Kamblihula ನೀವು ಕನ್ನಡದ ಸಾಯಿಪಲ್ಲವಿ ಅಂದ್ರು; ನಾಯಕಿ ಅಶ್ವಿತಾ ಹೆಗ್ಡೆ ಮಾತು

By Kannadaprabha News  |  First Published Nov 11, 2022, 9:23 AM IST

ನವನ್‌ ಶ್ರೀನಿವಾಸ್‌ ನಿರ್ದೇಶನದ ‘ಕಂಬ್ಳಿಹುಳ’ ಸಿನಿಮಾದ ನಾಯಕಿ ಅಶ್ವಿತಾ ಹೆಗಡೆ. ಮೂಲತಃ ಮೂಡಬಿದ್ರೆಯವರು. ಎಂಬಿಎ ಪದವೀಧರೆ. ರಂಗಭೂಮಿ ಹಿನ್ನೆಲೆಯವರು. ‘ಕಂಬ್ಳಿಹುಳ’ದಲ್ಲಿ ಇವರ ನಟನೆ ನೋಡಿ ನೀವು ಮುಂದಿನ ಸಾಯಿಪಲ್ಲವಿ ಅನ್ನೋ ಮೆಚ್ಚುಗೆ ಸಿಕ್ಕಿರೋದಕ್ಕೆ ಸದ್ಯ ಥ್ರಿಲ್‌ ಆಗಿದ್ದಾರೆ.


ಪ್ರಿಯಾ ಕೆರ್ವಾಶೆ

ಕಂಬ್ಳಿಹುಳ ಸಿನಿಮಾ ಬಗ್ಗೆ ಎಲ್ಲರೂ ಮಾತಾಡ್ತಿದ್ದಾರೆ. ನಿಮ್ಮ ಮೊದಲ ಸಿನಿಮಾಕ್ಕೇ ಹೀಗೊಂದು ರೆಸ್ಪಾನ್ಸ್‌ ಬಂದಿದೆ..

Tap to resize

Latest Videos

undefined

ಈ ಬಗ್ಗೆ ಬಹಳ ಖುಷಿ ಇದೆ. ರಕ್ಷಿತ್‌ ಶೆಟ್ಟಿ, ರಿಷಬ್‌ ಶೆಟ್ಟಿಸಿನಿಮಾ ನೋಡೋದಾಗಿ ಹೇಳಿದ್ದಾರೆ. ಕಿರಣ್‌ರಾಜ್‌ ಸಿನಿಮಾ ನೋಡಿದ್ದಾರೆ. ಹೊಸಬರ ತಂಡಕ್ಕೆ ಈ ಥರದ ಮೆಚ್ಚುಗೆ ಪ್ಲೆಸೆಂಟ್‌ ಸಪ್ರೈರ್‍ಸ್‌.

ನಿಮ್ಮ ಪಾತ್ರದ ಬಗ್ಗೆ ಬೆಸ್ಟ್‌ ಕಾಂಪ್ಲಿಮೆಂಟ್‌?

ಸಿನಿಮಾದಲ್ಲಿ ನಾನು ಮೇಕಪ್‌ ಹಾಕದೇ ನಟಿಸಿದ್ದೇನೆ. ಮೊದಲ ಸಿನಿಮಾದಲ್ಲಿ ಈ ಥರ ಧೈರ್ಯ ಮಾಡಿದ್ದು ದೊಡ್ಡ ವಿಷ್ಯ ಅಂತ ಎಲ್ಲರೂ ಹೇಳ್ತಿದ್ದಾರೆ. ಪಾತ್ರದ ಮೇಲೆ ಜನರ ಗಮನ ಇರುತ್ತದೆಯೇ ಹೊರತು ಬಟ್ಟೆ, ಮೇಕಪ್‌ ಮೇಲಲ್ಲ ಅನ್ನೋದು ಗೊತ್ತಾಯ್ತು. ಒಬ್ಬರಂತೂ ಮೇಕಪ್‌ ಇಲ್ಲದೇ ಇಷ್ಟುಆತ್ಮವಿಶ್ವಾಸದಿಂದ ಪಾತ್ರ ತೆಗೆದುಕೊಂಡು ಹೋಗಿರೋದು ನೋಡಿದರೆ ನೀವು ಮುಂದಿನ ಕನ್ನಡದ ಸಾಯಿ ಪಲ್ಲವಿ ಅಂದರು. ಇದು ನನಗೆ ಸಿಕ್ಕ ದೊಡ್ಡ ಪ್ರಶಂಸೆ.

