ಕನಕಪುರದ ಕೆಂಕೇರಮ್ಮ ದೇವಾಲಯದಲ್ಲಿ ದುಷ್ಕರ್ಮಿಗಳು ಆಭರಣ ಹಾಗೂ ಹುಂಡಿಯ ಹಣ ಕಳವು ಮಾಡಿದ್ದಾರೆ. ಘಟನೆ ಬುಧವಾರ ರಾತ್ರಿ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಕನಕಪುರ (ಜು.10): ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮನೆ ದೇವರು ಎಂದೇ ಖ್ಯಾತವಾಗಿರುವ ಕನಕಪುರದ ಕೆಂಕೇರಮ್ಮ ದೇವಾಲಯದಲ್ಲಿ ದುಷ್ಕರ್ಮಿಗಳು ಕಳವು ಮಾಡಿರುವ ಆಘಾತಕಾರಿ ಘಟನೆ ಬುಧವಾರ (ಜುಲೈ 9, 2025) ರಾತ್ರಿ ನಡೆದಿದೆ. ದೇವಾಲಯದ ವಿಗ್ರಹದ ಮೇಲಿದ್ದ ಚಿನ್ನದ ತಾಳಿ, ಕಾಸಿನ ಸರ, ಬೆಳ್ಳಿಯ ಆಭರಣಗಳು, ಟ್ರಂಕ್‌ನಲ್ಲಿದ್ದ ಆಭರಣಗಳು ಮತ್ತು ಹುಂಡಿಯಲ್ಲಿದ್ದ ಹಣವನ್ನು ಕಳ್ಳರು ಕದ್ದಿದ್ದಾರೆ.
ಘಟನೆಯ ವಿವರ:
ಕನಕಪುರ ನಗರದ ಹೃದಯಭಾಗದಲ್ಲಿರುವ ಕೆಂಕೇರಮ್ಮ ದೇವಾಲಯಕ್ಕೆ ರಾತ್ರಿಯ ವೇಳೆಯಲ್ಲಿ ದುಷ್ಕರ್ಮಿಗಳು ನುಗ್ಗಿದ್ದಾರೆ. ದೇವಾಲಯದ ಪಕ್ಕದಲ್ಲಿಯೇ ವಾಸವಾಗಿದ್ದ ಅರ್ಚಕರ ಮನೆಗೆ ಹೊರಗಿನಿಂದ ಬೀಗ ಹಾಕಿ, ಯಾರಿಗೂ ಅನುಮಾನ ಬಾರದಂತೆ ಈ ಕೃತ್ಯವನ್ನು ಎಸಗಿದ್ದಾರೆ. ದೇವಾಲಯದ ಒಳಗಿನ ಟ್ರಂಕ್‌ನಲ್ಲಿದ್ದ ಆಭರಣಗಳನ್ನು ಮತ್ತು ಹುಂಡಿಯನ್ನು ಕನ್ನ ಹಾಕಿ, ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಕಮ್ಮಿ ಬೆಲೆಗೆ ಚಿನ್ನದಾಸೆ ತೋರಿಸಿ 20 ಕೋಟಿ ವಂಚನೆ, ಸಿಎಂ ಡಿಸಿಎಂ ಜೊತೆ ಫೋಟೋಗಳು, ಸವಿತಾಳ ವ್ಯವಸ್ಥಿತ ಸಂಚು ಬಯಲು!
ಪೊಲೀಸರು ಸ್ಥಳಕ್ಕೆ ಭೇಟಿ:
ಘಟನೆಯ ಕುರಿತು ಮಾಹಿತಿ ತಿಳಿದ ಕೂಡಲೇ ಕನಕಪುರ ಟೌನ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ದೇವಾಲಯದ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾಗಳಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಎಫ್‌ಐಆರ್:
ಕೆಂಕೇರಮ್ಮ ದೇವಾಲಯದ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ ಅವರು ಈ ಸಂಬಂಧ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ದೇವಾಲಯದ ಆಭರಣಗಳು ಮತ್ತು ಹುಂಡಿಯ ಹಣವನ್ನು ಕಳವು ಮಾಡಿರುವ ಬಗ್ಗೆ ವಿವರಿಸಲಾಗಿದೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಇದನ್ನೂ ಓದಿ: ಕೌಟುಂಬಿಕ ಕಲಹ: ಪತ್ನಿಯ ಕುತ್ತಿಗೆ ಮೇಲೆ ಕಾಲಿಟ್ಟು ಕೊಂದ ಪತಿ ಬಂಧನ
ಭಕ್ತರು ಆಕ್ರೋಶ:
ಈ ಘಟನೆಯಿಂದ ಕನಕಪುರದ ಸ್ಥಳೀಯ ಭಕ್ತರು ಮತ್ತು ನಾಗರಿಕರು ಆಘಾತಕ್ಕೊೈಗೊಂಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕುಟುಂಬಕ್ಕೆ ಆತ್ಮೀಯವಾದ ಕೆಂಕೇರಮ್ಮ ದೇವಾಲಯದಲ್ಲಿ ಇಂತಹ ಕೃತ್ಯ ನಡೆದಿರುವುದು ಭಕ್ತರಲ್ಲಿ ಕೋಪ ಆಕ್ರೋಶವನ್ನು ಸೃಷ್ಟಿಸಿದೆ. ಪೊಲೀಸರು ಸ್ಥಳೀಯರಿಂದ ಮಾಹಿತಿ ಕಲೆಹಾಕುವ ಜೊತೆಗೆ, ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ.