆ ಎಂದು ಆರೋಪಿಸಿದ್ದವು. ಅದರೊಡನೆ, ಹೆಚ್ಚುವರಿ ಮಾಹಿತಿಗಳು ಈ ದಾಳಿಯ ಜವಾಬ್ದಾರಿ ಹೊತ್ತಿರುವ ಐಎಸ್-ಕೆ ಪಾತ್ರದ ಕುರಿತು ಮಾಹಿತಿ ನೀಡಿವೆ.

Tap to resize

Latest Videos

undefined

ಏನು ಈ ಐಎಸ್-ಕೆ? ಐಎಸ್-ಕೆ ಎನ್ನುವುದು ಮೂಲತಃ ಅಫ್ಘಾನಿಸ್ತಾನ, ಇರಾನ್ ಮತ್ತು ಪಾಕಿಸ್ತಾನಗಳಲ್ಲಿ ಕಾರ್ಯಾಚರಿಸುವ ಇಸ್ಲಾಮಿಕ್ ಸ್ಟೇಟ್ - ಖೊರಾಸನ್ ಎನ್ನುವುದರ ಹೃಸ್ವರೂಪವಾಗಿದ್ದು, ಜಾಗತಿಕವಾಗಿ ನಿಷೇಧಿಸಲ್ಪಟ್ಟಿರುವ, ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ನ ಅಂಗಸಂಸ್ಥೆಯಾಗಿದೆ.

ಈ ಉಗ್ರಗಾಮಿ ಸಂಘಟನೆ ಖೊರಾಸನ್ ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದು, ಇದು ಪಾಕಿಸ್ತಾನ, ಇರಾನ್, ಅಫ್ಘಾನಿಸ್ತಾನಗಳ ಒಳಗಿದ್ದು, ಕೇಂದ್ರ ಏಷ್ಯಾ ಕಡೆ ವ್ಯಾಪಿಸಿರುವ ಮುಸ್ಲಿಂ ಪ್ರದೇಶವನ್ನು ಪ್ರತಿನಿಧಿಸುತ್ತದೆ.

ಇಸ್ಲಾಮಿಕ್ ಸ್ಟೇಟ್ ಖೊರಾಸನ್ (ಐಎಸ್-ಕೆ) ಕಳೆದ ಒಂಬತ್ತು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದರೂ, ಇತ್ತೀಚೆಗೆ ಮಾತ್ರವೇ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಅತ್ಯಂತ ಪ್ರಮುಖ ವಿಭಾಗವಾಗಿ ಹೊರಹೊಮ್ಮಿದೆ. ಈ ಗುಂಪು ತನ್ನ ವ್ಯಾಪಕ ಪ್ರಭಾವ ಮತ್ತು ಅತ್ಯಂತ ಘೋರ, ಕಠಿಣ ತಂತ್ರಗಳಿಂದ ಹೆಸರಾಗಿದೆ.

ಸಿರಿಯಾ ಮತ್ತು ಇರಾಕ್‌ಗಳಲ್ಲಿ ಉಳಿದಿರುವ ತನ್ನ ಗುಂಪಿನ ನಾಯಕತ್ವದೊಡನೆ ಸೇರಿ, ಐಎಸ್-ಕೆ ಜಾಗತಿಕ ಇಸ್ಲಾಮಿಕ್ ಖಿಲಾಫತ್ ಅಥವಾ ರಾಜ್ಯವನ್ನು ಸ್ಥಾಪಿಸಿ, ಶರಿಯಾ ಆಡಳಿತ ಹೇರುವ ಗುರಿ ಹೊಂದಿದೆ.

ಹಳೆಯದಾಗುತ್ತಿರುವ ಮಿಗ್-29ಕೆ: ಹೊಸ ಯುದ್ಧ ವಿಮಾನಗಳಿಗೆ ನೌಕಾಪಡೆಯ ಹುಡುಕಾಟ

ಅಫ್ಘಾನಿಸ್ತಾನದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣದಿಂದ ಐಎಸ್-ಕೆ ಮಧ್ಯಂತರವಾದ, ಆದರೂ ಅತ್ಯಂತ ತೀವ್ರವಾದ ಬಂಡಾಯಗಳನ್ನು ನಡೆಸುತ್ತಿದ್ದು, ಆಡಳಿತಾರೂಢ ತಾಲಿಬಾನ್ ವಿರುದ್ಧ ಸಮರ ಸಾರುತ್ತಿದೆ.

ಐಎಸ್-ಕೆ ಹಿಂದಿನ ದಾಳಿಗಳು: 2021ರಲ್ಲಿ, ಕಾಬೂಲ್ ವಿಮಾನ ನಿಲ್ದಾಣದಿಂದ ಅಸ್ತವ್ಯಸ್ತವಾದ ಸ್ಥಳಾಂತರದ ಸಂದರ್ಭದಲ್ಲಿ ಐಎಸ್-ಕೆ ಒಂದು ಆತ್ಮಹತ್ಯಾ ಬಾಂಬ್ ದಾಳಿ ನಡೆಸಿ, 170 ಅಫ್ಘಾನ್ ನಾಗರಿಕರು ಮತ್ತು 13 ಅಮೆರಿಕನ್ ಸೇನಾ ಸಿಬ್ಬಂದಿಗಳ ಹತ್ಯೆಗೆ ಕಾರಣವಾಯಿತು.

ಅದರ ಮುಂದಿನ ವರ್ಷದಲ್ಲಿ, ಐಎಸ್-ಕೆ ಕಾಬೂಲ್‌ನಲ್ಲಿರುವ ರಷ್ಯನ್ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಿತು. ಈ ದಾಳಿಯಲ್ಲಿ ಆರು ಜನರು ಮೃತಪಟ್ಟು, ಇನ್ನಷ್ಟು ಜನರು ಗಾಯಗೊಂಡರು.

ಬಿಬಿಸಿ ಪ್ರಕಾರ, ಐಎಸ್-ಕೆ ಬೇರೆ ಬೇರೆ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದು, ಹೆರಿಗೆ ವಾರ್ಡ್, ಬಸ್ ನಿಲ್ದಾಣಗಳು, ಮತ್ತು ಪೊಲೀಸ್ ಅಧಿಕಾರಿಗಳೂ ದಾಳಿಗೆ ತುತ್ತಾಗಿದ್ದಾರೆ.

ರಷ್ಯಾದಲ್ಲಿ ಐಎಸ್-ಕೆ ಹಲವಾರು ಸಣ್ಣಪುಟ್ಟ ದಾಳಿಗಳನ್ನು ನಡೆಸಿದ್ದು, ಅದರಲ್ಲಿ ಇತ್ತೀಚಿನ ದಾಳಿ 2020ರಲ್ಲಿ ನಡೆದಿತ್ತು. ಈ ವರ್ಷ, ರಷ್ಯಾದ ಆಂತರಿಕ ಭದ್ರತಾ ಸಂಸ್ಥೆ ಎಫ್ಎಸ್‌ಬಿ ಹಲವು ಉಗ್ರಗಾಮಿ ಸಂಚುಗಳನ್ನು ಬಯಲುಗೊಳಿಸಿರುವುದಾಗಿ ಘೋಷಿಸಿದೆ.

ಅಪರಾಧಿಗಳನ್ನು ಗುರುತಿಸುವುದು: ರಷ್ಯನ್ ಸರ್ಕಾರಿ ಮಾಧ್ಯಮಗಳು ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ ಎಂದು ವರದಿ ಮಾಡಿದ್ದು, ಅವರು ಒಂದು ಕಾಲದಲ್ಲಿ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ತಜಕಿಸ್ತಾನದ ತಜಿಕ್ ನಾಗರಿಕರು ಎನ್ನಲಾಗಿದೆ.

ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಅವರ ಮುಖದಲ್ಲಾಗಿದ್ದ ಅಪಾರ ಗಾಯಗಳು ಅವರು ತೀವ್ರ ವಿಚಾರಣೆಗೆ ಗುರಿಯಾಗಿದ್ದರು ಎನ್ನುವುದನ್ನು ಸಾಬೀತುಪಡಿಸಿವೆ.

ಆದರೆ ಇಲ್ಲಿರುವ ವಿಚಾರವೆಂದರೆ, ಅಂತಾರಾಷ್ಟ್ರೀಯ ಮಾನದಂಡಗಳ ಅನುಸಾರ, ಅವರ ತಪ್ಪೊಪ್ಪಿಗೆಯೂ ಅನೂರ್ಜಿತಗೊಳ್ಳಲಿದೆ. ವ್ಯಕ್ತಿಗಳು ಅನುಭವಿಸುತ್ತಿರುವ ಶಿಕ್ಷೆಯಿಂದ ಬಿಡುಗಡೆ ಹೊಂದಲು ತಾವು ಅಪರಾಧ ಮಾಡದಿದ್ದರೂ, ಎಂತಹ ತಪ್ಪೊಪ್ಪಿಗೆ ಹೇಳಿಕೆಯನ್ನಾದರೂ ನೀಡುತ್ತಾರೆ ಎನ್ನುವುದು ಇದರ ಹಿಂದಿರುವ ಕಾರಣವಾಗಿದೆ.

ಈ ನಾಲ್ವರ ಪೈಕಿ, ಒಬ್ಬ ವ್ಯಕ್ತಿ ದಾಳಿ ನಡೆದ ಸ್ಥಳದಲ್ಲಿ ಮಾರ್ಚ್ ತಿಂಗಳ ಆರಂಭದಲ್ಲಿ ವಿಚಕ್ಷಣೆ ನಡೆಸುತ್ತಿದ್ದ ಕುರಿತ ವರದಿಗಳು ಹೊರಬಂದಿವೆ. ಇದೇ ಸಮಯದಲ್ಲಿ ಅಮೆರಿಕಾದ ಗುಪ್ತಚರ ಇಲಾಖೆ ರಷ್ಯಾಗೆ ಯಾವುದಾದರೂ ಸಾರ್ವಜನಿಕ ಸ್ಥಳದಲ್ಲಿ ಸಂಭಾವ್ಯ ಭಯೋತ್ಪಾದನಾ ದಾಳಿಯ ಕುರಿತು ಎಚ್ಚರಿಕೆ ನೀಡಿತ್ತಾದರೂ, ಕ್ರೆಮ್ಲಿನ್ ಅಮೆರಿಕಾದ ಎಚ್ಚರಿಕೆಯನ್ನು ಪ್ರೊಪಗಾಂಡ ಎಂದು ಕರೆದಿತ್ತು.

ಇನ್ನೊಂದು ವರದಿಯ ಪ್ರಕಾರ, ಈ ದಾಳಿಕೋರರಲ್ಲಿ ಕನಿಷ್ಠ ಇಬ್ಬರು ರಷ್ಯಾಗೆ ಇತ್ತೀಚೆಗೆ ಆಗಮಿಸಿದ್ದು, ಅವರು ಸ್ಥಳೀಯರನ್ನು ಒಳಗೊಂಡಿದ್ದ ಸ್ಲೀಪರ್ ಸೆಲ್ ಬದಲು, ಐಎಸ್-ಕೆ ಕಳುಹಿಸಿದ್ದ ಒಂದು ದಾಳಿ ತಂಡ ಎಂಬ ಮಾಹಿತಿ ನೀಡಿತ್ತು.

ರಷ್ಯಾವನ್ನು ಗುರಿಯಾಗಿಸಿ ದಾಳಿ ನಡೆಸಲು ಕಾರಣಗಳು:

ರಷ್ಯಾವನ್ನು ಗುರಿಯಾಗಿಸಿ ಐಎಸ್-ಕೆ ದಾಳಿ ನಡೆಸಲು ಹಲವು ಕಾರಣಗಳಿವೆ.

