Salaar ಕೆಲಸ ಸರಿಯಾಗಿ ಮಾಡಿದರೆ ಪ್ರಕೃತಿ ಕೈ ಹಿಡಿಯುತ್ತದೆ: ಪ್ರಮೋದ್‌

By Kannadaprabha NewsFirst Published Nov 18, 2022, 8:58 AM IST
Highlights

ಭವಿಷ್ಯದ ಸೂಪರ್‌ಸ್ಟಾರ್‌ ಆಗುವ ಭರವಸೆ ಹುಟ್ಟಿಸಿರುವ ಪ್ರತಿಭಾವಂತ ಕಲಾವಿದ ಪ್ರಮೋದ್‌. ಎಂಥಾ ಪಾತ್ರ ಕೊಟ್ಟರೂ ತಿಂದು ಹಾಕುವಂತೆ ನಟಿಸಬಲ್ಲ ಪ್ರಮೋದ್‌ ಈಗ ಪ್ಯಾನ್‌ ಇಂಡಿಯಾ ಹಂತಕ್ಕೆ ಹೋಗಿದ್ದಾರೆ. ಪ್ರಶಾಂತ್‌ ನೀಲ್‌ ನಿರ್ದೇಶನದ, ಪ್ರಭಾಸ್‌ ನಟನೆಯ ‘ಸಲಾರ್‌’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮುಂದಿನ ತಿಂಗಳು ಅವರ ಬಹು ನಿರೀಕ್ಷಿತ ‘ಬಾಂಡ್‌ ರವಿ’ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಸಂದರ್ಶನ.

ರಾಜೇಶ್ ಶೆಟ್ಟಿ

ಒಂದೊಂದೇ ಮೆಟ್ಟಿಲು ಏರಿ ಈಗ ಪ್ಯಾನ್‌ ಇಂಡಿಯಾ ಹಂತಕ್ಕೆ ಹೋಗಿದ್ದೀರಿ. ಈ ಪಯಣ ಹೇಗಿದೆ?

ನನ್ನ ಕೆಲಸ ಸರಿಯಾಗಿ ಮಾಡಿದರೆ ಸಾಕು ಎಂಬ ನಂಬಿಕೆಯಿಂದ ಬಂದವನು ನಾನು. ಒಂದು ಹಂತದಲ್ಲಿ ಕೆಲಸ ಮಾತ್ರ ಮಾಡಿದರೆ ಸಾಕಾಗಲ್ಲ, ಇಲ್ಲಿ ಬೆಳೆಯೋಕೆ ಮತ್ತಿನ್ನೇನೋ ಬೇಕು ಅಂತನ್ನಿಸತೊಡಗಿತ್ತು. ರತ್ನನ್‌ ಪ್ರಪಂಚ ನೋಡಿ ಮೆಚ್ಚಿಕೊಂಡು ಪ್ರಶಾಂತ್‌ ನೀಲ್‌ ಸರ್‌ ಕರೆದು ಪಾತ್ರ ಕೊಟ್ಟಿದ್ದಾರೆ. ಈಗ ನನ್ನ ನಂಬಿಕೆ ನಿಜವಾಗಿದೆ. ನಮ್ಮ ಕೆಲಸ ಸರಿಯಾಗಿ ಮಾಡಿದರೆ ಸಾಕು ಪ್ರಕೃತಿ ನಮ್ಮನ್ನು ಕೈಹಿಡಿದು ಕರೆದುಕೊಂಡು ಹೋಗುತ್ತದೆ ಎಂಬ ನಂಬಿಕೆ ಗಟ್ಟಿಯಾಗಿದೆ. ನಾಟಕಗಳು, ಧಾರಾವಾಹಿಗಳು, ಗೀತಾ ಬ್ಯಾಂಗಲ್‌ ಸ್ಟೋರ್‌ ಸಿನಿಮಾದಿಂದ ಇಲ್ಲಿನವರೆಗೆ ಜನ ಸಾಕಷ್ಟುಪ್ರೀತಿ ತೋರಿಸಿದ್ದಾರೆ. ಬಿದ್ದು ಎದ್ದು ನಿಂತಿದ್ದೇನೆ. ಪ್ರಮೋದ್‌ ಬೇರೆ ಥರ ಮಾಡುತ್ತಾನೆ, ನ್ಯಾಚುರಲ್‌ ಆಗಿ ಮಾಡುತ್ತಾನೆ ಎಂದು ಮಾತು ಕೇಳುವಾಗ ಖುಷಿಯಾಗುತ್ತದೆ.

