ಮದುವೆ ಬಗ್ಗೆ ಶೈನ್ ಶೆಟ್ಟಿ ಏನು ಹೇಳ್ತಾರೆ ಗೊತ್ತಾ?

By Suvarna News  |  First Published Sep 28, 2020, 6:49 PM IST

ಸಾಮಾನ್ಯವಾಗಿ ಚಿತ್ರರಂಗದಲ್ಲಿ ನಟಿಯರ ಮದುವೆ ಬಗ್ಗೆ ಗಾಸಿಪ್ ಹರಡುತ್ತಿರುತ್ತದೆ. ಆದರೆ ಅಪರೂಪ ಎನ್ನುವಂತೆ ನಟ ಶೈನ್ ಶೆಟ್ಟಿಯ ಮದುವೆ ಬಗ್ಗೆ ಇತ್ತೀಚೆಗೆ ಊಹಾಪೋಹಗಳು ಹೆಚ್ಚಿವೆ. ಬಿಗ್ ಬಾಸ್ ಬಳಿಕ ದೀಪಿಕಾ ಜತೆಗೆ ಮದುವೆ ಎನ್ನುತ್ತಿದ್ದವರು.ಈಗ ಗಾಯಕಿ ಸಂಗೀತಾ ರಾಜೀವ್ ಜತೆಗಂತೆ ಅನ್ನುತ್ತಿದ್ದಾರೆ. ನಿಜಕ್ಕೂ ಮದುವೆಯ ಬಗ್ಗೆ ಶೈನ್ ಹೇಳುವುದೇನು? ಇಲ್ಲಿದೆ ಅವರ ಉತ್ತರ. 


ಶೈನ್ ಶೆಟ್ಟಿ ಕಿರುತೆರೆ ಧಾರಾವಾಹಿ, ಜಾಹೀರಾತುಗಳ ಮೂಲಕ ನಿತ್ಯ ಎಲ್ಲರ ಮನೆಗೆ ಬರುತ್ತಲೇ ಇದ್ದರು. ಆದರೆ ಕಳೆದ ಬಾರಿ `ಬಿಗ್‌ ಬಾಸ್' ಸ್ಪರ್ಧೆಯ ಆ ನೂರು ದಿನಗಳು ಇತ್ತಲ್ಲ? ಎಲ್ಲರ ಗಮನವನ್ನು ಕೂಡ ತಮ್ಮತ್ತ ಸೆಳೆದುಬಿಟ್ಟರು. ಅದಕ್ಕೆ ಪೂರಕವಾಗಿ ಗೆಲುವು ಕೂಡ ಅವರದೇ ಆಗಿ ಬಿಟ್ಟಿತು. ಗೆಲುವಿನ ಮಹಾಲಕ್ಷ್ಮಿ ಒಲಿದ ಬಳಿಕ ಅವರ ಮನೆ ಮಹಾಲಕ್ಷ್ಮಿ ಯಾರಾಗುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಇತ್ತು. ಎರಡು ದಿನಗಳಿಂದ ಆ ಹುಡುಗಿ ಗಾಯಕಿ ಸಂಗೀತಾ ರಾಜೀವ್ ಎನ್ನುವುದೇ ದೊಡ್ಡ ಸುದ್ದಿಯಾಗಿತ್ತು. ಆದರೆ ಅದನ್ನು ಅಲ್ಲಗಳೆದಿರುವ ಶೈನ್ ಎಲ್ಲ ವಿಶೇಷ ವಿಚಾರಗಳನ್ನು ಸುವರ್ಣ ನ್ಯೂಸ್.ಕಾಮ್ ಜತೆಗೆ ಹಂಚಿಕೊಂಡಿದ್ದಾರೆ.

