12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಆಗಸ್ಟ್ 29 ರಿಂದ ಆರಂಭವಾಗಲಿದೆ. ಪಂದ್ಯಗಳ ವೇಳಾಪಟ್ಟಿ ಮತ್ತು ಸ್ಥಳವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಕಳೆದ ಬಾರಿಗಿಂತ ಭಿನ್ನವಾಗಿ ಈ ಬಾರಿ ಹೆಚ್ಚಿನ ನಗರಗಳಲ್ಲಿ ಪಂದ್ಯಗಳು ನಡೆಯುವ ನಿರೀಕ್ಷೆಯಿದೆ.

ಮುಂಬೈ: 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಪಂದ್ಯಗಳು ಆ.29ಕ್ಕೆ ಆರಂಭಗೊಳ್ಳಲಿವೆ ಎಂದು ಲೀಗ್‌ನ ಆಯೋಜಕರಾದ ಮಶಾಲ್‌ ಸ್ಪೋರ್ಟ್ಸ್‌ ಸಂಸ್ಥೆಯು ಬುಧವಾರ ಮಾಹಿತಿ ನೀಡಿದ್ದಾರೆ. ಆದರೆ ಟೂರ್ನಿಯ ವೇಳಾಪಟ್ಟಿ ಹಾಗೂ ಪಂದ್ಯಗಳು ನಡೆಯುವ ಸ್ಥಳ ಘೋಷಣೆಯಾಗಿಲ್ಲ. ಅದನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಕಳೆದ ಬಾರಿ ಹೈದರಾಬಾದ್‌ ಸೇರಿದಂತೆ ಕೇವಲ 3 ನಗರಗಳಲ್ಲಿ ಪಂದ್ಯಗಳು ನಡೆದಿದ್ದವು. ಈ ಬಾರಿ ಮತ್ತೆ ಕ್ಯಾರವಾನ್‌ ಮಾದರಿಯಲ್ಲಿ ದೇಶದ ವಿವಿಧ ನಗರಗಳಲ್ಲಿ ಪಂದ್ಯಗಳು ಆಯೋಜನೆಗೊಳ್ಳುವ ನಿರೀಕ್ಷೆಯಿದ್ದು, ಬೆಂಗಳೂರು ಕೂಡಾ ಆತಿಥ್ಯ ವಹಿಸಬಹುದು ಎನ್ನಲಾಗುತ್ತಿದೆ. ಬಹು ನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ಆಟಗಾರರ ಹರಾಜು ಕಳೆದ ಮೇ 31 ಮತ್ತು ಜೂನ್ 1ರಂದು ಮುಂಬೈನಲ್ಲಿ ನಡೆದಿತ್ತು. ಒಟ್ಟು 10 ಆಟಗಾರರು ₹1 ಕೋಟಿಗೂ ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗಿದ್ದರು.

ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು ಮತ್ತು ಜಿಯೋಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಡುರಾಂಡ್‌ ಕಪ್‌ನಲ್ಲಿ ಎಸ್‌ಯುಎಫ್‌ಸಿ ಕಣಕ್ಕೆ

ಬೆಂಗಳೂರು: ಏಷ್ಯಾದ ಅತ್ಯಂತ ಹಳೆಯ ಫುಟ್ಬಾಲ್‌ ಪಂದ್ಯಾವಳಿ ಆಗಿರುವ ಡುರಾಂಡ್ ಕಪ್‌ನ 134ನೇ ಆವೃತ್ತಿಯಲ್ಲಿ ಬೆಂಗಳೂರಿನ ಸೌತ್‌ ಯುನೈಟೆಡ್‌ ಎಫ್‌ಸಿ (ಎಸ್‌ಯುಎಫ್‌ಸಿ) ತಂಡ ಪಾಲ್ಗೊಳ್ಳಲಿದೆ. ಟೂರ್ನಿಯು ಜು.23ರಿಂದ ಆ.27ರ ವರೆಗೂ ಭಾರತದ 5 ರಾಜ್ಯಗಳಲ್ಲಿ ನಡೆಯಲಿದೆ. ಎಸ್‌ಯುಎಫ್‌ಸಿ ತನ್ನ ಲೀಗ್‌ ಹಂತದ ಪಂದ್ಯಗಳನ್ನು ಕೋಲ್ಕತಾದಲ್ಲಿ ಆಡಲಿದೆ. ಜು.23ರಿಂದ ಈಸ್ಟ್‌ ಬೆಂಗಾಲ್‌ ಎಫ್‌ಸಿ, ಜು.27ಕ್ಕೆ ಇಂಡಿಯನ್‌ ಏರ್‌ ಫೋರ್ಸ್‌ ಫುಟ್ಬಾಲ್‌ ತಂಡ, ಜು.30ಕ್ಕೆ ನಾಮಧಾರಿ ಎಫ್‌ಸಿ ವಿರುದ್ಧ ಸೆಣಸಲಿದೆ.

ಇಂದಿನಿಂದ ಮಂಡ್ಯದಲ್ಲಿ ರಾಜ್ಯ ಬಾಸ್ಕೆಟ್‌ಬಾಲ್‌

ಮಂಡ್ಯ: ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆಯ ಸಹಭಾಗಿತ್ವದಲ್ಲಿ ಮಂಡ್ಯ ಜಿಲ್ಲಾ ಬಾಸ್ಕೆಟ್‌ಬಾಲ್‌ ಸಂಸ್ಥೆ ಆಯೋಜಿಸುವ ರಾಜ್ಯ ಮಟ್ಟದ ಆಹ್ವಾನಿತ ತಂಡಗಳ ಬಾಸ್ಕೆಟ್‌ಬಾಲ್‌ ಲೀಗ್‌ ಗುರುವಾರ ಆರಂಭಗೊಳ್ಳಲಿದೆ. 4 ದಿನಗಳ ಲೀಗ್‌ಗೆ ಎಂ.ವಿ. ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಪುರುಷರ ವಿಭಾಗದಲ್ಲಿ 9, ಮಹಿಳಾ ವಿಭಾಗದಲ್ಲಿ 6 ತಂಡಗಳು ಕಣಕ್ಕಿಳಿಯಲಿವೆ. ಜು.13ಕ್ಕೆ ಫೈನಲ್‌ ಪಂದ್ಯ ನಡೆಯಲಿದೆ.

ಕರ್ನಾಟಕ ಮಾಜಿ ಫುಟ್ಬಾಲ್‌ ಆಟಗಾರ ಸ್ಟೀಫನ್‌ ನಿಧನ

ಬೆಂಗಳೂರು: ರಾಷ್ಟ್ರಮಟ್ಟದ ವಿವಿಧ ಟೂರ್ನಿಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಹಿರಿಯ ಫುಟ್ಬಾಲ್‌ ಆಟಗಾರ, ಕೋಚ್‌ ಸ್ಟೀಫನ್(38) ಸೋಮವಾರ ನಿಧನರಾಗಿದ್ದಾರೆ. ಅವರು ಜಾಂಡೀಸ್‌ ರೋಗದಿಂದ ಬಳಲುತ್ತಿದ್ದರು. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ವಿದ್ಯಾರಣ್ಯಪುರ ಚಿತಾಗಾರದಲ್ಲಿ ಮಂಗಳವಾರ ಮಧ್ಯಾಹ್ನ ಅವರ ಅಂತ್ಯಕ್ರಿಯೆ ನೆರವೇರಿತು.