ಹೇಗಿದೆ ಸಲಾರ್‌ ಪ್ರಪಂಚ? ನಿಮ್ಮನ್ನು ಪ್ರಶಾಂತ್‌ ನೀಲ್‌ ಅವರ ಕನಸಿನ ಬಾಗವಾಗಿ ಮಾಡಿಕೊಂಡಿದ್ದು ಹೇಗೆ?

ರತ್ನನ್‌ ಪ್ರಪಂಚ ಸಿನಿಮಾ ನೋಡಿ ಪ್ರಶಾಂತ್‌ ನೀಲ್‌ ಸರ್‌ ನನಗೆ ಕಾಲ್‌ ಮಾಡಿದ್ದು. ಒಂದು ಪಾತ್ರ ಇದೆ ಎಂದು ಹೇಳಿದ್ದರು. ಆಮೇಲೆ ಅವರಿಂದ ಯಾವುದೇ ಫೋನ್‌ ಕಾಲ್‌ ಬರದೇ ಇದ್ದಿದ್ದು ನೋಡಿ ಆ ಪಾತ್ರ ಬೇರೆಯವರಿಗೆ ಹೋಯಿತು ಎಂದುಕೊಂಡಿದ್ದೆ. ಕಳೆದ ಆಗಸ್ಟ್‌ನಲ್ಲಿ ಮತ್ತೆ ಫೋನ್‌ ಬಂದಾಗಲೇ ಈ ಪಾತ್ರ ನನ್ನ ಹೆಸರಿನಲ್ಲಿದೆ ಎಂದು ಗಟ್ಟಿಯಾಗಿದ್ದು. ಸೆಪ್ಟೆಂಬರ್‌ನಲ್ಲಿ ಫೋಟೋಶೂಟ್‌ಗೆ ಕರೆದರು. ಆಗ ಅವರಿಗೆ ಥ್ಯಾಂಕ್ಯೂ ಹೇಳಿದ್ದೆ. ಅವರು ಪ್ರೀತಿಯಿಂದ, ‘ಈ ಪಾತ್ರಕ್ಕೆ ನೀವೇ ಬೇಕು ಅಂತ ಇಷ್ಟಪಟ್ಟಿದ್ದೆ. ರತ್ನನ್‌ ಪ್ರಪಂಚದಲ್ಲಿ ನಿಮ್ಮ ಪಾತ್ರ ಬಹಳ ಚೆನ್ನಾಗಿ ಮಾಡಿದ್ದೀರಿ. ನಿಮ್ಮಷ್ಟುಶಕ್ತಿ ಇರುವವರು ದೊಡ್ಡ ಮಟ್ಟಕ್ಕೆ ಬೆಳೆಯಬೇಕು. ಬೆಳೆಯುತ್ತೀರಿ’ ಎಂದು ಹೇಳಿದ್ದರು. ಫೋಟೋಶೂಟ್‌ ದಿನ ಆ ಗೆಟಪ್‌ ಹಾಕಿಕೊಂಡು ಬಂದು ನಿಂತ ಕ್ಷಣವೇ ವೋವ್‌ ಎಂದರು. ನಾನು ಯಾವತ್ತೂ ಧರಿಸಿಯೇ ಇರದ ಕಾಸ್ಟೂ್ಯಮ್‌ ಅದು. ಅಬ್ಬಾ ಅನ್ನಿಸುವ ಹಾಗಿದೆ. ಅನಂತರ 2-3 ದೃಶ್ಯಗಳಲ್ಲಿ ನಟಿಸಿದ ಮೇಲೆ ಅವರು ಬಂದು, ‘ನಿಮ್ಮನ್ನು ನಾನು ಯಾಕೆ ಆರಿಸಿದೆ ಅಂತ ನನಗೆ ಈಗ ಹೆಚ್ಚು ಅರ್ಥವಾಗಿದೆ, ನಿನಗಾಗಿ ಈ ಪಾತ್ರವನ್ನು ಹೆಚ್ಚು ಬರೆದಿದ್ದೇನೆ’ ಎಂದು ಹೇಳಿದರು. ಪ್ರತಿದಿನ ಶೂಟಿಂಗ್‌ ಮುಗಿಸಿಹೋಗುವಾಗಲೂ ಬಹಳ ಚೆನ್ನಾಗಿ ಮಾಡಿದ್ದೀರಿ ಎನ್ನುತ್ತಿದ್ದರು. ಅಂಥಾ ದೊಡ್ಡ ನಿರ್ದೇಶಕರ ಕೈಯಲ್ಲಿ ಹೊಗಳಿಸಿಕೊಳ್ಳುವುದು ನನ್ನ ಭಾಗ್ಯ.