ಐಎಸ್-ಕೆ ಬಹುಪಾಲು ಜಗತ್ತನ್ನು ತನ್ನ ಶತ್ರು ಎಂಬುದಾಗಿ ಪರಿಗಣಿಸುತ್ತದೆ. ಆದ್ದರಿಂದ, ಅಮೆರಿಕಾ, ಯುರೋಪ್, ಇಸ್ರೇಲ್, ಯಹೂದಿಗಳು, ಕ್ರೈಸ್ತರು, ಶಿಯಾ ಮುಸಲ್ಮಾನರು, ಮತ್ತು ತಾಲಿಬಾನ್ ಸಂಘಟನೆ, ಮತ್ತು ತಾನು ದ್ರೋಹಿಗಳು ಎಂದು ಪರಿಗಣಿಸುವ ಮುಸ್ಲಿಂ ರಾಷ್ಟ್ರಗಳ ನಾಯಕರ ಜೊತೆಗೆ, ರಷ್ಯಾ ಸಹ  ತನ್ನ ಶತ್ರು ಎಂದೇ ಐಎಸ್-ಕೆ ಭಾವಿಸಿದೆ.

ರಷ್ಯಾದ ಕುರಿತು ಇಸ್ಲಾಮಿಕ್ ಸ್ಟೇಟ್ ಹೊಂದಿರುವ ದ್ವೇಷಕ್ಕೆ 1990ರ ದಶಕದ ಚೆಚೆನ್ ಯುದ್ಧಗಳು ಮೂಲವಾಗಿವೆ. ರಷ್ಯನ್ ಮಿಲಿಟರಿ ದಾಳಿಗಳು ಚೆಚೆನ್ ರಾಜಧಾನಿ ಗ್ರೋಜ಼್ನಿಯನ್ನು ತೀವ್ರವಾಗಿ ಘಾಸಿಗೊಳಿಸಿದ್ದವು.

ಚೆಚೆನ್ಯಾದ ಬಹುತೇಕ ಜನರು ಇಸ್ಲಾಂ ಧರ್ಮೀಯರಾಗಿದ್ದು, ಅದು ರಷ್ಯಾದೊಳಗಿನ ಮುಸ್ಲಿಂ ಬಾಹುಳ್ಯ ಪ್ರದೇಶವಾಗಿದೆ.

ಇತ್ತೀಚಿನ ಸಮಯದಲ್ಲಿ, ರಷ್ಯಾ ಸಿರಿಯನ್ ಅಂತರ್ಯುದ್ಧದಲ್ಲಿ ಭಾಗಿಯಾಗಿ, ತನ್ನ ಮಿತ್ರ, ಸಿರಿಯನ್ ಅಧ್ಯಕ್ಷ ಬಶರ್ ಅಲ್ ಅಸಾದ್ ಅವರನ್ನು ಬೆಂಬಲಿಸಿ, ರಷ್ಯನ್ ವಾಯುಪಡೆ ನಾಗರಿಕ ಮತ್ತು ಬಂಡುಕೋರರನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಇದರ ಪರಿಣಾಮವಾಗಿ, ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್ ಖೈದಾಗೆ ಸಂಬಂಧಿಸಿದ ಹಲವು ಬಂಡುಕೋರರು ಸಾವಿಗೀಡಾಗಿದ್ದರು.

ಅಫ್ಘಾನಿಸ್ತಾನದಲ್ಲಿ, ಐಎಸ್-ಕೆ ರಷ್ಯಾವನ್ನು ತಾಲಿಬಾನ್ ಬೆಂಬಲಿಗ ಎಂದು ಪರಿಗಣಿಸುತ್ತಿದ್ದು, ಈ ಕಾರಣದಿಂದಲೇ ಐಎಸ್-ಕೆ ರಷ್ಯನ್ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಿತ್ತು.

ಅದರೊಡನೆ, 1979ರಿಂದ 1989ರ ನಡುವೆ ಒಂದು ದಶಕದ ಕಾಲ ಅಫ್ಘಾನಿಸ್ತಾನವನ್ನು ಸೋವಿಯತ್ ಒಕ್ಕೂಟ ಆಕ್ರಮಿಸಿದ್ದರಿಂದ, ಐಎಸ್-ಕೆ ರಷ್ಯಾ ವಿರುದ್ಧ ದ್ವೇಷ ಹೊಂದಿದೆ.

ಅದರೊಡನೆ, ರಷ್ಯಾದ ಒಳಗಿನ ಆಂತರಿಕ ಪರಿಸ್ಥಿತಿಗಳೂ ದಾಳಿಯೆಡೆಗೆ ಹಾದಿ ಮಾಡಿಕೊಟ್ಟಿವೆ.