 -ಶಶಿಕರ ಪಾತೂರು

Tap to resize

Latest Videos

undefined

ನಿಮ್ಮ ಮದುವೆ ಬಗ್ಗೆ ಸುದ್ದಿ ಹರಡುತ್ತಿದೆಯಲ್ಲ?
`ಬಿಗ್ ಬಾಸ್‌'ನಿಂದ ಬಂದ ಬಳಿಕ ನಾನು ಮದುವೆ ವಿಚಾರದಲ್ಲಿ ಸುದ್ದಿಯಾಗಿದ್ದೇ ಹೆಚ್ಚು. ಸಾಮಾಜಿಕ ಜಾಲತಾಣಗಳಲ್ಲಂತೂ ಕೆಲವೊಂದು ಕಡೆ ಬಂದ ಸುದ್ದಿಯ ಪ್ರಕಾರ ನನಗೆ ಮದುವೆ, ಹನಿಮೂನ್ ಎಲ್ಲವೂ ಮುಗಿಸಿದ್ದಾರೆ. ಆದರೆ ನಿಜಕ್ಕೂ ನನಗೆ ಮದುವೆಯನ್ನು ಅಡಗಿಸಿಕೊಂಡು ಆಗುವಂಥ ಯಾವುದೇ ಯೋಚನೆಗಳಿಲ್ಲ. ಎರಡು ದಿನಗಳಿಂದ ಸುದ್ದಿಯಾದಂಥ ಮದುವೆಯ ವಿಚಾರಕ್ಕೆ ಕಾರಣ ಬಹುಶಃ ಈಗಾಗಲೇ ಎಲ್ಲರಿಗೂ ತಿಳಿದಿರುತ್ತದೆ. ಅದು ನಾನು ಮತ್ತು ಗಾಯಕಿ ಸಂಗೀತಾ ರಾಜೀವ್ ಪಾಲ್ಗೊಂಡಿರುವ `ನೀನೇ ನೀನೇ' ಆಲ್ಬಮ್ ಹಾಡಿಗೆ ಸಂಬಂಧಿಸಿದಂತೆ ತೆಗೆದ ವಿಡಿಯೋ ಮತ್ತು ಫೊಟೋ ಆಗಿತ್ತು.

ಶತಚಿತ್ರಗಳ ಸಾಹಸ ಸಂಯೋಜಕ ವಿಕ್ರಮ್ ವಿಶೇಷ

`ನೀನೇ ನೀನೇ' ಆಲ್ಬಮ್ ಹಾಡಿನ ವಿಶೇಷತೆಗಳೇನು?
ಸದ್ಯದಲ್ಲೇ ಅದು ಬಿಡುಗಡೆಯಾಗಲಿದೆ. ಹಾಡಿಗೆ ಸೋನು ನಿಗಮ್ ಧ್ವನಿಯಾಗಿದ್ದಾರೆ ಎನ್ನುವುದೇ ದೊಡ್ಡ ವಿಶೇಷ. ಯಾಕೆಂದರೆ ಈ ಹಿಂದೆ ಅವರು ಮನೋಮೂರ್ತಿಯವರ ಸಂಗೀತದಲ್ಲಿ ಹಾಡಿದ ಆಲ್ಬಮ್ ಸಾಂಗ್ ಕೊನೆಯದಾಗಿತ್ತು. `ಬಾ ನೋಡು ಗೆಳತೀ.. ನವಿಲುಗರಿಯು ಮರಿ ಹಾಕಿದೇ..' ಎನ್ನುವ ಆ ಹಾಡಿನ ಬಳಿಕ ಸಿಂಗಲ್ ಹಾಡೊಂದರ ಮೂಲಕ ನಾವು ಬರುತ್ತಿದ್ದೇವೆ. ಹಾಡಿನಲ್ಲಿ ಪರದೆಯ ಮೇಲೆ ನಾನು ಮತ್ತು ಸಂಗೀತಾ ಕಾಣಿಸಿಕೊಳ್ಳಲಿದ್ದೇವೆ. ಅದರ ದೃಶ್ಯಗಳನ್ನೇ ಬಹುತೇಕರು ಮದುವೆಯ ತಯಾರಿಯ ವಿಡಿಯೋ ಎಂದುಕೊಂಡಿದ್ದಾರೆ. 

