ಕೇಂದ್ರ ಬಜೆಟ್‌ ದಿನವೂ ಪಾತಾಳಕ್ಕೆ ಕುಸಿದ ಅದಾನಿ ಗ್ರೂಪ್‌ ಷೇರು ಮೌಲ್ಯ: ಶೇ. 26ರಷ್ಟು ಕುಸಿದ ಅದಾನಿ ಎಂಟರ್‌ಪ್ರೈಸಸ್

By BK AshwinFirst Published Feb 1, 2023, 10:28 PM IST
Highlights

ಅದಾನಿ ಗ್ರೂಪ್‌ ಒಡೆತನದ ಹಲವು ಸಂಸ್ಥೆಗಳ ಷೇರು ಮೌಲ್ಯವಂತೂ ಸಿಕ್ಕಾಪಟ್ಟೆ ಕುಸಿತ ಕಂಡಿದೆ. ಅದಾನಿ ಗ್ರೂಪ್‌ನ ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್ ಶೇಕಡಾ 26.70 ರಷ್ಟು ಕುಸಿದಿದೆ.

ನವದೆಹಲಿ (ಫೆಬ್ರವರಿ 1, 2023): ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ಬುಧವಾರವೂ ಭಾರಿ ಕುಸಿತವನ್ನು ಎದುರಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2023 ಅನ್ನು ಮಂಡಿಸಿದ ನಂತರ ಬೆಂಚ್‌ಮಾರ್ಕ್ ಸ್ಟಾಕ್ ಸೂಚ್ಯಂಕಗಳಲ್ಲಿ ಏರಿಳಿತವನ್ನು ಉಂಟುಮಾಡಿತು. ಆದರೆ, ಅದಾನಿ ಗ್ರೂಪ್‌ ಒಡೆತನದ ಹಲವು ಸಂಸ್ಥೆಗಳ ಷೇರು ಮೌಲ್ಯವಂತೂ ಸಿಕ್ಕಾಪಟ್ಟೆ ಕುಸಿತ ಕಂಡಿದೆ. ಅದಾನಿ ಗ್ರೂಪ್‌ನ ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್ ಶೇಕಡಾ 26.70 ರಷ್ಟು ಕುಸಿದಿದೆ. ಈ ಹಿನ್ನೆಲೆ, ಕಂಪನಿಯ 20,000 ಕೋಟಿ ರೂ. ಮೌಲ್ಯದ ಎಫ್‌ಪಿಒನಲ್ಲಿ ಹಲವು ಹೂಡಿಕೆದಾರರು ಸಬ್‌ಸ್ಕ್ರೈಬ್‌ ಮಾಡಿಕೊಂಡಿದ್ದು, ಅದು ಯಶಸ್ವಿಯಾದ ಒಂದು ದಿನದ ನಂತರ ಷೇರುಪೇಟೆಯಲ್ಲಿ ಭೀತಿ ಉಂಟುಮಾಡಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ, ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ 300 ಪಾಯಿಂಟ್‌ಗಳಿಗಿಂತ ಹೆಚ್ಚು ಕುಸಿದಿದ್ದರೆ, ಎನ್‌ಎಸ್‌ಇ ನಿಫ್ಟಿ 50 ಶೇಕಡಾ 1.2 ಕ್ಕಿಂತ ಹೆಚ್ಚು ಕುಸಿತ ಕಂಡಿದೆ.