ಐಎಸ್-ಕೆ ರಷ್ಯಾವನ್ನು ಕ್ರೈಸ್ತ ಬಾಹುಳ್ಯ ದೇಶವೆಂದು ಪರಿಗಣಿಸಿದ್ದು, ಮಾಸ್ಕೋ ದಾಳಿಯ ನಂತರ ಬಿಡುಗಡೆಗೊಳಿಸಿದ ವೀಡಿಯೋದಲ್ಲಿ ತಾನು ಕ್ರೈಸ್ತರನ್ನು ಗುರಿಯಾಗಿಸಿ ದಾಳಿ ನಡೆಸುವ ಕುರಿತು ಮಾತನಾಡಿದೆ.

ತಜಿಕ್ ಮತ್ತು ಇತರ ಮಧ್ಯ ಏಷ್ಯನ್ ವಲಸೆಗಾರ ಕಾರ್ಮಿಕರು ರಷ್ಯಾದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ತಡೆಯಲು ಪ್ರಯತ್ನಿಸುವ ಎಫ್ಎಸ್‌ಬಿಯಿಂದ ಶೋಷಣೆ ಮತ್ತು ವಿಚಾರಣೆಗಳನ್ನು ಎದುರಿಸುತ್ತಾರೆ.

ಅಂತಿಮವಾಗಿ, ರಷ್ಯಾ ಪ್ರಸ್ತುತ ತನ್ನ ನೆರೆಯ ರಾಷ್ಟ್ರವಾದ ಉಕ್ರೇನ್ ಜೊತೆ ಯುದ್ಧದಲ್ಲಿ ನಿರತವಾಗಿದ್ದು, ಆ ದೇಶವೂ ಐಎಸ್-ಕೆಗೆ ಭಯೋತ್ಪಾದನಾ ದಾಳಿ ನಡೆಸಲು ಒಂದು ಅವಕಾಶ ಕಲ್ಪಿಸಿರಬಹುದು.

ಇನ್ನೂ ಉಳಿದಿರುವ ಪ್ರಶ್ನೆಗಳು:

ಈ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ಇನ್ನೂ ಒಂದಷ್ಟು ಪ್ರಶ್ನೆಗಳಿಗೆ ಉತ್ತರ ಲಭಿಸಿಲ್ಲ.

ಉದಾಹರಣೆಗೆ, ದಾಳಿಕೋರರು ಹೇಗೆ ‌ಅಷ್ಟು ಮುಕ್ತವಾಗಿ, ದಾಳಿಯ ಕುರಿತು ಯಾವುದೇ ಸುಳಿವು ಲಭಿಸದಂತೆ ಒಂದು ಗಂಟೆ ಕಾಲ ಕ್ರಾಕಸ್ ಹಾಲ್ ಸುತ್ತಲೂ ತಿರುಗಾಡಲು ಸಾಧ್ಯವಾಯಿತು?

ಅತ್ಯಂತ ವ್ಯಾಪಕ ಪೊಲೀಸ್ ಮತ್ತು ಎಫ್ಎಸ್‌ಬಿ ಸೇರಿದಂತೆ ವಿಶೇಷ ಪಡೆಗಳನ್ನು ಹೊಂದಿರುವ ರಷ್ಯಾದಲ್ಲಿ ಈ ದಾಳಿಕೋರರು ತಮ್ಮನ್ನು ಯಾವುದೇ ಪೊಲೀಸ್ ಸ್ವಾಟ್ ತಂಡ ಪ್ರಶ್ನಿಸಲು ಸಾಧ್ಯವಿಲ್ಲ ಎಂಬಷ್ಟು ಆತ್ಮವಿಶ್ವಾಸದಿಂದ ವರ್ತಿಸಿದ್ದಾರೆ.