`ಬಿಗ್‌ಬಾಸ್‌'ನಿಂದ ಬಂದ ಬಳಿಕ ನಿಮ್ಮ ಕಡೆಯಿಂದ ಯಾವುದೇ ದೊಡ್ಡ ಕಾರ್ಯಚಟುವಟಿಕೆಗಳು ನಡೆದಂತಿಲ್ಲವಲ್ಲ?
ಅದಕ್ಕೆ ಹಲವಾರು ಕಾರಣಗಳಿವೆ. ಮುಖ್ಯವಾಗಿ ಕಳೆದ ಆರು ತಿಂಗಳಿನಿಂದ ಕೊರೊನಾ ಲಾಕ್ಡೌನ್ ಎಲ್ಲ ಮನರಂಜನೆಗಳಿಗೂ ಬ್ರೇಕ್ ಹಾಕಿದೆ.  ಆ ಸಂದರ್ಭದಲ್ಲಿ ಸ್ವಯಂ ಸೇವಕನಾಗಿ ಗೆಳೆಯರೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೇನೆ. `ಫೀಡ್ ದ ನೀಡಿ' ಎನ್ನುವ ಕ್ಯಾಂಪೇನ್ ಶುರು ಮಾಡಿ  ಸುಮಾರು ಎರಡು ಸಾವಿರ ಕುಟುಂಬಗಳಿಗೆ ರೇಷನ್ ಒದಗಿಸುವ ವ್ಯವಸ್ಥೆ ಮಾಡಿದ್ದೇವೆ. ಇತ್ತೀಚೆಗಷ್ಟೇ ರಕ್ಷಿತ್ ಶೆಟ್ಟಿಯವರ ಮೂಲಕ `ರಂಗಸ್ಥಳ' ಎನ್ನುವ ನನ್ನ ಯೂಟ್ಯೂಬ್ ವಾಹಿನಿ ಲಾಂಚ್ ಮಾಡಿದ್ದೇನೆ. ಅದರಲ್ಲಿ ಒಂದಷ್ಟು ನನ್ನ ಟ್ರಾವಲ್ ವಿಡಿಯೋಗಳನ್ನು ಹಾಕಿದ್ದೇನೆ. ಮುಂದೆ ಶಾರ್ಟ್‌ ಫಿಲ್ಮ್ಸ್‌ ಅಥವಾ ಬೇರೇನಾದರೂ ಪ್ರಾಜೆಕ್ಟ್ ಮಾಡಿದರೆ ಅದು ನಮಗೆ ಒಂದು ವೇದಿಕೆ ಆಗಿರುತ್ತದೆ ಎನ್ನುವ ನಂಬಿಕೆ ಇದೆ. 

ಅಂತರ್ಧರ್ಮೀಯ ಮದುವೆ ಬಗ್ಗೆ ಪ್ರಿಯಾಮಣಿ ಮಾತು

ಒಂದಷ್ಟು ಸಿನಿಮಾಗಳಿಗೆ ಕಾಲ್‌ಷೀಟ್‌ ನೀಡುವ ಮೂಲಕ ಸುದ್ದಿಯಲ್ಲಿ ಇರಬಹುದಿತ್ತಲ್ಲವೇ? 
ಈಗಾಗಲೇ ರಿಷಬ್ ಶೆಟ್ಟಿಯವರ `ರುದ್ರ ಪ್ರಯಾಗ' ಚಿತ್ರದ ಪಾತ್ರಕ್ಕೆ ರೆಡಿಯಾಗಿದ್ದೇನೆ. ಉಳಿದಂತೆ ಒಂದಷ್ಟು ಸಿನಿಮಾಗಳು ಪಟ್ಟಿಯಲ್ಲಿವೆ. ಆದರೆ ಅವುಗಳ ಹೆಸರು ಅನೌನ್ಸ್‌ ಮಾಡಿ ಯಾರನ್ನೂ ಕಾಯಿಸಲು ನನಗೆ ಇಷ್ಟವಿಲ್ಲ. ರುದ್ರ ಪ್ರಯಾಗ  ಮುಗಿದ ಬಳಿಕ ಮತ್ತೊಂದರ ಕಡೆಗೆ ಹೆಜ್ಜೆ ಹಾಕುವ ಎಂದುಕೊಂಡಿದ್ದೇನೆ. ಸಾಕಷ್ಟು ಆಫರ್ಸ್ ಬರುತ್ತಿವೆ. ಆದರೆ ಒಮ್ಮೆಲೆ ಎಲ್ಲವನ್ನು ಒಪ್ಪಿಕೊಂಡು ಯಾವುದೂ ಬರದೇ ಇರುವುದಕ್ಕಿಂತ ಒಂದೊಂದಾಗಿ ಬಂದರೆ ಉತ್ತಮ. ಮೊದಲ ಪ್ರಾಜೆಕ್ಟ್‌ ಮೂಲಕ ನಾನು ತಡವಾದೆ ಎನ್ನುವ ಆಪಾದನೆ ಯಾರಿಂದಲೂ ಬರಬಾರದು. ಹಾಗಾಗಿ ಈಗಾಗಲೇ ನಾನು ಕತೆ ಕೇಳಿ ಒಪ್ಪಿದವರು ಕೂಡ ನನ್ನಿಂದಾಗಿ ತಡವಾಗುತ್ತಿದೆ ಎಂದು ಅನಿಸಿದಲ್ಲಿ ಬೇರೆ ಹೀರೋ ಜತೆಗೆ ಚಿತ್ರ ಮಾಡಲು ಅವರು ಸ್ವತಂತ್ರರು. ಯಾರಿಗೂ ತೊಂದರೆ ಆಗಬಾರದಲ್ಲ? ಬಹುಶಃ ಕೊರೊನಾ ಒಂದು ಬಾರದಿದ್ದರೆ ಈಗಾಗಲೇ ರುದ್ರ ಪ್ರಯಾಗದ  ಚಿತ್ರೀಕರಣ ಪೂರ್ತಿಗೊಳಿಸಿ ಹೊಸ ಪ್ರಾಜೆಕ್ಟ್ ಕಡೆಗೆ ಮುಖ ಮಾಡಿರುತ್ತಿದ್ದೆ. ಮುಖ್ಯವಾಗಿ ಸುದ್ದಿಯಲ್ಲಿರುವುದಕ್ಕಿಂತ ಅದರ ರಿಸಲ್ಟ್‌ ಕೂಡ ಮುಖ್ಯವಾಗುತ್ತದೆ. ಈಗ ಸುದ್ದಿಯಲ್ಲಿದ್ದು  ಮುಂದೆ ಪ್ರಾಜೆಕ್ಟ್ ಬಂದಾಗ ಇಷ್ಟೇನಾ ಅನಿಸಬಾರದು. ಪ್ರಾಜೆಕ್ಟ್ ನೋಡಿ ಮಚ್ಚುಗೆಯಾದಾಗ ನನ್ನನ್ನು ನೆನಪು ಮಾಡಿಕೊಂಡರೆ ಸಾಕು.

