ಕೇಂದ್ರ ಬಜೆಟ್ 2023-24: ರಕ್ಷಣಾ ವಲಯಕ್ಕೆ ಹೆಚ್ಚಿದ ಕೊಡುಗೆ; ಆಧುನೀಕರಣಕ್ಕೆ ಒತ್ತು..!

By Suvarna NewsFirst Published Feb 1, 2023, 9:44 PM IST
Highlights

ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೆ ನೀಡಲಾದ ಕೊಡುಗೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ಈ ಬಜೆಟ್ ಸೇನೆಯಲ್ಲಿ ಅಭಿವೃದ್ಧಿ ತರಲಿದೆ ಎಂದು ಆಶಿಸಿದ್ದಾರೆ.

(ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ನವದೆಹಲಿ (ಫೆಬ್ರವರಿ 1, 2023): ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು 2023-24ನೇ ಸಾಲಿನ ಕೇಂದ್ರ ಆಯವ್ಯಯ ಮಂಡಿಸಿದ್ದಾರೆ. ನಿರೀಕ್ಷೆಯಂತೆಯೇ ರಕ್ಷಣಾ ಸಚಿವಾಲಯಕ್ಕೆ ಬಜೆಟ್‌ನಲ್ಲಿ ಸಿಂಹಪಾಲು ನೀಡಲಾಗಿದೆ. 2022-23ನೇ ಸಾಲಿನಲ್ಲಿ ರಕ್ಷಣೆಗೆ 5.25 ಲಕ್ಷ ಕೋಟಿ ರೂಪಾಯಿ ನೀಡಲಾಗಿತ್ತು. ಈ ಬಜೆಟ್‌ನಲ್ಲಿ 5.94 ಲಕ್ಷ ಕೋಟಿ ರೂಪಾಯಿ ರಕ್ಷಣೆಗೆ ಮೀಸಲಿಡಲಾಗಿದ್ದು, 12.95% ಹೆಚ್ಚಳವಾಗಿದೆ. ರಕ್ಷಣಾ ಬಜೆಟ್‌ನ ಮೊತ್ತವನ್ನು ಆಯುಧಗಳ ಅಭಿವೃದ್ಧಿಗೆ, ಹೊಸ ಆಯುಧಗಳ ಖರೀದಿಗೆ ವೆಚ್ಚ ಮಾಡಲಾಗುತ್ತದೆ. ಅದರಲ್ಲಿ ನೂತನ ಯುದ್ಧ ವಿಮಾನಗಳು, ಮಿಲಿಟರಿ ಕಟ್ಟಡಗಳು, ನಿರ್ಮಾಣಗಳು, ಸಬ್‌ಮರೀನ್‌ಗಳು, ಟ್ಯಾಂಕ್‌ಗಳೂ ಸೇರಿರುತ್ತವೆ. ಈ ಬಾರಿಯ ಬಜೆಟ್‌ನಲ್ಲಿ ರಕ್ಷಣಾ ಬಂಡವಾಳವನ್ನು 10,000 ಕೋಟಿ ಹೆಚ್ಚಿಸಲಾಗಿದ್ದು, 1.62 ಲಕ್ಷ ಕೋಟಿ ಒದಗಿಸಲಾಗುತ್ತದೆ.

ಸೇನಾಪಡೆಗಳ ಆಧುನೀಕರಣದ ಬಜೆಟ್ ಸಹ 1.52 ಲಕ್ಷ ಕೋಟಿಯಿಂದ 1.62 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಳ ಕಂಡಿದೆ. ಅದರಲ್ಲಿ ದೇಶೀಯ ಉದ್ಯಮಗಳಿಂದ ಆಯುಧ ಖರೀದಿಸಲು 68% ಮೊತ್ತ ಮೀಸಲಿಡಲಾಗಿದೆ. ಇದು ಕಳೆದ ಬಾರಿಯ 58% ಕ್ಕಿಂತ 10% ಹೆಚ್ಚಾಗಿದ್ದು, ದೇಶೀಯ ಆಯುಧ ನಿರ್ಮಾಣ ಉದ್ಯಮಕ್ಕೆ ಉತ್ತೇಜನ ನೀಡುತ್ತದೆ. ಕೇಂದ್ರ ಸರ್ಕಾರದ ಮಹತ್ವದ ಆತ್ಮನಿರ್ಭರ ಭಾರತ ಯೋಜನೆಗೂ, ಮೇಕ್ ಇನ್ ಇಂಡಿಯಾ ಯೋಜನೆಗೂ ಇದು ಪೂರಕವಾಗಿದೆ. ಸೇನಾ ಆಧುನೀಕರಣದ ಬಜೆಟ್‌ನಲ್ಲಿ ಕೇವಲ 6.5% ಮಾತ್ರವೇ ಹೆಚ್ಚಳವಾಗಿದೆ.