ಅದರೊಡನೆ, ದಾಳಿಕೋರರು ಕೇವಲ ಹ್ಯಾಂಡ್‌ಗನ್‌ಗಳನ್ನು ಮಾತ್ರವೇ ಹೊಂದಿರದೆ, ಅತ್ಯಾಧುನಿಕ ಸ್ವಯಂಚಾಲಿತ ಅಸಾಲ್ಟ್ ಬಂದೂಕುಗಳನ್ನು ಹೊಂದಿದ್ದರು. ಅವರು ಅದು ಹೇಗೆ ಯಾರ ಕಣ್ಣಿಗೂ ಬೀಳದಂತೆ ಈ ಬಂದೂಕುಗಳನ್ನು ದಾಳಿಯ ಸ್ಥಳಕ್ಕೆ ಕೊಂಡೊಯ್ದರು ಎನ್ನುವುದು ಗಂಭೀರ ಸವಾಲಾಗಿದೆ.

ಇಂತಹ ಕ್ಷಿಪ್ರವಾದ ಬಂಧನವೂ ಅನಿರೀಕ್ಷಿತವಾಗಿದ್ದವು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ಅಭಿಪ್ರಾಯ ಪಟ್ಟಿವೆ.

 ಇಂತಹ ಸನ್ನಿವೇಶಗಳಲ್ಲಿ ಸಾಮಾನ್ಯವಾಗಿ ಜಿಹಾದಿ ದಾಳಿಕೋರರು ನಡೆಸುವ ದಾಳಿಗಳಿಗೆ ವ್ಯತಿರಿಕ್ತವಾಗಿ, ಮಾಸ್ಕೋ ದಾಳಿಕೋರರು ತಮ್ಮೊಡನೆ ಆತ್ಮಹತ್ಯಾ ದಾಳಿಯ ಬೆಲ್ಟ್‌ಗಳಾಗಲಿ, ಕವಚಗಳನ್ನಾಗಲಿ ಧರಿಸಿರಲಿಲ್ಲ.

ಕಳೆದ ಇಪ್ಪತ್ತು ವರ್ಷಗಳಲ್ಲೇ ಅತ್ಯಂತ ತೀವ್ರವಾದ, ತಮ್ಮ ಮೂಗಿನ ಕೆಳಗೇ ನಡೆದ ಭಯೋತ್ಪಾದನಾ ದಾಳಿಯನ್ನು ತಡೆಯಲು ವಿಫಲವಾದ ರಷ್ಯನ್ ಅಧಿಕಾರಿಗಳು ಶಂಕಿತರನ್ನು ಬಂಧಿಸಿ, ವಿಚಾರಣೆಗೆ ಹಾಜರುಪಡಿಸಿದರು.

ಈ ಕ್ಷಿಪ್ರ ಬೆಳವಣಿಗೆಗಳು ಇಂತಹ ದಾಳಿ ಕ್ರೆಮ್ಲಿನ್ ಆಯೋಜಿಸಿದ ಆಂತರಿಕ ಕೃತ್ಯ ಅಥವಾ 'ಫಾಲ್ಸ್ ಫ್ಲಾಗ್ ಆಪರೇಶನ್' ಎಂದು ಹಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇದರ ಹಿಂದೆ, ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ನಾಗರಿಕರ ಬೆಂಬಲ ಪಡೆಯುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಬಿಬಿಸಿ ಪ್ರಕಾರ, ಈ ಸಿದ್ಧಾಂತವನ್ನು ಬೆಂಬಲಿಸಲು ಪೂರಕವಾದ ಸಾಕ್ಷಿಗಳು ಯಾವುದೂ ಲಭ್ಯವಿಲ್ಲ. ಅದರೊಡನೆ, ಅಮೆರಿಕಾದ ಗುಪ್ತಚರ ವಿಭಾಗ ಈಗಾಗಲೇ ಇಂತಹ ಘೋರ ದಾಳಿಯ ಹಿಂದೆ ಇಸ್ಲಾಮಿಕ್ ಸ್ಟೇಟ್ ಕೈವಾಡವಿದೆ ಎಂದು ಸ್ಪಷ್ಟಪಡಿಸಿದೆ.

