ಬದುಕನ್ನೇ ಬದಲಾಯಿಸಿದ ಉಜಾಲ; ಇದು ರಾಮಚಂದ್ರನ್ ಯಶೋಗಾಥೆ

By Web DeskFirst Published May 22, 2019, 4:51 PM IST
Highlights

ಉಜಾಲ ಕಂಪನಿ ಮಾಲಿಕನ ಯಶೋಗಾಥೆಯಿದು | ರಾಮಚಂದ್ರನ್ ಬದುಕು ಬದಲಾಯಿಸಿದ ವಿಜ್ಞಾನ ನಿಯತಕಾಲಿಕೆ | ಐದು ಸಾವಿರದಿಂದ ಶುರುವಾದ ಉದ್ಯಮವಿದು 

ಉಜಾಲ, ಎಕ್ಸೋ, ಪ್ರಿಲ್‌, ಹೆಂಕೋ, ಮಿ. ವೈಟ್‌, ಮಾರ್ಗೋ, ನೀಮ್‌ ಟೂತ್‌ ಪೇಸ್ಟ್‌.. ಇವುಗಳಲ್ಲಿ ಯಾವುದಾದರೊಂದು ಉತ್ಪನ್ನ ನಿಮ್ಮ ಮನೆಯಲ್ಲಿ ಬಳಕೆಯಲ್ಲಿ ಇದ್ದಿರಲೂಬಹುದು. ಒಂದು ಅಧ್ಯಯನದ ಪ್ರಕಾರ ದೇಶದ ಶೇ. 37 ರಷ್ಟುಮನೆಗಳಲ್ಲಿ ಮೇಲೆ ಹೇಳಿದ ಉತ್ಪನ್ನಗಳು ಬಳಕೆಯಲ್ಲಿವೆ.

100ರ ಗಡಿ ಸಮೀಪ ಹಾಲಿನ ದರ: ಆರ್ಥಿಕತೆ ಕುಸಿತದಿಂದಾಗಿ ಎದ್ದ ಹಾಹಾಕಾರ!

ಇದೆಲ್ಲಾ ಈಗ ಯಾಕೆ ಎಂದರೆ, ಜ್ಯೋತಿ ಲ್ಯಾಬೊರೆಟೊರಿಸ್‌ ಲಿ. ಕಂಪನಿಯನ್ನು ಕಟ್ಟಿಬೆಳೆಸಿದ ಎಂ.ಪಿ. ರಾಮಚಂದ್ರನ್‌ ಅವರು ಮೊನ್ನೆಯಷ್ಟೇ ತಮ್ಮ ಕಂಪನಿಯ ವ್ಯವಹಾರವನ್ನು ಮಗಳು ಜ್ಯೋತಿ ಅವರಿಗೆ ವಹಿಸಿ ತೆರೆಗೆ ಸರಿದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮಚಂದ್ರನ್‌ ಕಂಪನಿ ಕಟ್ಟಿಬೆಳೆಸಿದ ಯಶೋಗಾಥೆ ಇಲ್ಲಿದೆ.

ಎಂ.ಪಿ. ರಾಮಚಂದ್ರನ್‌ ಮೂಲತಃ ಕೇರಳದ ತ್ರಿಶೂರಿನವರು. ಈ ಸಾಧಕನ ಬದುಕು ತುಂಬಾ ಕಲರ್‌ ಫುಲ್‌. ಆದರೆ ಜೀವನದಲ್ಲಿ ಮದುವೆಯ ದಿನವನ್ನು ಬಿಟ್ಟರೆ ಮತ್ತೆಂದೂ ಬಣ್ಣದ ಬಟ್ಟೆಯನ್ನೇ ತೊಟ್ಟಿಲ್ಲ ಈ ಶ್ವೇತ ಮಾನವ.

ಬಾಲ್ಯದಿಂದಲೂ ಬಿಳಿಯ ಬಟ್ಟೆಯನ್ನೇ ಹಾಕುವ ಅಭ್ಯಾಸವಿದ್ದ ರಾಮಚಂದ್ರನ್‌ ಅವರಿಗೆ ತಾನು ಹಾಕುತ್ತಿದ್ದ ಬಟ್ಟೆಬೇಗ ಕೊಳೆಯಾಗಿ ಏನೇ ಪ್ರಯತ್ನ ಮಾಡಿದರೂ ಮತ್ತೆ ಹೆಚ್ಚು ಬಿಳುಪು ಕಾಣದೇ ಇರುತ್ತಿದ್ದದ್ದು ಚಿಕ್ಕ ಅಸಮಾಧಾನವನ್ನು ಹುಟ್ಟು ಹಾಕಿತ್ತು.