ಇದನ್ನು ಓದಿ: Union Budget Highlights ಕೇಂದ್ರ ಬಜೆಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ ಒಢಿಶಾ ಸಿಎಂ!

ರಕ್ಷಣಾ ಬಜೆಟ್‌ನಲ್ಲಿ ಒಟ್ಟು 2.70 ಲಕ್ಷ ಕೋಟಿ ರೂಪಾಯಿ ಸೈನಿಕರ ಸಂಬಳ, ಮಿಲಿಟರಿ ಕೇಂದ್ರಗಳ ನಿರ್ವಹಣೆ ಇತ್ಯಾದಿಗಳಿಗೆ ವೆಚ್ಚ ಮಾಡಲಾಗುತ್ತದೆ. ಇದೇ ಉದ್ದೇಶಕ್ಕಾಗಿ 2022-23ರಲ್ಲಿ 2.39 ಲಕ್ಷ ಕೋಟಿ ರೂಪಾಯಿ ಒದಗಿಸಲಾಗಿತ್ತು. ಇನ್ನು ಈ ಬಾರಿಯ ಬಜೆಟ್‌ನಲ್ಲಿ 1.38 ಲಕ್ಷ ಕೋಟಿ ರೂಪಾಯಿ ನಿವೃತ್ತ ಸೈನಿಕರ ಪಿಂಚಣಿಗಾಗಿ ಮೀಸಲಿಡಲಾಗಿದೆ. ಇನ್ನುಳಿದ ಮೊತ್ತದಲ್ಲಿ ರಕ್ಷಣಾ ಉಪಕರಣಗಳ ಖರೀದಿಗೆ ರಕ್ಷಣಾ ಇಲಾಖೆ ಮುಂದಾಗಿದೆ.

ಭಾರತೀಯ ವಾಯುಪಡೆ ಮುಂದಿನ 4.5ನೇ ತಲೆಮಾರಿನ ಯುದ್ಧ ವಿಮಾನಗಳ ಖರೀದಿಗೆ ಯೋಜಿಸುತ್ತಿದೆ. ಅದರೊಡನೆ ವಾಯುಪಡೆ ದೇಶೀಯವಾಗಿ ನಿರ್ಮಿಸುವ ಯುದ್ಧ ವಿಮಾನಗಳನ್ನೂ ಖರೀದಿಸಲಿದೆ. ನೌಕಾಪಡೆಯೂ ಫ್ರಾನ್ಸ್‌ನಿಂದ ಯುದ್ಧ ವಿಮಾನಗಳನ್ನು ಖರೀದಿಸುವ ಯೋಜನೆ ಹಾಕಿಕೊಂಡಿದೆ. ಆದರೆ ಆ ಯೋಜನೆ ಇನ್ನೂ ಅಂತಿಮಗೊಳ್ಳದ ಕಾರಣ ಈ ವರ್ಷ ಖರೀದಿ ನಡೆಯುವುದು ಅನುಮಾನವಾಗಿದೆ.

ಇದನ್ನೂ ಓದಿ: Union Budget 2023: ಇಂದಿನ ಬಜೆಟ್‌ನಿಂದ ಯಾರಿಗೆ ಲಾಭ..? ಯಾರಿಗೆ ನಷ್ಟ..?

