ನನ್ನ ಜೀವನಕ್ಕೆ ತದ್ವಿರುದ್ಧ ಕತೆ ಶುಗರ್ ಫ್ಯಾಕ್ಟರಿ: ಡಾರ್ಲಿಂಗ್‌ ಕೃಷ್ಣ

By Kannadaprabha NewsFirst Published Nov 24, 2023, 11:12 AM IST
Highlights

ದೀಪಕ್ ಅರಸ್ ನಿರ್ದೇಶನ ಸಿನಿಮಾ  ಶುಗರ್ ಫ್ಯಾಕ್ಟರಿಯಲ್ಲಿ ನಟಿಸಿರುವ ಡಾಲಿಂಗ್ ಕೃಷ್ಣ. ಸಿನಿಮಾ ಜರ್ನಿ ಬಗ್ಗೆ ಕೃಷ್ಣ ಮಾತು.. 

ಆರ್‌. ಕೇಶವಮೂರ್ತಿ

ಶುಗರ್‌ ಫ್ಯಾಕ್ಟರಿ ಚಿತ್ರದ ಕತೆ ಏನು?

ಈ ಜನರೇಷನ್‌ ಹುಡುಗ- ಹುಡುಗಿಯರ ಪ್ರೀತಿ, ಪ್ರೇಮ ಹಾಗೂ ಅವರ ಆಲೋಚನೆಗಳನ್ನು ಆಧರಿಸಿರುವ ಚಿತ್ರವಿದು.

ಈಗಿನ ಜನರೇಷನ್‌ ಯಾವ ರೀತಿ ಅಂದುಕೊಂಡಿದ್ದೀರಿ?

ವೀಕೆಂಡ್‌, ಪಾರ್ಟಿ, ಪಬ್ಬು, ನೈಟ್‌ ಔಟ್‌... ಅಂತ ಜೀವನ ಸಾಗಿಸುವವರು. ಪ್ರೀತಿ- ಪ್ರೇಮ ಅಂತ ಬಂದಾಗ ಅದರ ನಂತರದ ಜೀವನಕ್ಕೆ ಕಮಿಟ್‌ಮೆಂಟ್‌ ಕೊಡಲ್ಲ. ಇದನ್ನು ಸಾಧ್ಯವಾದಷ್ಟು ಮನರಂಜನಾತ್ಮಕವಾಗಿ ಹೇಳಿದ್ದೇವೆ.

ಯಾವ ಸಿನಿಮಾದ ಉದ್ದೇಶ ಏನು?

ಎಲ್ಲಾ ರೀತಿಯ ಕತೆಗಳೂ ತೆರೆ ಮೇಲೆ ಬರಬೇಕು. ಹಾಗಂತ ಇವರು ತಪ್ಪು, ಅವರು ಸರಿ ಎನ್ನುವ ವಾದಗಳು ಇಲ್ಲಿಲ್ಲ. ಈ ತಲೆಮಾರಿನ ಯುವ ಸಮೂಹವನ್ನು ಪ್ರತಿನಿಧಿಸುವ ಒಬ್ಬ ಹುಡುಗನ ಲೈಫ್‌ ಮೂಲಕ ಉಳಿದವರ ಜೀವನ ತೋರಿಸಿದ್ದೇವೆ.

ನಿಮ್ಮ ಪಾತ್ರ ಯಾವ ರೀತಿ ಇರುತ್ತದೆ?

ನಾನು ಈವೆಂಟ್‌ ಆರ್ಗನೈಸರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ವೀಕೆಂಡ್‌ ಬಂದರೆ ಪಬ್ಬು- ಕ್ಲಬ್ಬು, ಪಾರ್ಟಿ ಅಂತ ಓಡಾಡಿಕೊಂಡಿರುವ, ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳದ ಹುಡುಗನ ಪಾತ್ರ ನನ್ನದು.

ಈ ವಾರ ತೆರೆ ಮೇಲೆ 'ಶುಗರ್ ಫ್ಯಾಕ್ಟರಿ' ರಿಲೀಸ್: ಪಬ್‌ನಿಂದ ಆರಂಭ.. ಪಬ್‌ನಲ್ಲೇ ಕ್ಲೈಮ್ಯಾಕ್ಸ್.!

ಈ ಕಾಲಕ್ಕೆ ಸರಿಹೊಂದುತ್ತದೆಯೇ?

ಲವ್‌ ಮಾಕ್ಟೇಲ್‌ ಸಿನಿಮಾ ನಂತರ ಒಪ್ಪಿದ ಕತೆ. ಮೇಕಿಂಗ್‌ ತುಂಬಾ ಶ್ರೀಮಂತವಾಗಿದೆ. ಕತೆ ಕೂಡ ಹಳೆಯದು ಅನಿಸಲ್ಲ. ನಿರ್ದೇಶಕ ದೀಪಕ್‌ ಅರಸ್‌ ತುಂಬಾ ಚೆನ್ನಾಗಿ ಕತೆ ಮಾಡಿದ್ದಾರೆ.

ಈ ಕತೆ ನಿಮ್ಮ ಜೀವನಕ್ಕೂ ಅನ್ವಯಿಸುತ್ತದೆಯೇ?

