ದಿನೇಶ್ ಬಾಬು ಹೊಸ ಚಿತ್ರ ‘ಕಸ್ತೂರಿ ಮಹಲ್’ಗೆ ಶಾನ್ವಿ ಶ್ರೀವಾಸ್ತವ್ ನಾಯಕಿ. ರಚಿತಾ ರಾಮ್ ಬಿಟ್ಟಜಾಗವನ್ನು ತುಂಬಿಸಿರುವ ಶಾನ್ವಿ ಜತೆ ಮಾತುಕತೆ.
ಆರ್ ಕೇಶವಮೂರ್ತಿ
ರಚಿತಾ ರಾಮ್ ಜಾಗವನ್ನು ತುಂಬಿಸುತ್ತಿದ್ದೀರಲ್ಲ?
ನಾನು ಯಾರ ಜಾಗವನ್ನು ತುಂಬಿಸಲಿಕ್ಕೆ ಚಿತ್ರವನ್ನು ಒಪ್ಪಿಕೊಂಡಿದ್ದಲ್ಲ. ಕತೆ ನನಗೆ ಇಷ್ಟಆಯ್ತು. ಅದರಲ್ಲಿ ನನ್ನ ಪಾತ್ರ ಮೊದಲು ಆಕರ್ಷಣೆ ಮಾಡಿತು. ನನಗೇ ಇದು ಸೂಕ್ತ ಎನಿಸುವ ಸಿನಿಮಾ ಎನ್ನುವ ಕಾರಣಕ್ಕೆ ಒಪ್ಪಿಕೊಂಡೆ.
'ಕಸ್ತೂರಿ ಮಹಲ್'ನಿಂದ ರಚಿತಾ ಔಟ್ ಶಾನ್ವಿ ಇನ್; ಕಾರಣವೇನು?
ಆದರೆ, ಈ ಚಿತ್ರಕ್ಕೆ ಮೊದಲು ರಚಿತಾ ರಾಮ್ ನಾಯಕಿ ಆಗಿದ್ರಲ್ಲ?
ಅವರು ಬೇರೆ ಚಿತ್ರಗಳಲ್ಲಿ ಬ್ಯುಸಿ ಆಗಿದ್ದರಿಂದ ಡೇಟ್ಸ್ ಸಮಸ್ಯೆ ಆಗಿದ್ದು, ಈ ಕಾರಣಕ್ಕೆ ‘ಕಸ್ತೂರಿ ಮಹಲ್’ ಚಿತ್ರದಿಂದ ಹೊರಗೆ ಹೋಗಿದ್ದಾರೆ ಎಂದು ಗೊತ್ತಾಯಿತು. ಉಳಿದಿದ್ದು ನನಗೆ ಗೊತ್ತಿಲ್ಲ. ಆದರೆ, ಈ ಚಿತ್ರ ಮಾಡಲಿಕ್ಕೆ ನನಗೆ ಡೇಟ್ಸ್ ಸಮಸ್ಯೆ ಇಲ್ಲ. ಜತೆಗೆ ದಿನೇಶ್ ಬಾಬು ಅವರಂತಹ ನಿರ್ದೇಶಕರ ಚಿತ್ರಕ್ಕೆ ನಾಯಕಿ ಆಗುತ್ತಿದ್ದೇನೆ ಎನ್ನುವುದು ಹೆಮ್ಮೆ ಮತ್ತು ಖುಷಿ ವಿಚಾರ.
ಯಾಕೆ ನಿಮಗೆ ಹೆಮ್ಮೆ?
ಸೆನ್ಸಿಟಿವ್ ಡೈರೆಕ್ಟರ್. ಅವರು ನಿಜ ಜೀವನದಿಂದ ಸ್ಫೂರ್ತಿಯಾಗಿಸಿಕೊಂಡು ಕತೆಗಳನ್ನು ಮಾಡುತ್ತಾರೆ. ಜತೆಗೆ ನಮ್ಮ ಸುತ್ತಲಿನ ಸಮಾಜಕ್ಕೆ ಕನ್ನಡಿ ಹಿಡಿಯಂತಹ ಕತೆಗಳನ್ನೇ ಅವರು ತೆರೆ ಮೇಲೆ ತರುತ್ತಾರೆ. ಚಿತ್ರಕಥೆ, ಪಾತ್ರಗಳನ್ನು ಸಂಯೋಜನೆ ಮಾಡುವ ರೀತಿ ಬಗ್ಗೆ ನಾನು ಹೊಸದಾಗಿ ಹೇಳಬೇಕಿಲ್ಲ. ಇಂತ ನಿರ್ದೇಶಕರ ಚಿತ್ರದಲ್ಲಿ ಅಭಿನಯಿಸುವುದು ಖುಷಿ ಸಂಗತಿ ಅಲ್ಲವೇ. ಇದು ಅವರ ನಿರ್ದೇಶನದ 50ನೇ ಸಿನಿಮಾ ಎಂಬುದು ಮತ್ತೊಂದು ಕಾರಣ.