ಕಳೆದ ವರ್ಷ ನೌಕಾಪಡೆ ತನ್ನ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್‌ಗಾಗಿ 26 ಫ್ರೆಂಚ್ ನಿರ್ಮಾಣದ ರಫೇಲ್ ಎಂ ಯುದ್ಧ ವಿಮಾನ ಅಮೆರಿಕಾದ ಎಫ್/ಎ -18 ಸೂಪರ್ ಹಾರ್ನೇಟ್ ಬದಲಿಗೆ ಆಯ್ಕೆ ಮಾಡಿಕೊಂಡಿತ್ತು. ಐಎನ್ಎಸ್ ವಿಕ್ರಾಂತ್ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯ ನೌಕೆಯೊಡನೆ ಕಾರ್ಯ ನಿರ್ವಹಿಸಲಿದೆ.

ಭಾರತೀಯ ವಾಯುಪಡೆ ಈಗಾಗಲೇ ಎರಡು ಸ್ಕ್ವಾಡ್ರನ್ ರಫೇಲ್ ಯುದ್ಧ ವಿಮಾನಗಳನ್ನು ಪಡೆದುಕೊಂಡಿದ್ದು, ನೌಕಾಪಡೆಯೂ ರಫೇಲ್ ವಿಮಾನಗಳನ್ನೇ ಕೊಂಡರೆ, ನಿರ್ವಹಣೆ ಸುಲಭವಾಗಲಿದೆ. ನೌಕಾಪಡೆ ಪ್ರಾಜೆಕ್ಟ್ 75 ಇಂಡಿಯಾ ಯೋಜನೆಯಡಿ ಜಲಾಂತರ್ಗಾಮಿ ನೌಕೆಗಳ ಖರೀದಿಗೆ ಗಮನ ಹರಿಸುತ್ತಿದೆ. ಆದರೆ ಈ ಖರೀದಿ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಇನ್ನು ಭಾರತೀಯ ಭೂಸೇನೆ ಲೈಟ್ ಟ್ಯಾಂಕ್‌ಗಳ ಮತ್ತು ಆರ್ಟಿಲರಿ ಗನ್‌ಗಳ ಖರೀದಿಗೆ ಗಮನ ಹರಿಸಲಿದೆ. ಇವುಗಳನ್ನು ಲಡಾಖ್ ಗಡಿಯಲ್ಲಿ ನಿಯೋಜಿಸುವ ಉದ್ದೇಶವನ್ನು ಸೇನೆ ಹೊಂದಿದೆ.

ಇದನ್ನೂ ಓದಿ; Union Budget 2023: ಕೃಷಿಗೆ ಭರಪೂರ ಕೊಡುಗೆ; ನಿರ್ಮಲಾ ಬಜೆಟ್‌ನಿಂದ ರೈತರಿಗೆ ಸಿಗಲಿದೆ ಈ ಪ್ರಯೋಜನಗಳು..!

ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೆ ನೀಡಲಾದ ಕೊಡುಗೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ಈ ಬಜೆಟ್ ಸೇನೆಯಲ್ಲಿ ಅಭಿವೃದ್ಧಿ ತರಲಿದೆ ಎಂದು ಆಶಿಸಿದ್ದಾರೆ. ಅವರು ಇದರಿಂದ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಭಾರತ ಸರ್ಕಾರ ರಕ್ಷಣಾ ರಫ್ತನ್ನು 6 ಪಟ್ಟು ಹೆಚ್ಚಿಸಿರುವುದಕ್ಕೆ ಕೇಂದ್ರ ಸರ್ಕಾರವನ್ನು ಶ್ಲಾಘಿಸಿದ್ದಾರೆ. ಒಟ್ಟಾರೆ ಬಜೆಟ್ ರಕ್ಷಣಾ ವಲಯದಲ್ಲಿ ಧನಾತ್ಮಕವಾಗಿ ಕಂಡುಬರುತ್ತಿದೆ. ಆದರೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ವಲಯಕ್ಕಾಗಿ ಹೆಚ್ಚಿನ ಮೊತ್ತವನ್ನು ಮೀಸಲಿಡುವ ಅಗತ್ಯವಿದೆ.

click me!