
ಬೀಜಿಂಗ್ (ಏ.11): ಅಮೆರಿಕ ಮತ್ತು ಚೀನಾ ನಡುವಿನ ಸುಂಕ ಯುದ್ಧ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಮೆರಿಕದ 145% ಸುಂಕಕ್ಕೆ ಪ್ರತಿಕ್ರಿಯೆಯಾಗಿ, ಚೀನಾ ಶುಕ್ರವಾರ ತನ್ನ ಸುಂಕವನ್ನು 125% ಏರಿಕೆ ಮಾಡುವುದಾಗಿ ಘೋಷಣೆ ಮಾಡಿದ್ದು, ಇದು ಶನಿವಾರದಿದ ಜಾರಿಗೆ ಬರಲಿದೆ. ಅದರೊಂದಿಗೆ ಅಮೆರಿಕ ಇನ್ನು ವಿಧಿಸುವ ಯಾವುದೇ ಹೆಚ್ಚುವರಿ ಸುಂಕಕ್ಕೆ ಈಗ ಪ್ರತಿಕ್ರಿಯಿಸುವುದಿಲ್ಲ ಎಂದು ಚೀನಾ ಹೇಳಿದೆ.
ಅಮೆರಿಕ ವಿಧಿಸಿರುವ ಅಸಹಜ ಸುಂಕಗಳು ಅಂತರರಾಷ್ಟ್ರೀಯ ಆರ್ಥಿಕ ಮತ್ತು ವ್ಯಾಪಾರ ನಿಯಮಗಳನ್ನು ಗಂಭೀರವಾಗಿ ಉಲ್ಲಂಘಿಸುತ್ತವೆ ಎಂದು ಚೀನಾ ಹೇಳಿದೆ. ಇದು ಒತ್ತಡ ಮತ್ತು ಬೆದರಿಕೆಯ ಸಂಪೂರ್ಣ ಏಕಪಕ್ಷೀಯ ನೀತಿಯಾಗಿದೆ.
ಚೀನಾ ಯಾರಿಗೂ ಹೆದರುವುದಿಲ್ಲ ಎಂದ ಕ್ಸಿ ಜಿನ್‌ಪಿಂಗ್: ಅಮೆರಿಕದೊಂದಿಗಿನ ಹೆಚ್ಚುತ್ತಿರುವ ಸುಂಕ ವಿವಾದದ ಮಧ್ಯೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತಮ್ಮ ಮೊದಲ ಹೇಳಿಕೆ ನೀಡಿದ್ದಾರೆ. ಚೀನಾ ಯಾರಿಗೂ ಹೆದರುವುದಿಲ್ಲ ಎಂದು ಅವರು ಹೇಳಿದರು. ಕಳೆದ 70 ವರ್ಷಗಳಲ್ಲಿ ಚೀನಾದ ಅಭಿವೃದ್ಧಿಯು ಕಠಿಣ ಪರಿಶ್ರಮ ಮತ್ತು ಸ್ವಾವಲಂಬನೆಯ ಫಲಿತಾಂಶವಾಗಿದೆ ಎಂದಿದ್ದಾರೆ.
ಚೀನಾ ಎಂದಿಗೂ ಇತರರ ದಾನವನ್ನು ಅವಲಂಬಿಸಿಲ್ಲ. ಯಾರೊಬ್ಬರ ಬಲವಂತಕ್ಕೂ ಅದು ಎಂದಿಗೂ ಹೆದರುವುದಿಲ್ಲ. ಜಗತ್ತು ಎಷ್ಟೇ ಬದಲಾದರೂ, ಚೀನಾ ತೊಂದರೆಗೊಳಗಾಗುವುದಿಲ್ಲ.
ಇದರಲ್ಲಿ ಯಾರಿಗೂ ಗೆಲುವು ಸಿಗೋದಿಲ್ಲ: ವ್ಯಾಪಾರ ಯುದ್ಧದಲ್ಲಿ ಯಾರೂ ವಿಜೇತರಲ್ಲ ಎಂದು ಜಿನ್‌ಪಿಂಗ್ ಹೇಳಿದರು. ಪ್ರಪಂಚದ ವಿರುದ್ಧ ಹೋಗುವುದು ಎಂದರೆ ನಿಮ್ಮ ವಿರುದ್ಧವೇ ಹೋಗುವುದು ಎಂದರ್ಥ. ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವರೊಂದಿಗಿನ ಸಭೆಯಲ್ಲಿ ಜಿನ್‌ಪಿಂಗ್ ಈ ಮಾತು ಹೇಳಿದ್ದಾರೆ. ಸ್ಯಾಂಚೆಜ್ ಶುಕ್ರವಾರ ಚೀನಾಕ್ಕೆ ದ್ವಿಪಕ್ಷೀಯ ಭೇಟಿಗಾಗಿ ಆಗಮಿಸಿದ್ದಾರೆ.