ಆದರೇನು ಮಾಡುವುದು, ಇದನ್ನೇ ಯೋಚಿಸುತ್ತಾ ಕೂತರೆ ಹೊಟ್ಟೆಪಾಡು ಸಾಗಬೇಕಲ್ಲಾ, ಇದೇ ಕಾರಣಕ್ಕಾಗಿ ಫೈನಾನ್ಸ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಮಾಡಿದ್ದ ಇವರು ಕೇರಳ ತೊರೆದು ಮುಂಬೈಗೆ ಬಂದಿಳಿಯುತ್ತಾರೆ.

ಐಒಸಿ ಹಿಂದಿಕ್ಕಿದ ರಿಲಯನ್ಸ್ ಇಂಡಸ್ಟ್ರಿಸ್: ದೇಶದ ನಂ.1 ಕಂಪನಿ!

ಅದು 80ರ ದಶಕ. ಕೆಲಸ ಸಿಕ್ಕುವುದು ಅಷ್ಟುಸುಲಭವಾಗಿರಲಿಲ್ಲ. ಹೀಗಿರುವಾಗ ರಾಮಚಂದ್ರನ್‌ ಕೆಲಸ ಮಾಡುತ್ತಿದ್ದ ಕಂಪನಿ ಮುಚ್ಚುತ್ತದೆ. ಆದರೆ ತೆರಿಗೆ, ಕೆಲಸಗಾರರ ವೇತನ ಸೇರಿದಂತೆ ಎಲ್ಲಾ ವ್ಯವಹಾರಗಳನ್ನು ಪೂರ್ಣ ಮಾಡಲು ಕಂಪನಿ ಇವರನ್ನು ಎರಡು ವರ್ಷಗಳ ಕಾಲ ಉಳಿಸಿಕೊಳ್ಳುತ್ತದೆ. ಅಷ್ಟರಲ್ಲಿ ಬೇರೊಂದು ಕೆಲಸ ಹುಡುಕಿಕೊಳ್ಳಬೇಕು ಎಂದುಕೊಳ್ಳುವಾಗ ಒಂದು ವಿಜ್ಞಾನ ನಿಯತಕಾಲಿಗೆ ಇವರ ದಾರಿಯನ್ನು ಬದಲಾಯಿಸುತ್ತದೆ.

ಬದುಕು ಬದಲಾಯಿಸಿದ ವಿಜ್ಞಾನ ನಿಯತಕಾಲಿಕೆ

ಮುಂಬೈನಲ್ಲಿ ಪ್ರಕಟವಾಗುತ್ತಿದ್ದ ವಿಜ್ಞಾನ ನಿಯತಕಾಲಿಕೆಯೊಂದರಲ್ಲಿ ಬಂದ ಲೇಖನದಲ್ಲಿ ಬಿಳಿ ಬಟ್ಟೆಗಳು ಒಗೆದ ನಂತರ ಹೆಚ್ಚು ಪ್ರಕಾಶಮಾನವಾಗಿ ಕಾಣಬೇಕು ಎಂದರೆ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿದ ನೇರಳೆ ಬಣ್ಣದಿಂದ ಸಾಧ್ಯ ಎಂದು ವಿವರವಾಗಿ ಬರೆಯಲಾಗಿರುತ್ತದೆ.

ಇದನ್ನು ನೋಡಿದ ರಾಮಚಂದ್ರನ್‌ಗೆ ತನ್ನ ಬಹು ದಿನಗಳ ಸಮಸ್ಯೆ ಮತ್ತು ಹೊಸ ಉದ್ಯೋಗಕ್ಕೆ ದಾರಿ ಸಿಕ್ಕುತ್ತದೆ. ಆಗಿನಿಂದ ಒಂದು ವರ್ಷಗಳ ಕಾಲ ತನ್ನ ಮನೆಯಲ್ಲೇ ವೈಜ್ಞಾನಿಕವಾಗಿ ನೇರಳೆ ಬಣ್ಣದಿಂದ ನೀಲಿಯನ್ನು ತಯಾರು ಮಾಡಿ ಅದನ್ನು ತಮ್ಮ ಬಟ್ಟೆಗಳಿಗೆ ಪ್ರಾಯೋಗಿಕವಾಗಿ ಬಳಸುತ್ತಾರೆ. ಆಗ ಹಿಂದಿಗಿಂತಲೂ ಬಟ್ಟೆಗಳು ಹೆಚ್ಚು ಪ್ರಕಾಶಮಾನವಾಗಿ ಕಾಣುವುದರ ಮೂಲಕ ರಾಮಚಂದ್ರನ್‌ ಅವರ ಪ್ರಯತ್ನ ಯಶ ಕಾಣುತ್ತದೆ.

