ಶಿವಮೊಗ್ಗದಿಂದ ಎರಡು ವಂದೇ ಭಾರತ್ ರೈಲುಗಳು ಸೇರಿದಂತೆ ಐದು ಹೊಸ ರೈಲುಗಳು ಜನವರಿಯಿಂದ ಸಂಚಾರ ಆರಂಭಿಸಲಿವೆ. ಹೊಸ ರೈಲು ಮಾರ್ಗಗಳ ಸರ್ವೇ ಕಾರ್ಯಗಳು ನಡೆಯುತ್ತಿದ್ದು, ಕೋಟೆಗಂಗೂರಿನಲ್ಲಿ ರಾಜ್ಯದ ನಾಲ್ಕನೇ ರೈಲ್ವೆ ಕೋಚಿಂಗ್ ಡಿಪೋ ಆರಂಭವಾಗಲಿದೆ.

ಶಿವಮೊಗ್ಗ (ಜು.10): ಮುಂದಿನ ಜನವರಿಯಿಂದ ಶಿವಮೊಗ್ಗ ಜಿಲ್ಲೆಯ ರೈಲ್ವೆ ಭವಿಷ್ಯವೇ ಬದಲಾಗಲಿದೆ. ಜಿಲ್ಲೆಯ ಜನರಿಗೆ ಗುಡ್‌ನ್ಯೂಸ್‌ ಎನ್ನುವ ರೀತಿಯಲ್ಲಿ ಜನವರಿ ವೇಳೆಗೆ ಶಿವಮೊಗ್ಗದಿಂದ 2 ವಂದೇ ಭಾರತ್‌ ರೈಲುಗಳು ಕಾರ್ಯಾಚರಣೆ ಆರಂಭಿಸಲಿದ್ದರೆ, ಒಟ್ಟು 5 ಹೊಸ ರೈಲುಗಳು ಶಿವಮೊಗ್ಗದಿಂದ ಸಂಚಾರ ನಡೆಯಲಿದೆ ಎಂದು ಸಂಸದ ಬಿವೈ ರಾಘವೇಂದ್ರ ತಿಳಿಸಿದ್ದಾರೆ.ಬಂಜಾರ ಭವನದಲ್ಲಿ ಮಂಗಳವಾರ ಬಿಜೆಪಿ ವಿಭಾಗ ಮಟ್ಟದ ಪ್ರಬುದ್ಧರ ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಈ ಮಾಹಿತಿ ನೀಡಿದ್ದಾರೆ.

ಶಿವಮೊಗ್ಗದ ಹೊರವಲಯದಲ್ಲಿರುವ ಕೋಟೆಗಂಗೂರಿನಲ್ಲಿ ರಾಜ್ಯದ 4ನೇ ರೈಲ್ವೆ ಕೋಚಿಂಗ್ ಡಿಪೋ ಕೂಡ ಆರಂಭವಾಗಲಿದೆ. ಇದು ಜಿಲ್ಲೆಯ ರೈಲ್ವೆಕ್ರಾಂತಿಗೆ ಕಾರಣವಾಗಲಿದೆ. ಬೆಂಗಳೂರು ಹಾಗೂ ಮೈಸೂರಿನ ರೈಲ್ವೆ ನಿಲ್ದಾಣಗಳ ಮೇಲಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ. ಅದಕ್ಕಾಗಿ ಬಹಳಷ್ಟು ರೈಲುಗಳು ಬೆಂಗಳೂರು ಮತ್ತು ಮೈಸೂರು ಬದಲಾಗಿ ಶಿವಮೊಗ್ಗದಿಂದ ಸಂಚಾರ ಆರಂಭಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸದ್ಯದ ವೇಳಾಪಟ್ಟಿಯ ಪ್ರಕಾರ, 2026ರ ಜನವರಿ ಕೊನೆಯ ವೇಳೆಗೆ ಕೋಚಿಂಗ್‌ ಡಿಪೋ ಕಾರ್ಯಾರಂಭ ಮಾಡಲಿದೆ. ಅದರೊಂದಿಗೆ ಬಹುನಿರೀಕ್ಷಿತ ಎರಡು ವಂದೇಭಾರತ್‌ ರೈಲುಗಳು ಶಿವಮೊಗ್ಗದಿಂದ ಸಂಚಾರ ಆರಂಭಿಸಲಿದೆ ಎಂದು ಮಾಹಿತಿ ನೀಡಿದ್ದಾರೆ. ಈಗಾಗಲೇ ಈ ವಂದೇ ಭಾರತ್‌ ರೈಲುಗಳ ವೇಳಾಪಟ್ಟಿ ಹಾಗೂ ರೈಲು ಸಂಖ್ಯೆಯನ್ನೂ ಇಲಾಖೆ ಪ್ರಕಟ ಮಾಡಿದೆ. ಶಿವಮೊಗ್ಗ-ತಿರುಪತಿ ವಂದೇ ಭಾರತ್ ರೈಲು ಮುಂಜಾನೆ 4.30ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 12.30ಕ್ಕೆ ತಿರುಪತಿ ತಲುಪುತ್ತದೆ. ಮತ್ತೆ ಸಂಜೆ 4.30ಕ್ಕೆ ಹೊರಟು ರಾತ್ರಿ 12.30ಗಂಟೆಗೆ ಶಿವಮೊಗ್ಗ ತಲುಪುತ್ತದೆ. ಮತ್ತೊಂದು ವಂದೇ ಭಾರತ್

