
ನವದೆಹಲಿ (ಮೇ.28): ಬಹುನಿರೀಕ್ಷಿತ ಜಿಎಸ್‌ಟಿ ಮಂಡಳಿ ಸಭೆ ಶುಕ್ರವಾರ ನಿಗದಿಯಾಗಿದೆ. ಈ ಸಭೆಯಲ್ಲಿ ಕೊರೋನಾ ಸೋಂಕಿತರಿಗೆ ಕಡಿಮೆ ದರದಲ್ಲಿ ಕೋವಿಡ್ ಔಷಧಗಳು, ಲಸಿಕೆಗಳು ಮತ್ತು ಇತರೆ ವೈದ್ಯಕೀಯ ಸಲಕರಣೆಗಳು ಲಭ್ಯವಾಗುವಂತೆ ಕೇಂದ್ರ ಸರ್ಕಾರ ಕ್ರಮ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸದಸ್ಯರಾಗಿರುವ ಸಮಿತಿ ಸಭೆಯು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಆಯೋಜನೆಗೊಂಡಿದೆ.
ಕೋವಿಡ್ ಲಸಿಕೆ, ಚಿಕಿತ್ಸಾ ಉಪಕರಣಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಕಾರಣ ಅವುಗಳ ಮೇಲಿನ ಸುಂಕ ಇಳಿಸಿ ಜನರಿಗೆ ನೆರವಾಗಬೇಕು ಎಂದು ಬಹುತೇಕ ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಮನವಿ ಮಾಡಿವೆ. ಈ ಹಿನ್ನೆಲೆಯಲ್ಲಿ ಈ ಸಭೆಯಲ್ಲಿ ಕೋವಿಡ್ ಔಷಧಗಳು, ಲಸಿಕೆಗಳು ಮತ್ತು ಇತರೆ ವೈದ್ಯಕೀಯ ಸಲಕರಣೆಗಳ ಮೇಲಿನ ತೆರಿಗೆ ಇಳಿಸುವ ಬಗ್ಗೆ ತೀರ್ಮಾನ ಮಾಡುವ ನಿರೀಕ್ಷೆ ಇದೆ.
ನಿರ್ಲಕ್ಷ್ಯದ ಪರಮಾವಧಿ: ಕೊರತೆ ಇದ್ದರೂ ಲಸಿಕೆ ಹಾಳು ಮಾಡುತ್ತಿವೆ ರಾಜ್ಯಗಳು! .
ಜೊತೆಗೆ ಜಿಎಸ್‌ಟಿ ಜಾರಿಯಿಂದ ರಾಜ್ಯಗಳಿಗೆ ಆಗುತ್ತಿರುವ ನಷ್ಟವನ್ನು ಕೇಂದ್ರ ಸರ್ಕಾರವೇ ಭರಿಸಿಕೊಡಬೇಕು. ಜೊತೆಗೆ 1,000 ರು. ದರದ ಒಳಗಿನ ಪಾದರಕ್ಷೆ, ಫ್ಯಾಬ್ರಿಕ್ಸ್ ಮತ್ತು ಸಿದ್ಧ ಉಡುಪುಗಳ ಮೇಲಿನ ಜಿಎಸ್ಟಿಯನ್ನು ಶೇ.5ರಿಂದ 12ಕ್ಕೆ ಏರಿಸುವ ಮತ್ತು ಉಲ್ಲನ್ನಿಂದ ನೆಯ್ಯಲಾಗುವ ಬಟ್ಟೆಗಳ ಮೇಲಿನ ಜಿಎಸ್ಟಿಯನ್ನು ಶೇ.18ರಿಂದ 12ಕ್ಕೆ ಇಳಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ 8 ತಿಂಗಳಲ್ಲಿ ನಡೆಯುತ್ತಿರುವ ಮೊದಲ ಜಿಎಸ್‌ಟಿ ಕೌನ್ಸಿಲ್ ಸಭೆ ಇದಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.