KAMBALI HULA REVIEW: ಮನ ಸೆಳೆಯುವ ಮಲೆನಾಡಿನ ಕಂಬ್ಳಿಹುಳ

ಹೀಗೆ ಮೇಕಪ್‌ ಇಲ್ದೇ ನಟಿಸ್ಬೇಕು ಅಂದಾಗ ಏನನಿಸಿತು?

ಸಣ್ಣ ಇನ್‌ಸೆಕ್ಯುರಿಟಿ ಇತ್ತು. ರಿಯಲ್‌ನಲ್ಲಿ ನನಗೆ ಮೇಕಪ್‌ ಇಲ್ಲದೇ ಇರೋದಿಷ್ಟ. ಆದರೆ ಸಿನಿಮಾದಲ್ಲಿ ಹಾಗಲ್ವಲ್ಲಾ.. ನನ್ನ ಮೊದಲ ಸಿನಿಮಾದಲ್ಲೇ ನಾನು ಹೇಗೆ ಕಾಣಿಸಿಕೊಂಡು ಬಿಡ್ತೀನೋ ಅಂತ ಅನಿಸಿ ಬೇಜಾರಾಗಿತ್ತು. ಶೂಟಿಂಗ್‌ ವೇಳೆ ಒಂದು ವಾರ ಇರಿಸುಮುರಿಸು ಅನುಭವಿಸಿದೆ. ಪಾತ್ರವಾಗ್ತಾ ಹೋದ ಹಾಗೆ ಹೊರಗಿನ ಮೇಕಪ್‌ ಮುಖ್ಯ ಅಲ್ಲ, ಎಮೋಶನ್ನೇ ನನಗೆ ದೊಡ್ಡ ಮೇಕಪ್‌ ಅಂತ ಗೊತ್ತಾಯ್ತು. ಇವತ್ತು ಬಹಳ ಖುಷಿ ಇದೆ. ನಮ್ಮ ಡೈರೆಕ್ಟರ್‌ಗೆ ಎಲ್ಲ ಕ್ರೆಡಿಟ್‌ ಸಲ್ಲಬೇಕು.

ನಿಮ್ಮ ಮೊದಲ ಸಿನಿಮಾವನ್ನು ಬಿಗ್‌ಸ್ಕ್ರೀನ್‌ನಲ್ಲಿ ನೋಡಿದಾಗ?

ಮೊದಲು ಬೇರೇನೋ ತಲೇಲಿತ್ತು. ಆದರೆ ಫಸ್ಟ್‌ ಡೇ ಫಸ್ಟ್‌ ಶೋ ನೋಡಿದಾಗ ಈ ಸಿನಿಮಾದಲ್ಲಿ ನಾನೇನೋ ಮಾಡಿದ್ದೇನೆ, ಅದು ಚೆನ್ನಾಗಿದೆ ಅನಿಸ್ತು.

ಪಾತ್ರಕ್ಕೆ ಕನೆಕ್ಟ್ ಆಗೋದು ಚಾಲೆಂಜಿಂಗ್‌ ಆಗಿತ್ತಾ?

