'ಮೂರುಗಂಟು' ಜ್ಯೋತಿ ರೈ- ಪರದೆ ಮೇಲೆ ಸ್ವಾರ್ಥಿ, ನಿಜದಲ್ಲಿ ತ್ಯಾಗಮೂರ್ತಿ!

By Suvarna News  |  First Published Sep 28, 2020, 4:19 PM IST

ಕಿರುತೆರೆಯಲ್ಲಿ ನಾಯಕಿಯಾಗಿ ದಶಕದಷ್ಟು ಮೆರೆದವರು ಜ್ಯೋತಿ ರೈ.  ಇದೀಗ ಎರಡನೇ ಇನ್ನಿಂಗ್ಸ್‌ನಲ್ಲಿ ಇವರ ನೆಗೆಟಿವ್‌ ಪಾತ್ರ ನೋಡಿ ಶಾಪ ಹಾಕುವವರಿಗೂ ಕೊರತೆ ಇಲ್ಲ. ಆದರೆ ನಿಜ ಜೀವನದಲ್ಲಿ ಯಾವ ಶಾಪವೂ ತಾಗದ ಮಾತೃಮೂರ್ತಿಯಾಗಿದ್ದಾರೆ ಜ್ಯೋತಿ. ಆ ವಿಶೇಷದ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.
 


ಹನ್ನೆರಡು ವರ್ಷಗಳಿಂದ ಕಿರುತೆರೆಯಲ್ಲಿದ್ದಾರೆ ಜ್ಯೋತಿ ರೈ. ಕಳೆದ ವರ್ಷದ ತನಕ ನಾಯಕಿಯಾಗಿಯೇ ಇದ್ದು ದಾಖಲೆ ಮಾಡಿದ್ದಾರೆ. ಇದುವರೆಗೆ ಅಭಿನಯಿಸಿರುವುದು ಸರಿಸುಮಾರು ಇಪ್ಪತ್ತು ಧಾರಾವಾಹಿಗಳಲ್ಲಿ. `ಬಂದೇ ಬರುತಾವೇ ಕಾಲ' ಮೂಲಕ ಎಂಟ್ರಿ ಕೊಟ್ಟ ಇವರ ಸೀರಿಯಲ್‌ಗಳಲ್ಲಿ `ಜೋಗುಳ' ಮತ್ತು `ಕಿನ್ನರಿ'ಗೆ ಇಂದಿಗೂ ಅಭಿಮಾನಿಗಳು ಅಪಾರ. ಇದೀಗ ಅವರ ಶೇಡ್ ಬದಲಾಗಿದೆ. ಒಂದಷ್ಟು ನೆಗೆಟಿವ್ ಛಾಯೆಯನ್ನೂ ತೋರಿಸಲು ಶುರು ಮಾಡಿದ್ದಾರೆ. ಮಾತ್ರವಲ್ಲ ಸಿನಿಮಾಗಳಲ್ಲಿಯೂ ಪೋಷಕ ಪಾತ್ರಗಳನ್ನು ನಿಭಾಯಿಸಿದ್ದಾರೆ. ಬಣ್ಣದ ಲೋಕದ ಜತೆಗೆ ತಮ್ಮ ನಿಜ ಬದುಕು ಹೇಗಿದೆ ಎನ್ನುವುದನ್ನು ಅವರು ಸುವರ್ಣ ನ್ಯೂಸ್.ಕಾಮ್ ಜತೆಗೆ ಮನಸು ಬಿಚ್ಚಿ ಹಂಚಿಕೊಂಡಿದ್ದಾರೆ.

ಶಶಿಕರ ಪಾತೂರು

Latest Videos

ನಾಯಕಿಯಿಂದ ನೆಗೆಟಿವ್ ಕಡೆಗಿನ ಪಯಣ ಹೇಗಿದೆ?