ಐದು ಸಾವಿರದಿಂದ ಶುರುವಾದ ಉದ್ಯಮ

ಅಂದು ತಾನು ಕಂಡುಕೊಂಡು ದಾರಿಯಲ್ಲಿ ಮುಂದೆ ಸಾಗಬೇಕು ಎಂದುಕೊಂಡಿದ್ದ ರಾಮಚಂದ್ರನ್‌ ಅವರಿಗೆ ಮುಂದೆ ಹೋಗಲು ಹಣದ ಸಮಸ್ಯೆ ಎದುರಾಯಿತು. ಆಗ ನೆರವಿಗೆ ಬಂದದ್ದು ಸಹೋದರ. ಒಂದಷ್ಟುಕಡೆ ಸಾಲ ಮಾಡಿ ಐದು ಸಾವಿರ ರುಪಾಯಿಯನ್ನು ಮೂಲ ಬಂಡವಾಳವಾಗಿ ನೀಡುತ್ತಾರೆ.

ಅದರಿಂದ 1983ರಲ್ಲಿ ತನ್ನ ಮಗಳಾದ ಜ್ಯೋತಿ ಹೆಸರಿನಲ್ಲಿ ಜ್ಯೋತಿ ಲ್ಯಾಬೊರೆಟೊರಿಸ್‌ ಲಿ. ಕಂಪನಿ ಶುರು ಮಾಡಿ ಉಜಾಲ ನೀಲಿಯ ಉತ್ಪಾದನೆ ಶುರು ಮಾಡುತ್ತಾರೆ. ಮೊದ ಮೊದಲು ಇವರೇ ಅಂಗಡಿಗಳಿಗೆ ಹೋಗಿ ತಮ್ಮ ಉತ್ಪನ್ನವನ್ನು ಮಾರುವುದು, ಬೇರೆ ಬೇರೆ ರೀತಿಯಲ್ಲಿ ಜಾಹೀರಾತು ನೀಡುವುದರ ಮೂಲಕ ಒಂದೇ ವರ್ಷದಲ್ಲಿ 40,000 ರು. ಆದಾಯ ಗಳಿಸಿ ಬಿಡುತ್ತಾರೆ. ಅಲ್ಲಿಂದ ರಾಮಚಂದ್ರನ್‌ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಇಂದಿಗೂ ಅವರ ಕಂಪನಿ ಒಳ್ಳೆಯ ಲಾಭದಲ್ಲಿ ಮುಂದೆ ಸಾಗುತ್ತಾ ಬಂದಿದೆ.

ಸಮೀಕ್ಷೆ ಎಫೆಕ್ಟ್: ಮೋದಿ ಹವಾಗೆ ಸೆನ್ಸೆಕ್ಸ್ ಗೂಳಿ ತಕಧಿಮಿತ!

ಮಹಿಳೆಯರಿಗೆ ಮೊದಲ ಆದ್ಯತೆ

ಇಂದು ಜ್ಯೋತಿ ಲ್ಯಾಬೊರೆಟೊರಿಸ್‌ ಲಿ. ಕಂಪನಿ ಅಡಿಯಲ್ಲಿ ಉಜಾಲ, ಎಕ್ಸೋ, ಪ್ರಿಲ್‌, ಹೆಂಕೋ, ಮಿ. ವೈಟ್‌, ಮಾರ್ಗೋ, ನೀಮ್‌ ಟೂತ್‌ ಪೇಸ್ಟ್‌ ಸೇರಿ ವಿವಿಧ ಬಗೆಯ ಗೃಹೋಪಯೋಗಿ ವಸ್ತುಗಳು ತಯಾರಾಗುತ್ತಿವೆ. ದೇಶಾದ್ಯಂತ ಹಲವು ಶಾಖೆಗಳಿವೆ. ಕೆಲಸಗಾರರ ಸಂಖ್ಯೆ 40,000ದಷ್ಟಿದೆ.

ಅದರಲ್ಲಿ ಶೇ. 60ರಷ್ಟುಮಂದಿ ಮಹಿಳೆಯರೇ ಇದ್ದಾರೆ. ‘ನಮ್ಮ ಉತ್ಪನ್ನವನ್ನು ಹೆಚ್ಚಾಗಿ ಬಳಕೆ ಮಾಡುವುದು ಮಹಿಳೆಯರೇ. ಅವರು ನಮ್ಮ ಉತ್ಪನ್ನಗಳನ್ನು ಮೆಚ್ಚಿಕೊಂಡಿದ್ದರಿಂದಲೇ ಇಂದು ನಮ್ಮ ಕಂಪನಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿರುವುದು. ಅವರು ನಮ್ಮ ಬದುಕನ್ನು ಪ್ರಕಾಶಮಾನವಾಗಿರಿಸಿದ್ದಾರೆ.

ನಾವು ಅವರ ಬಾಳನ್ನು ಬೆಳಗಲು ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ತಾವು ಮಹಿಳೆಯರಿಗೆ ಉದ್ಯೋಗ ನೀಡುವುದರ ಹಿಂದಿನ ಉದ್ದೇಶವನ್ನು ಹೇಳಿಕೊಳ್ಳುತ್ತದೆ ಕಂಪನಿ.