ಮಲಯಾಳಿ ಹುಡುಗಿ ಪಾತ್ರವೇ ಚಾಲೆಂಜಿಂಗ್‌. ಮುಂಚೆಗಿಂತ ಜಾಸ್ತಿ ಮಲಯಾಳಂ ಸಿನಿಮಾ ನೋಡ್ತಿದ್ದೆ. ಅವರ ಮಾತಿನ ಧಾಟಿ, ಮ್ಯಾನರಿಸಂ ಎಲ್ಲ ಬೇರೆ ಥರ. ತುಂಬ ಎಫರ್ಚ್‌ ಹಾಕಿದ್ದೆ. ಆದರೂ ಒಳಗೊಳಗೇ ಈ ಮೂವಿ ನೋಡಿ ಮಲಯಾಳಿಗಳು ಬಂದು ಹೊಡಿಯದಿದ್ರೆ ಸಾಕು ಅಂತ ಅನಿಸ್ತಿತ್ತು. ಆದರೆ ಸಿನಿಮಾ ನೋಡಿದ ಒಂದಿಷ್ಟುಜನ ನೀವು ಮಲಯಾಳಿನಾ ಅಂತ ಕೇಳಿದ್ರು.

ಹಿನ್ನೆಲೆ?

ಮಂಗಳೂರು ಸಮೀಪದ ಮೂಡಬಿದ್ರೆಯವಳು. ಆದರೆ ತಂದೆ ತಾಯಿ ಬೆಂಗಳೂರಲ್ಲಿ ಸೆಟಲ್‌ ಆಗಿದ್ದಾರೆ. ಎಂಬಿಎ ಓದಿದ್ದೇನೆ. ಕಂಪನಿಯಲ್ಲಿ ಪ್ರೊಡಕ್ಷನ್‌ ಕೋ ಆರ್ಡಿನೇಟರ್‌ ಆಗಿ ಕೆಲಸ ಮಾಡಿದ್ದೆ. ಆಗ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕೆಲಸ ಮಾಡೋ ಅವಕಾಶ ಸಿಕ್ತು. ಅದು ಹೊಸ ಜಗತ್ತನ್ನೇ ತೆರೆದಿಟ್ಟಿತು. ರಕ್ಷಿತ್‌ ಶೆಟ್ಟಿಅವರ 777 ಆಡಿಶನ್‌ನಲ್ಲಿ ಭಾಗವಹಿಸಿದ್ದೆ. ಸೆಲೆಕ್ಟ್ ಆಗಲಿಲ್ಲ. ಹಿರಿತೆರೆ ನನಗಲ್ವೇನೋ, ಸಿನಿಮಾದಲ್ಲಿ ನಟಿಸೋ ಫೇಸ್‌ ನನ್ನದಲ್ವೇನೋ, ನಂಗೆ ಏನಿದ್ರೂ ರಂಗಭೂಮಿಯೇ ಅಂದುಕೊಂಡಿದ್ದೆ. ಕಂಬ್ಳಿಹುಳ ಸಿನಿಮಾ ಆಡಿಶನ್‌ಗೂ ಮನಸ್ಸಿಲ್ಲದ ಮನಸ್ಸಲ್ಲಿ ಸಣ್ಣ ಮೇಕಪ್ಪೂ ಇಲ್ಲದೇ ಹೋಗಿದ್ದೆ. ಆದರೆ ಅವರ ನರೇಶನ್‌, ಮುಂದೆ ನಡೆದ ಸಿನಿಮಾ ಕೆಲಸ ನೋಡಿ ನಾನು ಕಾಯ್ತಿದ್ದದ್ದು ಇದಕ್ಕೆ ಅನಿಸಿತ್ತು.

ಮುಂದಿನ ಕನಸು?

ಸ್ಟ್ರಾಂಗ್‌ ಪಾತ್ರಗಳಲ್ಲಿ ನಟಿಸಬೇಕು. ಸ್ಟಾರ್‌ ನಟರು, ಅದರಲ್ಲೂ ನನ್ನ ಫೇವರಿಟ್‌ ರಕ್ಷಿತ್‌ ಶೆಟ್ಟಿಜೊತೆ ಆ್ಯಕ್ಟ್ ಮಾಡೋ ಕನಸಿದೆ. ಪರ್ಫಾಮೆನ್ಸ್‌ ಇರುವ ಪಾತ್ರ ಸಿಕ್ಕರೆ ಸಂತೋಷ, ಗ್ಲಾಮರ್‌ ಪಾತ್ರಕ್ಕೂ ಜೈ ಅಂತೀನಿ.

click me!