ಕಲಾವಿದೆಯಾಗಿ ನಾಯಕಿಗೂ ನೆಗೆಟಿವ್ ಲೀಡ್‌ಗೂ ಅಂಥ ವ್ಯತ್ಯಾಸ ಇರುವುದಿಲ್ಲ. ಯಾಕೆಂದರೆ ಎರಡೂ ಪ್ರಮುಖ ಪಾತ್ರಗಳೇ ಆಗಿರುತ್ತವೆ. ಕೆಲವೊಮ್ಮೆಯಂತೂ ಖಳನಾಯಕಿಗೇ ಹೆಚ್ಚು ಭಾವಾಭಿವ್ಯಕ್ತಿಯ ಅವಕಾಶಗಳು ಸಿಗುತ್ತವೆ. ಪ್ರಸ್ತುತ ನಾನು ನಟಿಸುತ್ತಿರುವ `ಮೂರು ಗಂಟು' ಧಾರಾವಾಹಿಯಲ್ಲಿ ನನ್ನದು ನೆಗೆಟಿವ್ ಶೇಡ್ ಎನ್ನುವುದಕ್ಕಿಂತಲೂ ನಾಯಕನನ್ನು ಯಾರಿಗೂ ಆತ್ಮೀಯವಾಗಲು ಬಿಡದಂಥ ಪಾತ್ರ! ನಾಯಕನ ಸ್ವಾರ್ಥ ತುಂಬಿದ ಸಹೋದರಿಯಾಗಿ ಒಂದು ವಿಭಿನ್ನ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ ಎನ್ನಬಹುದು. ಇವೆಲ್ಲವೂ ವಿಭಿನ್ನ ಮನುಷ್ಯರೊಳಗೆ ಇರುವ ವಿಶೇಷ ಗುಣಗಳನ್ನು ಅಭಿವ್ಯಕ್ತಿಗೊಳಿಸುವ ಅವಕಾಶ ಎನ್ನಬಹುದು. ಇನ್ನು `ಕಸ್ತೂರಿ ನಿವಾಸ' ಎನ್ನುವ ಮತ್ತೊಂದು ಧಾರಾವಾಹಿಯಲ್ಲಿ  ಸದ್ಯಕ್ಕೆ ನಾಯಕಿಯ ತಾಯಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಆದರೆ ಮುಂದಿನ ದಿನಗಳಲ್ಲಿ ನನ್ನ ಪಾತ್ರದಿಂದ ಇನ್ನಷ್ಟು ಬದಲಾವಣೆಗಳನ್ನು ನಿರೀಕ್ಷಿಸಬಹುದೆನ್ನುವ ಸೂಚನೆ ನನಗೆ ನಿರ್ದೇಶಕರ ಕಡೆಯಿಂದ ಸಿಕ್ಕಿದೆ. ಪ್ರೇಕ್ಷಕರಿಗೂ ನಾನು ಅದೇ ಭರವಸೆ ನೀಡುತ್ತೇನೆ.

ಶತ ಚಿತ್ರಗಳ ಸಾಹಸ ಸಂಯೋಜಕ ವಿಕ್ರಮ್ ವಿಶೇಷ

ಇತ್ತೀಚೆಗೆ ಒಂದಷ್ಟು ಪರಭಾಷಾ ಸಿನಿಮಾಗಳಲ್ಲಿಯೂ ನಟಿಸಿದ್ದೀರಂತೆ?

ಹೌದು, ನಾನು ಇದುವರೆಗೆ ಸುಮಾರು ಹದಿನೆಂಟು ಸಿನಿಮಾಗಳಲ್ಲಿ ಪೋಷಕ ಪಾತ್ರ ಮಾಡಿದ್ದೀನಿ. ಇತ್ತೀಚೆಗೆ ಕಾಲೇಜ್ ಕುಮಾರ ಚಿತ್ರದ ತಮಿಳು, ತೆಲುಗು ಅವತರಣಿಕೆಯಲ್ಲಿಯೂ ನಟಿಸಿದೆ. ಇದೀಗ ಪರಭಾಷಾ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಲು ಕರೆಗಳು ಬರುತ್ತಿವೆ. ಆದರೆ ನಾನು ಸದ್ಯಕ್ಕೆ ಆ ಕಡೆಗೆ ಹೆಚ್ಚು ಗಮನ ನೀಡುತ್ತಿಲ್ಲ. ಕನ್ನಡದಲ್ಲೇ `ವರ್ಣ ಪಟಲ' ಎನ್ನುವ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದೀನಿ. ಅದು ಆಟಿಸಮ್ ಇರುವ ಮಗುವಿನ ತಾಯಿಯ ಪಾತ್ರ. ಅಂಥ ಮಕ್ಕಳನ್ನು ಹೇಗೆ ಬೆಳೆಸಬೇಕು ಎನ್ನುವ ಸಂದೇಶವನ್ನು ಸಮಾಜಕ್ಕೆ ನೀಡುತ್ತದೆ. ನಿರ್ದೇಶಕ ಚೇತನ್ ಮುಂಡಾಡಿ ಅವರ ಈ ಸೃಷ್ಟಿ ನನ್ನ ನಿಜ ಜೀವನಕ್ಕೆ ಹತ್ತಿರವಾದ ಪಾತ್ರ ಎಂದು ಅನಿಸಿತು. ಹಾಗಾಗಿ ಚಿತ್ರದ ಸಂದೇಶ ಸಮಾಜಕ್ಕೆ ತಲುಪಿಸುವ ಜವಾಬ್ದಾರಿ ನನ್ನದೂ ಆಗಿದೆ ಎಂದುಕೊಂಡು ಪಾತ್ರವನ್ನು ಒಪ್ಪಿ ನಿಭಾಯಿಸಿದ್ದೇನೆ.