ಖಂಡಿತಾ ಇಲ್ಲ. ನನ್ನ ವೈಯಕ್ತಿಕ ಜೀವನಕ್ಕೆ ತುಂಬಾ ತದ್ವಿರುದ್ಧವಾದ ಪಾತ್ರ ಮತ್ತು ಕತೆ ಇಲ್ಲಿದೆ. ‘ಲವ್‌ ಮಾಕ್ಟೇಲ್‌’ ಹಾಗೂ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಗಳ ಕತೆಗೂ ತದ್ವಿರುದ್ಧವಾಗಿದೆ.

ನಿಮ್ಮ ಸಿನಿಮಾಗಳ ಮೇಕಿಂಗ್‌ ಯಾವ ಏರಿಳಿತವೂ ಇಲ್ಲದೆ ಕಲರ್‌ಫುಲ್ಲಾಗಿರುತ್ತವಲ್ಲ?

ಕತ್ಲೆ ಕತ್ಲೆ ಸಿನಿಮಾಗಳ ನಡುವೆ ರಂಜನೆಯ ಬೆಳಕಿನ ಸಿನಿಮಾಗಳನ್ನು ಕೊಡುತ್ತಿದ್ದೇನೆ.

ಕೃಷ್ಣನ 'ಶುಗರ್ ಫ್ಯಾಕ್ಟರಿ'ಯಲ್ಲಿ ಒಂದು ರೌಂಡ್: ಸಿನಿಮಾದ ಮತ್ತೊಂದು ಸಾಂಗ್ ರಿಲೀಸ್..!

ದೊಡ್ಡದಾದ ಐತಿಹಾಸಿಕ ಸಿನಿಮಾ ಒಪ್ಪಿಕೊಂಡಿದ್ದೀರಲ್ಲ?

ಹೌದು. ಹಲಗಲಿ ಬೇಡರ ಕುರಿತ ಸಿನಿಮಾ. ಮೊದಲ ಬಾರಿಗೆ ನನ್ನ ಜೀವನದಲ್ಲಿ ಐತಿಹಾಸಿಕ ಚಿತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಬ್ರಿಟಿಷರ ವಿರುದ್ಧ ಹೋರಾಡಿದ ನಮ್ಮ ನೆಲದ ಕಲಿಗಳ ಕತೆಯನ್ನು ಈ ಚಿತ್ರದ ಮೂಲಕ ಹೇಳುತ್ತಿದ್ದೇವೆ.

ಈ ಚಿತ್ರಕ್ಕೆ ತುಂಬಾ ತಯಾರಿ ಬೇಕಲ್ಲವೇ?

ಕಳೆದ ಮೂರು ತಿಂಗಳುಗಳಿಂದ ಇದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಈ ಕಾರಣಕ್ಕೆ ಹೊಸದಾಗಿ ಚಿತ್ರಗಳನ್ನೂ ಒಪ್ಪಿಕೊಳ್ಳುತ್ತಿಲ್ಲ.

ಬೇರೆ ಸಿನಿಮಾ ಕೈಯಲ್ಲಿ ಇಲ್ಲವೇ?

ಆರ್‌ ಚಂದ್ರು ನಿರ್ಮಾಣದ ಸಿನಿಮಾ ಒಂದು ಮಾತ್ರ ಇದೆ. ಇದರ ಜತೆಗೆ ನಾನೇ ‘ಲವ್‌ ಮಾಕ್ಟೇಲ್‌ 3’ಗೆ ಕತೆ ಬರೆಯುತ್ತಿದ್ದೇನೆ.

ನಿಮಗೆ ಕತೆ ಹುಟ್ಟೋದು ಹೇಗೆ, ಯಾವ ರೀತಿ ಮಾಡುವಾಸೆ?

ನೋಡಿದ್ದು, ಕೇಳಿದ್ದು ಮತ್ತು ಅನುಭವಿಸಿದ್ದರ ಮೇಲೆ ನನಗೆ ಕತೆಗಳು ಹುಟ್ಟುತ್ತವೆ. ನಾನು ಯಾವಾಗಲೂ ಮೊದಲು ಕ್ಲೈಮ್ಯಾಕ್ಸ್‌ ಬರೆದುಕೊಳ್ಳುತ್ತೇನೆ. ಆದರೆ, ಆ ಕ್ಲೈಮ್ಯಾಕ್ಸ್‌ಗೆ ತಲುಪುವ ದಾರಿ ಹುಡುಕುತ್ತೇನೆ. ಇದು ನಾನು ಕತೆ ಬರೆದುಕೊಳ್ಳುವ ಶೈಲಿ. ಯಾವ ರೀತಿ ಸಿನಿಮಾ ಎಂದರೆ, ಇದು ನಮ್ಮ ಸಿನಿಮಾ. ನೋಡಿ ಎಂದು ಪ್ರೇಕ್ಷಕರ ಮುಂದೆ ಹೆಮ್ಮೆಯಿಂದ ಹೇಳಿಕೊಳ್ಳುವಂತಿರಬೇಕು.

click me!