ಪುಟಿನ್ ಆಯಾಮ: ಸೋಮವಾರ, ರಷ್ಯನ್ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಾಸ್ಕೋದಲ್ಲಿ ಸಂಗೀತ ಕಚೇರಿಯೊಂದರಲ್ಲಿ 139 ಜನರನ್ನು ಹತ್ಯೆಗೈದ ಈ ದಾಳಿಯನ್ನು ಇಸ್ಲಾಮಿಕ್ ಮೂಲಭೂತವಾದಿ ದಾಳಿ ಎಂದು ಕರೆದಿದ್ದರು. ಆದರೆ, ಎಲ್ಲರೂ ಅಲ್ಲಗಳೆದಿದ್ದರೂ, ಉಕ್ರೇನ್ ಈ ದಾಳಿಯ ಹಿಂದೆ ಕೈವಾಡ ಹೊಂದಿದೆ ಎಂದು ಮರಳಿ ಪುಟಿನ್ ವಾದಿಸಿದ್ದಾರೆ.

ಸರ್ಕಾರಿ ಅಧಿಕಾರಿಗಳ ಜೊತೆಗಿನ ಮಾತುಕತೆಯ ಸಂದರ್ಭದಲ್ಲಿ ಪುಟಿನ್ ಅವರು ಶತಕಗಳ ಕಾಲ ಇಸ್ಲಾಮಿಕ್ ಜಗತ್ತು ಹೋರಾಡುತ್ತಾ ಬಂದ ಮೂಲಭೂತವಾದಿಗಳು ಈ ಹತ್ಯೆಗಳನ್ನು ನಡೆಸಿದ್ದಾರೆ ಎಂದಿದ್ದರು.

 

ಸಂಬಂಧ ವೃದ್ಧಿಯ ಹಾದಿ: ಭಾರತದಿಂದ ಮಾರಿಷಸ್‌ನಲ್ಲಿ ಅಭಿವೃದ್ಧಿ!

ವಾರಾಂತ್ಯದಲ್ಲಿ ಮಾತನಾಡಿದ್ದ ರಷ್ಯಾ ಅಧ್ಯಕ್ಷ ಪುಟಿನ್ ಅವರು, ದಾಳಿಕೋರರು ಉಕ್ರೇನ್‌ಗೆ ಪರಾರಿಯಾಗುವ ಸಂದರ್ಭದಲ್ಲಿ ಅವರನ್ನು ಸೆರೆಹಿಡಿಯಲಾಯಿತಾದರೂ, ಈ ದಾಳಿಯನ್ನು ಯಾರು ರೂಪಿಸಿದ್ದರು ಎನ್ನುವುದು ತಿಳಿದುಬಂದಿಲ್ಲ ಎಂದಿದ್ದಾರೆ. ಪುಟಿನ್ ಅವರು ಈ ದಾಳಿ ನಡೆಸಿದ ಬಳಿಕ, ದಾಳಿಕೋರರು ಯಾಕೆ ಉಕ್ರೇನ್‌ಗೆ ತೆರಳಲು ಪ್ರಯತ್ನಿಸಿದರು ಎಂಬ ಕಾರಣಗಳು ತಿಳಿದಿಲ್ಲ ಎಂದಿದ್ದಾರೆ.

ಉಕ್ರೇನ್ ಪ್ರಸ್ತುತ ಯುದ್ಧದಲ್ಲಿ ಸೋಲು ಅನುಭವಿಸುತ್ತಿದ್ದು, ತನ್ನ ಸೋಲಿನಿಂದ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ ಗಡಿಯ ಬಳಿ ಇರುವ ರಷ್ಯಾದ ವಿವಿಧ ಪ್ರದೇಶಗಳ ಮೇಲೆ ದಾಳಿ ಮಾಡುತ್ತಿದೆ ಎಂದಿದ್ದಾರೆ. ಮಾಸ್ಕೋ ಭಯೋತ್ಪಾದನಾ ದಾಳಿ ಸೇರಿದಂತೆ, ಇಂತಹ ರಕ್ತಪಾತದ ಘಟನೆಗಳು ಈ ಸರಣಿಯ ಮುಂದುವರಿಕೆಯಂತೆ ತೋರುತ್ತಿದೆ ಎಂದಿದ್ದಾರೆ.

click me!