ಆದರೂ, ಬಿಎಸ್‌ಇ ಹಾಗೂ ಎನ್‌ಎಸ್‌ಇ ಸ್ವಲ್ಪ ಸಮಯದ ನಂತರ ಏರಿಕೆಯ ವೇಗ ಪಡೆದುಕೊಂಡಿದೆ. ಈ ಹಿನ್ನೆಲೆ, ಅದಾನಿ ಗ್ರೂಪ್ ಷೇರುಗಳ ಕುಸಿತದಿಂದಾಗಿ ಮಾರುಕಟ್ಟೆಗಳು ಭಾರಿ ಏರಿಳಿತಕ್ಕೆ ಸಾಕ್ಷಿಯಾಗುತ್ತಿವೆ ಎಂದೂ ಇದು ಸೂಚಿಸುತ್ತದೆ. ಅದಾನಿ ಗ್ರೂಪ್‌ನ 10 ಲಿಸ್ಟ್‌ ಆಗಿರುವ ಕಂಪನಿಗಳ ಕುಸಿತವು ಷೇರು ಮಾರುಕಟ್ಟೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಅದಾನಿ ಸಮೂಹದ 10 ಷೇರುಗಳ ಪೈಕಿ ನಾಲ್ಕು ಷೇರುಗಳು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ತೀವ್ರ ಕುಸಿತ ಕಂಡಿದ್ದು, ಇದು ಒಟ್ಟು ಮಾರುಕಟ್ಟೆ ಬಂಡವಾಳೀಕರಣದ ಭಾರಿ ಸವೆತಕ್ಕೆ ಕಾರಣವಾಗಿದೆ.

ಇದನ್ನು ಓದಿ: 22 ರಾಜ್ಯಗಳಲ್ಲಿ ಬ್ಯುಸಿನೆಸ್‌ ಮಾಡ್ತೇವೆ: ಯಾವ ಪಕ್ಷದಿಂದಲೂ ಸಮಸ್ಯೆ ಇಲ್ಲ: ಗೌತಮ್ ಅದಾನಿ

ಅದಾನಿ ಟೋಟಲ್ ಗ್ಯಾಸ್ (ಶೇ. 10 ರಷ್ಟು ಇಳಿಕೆ), ಅದಾನಿ ಪವರ್ (ಶೇ 4.98 ರಷ್ಟು ಇಳಿಕೆ) ಮತ್ತು ಅದಾನಿ ವಿಲ್ಮರ್ (ಶೇ. 5 ರಷ್ಟು ಇಳಿಕೆ) ಮತ್ತು ಎನ್‌ಡಿಟಿವಿ (ಶೇ. 5 ರಷ್ಟು ಇಳಿಕೆ) ಷೇರುಗಳು ಸಹ ಇಳಿಕೆ ಕಂಡಿವೆ. ಇನ್ನು, ಅದಾನಿ ಗ್ರೂಪ್ ಷೇರುಗಳ ಮೌಲ್ಯವರ್ಧನೆಯಲ್ಲಿನ ತೀವ್ರ ಕುಸಿತವು ಭಾರತೀಯ ಷೇರು ಮಾರುಕಟ್ಟೆಗಳ ಮೇಲು ತೀವ್ರ ಪರಿಣಾಮ ಬೀರಿದೆ. 
ಅಲ್ಲದೆ, ವೈಯಕ್ತಿಕವಾಗಿಯೂ ಗೌತಮ್‌ ಅದಾನಿ ಜಾಗತಿಕ ನಂ. 10 ಶ್ರೀಮಂತ ಪಟ್ಟಿಯಿಂದ ಹೊರಕ್ಕೆ ಹೋಗಿದ್ದು, ಅಲ್ಲದೆ, ಶ್ರೀಮಂತ ಭಾರತೀಯ ಎಂಬ ಸ್ಥಾನವನ್ನೂ ಅವರು ಕಳೆದುಕೊಂಡಿದ್ದಾರೆ. ರಿಲಯನ್ಸ್‌ ಸಮೂಹ ಸಂಸ್ಥೆಗಳ ಮುಖೇಶ್‌ ಅಂಬಾನಿ ಮತ್ತೆ ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ ನಂ. 1 ಸ್ಥಾನವನ್ನು ಪಡೆದುಕೊಂಡಿದ್ದಾರೆ. 

ಇದನ್ನೂ ಓದಿ: ವಿಶ್ವದ 10 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದ ಗೌತಮ್‌ ಅದಾನಿ!

click me!