ಟ್ರಂಪ್ ಸುಂಕಗಳನ್ನು ಘೋಷಿಸಿದ ನಂತರ ಚೀನಾಕ್ಕೆ ಭೇಟಿ ನೀಡಿದ ಮೊದಲ ಯುರೋಪಿಯನ್ ನಾಯಕ ಸ್ಯಾಂಚೆಜ್. ಕಳೆದ 2 ವರ್ಷಗಳಲ್ಲಿ ಅವರು ಮೂರು ಬಾರಿ ಚೀನಾಕ್ಕೆ ಭೇಟಿ ನೀಡಿದ್ದಾರೆ. ಸುಂಕಗಳ ಬಗ್ಗೆ ಟ್ರಂಪ್ ಅವರನ್ನು ಸ್ಯಾಂಚೆಜ್ ಟೀಕಿಸಿದ್ದರು. ಏಪ್ರಿಲ್ 8 ರಂದು ಘೋಷಣೆ ಮಾಡಿದ ಟ್ರಂಪ್ ಅವರ ಸುಂಕಗಳು ಯುರೋಪ್ ಅನ್ನು ಹೊಸ ಮಾರುಕಟ್ಟೆಗಳನ್ನು ಹುಡುಕುವಂತೆ ಒತ್ತಾಯಿಸುತ್ತದೆ ಎಂದು ಹೇಳಿದರು. ಇದಲ್ಲದೆ, ಯುರೋಪಿಯನ್ ರಾಷ್ಟ್ರಗಳು ಮತ್ತು ಚೀನಾ ಎರಡೂ ತಮ್ಮ ಸಂಬಂಧಗಳನ್ನು ಸುಧಾರಿಸುವ ಬಗ್ಗೆ ಪರಿಗಣಿಸಿವೆ ಎಂದಿದ್ದಾರೆ.
ಸುಂಕದ ಟೈಮ್‌ಲೈನ್: ಯುಎಸ್ vs ಚೀನಾ
ಚೀನಾದ ಮೇಲೆ 125% ಅಲ್ಲ, 145% ಸುಂಕ: ಅಮೆರಿಕ ಚೀನಾದ ಮೇಲೆ 125% ಅಲ್ಲ, 145% ಸುಂಕ ವಿಧಿಸಿದೆ. ಶ್ವೇತಭವನ ಇದನ್ನು ಸ್ಪಷ್ಟಪಡಿಸಿದೆ. ಟ್ರಂಪ್ ಬುಧವಾರ ಚೀನಾದ ಮೇಲೆ 125% ಸುಂಕವನ್ನು ಘೋಷಿಸಿದ್ದರು. ಇದರ ನಂತರ, ಗುರುವಾರ, ಶ್ವೇತಭವನವು 20% ಫೆಂಟನಿಲ್ ಸುಂಕವನ್ನು ಸಹ ಇದಕ್ಕೆ ಸೇರಿಸಲಾಗಿದೆ ಎಂದು ಹೇಳಿದೆ, ಇದು ಮಾರ್ಚ್ 2025 ರಿಂದ ಜಾರಿಗೆ ಬಂದಿದೆ.
ಚೀನಾಗೆ ದೊಡ್ಡಣ್ಣನ 125% ಸುಂಕ ಶಾಕ್: ಭಾರತಕ್ಕೆ ರಿಲೀಫ್?
ಫೆಂಟನಿಲ್ ಮಾದಕವಸ್ತು ಕಳ್ಳಸಾಗಣೆಯಲ್ಲಿ ಚೀನಾದ ಪಾತ್ರಕ್ಕಾಗಿ ಟ್ರಂಪ್ ಮಾರ್ಚ್ 4 ರಂದು 20% ಸುಂಕವನ್ನು ವಿಧಿಸಿದರು. ಇದನ್ನು ಇಲ್ಲಿಯವರೆಗೆ ಪ್ರತ್ಯೇಕವಾಗಿ ಎಣಿಸಲಾಗುತ್ತಿತ್ತು. ಶ್ವೇತಭವನದ ಪ್ರಕಾರ, ಚೀನಾ 125% ಸುಂಕ, 20% ಫೆಂಟನಿಲ್ ಸುಂಕವನ್ನು ಹೊಂದಿದೆ. ಇದರಲ್ಲಿ 1% ವಿವಿಧ ಹೊಂದಾಣಿಕೆಯೂ ಸೇರಿದೆ. ವಿವಿಧ ಹೊಂದಾಣಿಕೆಯನ್ನು ಏಕೆ ವಿಧಿಸಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಚೀನಾ ಮೇಲೆ ಅಮೆರಿಕದ 90 ದಿನ ತೆರಿಗೆ ತಡೆ ಏಕಿಲ್ಲ ? ತಂತ್ರಗಾರಿಕೆ ತೆರಿಗೆ ಏರಿಕೆ ಹಿಂದೆ ವ್ಯೂಹಾತ್ಮಕ ಕಾರಣ
ಸರಳವಾಗಿ ಹೇಳುವುದಾದರೆ, ಚೀನಾದ ಮೇಲೆ 145% ಸುಂಕ ವಿಧಿಸುವುದರಿಂದ ಚೀನಾದಲ್ಲಿ ತಯಾರಾದ $100 ಉತ್ಪನ್ನವು ಈಗ US ತಲುಪಿದಾಗ $245 ವೆಚ್ಚವಾಗುತ್ತದೆ. US ನಲ್ಲಿ ಚೀನಾದ ಉತ್ಪನ್ನಗಳು ಹೆಚ್ಚು ದುಬಾರಿಯಾಗುವುದರಿಂದ ಅವುಗಳ ಮಾರಾಟ ಕಡಿಮೆಯಾಗುತ್ತದೆ. ಚೀನಾ ಕೂಡ US ಮೇಲೆ ಪ್ರತೀಕಾರದ ಭಾಗವಾಗಿ ಶೇ. 125ರಷ್ಟು ಸುಂಕವನ್ನು ವಿಧಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.