17 ದೇಶಗಳಿಗೆ ರಫ್ತು, 20 ಸಾವಿರ ಕೋಟಿ ರು. ದಾಟಿದ ವ್ಯವಹಾರ

ಇಂದು ದೇಶದಲ್ಲಿ ಫಾಸ್ಟ್‌ ಮೂವಿಂಗ್‌ ಗೂಡ್ಸ್‌ಗಳ ಪಟ್ಟಿಯಲ್ಲಿ ಜ್ಯೋತಿ ಲ್ಯಾಬೊರೆಟೊರಿಸ್‌ ಲಿ. ಕಂಪನಿ ತಯಾರು ಮಾಡುವ ಎಲ್ಲಾ ಉತ್ಪನ್ನಗಳೂ ಇವೆ. ಅಲ್ಲದೇ 17 ವಿವಿಧ ರಾಷ್ಟ್ರಗಳಿಗೆ ಇವರು ತಯಾರಿಸಿದ ಉತ್ಪನ್ನಗಳು ರಫ್ತಾಗುತ್ತಿವೆ. ಕಳೆದ ವರ್ಷದ ಹೊತ್ತಿಗೆ ಕಂಪನಿ 20 ಸಾವಿರ ಕೋಟಿ ರು. ವ್ಯವಹಾರ ಮಾಡಿ ಒಳ್ಳೆಯ ಲಾಭದಲ್ಲಿ ಮುಂದೆ ಸಾಗುತ್ತಿದೆ.

ಉದ್ಯಮದ ದಿಕ್ಕನ್ನೇ ಬದಲಿಸಿದ ರಾಮಚಂದ್ರನ್‌

ರಾಮಚಂದ್ರನ್‌ ಲೆಕ್ಕಶಾಸ್ತ್ರ ಓದಿದವರು. ಅವರಿಗೂ ವಿಜ್ಞಾನಕ್ಕೂ ತುಂಬಾ ದೂರ. ಹೀಗಿರುವಾಗ ದೇಶದಲ್ಲಿ ಹೊಸದೊಂದು ಉದ್ಯಮವನ್ನೇ ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ಕ್ರಿಯಾತ್ಮಕವಾಗಿ ಯೋಚಿಸುವ ಶಕ್ತಿ ಇದ್ದರೆ, ಅದರೊಂದಿಗೆ ವ್ಯವಹಾರ ಜ್ಞಾನ ಇದ್ದರೆ ಇರುವ ಸಂಪನ್ಮೂಲವನ್ನೇ ಬಳಕೆ ಮಾಡಿಕೊಂಡು ಗೆದ್ದು ತೋರಿಸಬಹುದು ಎನ್ನುವುದಕ್ಕೆ ಜೀವಂತ ಉದಾಹರಣೆ ಇವರು. ಇದರ ಜೊತೆಗೆ ಪ್ರಾರಂಭದ ದಿನಗಳಲ್ಲಿ ತಮ್ಮ ಉತ್ಪನ್ನಗಳಿಗೆ ಹೆಚ್ಚು ರಿಯಾಯಿತಿ, ವರ್ತಕರಿಗೆ ಹೆಚ್ಚು ಕಮೀಷನ್‌, ಭಿನ್ನ ರೀತಿಯ ಜಾಹೀರಾತುಗಳನ್ನು ವ್ಯಾಪಾರಿ ವಲಯಕ್ಕೆ ಪರಿಚಯಿಸಿದವರೂ ಇವರೇ.

ಸತತ 36 ವರ್ಷಗಳ ಪ್ರಯಾಣದಲ್ಲಿ ಸಣ್ಣ ನೀಲಿ ಡಬ್ಬದಿಂದ ಶುರು ಮಾಡಿದ ಕಂಪನಿಯನ್ನು ಇಂದು ಡಿಟರ್ಜೆಂಟ್‌ ಬಾರ್‌, ಪೌಡರ್‌, ಸೋಪು, ಸೊಳ್ಳೆಬತ್ತಿ, ಸುಗಂಧ ದ್ರವ್ಯ ಹೀಗೆ ಹತ್ತಾರು ಉತ್ಪನ್ನಗಳನ್ನು ತಯಾರು ಮಾಡುವ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಈಗ ಇಡೀ ಕಂಪನಿಯ ಉಸ್ತುವಾರಿಯನ್ನು ಮಗಳು ಜ್ಯೋತಿ ಹೊತ್ತುಕೊಂಡು ಮುಂದೆ ಸಾಗಿಸುವ ತವಕದಲ್ಲಿದ್ದಾರೆ.

- ಕೆಂಡಪ್ರದಿ 

click me!