
ನವದೆಹಲಿ (ಏ.0): ಭಾರತದಲ್ಲಿ 2025ಕ್ಕೆ 'ಹಾರುವ ಟ್ಯಾಕ್ಸಿ' ಅಥವಾ 'ಫ್ಲೈಯಿಂಗ್ ಟ್ಯಾಕ್ಸಿ' ಉತ್ಪಾದನೆ ಪ್ರಾರಂಭವಾಗಲಿದೆ. ಅಮೆರಿಕದ ಭಾರತೀಯ ಮೂಲದ ವೈದ್ಯ ಹಾಗೂ ಉದ್ಯಮಿ ಚಿರಿಂಜೀವ್ ಕಥೂರಿಯಾ ಅವರ ಕಂಪನಿ ಸಿದ್ಧಪಡಿಸಿರುವ ಫ್ಲೈಯಿಂಗ್ ಟ್ಯಾಕ್ಸಿ ಹಾಗೂ ಡ್ರೋನ್ ಗಳು ಭಾರತದ ಸಾರಿಗೆ ಸಂಪರ್ಕ ವ್ಯವಸ್ಥೆಗೆ ಮುಂದಿನ ನಾಲ್ಕು ವರ್ಷಗಳಲ್ಲಿ ಸೇರ್ಪಡೆಗೊಳ್ಳಲಿವೆ. ಕಥೋರಿಯಾ ಅವರ ಜೌಂಟ್ ಏರ್ ಮೊಬಿಲಿಟಿ ಕಳೆದ ವರ್ಷ ಎಲ್ ಆಂಡ್ ಟಿ ಟೆಕ್ನಾಲಜಿ ಸರ್ವೀಸಸ್ ಲಿ. ಜೊತೆಗೆ ಪಟ್ಟಣ ವಾಯು ಸಂಚಾರಕ್ಕೆ ಸಂಬಂಧಿಸಿ ಒಪ್ಪಂದ ಮಾಡಿಕೊಂಡಿತ್ತು. ಅಲ್ಲದೆ, ಇತ್ತೀಚೆಗೆ ಭಾರತೀಯ ಹೆಲಿಕಾಪ್ಟರ್ ಸಂಸ್ಥೆಗಳು 250 ಏರ್ ಟ್ಯಾಕ್ಸಿಗಳಿಗಾಗಿ ಈ ಸಂಸ್ಥೆಗೆ ಆರ್ಡರ್ ಕೂಡ ನೀಡಿವೆ. ಹೀಗಾಗಿ 2025ಕ್ಕೆ ದೇಶ ಹಾಗೂ ಪ್ರಾದೇಶಿಕ ಮಾರುಕಟ್ಟೆಗಳಲ್ಲಿ ಈ ಭವಿಷ್ಯದ ವಾಹನ ಲಭ್ಯವಾಗುವಂತೆ ಮಾಡಲು ಕಥೂರಿಯಾ ಪಣ ತೊಟ್ಟಿದ್ದಾರೆ. ಈ ವೈದ್ಯರ ಕಂಪನಿ ಈಗಾಗಲೇ ಯುದ್ಧದಲ್ಲಿ ಬಳಕೆ ಮಾಡುವ ಡ್ರೋನ್ ಗಳ ಉತ್ಪಾದನೆ ಮಾಡುತ್ತಿದ್ದು, ಪ್ರಸ್ತುತ ಉಕ್ರೇನ್ ನಲ್ಲಿ ಅವುಗಳನ್ನು ಬಳಸಲಾಗುತ್ತಿದೆ. ಈ ಡ್ರೋನ್ ಹೆಸರು ಆರ್ ಕ್ಯು -35 ಹಿಡ್ರನ್. ಇನ್ನು ಈ ಯುದ್ಧ ಡ್ರೋನ್ ಗಳನ್ನು ಮುಂದಿನ ವರ್ಷದಿಂದ ಭಾರತದಲ್ಲಿ ಕೂಡ ಉತ್ಪಾದಿಸಲಾಗುವುದು ಎಂದು ದೆಹಲಿ ಮೂಲದ ಅಮೆರಿಕದ ಉದ್ಯಮಿ ಕಥೂರಿಯಾ ಮಾಹಿತಿ ನೀಡಿದ್ದಾರೆ.
