ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14ನೇ ಕಂತು ಯಾವಾಗ ಬಿಡುಗಡೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ. ಈ ಹಣ ಏಪ್ರಿಲ್ ಹಾಗೂ ಜುಲೈ ನಡುವೆ ಯಾವಾಗ ಬೇಕಿದ್ದರೂ ಬಿಡುಗಡೆಯಾಗಬಹುದು. ಈ ಯೋಜನೆಯ 13ನೇ ಕಂತಿನ ಹಣ ಫೆ.27ರಂದು ಬಿಡುಗಡೆಯಾಗಿತ್ತು.
ನವದೆಹಲಿ (ಏ.10): ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಿಗೆ ಫೆಬ್ರವರಿ 27ರಂದು ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ 13ನೇ ಕಂತಿನ ಹಣ ಬಿಡುಗಡೆ ಮಾಡಿದ್ದರು. ಈಗ 14ನೇ ಕಂತಿನ ಹಣ ಬಿಡುಗಡೆಯ ನಿರೀಕ್ಷೆಯಲ್ಲಿ ರೈತರಿದ್ದಾರೆ. ಕೇಂದ್ರ ಸರ್ಕಾರ 14ನೇ ಕಂತಿನ ಹಣ ಬಿಡುಗಡೆ ದಿನಾಂಕವನ್ನು ಯಾವಾಗ ಬೇಕಿದ್ದರೂ ಘೋಷಿಸುವ ಸಾಧ್ಯತೆಯಿದ್ದು, 2023ರ ಏಪ್ರಿಲ್ ಹಾಗೂ ಜುಲೈ ನಡುವೆ ಹಣ ಬಿಡುಗಡೆಯಾಗುವ ನಿರೀಕ್ಷೆಯಿದೆ. ದೇಶದ ಸಣ್ಣ ರೈತರಿಗೆ ಕೃಷಿ ಕಾರ್ಯಕ್ಕೆ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು 2019ರ ಫೆಬ್ರವರಿಯಲ್ಲಿ ಪ್ರಾರಂಭಿಸಿತ್ತು. ಈ ಯೋಜನೆಯಡಿ ಕೇಂದ್ರ ಸರ್ಕಾರ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6000ರೂ. ಧನ ಸಹಾಯ ನೀಡುತ್ತದೆ.ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ 2000 ರೂ. ಜಮೆ ಮಾಡುತ್ತದೆ. ಈ ರೀತಿ ಇಲ್ಲಿಯ ತನಕ ಸರ್ಕಾರ 13 ಕಂತುಗಳಲ್ಲಿ ರೈತರ ಖಾತೆಗಳಿಗೆ ಹಣ ಜಮೆ ಮಾಡಿದೆ. ಈ ರೀತಿ ರೈತರ ಖಾತೆಗಳಿಗೆ ಹಣ ಜಮೆ ಮಾಡುವ ಮುನ್ನ ಕೇಂದ್ರ ಸರ್ಕಾರ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡುತ್ತದೆ.
ನೋಂದಣಿ ಮಾಡಿಕೊಳ್ಳಲು ಅವಕಾಶ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಕೆವೈಸಿ ಮಾಡಿಸೋದು ಅಗತ್ಯ. ಆಗಾಗ ಕೆವೈಸಿ ನವೀಕರಿಸೋದು ಕೂಡ ಅಗತ್ಯ. 13ನೇ ಕಂತಿನ ಹಣ ಬಿಡುಗಡೆ ಮುನ್ನ ಕೆವೈಸಿ ಅಪ್ಡೇಟ್ ಮಾಡುವಂತೆ ಸರ್ಕಾರ ರೈತರಿಗೆ ತಿಳಿಸಿತ್ತು. ಆದರೆ, ಕೆಲವು ರೈತರು ಕೆವೈಸಿ ನವೀಕರಿಸದ ಕಾರಣ 13ನೇ ಕಂತಿನ ಹಣ ದೊರಕಿರಲಿಲ್ಲ. 13ನೇ ಕಂತಿನ ಪಟ್ಟಿಯಿಂದ ಹೆಸರು ಕೈ ಬಿಟ್ಟು ಹೋದವರು ಮತ್ತೆ ಯೋಜನೆಗೆ ಸೇರ್ಪಡೆಗೊಳ್ಳಬಹುದು. ಹಾಗೆಯೇ ಇನ್ನೂ ಈ ಯೋಜನೆ ಫಲಾನುಭವಿಯಾಗದ ರೈತರು ಕೂಡ ಹೆಸರು ನೋಂದಾಯಿಸಬಹುದು.
EPF ಖಾತೆಯನ್ನುಹೊಸ ಕಂಪನಿಗೆ ವರ್ಗಾಯಿಸಬೇಕಾ? ಹಾಗಾದ್ರೆ ಯಾವ ಅರ್ಜಿ ನಮೂನೆ ಬಳಸ್ಬೇಕು?
ನೋಂದಣಿಗೆ ಯಾವೆಲ್ಲ ದಾಖಲೆಗಳು ಅಗತ್ಯ?