ನಾಗಜಡೆಯ ಬಗ್ಗೆ ನಾಗಿಣಿ ಹೇಳಿದ ರಹಸ್ಯ..!

ನಿಮ್ಮ ದೊಡ್ಡ ಫುಡ್‌ ಟ್ರಕ್  ಮಾಡಬೇಕು ಎನ್ನುವ ಕನಸು ಏನಾಯಿತು?
ನಸು ನನಸಾಗಿದೆ! ಕಳೆದ ತಿಂಗಳಾಂತ್ಯದಲ್ಲಿ ಹೊಸ ಗಾಡಿಯ ಮೂಲಕ ಮತ್ತೆ ವ್ಯಾಪಾರ ಶುರು ಮಾಡಿದ್ದೇನೆ. ಹಿಂದೆ ಅಟೋದಲ್ಲಿ ವ್ಯಾಪಾರ ಮಾಡುತ್ತಿದ್ದೆವು. ಆದರೆ ಈಗ ನನ್ನ ಕನಸಿನ ಪ್ರಕಾರ ಒಂದಷ್ಟು ದೊಡ್ಡ ವಾಹನದಲ್ಲೇ ಹೋಟೆಲ್ ನಡೆಸಿದ್ದೇವೆ. ನಾನು ಬಿಡುವಾಗಿದ್ದಾಗಲೆಲ್ಲ ಅಲ್ಲೇ ಇರುತ್ತೇನೆ. ಆದರೆ ಅದನ್ನು ಈಗ ಮುಖ್ಯವಾಗಿ ನನ್ನ ತಮ್ಮನೇ ನೋಡಿಕೊಳ್ಳುತ್ತಿದ್ದಾನೆ. ನನ್ನ ತಾಯಿ ಕೂಡ ಇರುತ್ತಾರೆ. ನಾವಲ್ಲದೆ ಇಬ್ಬರು ಕೆಲಸ ಗಾರರು ಸಹ ನಮ್ಮೊಂದಿಗೆ ಅಲ್ಲಿ ಇರುತ್ತಾರೆ. ನಾನು `ಬಿಗ್ ಬಾಸ್‌'ನಲ್ಲಿ ಇರುವಾಗ ತುಂಬ ಜನ ಬರುತ್ತಿದ್ದರಂತೆ. ಆಮೇಲೆ ಕೊರೊನಾ ಬಳಿಕ ಈಗ ಎಲ್ಲಕಡೆಯೂ ಜನ ಸಂದಣಿ ಕಡಿಮೆಯಾಗಿರುವುದನ್ನು ಕಾಣುತ್ತಿದ್ದೇವೆ. ಆದರೂ ವಾರಾಂತ್ಯದ ಸಂದರ್ಭದಲ್ಲಿ ಒಂದಷ್ಟು ಜನ ಹೆಚ್ಚಾಗಿಯೇ ಬರುತ್ತಾರೆ. ಒಟ್ಟಿನಲ್ಲಿ ಜೀವನ  ಸಾಗಿದೆ.

click me!