ಪ್ರಭಾಸ್‌, ಪೃಥ್ವಿರಾಜ್‌ ಏನು ಹೇಳಿದರು?

ನಾನು ಪ್ರತಿನಿತ್ಯ ಕೆಲಸದ ಬಗ್ಗೆ ಆಲೋಚಿಸುವವನು. ನನಗೆ ಏನು ಬೇಕೋ ಅದು ಆ ಸೆಟ್‌ನಲ್ಲಿ ಸಿಕ್ಕಿದೆ. ನನಗೆ ಪಾತ್ರ ಕೊಟ್ಟತಕ್ಷಣ ನಾನು ತೆಲುಗು ಮಾತನಾಡತೊಡಗಿದೆ. ಹೆಚ್ಚು ಸಿನಿಮಾಗಳನ್ನು ನೋಡಿದೆ. ಆ ಭಾಷೆಯ ಸ್ಲಾ್ಯಂಗ್‌ ಅನ್ನು ನನ್ನದಾಗಿಸಿಕೊಳ್ಳಲು ಪ್ರಯತ್ನಿಸಿದೆ. ಅದೇ ಥರ ಶೂಟಿಂಗ್‌ ಇದ್ದಾಗ ಸಾಧ್ಯವಾದಷ್ಟುಆ ಪಾತ್ರವಾಗಿ ತಲ್ಲೀನನಾದೆ. ನನ್ನ ನಟನೆ ಮತ್ತು ಭಾಷಾ ಬಳಕೆ ನೋಡಿ ಪ್ರಭಾಸ್‌ ಅವರು, ‘ನೀನು ಇಷ್ಟುಚೆನ್ನಾಗಿ ತೆಲುಗು ಮಾತನಾಡಲು ಹೇಗೆ ಸಾಧ್ಯ’ ಎಂದು ಮೆಚ್ಚಿಕೊಂಡರು. ಪೃಥ್ವಿರಾಜ್‌ ಅವರು, ‘ನಿನ್ನನ್ನು ನೋಡಿದರೆ ನನ್ನ ಥರಾನೇ ಅನ್ನಿಸ್ತಿ’ ಎಂದರು. ಅವರಂತೂ ನನ್ನನ್ನು ಗಮನಿಸುತ್ತಾ ಇರುತ್ತಾರೆ. ಅವರು ಬಾಯಿಬಿಟ್ಟು ಹೇಳದಿದ್ದರೂ ನಾನು ಅವರಿಗೆ ಇಷ್ಟವಾಗಿದ್ದೇನೆ ಅಂತ ನಂಗೆ ಫೀಲ್‌ ಆಗುತ್ತಿದೆ. ಅವರು ಯಾವಾಗಲೂ ಸಿನಿಮಾ ಬಗ್ಗೆಯೇ ಮಾತನಾಡುತ್ತಿರುತ್ತಾರೆ. ಚಿತ್ರದಲ್ಲಿ ಪ್ರಭಾಸ್‌, ಪೃಥ್ವಿರಾಜ್‌ ಪಾತ್ರಗಳ ಜೊತೆಯೇ ನಾನು ಇರುತ್ತೇನೆ. ನನ್ನದು ಮಾತು ಬೇರೆ ಜಾಸ್ತಿ. ತುಂಬಾ ಎನರ್ಜಿ ಬೇಡುವ ಪಾತ್ರ. ಆ ಪಾತ್ರಕ್ಕೆ ಏನು ಬೇಕೋ ಅದನ್ನು ಕೊಡಲು ನಾನು ಸಿದ್ಧನಿದ್ದೇನೆ. ಅಂಥಾ ದೊಡ್ಡ ಕಲಾವಿದರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ.