*ಆಧಾರ್ ಕಾರ್ಡ್
*ಜಮೀನು ಕಾಗದ ಪತ್ರಗಳು
*ಆದಾಯ ಪ್ರಮಾಣಪತ್ರ
*ಬ್ಯಾಂಕ್ ಖಾತೆ ಮಾಹಿತಿಗಳು
*ಅರ್ಹ ಮೊಬೈಲ್ ಸಂಖ್ಯೆ
*ಪಾಸ್ ಪೋರ್ಟ್ ಗಾತ್ರದ ಫೋಟೋ
ಯೋಜನೆಗೆ ಸೇರ್ಪಡೆಗೊಳ್ಳೋದು ಹೇಗೆ?
- ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ ಸೈಟ್ www.pmkisan.gov.in. ಭೇಟಿ ನೀಡಿ.
-ಮುಖಪುಟದಲ್ಲಿ ಕಾಣಿಸೋ 'Farmers Corner'ಎಂಬ ಆಯ್ಕೆ ಮೇಲೆ ಕ್ಲಿಕಿಸಿ.
-ಈಗ 'New Farmer Registration'ಮೇಲೆ ಕ್ಲಿಕ್ ಮಾಡಿ.
-ಈಗ ನೋಂದಣಿ ಅರ್ಜಿ ತೆರೆದುಕೊಳ್ಳುತ್ತದೆ.ಆಧಾರ್ ಸಂಖ್ಯೆ ಹಾಗೂ ಆಧಾರ್ ಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ ನಮೂದಿಸಿ.
- ನಂತರ ರಾಜ್ಯ ಆಯ್ಕೆ ಮಾಡಿ.ಕ್ಯಾಪ್ಚಾ ಕೋಡ್ ನಮೂದಿಸಿ, ಒಟಿಪಿ ಪಡೆಯಿರಿ.
-ಈಗ ಪಿಎಂ ಕಿಸಾನ್ ಅರ್ಜಿ ಕಾಣಿಸುತ್ತದೆ. ಅದನ್ನು ಭರ್ತಿ ಮಾಡಿ. ಆ ಬಳಿಕ ಸೇವ್ ನೀಡಿ. ಈ ಅರ್ಜಿಯ ಪ್ರಿಂಟ್ ಬೇಕಿದ್ದರೆ ಪಡೆಯಬಹುದು.
ಶೀಘ್ರದಲ್ಲಿ ಯುಪಿಐ ಮೂಲಕವೂ ಸಿಗಲಿದೆ ಸಾಲ: ಮಾಹಿತಿ ನೀಡಿದ RBI
ಇ-ಕೆವೈಸಿ ಪೂರ್ಣಗೊಳಿಸೋದು ಹೇಗೆ?
-ಮೊದಲಿಗೆ ಪಿಎಂ ಕಿಸಾನ್ ಅಧಿಕೃತ ವೆಬ್ ಸೈಟ್ https://pmkisan.gov.in ಭೇಟಿ ನೀಡಿ.
-ಈಗ ಬಲ ಭಾಗದಲ್ಲಿ ಹೋಮ್ ಪೇಜ್ ಕೆಳಗೆ ನಿಮಗೆ ಫಾರ್ಮರ್ಸ್ ಕಾರ್ನರ್ ಕಾಣಿಸುತ್ತದೆ.
-ಫಾರ್ಮರ್ಸ್ ಕಾರ್ನರ್ ಕೆಳಗೆ ಒಂದು ಬಾಕ್ಸ್ ಇದ್ದು, ಅದ್ರಲ್ಲಿ ಇ-ಕೆವೈಸಿ ಎಂದಿದೆ.
-ಈಗ ಇ-ಕೆವೈಸಿ ಮೇಲೆ ಕ್ಲಿಕ್ ಮಾಡಿ.
-ಒಂದು ಪುಟ ತೆರೆದುಕೊಳ್ಳುತ್ತದೆ. ಅದ್ರಲ್ಲಿ ಆಧಾರ್ ಇ-ಕೆವೈಸಿ ಭರ್ತಿ ಮಾಡಬಹುದು.
-ಈಗ ನೀವು ಆಧಾರ್ ಸಂಖ್ಯೆ ಹಾಗೂ ಕಾಪ್ಚ ಕೋಡ್ ನಮೂದಿಸಬೇಕು. ಆ ಬಳಿಕ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ.
-ಆ ಬಳಿಕ ನೀವು ಆಧಾರ್ ಸಂಖ್ಯೆಗೆ ಲಿಂಕ್ ಆಗಿರೋ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಬೇಕು. ಆ ಬಳಿಕ OTP ಬಟನ್ ಮೇಲೆ ಕ್ಲಿಕ್ ಮಾಡಬೇಕು.
-ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
-OTP ನೋಂದಾಯಿಸಿ ಸಬ್ಮಿಟ್ ಮಾಡಲು Authentication button ಮೇಲೆ ಕ್ಲಿಕ್ ಮಾಡಿ.
- Submit ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ e-KYC ಪೂರ್ಣಗೊಳ್ಳುತ್ತದೆ.