
ಸಾವಿರಾರು ಕೋಟಿ ರೂಪಾಯಿಗಳ ಸಾಮ್ರಾಜ್ಯ ಕಟ್ಟಿ, ಹಲವರಿಗೆ ನೆರವಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜಿ.ರಾಯ್ ಅವರು ತಮ್ಮ ಪ್ರಾಣವನ್ನೇ ತೆಗೆದುಕೊಂಡಿರುವುದನ್ನು ಅವರನ್ನು ಬಲ್ಲ ಯಾರಿಂದಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ನಿರಂತರ ಐಟಿ ದಾಳಿಗೆ ಬೇಸತ್ತು ಅವರು ಸಾವಿನ ಹಾದಿ ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಇದಕ್ಕೆ ನಿಖರವಾದ ಕಾರಣ ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಇವರ ಸಾವಿನ ಸುತ್ತ ಇದಾಗಲೇ ವಿಧ ವಿಧ ರೀತಿಯ ವಿಷಯಗಳೂ ಮೆಲುಕು ಹಾಕುತ್ತಿವೆ. ಆತ್ಮವಿಶ್ವಾಸವೇ ಬದುಕಿಗೆ ಸ್ಫೂರ್ತಿ ಎಂದುಕೊಂಡು ತಮ್ಮ ಉದ್ಯಮಕ್ಕೂ ಕಾನ್ಫಿಡೆಂಟ್ ಎಂದೇ ಹೆಸರು ಇರಿಸಿದ್ದ ರಾಯ್ ಅವರ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ.
ಬಿಗ್ಬಾಸ್ ಸೇರಿದಂತೆ ಕೆಲವು ರಿಯಾಲಿಟಿ ಷೋಗಳಲ್ಲಿನ ವಿನ್ನರ್, ರನ್ನರ್ಸ್ ಅಪ್ಗೆ ಸ್ಪಾನ್ಸರ್ ಮಾಡಿದ್ದರು ರಾಯ್ ಅವರು. ಬಿಗ್ಬಾಸ್ನ 11ನೇ ಸೀಸನ್ನಲ್ಲಿ ಕಿಚ್ಚ ಸುದೀಪ್ ಅವರು ವೇದಿಕೆ ಮೇಲೆ ರಾಯ್ ಅವರನ್ನು ಬರಮಾಡಿಕೊಂಡು ಅವರನ್ನು ಹಾಡಿ ಹೊಗಳಿದ್ದರು. ಏಕೆಂದರೆ, ಆ ಸೀಸನ್ ವಿನ್ನರ್ಗೆ ನೀಡಬೇಕಿದ್ದ 50 ಲಕ್ಷ ರೂಪಾಯಿ ಪ್ರಾಯೋಜಕತ್ವ ಮಾಡಿದ್ದೇ ಸಿಜೆ ರಾಯ್. ಈ ಹಣವನ್ನು ಆ ಸೀಸನ್ನ ವಿನ್ನರ್ ಹನುಮಂತ ಲಮಾಣಿ ಪಡೆದುಕೊಂಡಿದ್ದರು. ಈ ರೀತಿಯಾಗಿ ರಿಯಾಲಿಟಿ ಷೋಗಳ ಮೂಲಕವೂ ಪರಿಚಯವಾಗಿದ್ದವರು ರಾಯ್. ಆದ್ದರಿಂದ ಇವರ ನಿಧನ ಸಿನಿಮಾ ಲೋಕಕ್ಕೂ ಬರಸಿಡಿಲಿನಂತೆ ಬಡಿದಿದೆ.
ಇದೀಗ ಬಿಗ್ಬಾಸ್ನ ಸ್ಪರ್ಧಿಯಾಗಿದ್ದ, ನಟಿ ಹರ್ಷಿಕಾ ಪೂಣಚ್ಚ ಅವರ ಪತಿ ಭುವನ್ ಪೊನ್ನಣ್ಣ ಅವರು ಭಾವುಕರಾಗಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಅವರು, ಸಾವಿನ ಬಗ್ಗೆ ನೋವು ತೋಡಿಕೊಳ್ಳುತ್ತಲೇ ಕರ್ಮವನ್ನು ಅನುಭವಿಸಲೇಬೇಕು ಎಂದು ನೊಂದು ನುಡಿದಿದ್ದಾರೆ.
ನಾವು ಪ್ರೀತಿಯಿಂದ ಕರೆಯುತ್ತಿದ್ದ ಡಾ. ರಾಯ್ ಅವರ ಹಠಾತ್ ನಿಧನದ ಸುದ್ದಿ ಕೇಳಿ ತುಂಬಾ ದುಃಖವಾಯಿತು ಮತ್ತು ಆಘಾತವಾಯಿತು. ಅವರು ಯಾವಾಗಲೂ ಜೀವನ ಮತ್ತು ಮಹತ್ವಾಕಾಂಕ್ಷೆಗಳಿಂದ ತುಂಬಿದ್ದರು ಎಂದಿದ್ದಾರೆ. ಹಣ ಮತ್ತು ಇತರ ಭೌತಿಕ ಲಾಭಗಳ ವಿಷಯಕ್ಕೆ ಬಂದಾಗ ಮಾನವೀಯತೆ ಸತ್ತಿದೆ ಎಂದು ನನಗೆ ಕೆಲವೊಮ್ಮೆ ಅನಿಸುತ್ತದೆ. ಕಾರಣ ಯಾರೇ ಆಗಿರಲಿ ಅವರು ಕರ್ಮವನ್ನು ಎದುರಿಸಬೇಕಾಗುತ್ತದೆ. ಓಂ ಶಾಂತಿ ಡಾ. ರಾಯ್. ಎಲ್ಲದಕ್ಕೂ ಧನ್ಯವಾದಗಳು. ನಿಮ್ಮನ್ನು ಎಂದಿಗೂ ಸ್ಮರಿಸುತ್ತೇವೆ ಎಂದು ಬರೆದಿದ್ದಾರೆ. ಅದರೊಂದಿಗೆ ಗುಲಾಬಿ ಹಾಗೂ ಕೈ ಮುಗಿಯುವ ಸಿಂಬಲ್ ಹಾಕಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.