'ನಾನು ಬ್ರೌನ್ ವಿಶ್ವವಿದ್ಯಾಲಯದಿಂದ ವೈದ್ಯಕೀಯದಲ್ಲಿ ಡಾಕ್ಟರೇಟ್ ಪದವಿಯನ್ನು ಹಾಗೂ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದೇನೆ. ಆದರೂ ವಾಯುಯಾನ ಕ್ಷೇತ್ರ ಮಾತ್ರ ನನ್ನ ಮೊದಲ ಆಸಕ್ತಿಯಾಗಿತ್ತು. ಇದೇ ಕಾರಣಕ್ಕೆ ನಾನು ವೈದ್ಯ ವೃತ್ತಿ ಮಾಡಲೇ ಇಲ್ಲ. ಬದಲಿಗೆ ಕಂಪನಿಗಳನ್ನು ಪ್ರಾರಂಭಿಸಿದೆ. 1999ರಲ್ಲಿ ನಾನು ಮಾನವಸಹಿತ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಹಾಗೂ ಅದಕ್ಕೆ ಹಣಕಾಸು ನೆರವು ನೀಡಲು ಕಮರ್ಷಿಯಲ್ ಕಂಪನಿ ಆರಂಭಿಸಿದೆ. ಏಳು ವರ್ಷಗಳ ಹಿಂದೆ ಈ ಸಂಸ್ಥೆ ಮಾನವರಹಿತೇರಿಯಲ್ ವಾಹನವನ್ನು ಸಿದ್ಧಪಡಿಸಿತ್ತು ಕೂಡ. ಅದೇನೆ ಮಾಡಿದರೂ ನನ್ನ ಮನಸ್ಸು ಮಾತ್ರ ಭಾರತಕ್ಕಾಗಿ ಏನಾದರೂ ಮಾಡಬೇಕು ಎಂದು ಹಾತೊರೆಯುತ್ತಿತ್ತು. ಇದೇ ಕಾರಣಕ್ಕೆ 1990ರ ಮಧ್ಯ ಭಾಗದಲ್ಲಿ ಭಾರತದಲ್ಲಿ ಮೊದಲ ಯುಎಸ್ ಹೂಡಿಕೆ ಬ್ಯಾಂಕ್ ಸ್ಥಾಪಿಸಲು ನಾನು ನೆರವು ನೀಡಿದೆ. ಈಗಲೂ ಕೂಡ ನಾನು ಭಾರತಕ್ಕೆ ಏನು ಮಾಡಬಹುದು ಎಂಬ ಬಗ್ಗೆ ನನ್ನನ್ನೇ ನಾನು ಪ್ರಶ್ನಿಸಿಕೊಳ್ಳುತ್ತ ಇರುತ್ತೇನೆ' ಎಂದು ಡಾ.ಕಥೂರಿಯಾ ಹೇಳಿದ್ದಾರೆ.
ಅಂದು ಮರದ ನೆರಳಲ್ಲಿಓದಿ ಶಿಕ್ಷಣ ಪಡೆದ ಹುಡುಗ ಇಂದು 50 ಸಾವಿರ ಕೋಟಿ ರೂ.ಒಡೆಯ!
ಜೌಂಟ್ ಏರ್ ಟ್ಯಾಕ್ಸಿಗಳು (Jaunt air taxis)ಕೆನಡಾ ಮತ್ತು ಅಮೆರಿಕದ ವಾಯುಯಾನ ನಿಯಂತ್ರಕರಿಂದ 2026-27ರೊಳಗೆ ಅನುಮತಿ ಪಡೆದ ಬಳಿಕ ಹಾರಾಟ ಪ್ರಾರಂಭಿಸುವ ನಿರೀಕ್ಷೆಯಿದೆ. 'ಏರ್ ಟ್ಯಾಕ್ಸಿಗಳ ಮೊದಲ ಉತ್ಪಾದನಾ ಘಟಕ ಅಮೆರಿಕದಲ್ಲಿ ಹಾಗೂ ಎರಡನೇ ಘಟಕ ಭಾರತದಲ್ಲಿರಲಿದೆ. ಈ ಎರಡೂ ರಾಷ್ಟ್ರಗಳಲ್ಲಿ 2025ರ ವೇಳೆಗೆ ಉತ್ಪಾದನೆ ಪ್ರಾರಂಭಿಸುವ ಭರವಸೆಯಿದೆ. ಹಿಡ್ರನ್ ಡ್ರೋನ್ ಉತ್ಪಾದನೆಯನ್ನು ಮುಂದಿನ ವರ್ಷದಿಂದಲೇ ಭಾರತದಲ್ಲಿ ಪ್ರಾರಂಭಿಸುವ ಗುರಿಯಿದೆ. ಭಾರತಕ್ಕೆ ಸಂಬಂಧಿಸಿದ ನಮ್ಮ ಯೋಜನೆಗಳನ್ನು ತಕ್ಷಣವೇ ಪ್ರಾರಂಭಿಸಲಾಗುವುದು' ಎಂದು ಕಥೂರಿಯಾ ತಿಳಿಸಿದ್ದಾರೆ.
ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ಯಾವೆಲ್ಲ ಕಾರಣಗಳಿಗೆ ನೋಟಿಸ್ ನೀಡುತ್ತದೆ?
ಡಾ.ಕಥೂರಿಯಾ ಅವರ ತಾಯಿ ವೈದ್ಯೆ ಹಾಗೂ ತಂದೆ ಇಂಜಿನಿಯರ್. ಅವರಿಬ್ಬರೂ ಕಥೂರಿಯಾ ಅವರು ಎಂಟು ತಿಂಗಳ ಮಗುವಾಗಿರುವಾಗ ಅಮೆರಿಕಕ್ಕೆ ತೆರಳಿದ್ದರು. ಆದರೆ, ಬೇಸಿಗೆಯಲ್ಲಿ ಅವರು ದೆಹಲಿ ಹಾಗೂ ಚಂಡೀಗಢಗೆ ಭೇಟಿ ನೀಡಿ ಸಮಯ ಕಳೆಯುತ್ತಿದ್ದರು. ಈ ಮೂಲಕ ತಮ್ಮ ಮೂಲವನ್ನು ನಾನು ಮರೆಯದಂತೆ ತಂದೆ-ತಾಯಿ ಎಚ್ಚರ ವಹಿಸಿದ್ದರು ಎಂಬ ಮಾಹಿತಿಯನ್ನು ಕಥೂರಿಯಾ ಅವರೇ ಹಂಚಿಕೊಂಡಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.