ನಟಿ ಶಾನ್ವಿ ಫೇಕ್‌ಬುಕ್‌ನಲ್ಲಿಲ್ಲ; ಇದು ಹ್ಯಾಕರ್ ಕೈವಾಡ?
ಇಲ್ಲಿ ಯಾವ ರೀತಿ ಪಾತ್ರ ಇದೆ?
ತುಂಬಾ ದಿನಗಳ ನಂತರ ವಿಶೇಷ ಎನಿಸುವ ಪಾತ್ರ ಮಾಡುತ್ತಿದ್ದೇನೆಂಬ ಭರವಸೆ ಕೊಡುವಷ್ಟರ ಮಟ್ಟಿಗೆ ವಿಶೇಷತೆಯಿಂದ ಕೂಡಿದೆ ಅಂತ ಮಾತ್ರ ಹೇಳಬಹುದು. 300 ವರ್ಷಗಳ ಹಳೆಯ ಕತೆ, ಅದು ಈಗ ಹೊಸದಾಗಿ ತೆರೆ ಮೇಲೆ ಬರುವುದು, ಆ ಕತೆ ನನ್ನ ಸುತ್ತ ಇರುವುದು ನನ್ನ ಪಾತ್ರದ ತೂಕವನ್ನು ಹೆಚ್ಚಿಸಿದೆ. ವೈಲೆಂಟ್ ಅಲ್ಲ, ಸೈಲೆಂಟ್ ಹುಡುಗಿ.
ಇತ್ತೀಚೆಗೆ ನೀವು ಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ?
ಒಪ್ಪಿಕೊಳ್ಳಬಾರದು ಅಂತೇನು ಇಲ್ಲ. ಒಂದೇ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡು ಬೋರ್ ಆಗಿದೆ. ಹೀಗಾಗಿ ನಾನೇ ಒಂಚೂರು ಬ್ರೇಕ್ ತೆಗೆದುಕೊಂಡೇ. ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ನಂತರ ಮತ್ತೆ ಯಾವುದೂ ಸಿನಿಮಾ ಒಪ್ಪಿಕೊಂಡಿಲ್ಲ. ಈ ನಡುವೆ ಲಾಕ್‌ಡೌನ್ ಬೇರೆ ಆಯ್ತು. ಎಲ್ಲ ಕೆಲಸಗಳು ಸಂಪೂರ್ಣವಾಗಿ ನಿಂತು ಹೋಯಿತು. ಈಗ ‘ಕಸ್ತೂರಿ ಮಹಲ್’ಗೆ ಜತೆಯಾಗಿದ್ದೇನೆ.
ಯಾವಾಗಿನಿಂದ ಚಿತ್ರೀಕರಣ, ಯಾರೆಲ್ಲ ಕಲಾವಿದರು ಇದ್ದಾರೆ?
ಅಕ್ಟೋಬರ್‌ನಿಂದ ಚಿತ್ರೀಕರಣ ಆರಂಭವಾಗಲಿದೆ. ಕೊಟ್ಟಿಗೆಹಾರದಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಸ್ಕಂದ ಅಶೋಕ್, ರಂಗಾಯಣ ರಘು, ನಾರಾಯಣ ಸ್ವಾಮಿ, ಶ್ರುತಿ ಪ್ರಕಾಶ್ ಮುಂತಾದವರು ನಟಿಸುತ್ತಿದ್ದಾರೆ.
ಈ ನಡುವೆ ಮತ್ತೊಂದು ಚಿತ್ರದ ಕತೆ ಕೇಳಿದೆ. ಇನ್ನೊಂದು ವಾರದಲ್ಲಿ ಆ ಚಿತ್ರದ ಮಾತುಕತೆ ಅಂತಿಮವಾಗಲಿದೆ. ‘ಕಸ್ತೂರಿ ಮಹಲ್’ ಚಿತ್ರದ ನಂತರ ಈ ಸಿನಿಮಾ ಸೆಟ್ಟೇರಲಿದೆ - ಶಾನ್ವಿ ಶ್ರೀವಾಸ್ತವ್