ಅಂತರ್ಧರ್ಮೀಯ ವಿವಾಹದ ಬಗ್ಗೆ ಪ್ರಿಯಾಮಣಿ ಮಾತು

ನಿಜ ಜೀವನದಲ್ಲಿ ನಿಮ್ಮ ಮಗ ಹೇಗಿದ್ದಾನೆ?

ಚೆನ್ನಾಗಿದ್ದಾನೆ. ಆತನ ಹೆಸರು ಊರ್ವೇಶ್. ಸಾಮಾನ್ಯವಾಗಿ ಆಟಿಸಮ್‌ನಿಂದ ಬಳಲುವ ಇತರ ಮಕ್ಕಳಂತೆ ಹೆಚ್ಚಿನ ತೊಂದರೆಗಳೇನೂ ಆತನಿಗಿಲ್ಲ. ಸುಮಾರು ಮೂವತ್ತು ಪರ್ಸೆಂಟ್ ಮಾತ್ರ ರೋಗ ಬಾಧಿಸಿದೆ. ಇಂಥ ಮಕ್ಕಳು ಸರಿಯಾದ ಸಮಯದಲ್ಲಿ ರೆಸ್ಪಾನ್ಸ್ ಕೊಡುವುದಿಲ್ಲ, ಆತನ ಮನಸಿಗೆ ತೋಚಿದಾಗ ಮಾತ್ರ ರೆಸ್ಪಾನ್ಸ್‌ ಮಾಡುತ್ತವೆ. ಇದೊಂದು ವರ್ತನೆ ಈ ಮಕ್ಕಳನ್ನು ಹಿರಿಯರು ಕೂಡ ಬೇರೆ ಕಣ್ಣಿನಿಂದ ನೋಡುವಂತೆ ಮಾಡುತ್ತದೆ.  ನೀವೇ ಸ್ವಲ್ಪ ಹುಡುಕಾಡಿದರೆ ಆಟಿಸಮ್ ಇರುವ ಮಕ್ಕಳು ಸ್ಪೋರ್ಟ್ಸ್, ಸ್ಟಡೀಸ್, ಸಿಂಗಿಂಗ್ ಮೊದಲಾದವುಗಳಲ್ಲಿ ಉತ್ತಮ ಪ್ರತಿಭೆ ತೋರಿಸಿರುವುದನ್ನು ಕಾಣಹುದು. ಉದಾಹರಣೆಗೆ ನನ್ನ ಮಗ ಕೂಡ ಉತ್ತಮವಾಗಿ ಈಜುತ್ತಾನೆ. ಇಂಗ್ಲಿಷ್ ಅಂತೂ ಲಂಡನ್ ಮಾದರಿಯ ಉಚ್ಚಾರಣೆಯಲ್ಲಿ ಮಾತನಾಡುತ್ತಾನೆ. ಹಾಗಂತ ನಾವು ಆತನಿಗೆ ಮನೆಯಲ್ಲಿ ವಿಶೇಷವಾಗಿ ಕಲಿಸುವ ಪ್ರಯತ್ನವನ್ನೇನೂ ಮಾಡಿಲ್ಲ. ಆದರೆ ಆತನ ಆಸಕ್ತಿ ಎಷ್ಟಿದೆ ಎಂದರೆ ಟಿವಿ ನೋಡಿಯೇ ಭಾಷೆಗಳನ್ನು ಕಲಿತಿದ್ದಾನೆ. ಐದು ಭಾಷೆಗಳನ್ನು ಮಾತನಾಡಬಲ್ಲ ಜತೆಗೆ ಬರೆಯಲೂ ಬಲ್ಲ! ಇದು ಯಾವುದದನ್ನೂ ನಾವು ಯಾರೂ ಕಲಿಸಿಲ್ಲ. 