ಪ್ರಮೋದ್‌ ನಟನೆಯ ಬಾಂಡ್‌ ರವಿ ಚಿತ್ರದ ಟೀಸರ್‌ ಬಿಡುಗಡೆ

ಬಾಂಡ್‌ ರವಿ ಮುಂದಿನ ತಿಂಗಳು ಬಿಡುಗಡೆಯಾಗುತ್ತಿದೆ. ಆ ಪಾತ್ರ, ಸಿನಿಮಾ ಯಾಕೆ ನಿಮಗೆ ಇಷ್ಟ?

ರತ್ನನ್‌ ಪ್ರಪಂಚ ಆದ ಮೇಲೆ ಬೇರೆ ಬೇರೆ ಸ್ಕಿ್ರಪ್‌್ಟಕೇಳುತ್ತಿದ್ದೆ. ಅಂಥಾ ಒಂದು ದಿನ ಪ್ರಜ್ವಲ್‌ ಬಂದು ಒಂದು ಕತೆ ಹೇಳಿದರು. ಆ ಕತೆಯನ್ನು ಕೇಳುತ್ತಾ ಕೇಳುತ್ತಾ ಆ ಕತೆ ನನ್ನನ್ನು ಕಥಾ ಜಗತ್ತಿನೊಳಗೆ ಎಳೆದುಕೊಳ್ಳುತ್ತಾ ಹೋಯಿತು. ಕ್ಲೈಮ್ಯಾಕ್ಸ್‌ ಕೇಳಿದ ನಂತರವಂತೂ ನಾನು ಈ ಸಿನಿಮಾವನ್ನು ಮಾಡಲೇಬೇಕು ಅನ್ನಿಸಿತು. ಇದೊಂದು ತುಂಬಾ ಸವಾಲಿನ ಪಾತ್ರ. ರಫ್‌ ಆ್ಯಂಡ್‌ ಟಫ್‌ ವ್ಯಕ್ತಿತ್ವ, ಭಾವುಕ ಮನಸ್ಸು, ಪ್ರೀತಿಗೆ ಮರುಳಾಗುವ ಮಮತಾಮಯಿ ಎಲ್ಲವೂ ಆಗಿರುವ ಪಾತ್ರ ಇದು. ನಾನು ಇದುವರೆಗೆ ಯಾವ್ಯಾವ ಪಾತ್ರ ನನಗೆ ಹೆಸರು ಕೊಡುತ್ತದೆ ಎಂದು ಭಾವಿಸಿದ್ದೆನೋ ಅದೆಲ್ಲವೂ ನಿಜವಾಗಿದೆ. ಹಾಗೆ ಮನಸ್ಸು ತಟ್ಟಿದ ಮತ್ತೊಂದು ಪಾತ್ರ ಈ ಬಾಂಡ್‌ ರವಿ. ನನಗೆ ಕತೆ ಕೇಳಿ ಹೇಗೆ ಮನಸ್ಸು ತುಂಬಿ ಬಂತೋ ಅದೇ ಥರ ಪ್ರೇಕ್ಷಕನಿಗೂ ಆಗುತ್ತದೆ. ಬಾಂಡ್‌ ರವಿ ಸಿನಿಮಾ ನೋಡಿ ಬಂದ ತುಂಬಾ ದಿನಗಳ ವರೆಗೆ ಬಾಂಡ್‌ ರವಿ ಪ್ರೇಕ್ಷಕನ ಮನಸ್ಸಲ್ಲಿ ಉಳಿದಿರುತ್ತಾನೆ. ಅದು ನಾನು ಕೊಡುವ ಭರವಸೆ.

ಬಾಂಡ್‌ ರವಿಯಲ್ಲಿ ನಿಮ್ಮನ್ನು ತಟ್ಟಿದ ಅಂಶಗಳು..

1. ಕತೆ. ಚಿತ್ರಕತೆ. ಕ್ಲೈಮ್ಯಾಕ್ಸಿನ 10 ನಿಮಿಷಗಳಂತೂ ಬೇರೆ ತರಹವೇ ಇದೆ. ಕ್ಲೈಮ್ಯಾಕ್ಸ್‌ ಬರುವವರೆಗೂ ಈ ಸಿನಿಮಾವನ್ನು ಜಡ್ಜ್‌ ಮಾಡಲು ಆಗುವುದಿಲ್ಲ. ಕ್ಲೈಮ್ಯಾಕ್ಸ್‌ ಮುಗಿದ ಮೇಲೆ ಆ ಪಾತ್ರವನ್ನು ಪ್ರೀತಿಸದೇ ಇರಲು ಆಗುವುದಿಲ್ಲ.

2. ಅಪ್ಪು ಸರ್‌ ಮಾಡಿದ ಪಾತ್ರದ ಹೆಸರು ಬಾಂಡ್‌ ರವಿ. ಅಪ್ಪು ಸರ್‌ ಜೊತೆಗಿನ ಬಾಂಧವ್ಯದ ಒಂದು ತುಣುಕು ಈ ಪಾತ್ರ. ಅವರಿದ್ದಿದ್ದರೆ ಈ ಸಿನಿಮಾ ನೋಡಿ ಖಂಡಿತಾ ಮೆಚ್ಚಿಕೊಳ್ಳುತ್ತಿದ್ದರು. ನನಗೆ ಇದೊಂದು ಜೀವನದ ನೆನಪು.

3. ಒಳ್ಳೆಯ ನಿರ್ಮಾಣ ಸಂಸ್ಥೆ, ಒಳ್ಳೆಯ ತಂಡದ ಜೊತೆ ಒಳ್ಳೆಯ ಸಿನಿಮಾ ಮಾಡಿದ ತೃಪ್ತಿ. ಈ ಸಿನಿಮಾವನ್ನು ಮನಸ್ಫೂರ್ತಿಯಾಗಿ, ತೃಪ್ತಿಯಿಂದ ಮಾಡಿದ್ದೇನೆ.

ಸಿನಿಮಾ ಟೈಟಲ್ ಆಯ್ತು ಪುನೀತ್ ಚಿತ್ರದ ಈ ಹಾಡು; ಪೃಥ್ವಿ-ಪ್ರಮೋದ್ ನಟನೆ

ಮುಂದಿನ ಯೋಜನೆಗಳು?

ಇಂಗ್ಲಿಷ್‌ ಮಂಜ ಸಿನಿಮಾ ಇದೆ. ಶ್ರುತಿ ನಾಯ್ಡು ಮೇಡಂ ನಿರ್ಮಾಣದ, ರಮೇಶ್‌ ಇಂದಿರಾ ನಿರ್ದೇಶನದ ಸಿನಿಮಾ ಶುರುವಾಗುತ್ತಿದೆ. ನನಗೋಸ್ಕರ ದೊಡ್ಡದಾಗಿ ಸಿನಿಮಾ ಮಾಡುತ್ತಿದ್ದಾರೆ. ಅದರ ಜೊತೆ ಪೌರಾಣಿಕ ಸಿನಿಮಾಗಳನ್ನು ಮಾಡುವ ಆಸೆ ಇದೆ ನನಗೆ. ದೊಡ್ಡ ನಿರ್ಮಾಣ ಸಂಸ್ಥೆಗಳು ನಮ್ಮಂತಹವರನ್ನು ನಂಬಿಕೊಂಡು ಕೆಲಸ ನೀಡಿದರೆ ಆ ಕನಸು ಮುಂದೆ ಈಡೇರಬಹುದು ಎಂದುಕೊಂಡಿದ್ದೇನೆ. ಸದ್ಯ ಕಲಾವಿದನಾಗಿ ನಾನು ತುಂಬಾ ಖುಷಿಯಾಗಿ ಇದ್ದೇನೆ.

click me!