ರೈಲು ಶಿವಮೊಗ್ಗ- ಬೆಂಗಳೂರು ನಡುವೆ ಸಂಚರಿಸಲಿದೆ. ಇದಲ್ಲದೆ ಶಿವಮೊಗ್ಗ-ಎರ್ನಾಕುಲಂ(ಕೇರಳ), ಶಿವಮೊಗ್ಗ-ಭಾಗಲ್ಪುರ(ಬಿಹಾರ), ಶಿವಮೊಗ್ಗ- ಜಮ್‌ಶೆಡ್‌ಪುರ್ (ಜಾರ್ಖಂಡ್), ಶಿವಮೊಗ್ಗ-ಚಂಡೀಗಢ, ಶಿವಮೊಗ್ಗ-ಗುವಾಹಟಿ (ಅಸ್ಸಾಂ) ನಡುವೆ ಸಂಚಾರ ನಡೆಸಲು ರೈಲುಗಳು ಜನವರಿ ಅಥವಾ ಫೆಬ್ರವರಿ ವೇಳೆಯಲ್ಲಿ ಸಂಚಾರ ಆರಂಭ ಮಾಡಬಹುದು ಎನ್ನಲಾಗಿದೆ.

ತಾಳಗುಪ್ಪದಿಂದ ಹುಬ್ಬಳ್ಳಿಗೆ ಸಂಪರ್ಕ

ಶಿವಮೊಗ್ಗದ ತಾಳಗುಪ್ಪದಿಂದ ಹುಬ್ಬಳ್ಳಿಗೆ ಸಂಪರ್ಕ ಸಾಧಿಸಲು ಸಿದ್ದಾಪುರ, ಶಿರಸಿ, ಮುಂಡಗೋಡು ತಡಸ ನಡುವೆ 150 ಕಿ.ಮೀ. ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ ಸರ್ವೆ ಆಗಿದೆ. ಈ ಹಾದಿಯಲ್ಲಿ ಒಟ್ಟು 317 ಹೆಕ್ಟೇರ್‌ ನೀರಾವರಿ ಭೂಮಿ, 190 ಹೆಕ್ಟೇರ್‌ ಅರಣ್ಯ ಭೂಮಿ ಹಾಗೂ 195 ಹೆಕ್ಟೇರ್‌ ಖುಷ್ಕಿ ಭೂಮಿ ಬರಲಿದೆ ಎಂದು ಅಂದಾಜಿಸಲಾಗಿದೆ. ಇಲ್ಲಿನ ಅರಣ್ಯ ಭೂಮಿ ಬದಲಿಗೆ ಬೇರೆ ಭೂಮಿಯನ್ನು ಕೊಡುವ ಕಾರ್ಯವೂ ನಡೆಯುತ್ತಿದೆ. ಅದರೊಂದಿಗೆ ತಾಳಗುಪ್ಪ-ಹೊನ್ನಾವರ ಮಾರ್ಗದ ಸರ್ವೆ ಸಹ ನಡೆಯುತ್ತಿದೆ. ಆದರೆ, ಈ ಮಾರ್ಗದಲ್ಲಿ ಹೆಚ್ಚಿನ ಅರಣ್ಯ ಭೂಮಿ ಬರುವ ಕಾರಣ, ಸರ್ಕಾರ ತನ್ನ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ.

ಅದರೊಂದಿಗೆ ಬೀರೂರು ಶಿವಮೊಗ್ಗ ರೈಲ್ವೆ ಮಾರ್ಗ ಡಬ್ಲಿಂಗ್‌ಗೆ 1900 ಕೋಟಿಯ ಕಾಮಗಾರಿಗೆ ಅನುಮೋದನೆ ಸಿಕ್ಕಿದ್ದು, ಈ ವರ್ಷದ ಅಂತ್ಯದಿಂದ ಕೆಲಸ ನಡೆಯಲಿದೆ. ಚಿಕ್ಕಮಗಳೂರು-ಬೇಲೂರು-ಹಾಸನದ ನೂತನ ಮಾರ್ಗಕ್ಕೂ ಸರ್ವೆ ಶುರುವಾಗಿದೆ. ಭದ್ರಾವತಿ ಹಾಗೂ ಚಿತ್ರದುರ್ಗದ ಚಿಕ್ಕಜಾಜೂರು ನಡುವೆ 73 ಕಿಲೋಮೀಟರ್‌ ರೈಲು ಮಾರ್ಗ ಸರ್ವೆಗೆ ಟೆಂಡರ್‌ ಆಗಿದೆ. ಇದು ವಿಎಸ್‌ಎಸ್‌ಎಲ್‌ನಿಂದ ಅದಿರು ಸಾಗಿಸಲು ದೊಡ್ಡ ಮಟ್ಟದಲ್ಲಿ ಅನುಕೂಲ ಮಾಡಲಿದೆ ಎಂದು ಸಂಸದರು ತಿಳಿಸಿದ್ದಾರೆ.