 

ನಾಗಜಡೆಯ ಬಗ್ಗೆ ನಾಗಿಣಿ ನಮ್ರತಾ 

ಮಗುವಿನಿಂದಾಗಿ ಜೀವನ ಚಾಲೆಂಜಿಂಗ್ ಅನಿಸಿದೆಯೇ? 

ಹಾಗೇನಿಲ್ಲ. ಇತರರು ನನ್ನ ಮಗುವನ್ನು ಒಪ್ಪಿದರೂ ಒಪ್ಪದಿದ್ದರೂ  ನನ್ನ ಮಗುವಿನ ಮೇಲೆ ನನಗೆ ಪ್ರೀತಿ ಕಡಿಮೆಯಾಗಲು ಸಾಧ್ಯವೇ. ಪ್ರೀತಿ ಇದ್ದಾಗ ಎಲ್ಲವೂ ಸಹಜವಾಗಿಯೇ ಸಾಗುತ್ತದೆ. ಎಂಟು ವರ್ಷಗಳಿಂದ ಮಗನನ್ನು ತುಂಬಾನೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದೇನೆ. ಜತೆಗೆ ಗಂಡನ ಬೆಂಬಲವೂ ಇದೆ. ಹಾಗಾಗಿಯೇ  ನಾನು ಮಗುವಿಗಾಗಿ ನಟನೆಯನ್ನು ತೊರೆಯದೇ ಇಂಡಸ್ಟ್ರಿಯಲ್ಲಿ ಮುಂದುವರಿಯಲು ಸಾಧ್ಯವಾಗಿದೆ. ಅದಕ್ಕೆ ಕಾರಣ `ಕಲೆಯಲ್ಲಿ ನನಗಿರುವ ಆಸಕ್ತಿ ಮಾತ್ರ' ಎಂದರೆ ತಪ್ಪಾದೀತು. ಯಾಕೆಂದರೆ ದುಡಿಮೆಯನ್ನು ಬಿಟ್ಟುಬಿಡುವಷ್ಟು ಆರ್ಥಿಕ ಸ್ಥಿತಿವಂತಳೇನೂ ನಾನಲ್ಲ.  ಊರ್ವೇಶ್‌ನನ್ನು ಸಾಧಾರಣ ಮಕ್ಕಳು ಕಲಿಯುವ ಶಾಲೆಗೇನೇ ಕಳಿಸುತ್ತೇನೆ. ಆದರೆ ನನ್ನ ಉದ್ದೇಶ ಏನು ಅಂದರೆ ಆತ ಶೈಕ್ಷಣಿಕವಾಗಿ ಸಾಧಿಸದಿದ್ದರೂ ಪರವಾಗಿಲ್ಲ. ಆದರೆ ಇತರ ಮಕ್ಕಳೊಂದಿಗೆ ಸಮಾಜದಲ್ಲಿ ಹೇಗಿರಬೇಕು ಎಂದು ಅರಿತರೆ ಸಾಕು ಎನ್ನುವುದಷ್ಟೇ ಆಗಿದೆ. ಈ ಬಾರಿ ಕೊರೊನಾ ಕಾರಣ ಲಾಕ್ಡೌನ್‌ನಿಂದಾಗಿ ಕೆಲಸ ಇರದೆ ನಾವೆಲ್ಲ ಕಷ್ಟ ಪಟ್ಟಿದ್ದು ನಿಜ. ಆದರೆ ಅದೇ ಸಂದರ್ಭದಲ್ಲಿ ಮನೆಯಲ್ಲಿ ಮಗು ಮತ್ತು ಕುಟುಂಬದೊಂದಿಗೆ ಹೆಚ್ಚು ದಿನ ಕಳೆಯುವ ಅವಕಾಶ ದೊರಕಿದ್ದು ಖುಷಿಯಾಗಿದೆ.

click me!