ಐಟಿ ಕಂಪನಿಯ ಸಿಇಒ, ಉದ್ಯೋಗಿಯೊಬ್ಬರ ಮೇಲೆ ಹೂಕುಂಡ ಎಸೆದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಿಇಒ ಸ್ಪಷ್ಟನೆ ನೀಡಿದ್ದು, ಕೋಪದ ಕ್ಷಣದಲ್ಲಿ ಹೂಕುಂಡವಲ್ಲ, ಹೂವಿನ ಗಿಡವನ್ನು ಕಿತ್ತು ಎಸೆದಿದ್ದಾಗಿ ಹೇಳಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ.
ಸಾಮಾನ್ಯವಾಗಿ ಉದ್ಯೋಗಿಗಳು ಕೆಲಸ ಮಾಡುವ ಕಂಪನಿಗಳಲ್ಲಿ ಸಿಇಒ ಅಥವಾ ಬಾಸ್ ಹೇಳಿದ ಮಾತನ್ನು ಕೇಳುತ್ತಾರೆ. ಇದರ ಹೊರತಾಗಿಯೂ ಕೆಲವೊಂದು ಸಣ್ಣ-ಪುಟ್ಟ ತಪ್ಪುಗಳಾದಾಗ ರೇಗಾಡುವುದು, ಬೈಯುವುದು, ಕೆಲಸದಿಂದ ತೆಗದುಹಾಕುವುದು ಸಾಮಾನ್ಯವಾಗಿ ನಡೆಯುತ್ತವೆ. ಆದರೆ, ಇಲ್ಲೊಂದು ಕಂಪನಿಯ ಸಿಇಒ ಕೆಲಸ ಮಾಡುತ್ತಿದ್ದ ಉದ್ಯೋಗಿಯ ಮೇಲೆ ಕೂಗಾಡಿ ಟೇಬಲ್ ಮೇಲಿದ್ದ ಹೂಕುಂಡವನ್ನು ತೆಗೆದುಕೊಂಡು ಉದ್ಯೋಗಿ ತಲೆಗೆ ಹೊಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಇಒ ಉದ್ಯೋಗಿಗೆ ಹೂಕುಂಡವನ್ನು ಎಸೆದ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ನೆಟ್ಟಿಗರಿಂದ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಈ ಘಟನೆ ನಡೆದಿರುವುದು ಟರ್ಕಿ ದೇಶದಲ್ಲಿ. ಟರ್ಕಿಯ ಪ್ರಮುಖ ತಂತ್ರಜ್ಞಾನ ವೆಬ್‌ಸೈಟ್‌ನ ಸ್ಥಾಪಕ ಹಾಗೂ ಸಿಇಒ ತನ್ನ ಉದ್ಯೋಗಿ ಹೂಕುಂಡವನ್ನು ಎಸೆದಿರುವ ಈ ದೃಶ್ಯಗಳು ಆನ್‌ಲೈನ್‌ನಲ್ಲಿ ಹಲ್‌ಚಲ್ ಸೃಷ್ಟಿಸಿವೆ. ಇವರು ಸಿಇಒ ಆಗುವುದಕ್ಕೆ ಅರ್ಹರಿಲ್ಲ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ಸಿಇಒ ಇಷ್ಟೊಂದು ಗಂಭೀರ ಹಂತಕ್ಕೆ ತಲುಪಿದ್ದಾರೆ ಎಂದರೆ ಉದ್ಯೋಗಿ ಎಂತಹ ನಷ್ಟ ಅಥವಾ ತಪ್ಪು ಕೆಲಸ ಮಾಡಿರಬೇಕು ಊಹಿಸಿ ಎಂದು ಹೇಳಿದ್ದಾರೆ.
ಟರ್ಕಿಯ ಶಿಫ್ಟ್ ಡೀಲೀಟ್ ಕಂಪನಿ ಸಿಇಒ ಹಾಗೂ ಸ್ಥಾಪಕ ಹಕ್ಕಿ ಅಲ್ಕಾನ್, ಕಚೇರಿಯಲ್ಲಿ ಜಗಳದ ವೇಳೆ ಸಮೇತ್ ಜಾಂಕೋವಿಚ್ ಎನ್ನುವ ಉದ್ಯೋಗಿಯ ಮೇಲೆ ಮಣ್ಣು ತುಂಬಿದ ಹೂವಿನ ಕುಂಡವನ್ನು ಎಸೆದಿದ್ದಾರೆ. ಟರ್ಕಿಯ ಅತಿದೊಡ್ಡ ತಂತ್ರಜ್ಞಾನ ಸುದ್ದಿ ತಾಣಗಳಲ್ಲಿ ಶಿಫ್ಟ್ ಡೀಲೀಟ್ ಒಂದಾಗಿದ್ದು, ಇಲ್ಲಿ ಇಂತಹ ಘಟನೆ ನಡೆದಿರುವುದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ದೃಶ್ಯಗಳು ಎಕ್ಸ್ (ಟ್ವಿಟರ್) ನಲ್ಲಿ ಹರಿದಾಡುತ್ತಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ವಿಡಿಯೋದಲ್ಲಿ ಅಲ್ಕಾನ್ ಮತ್ತು ಜಾಂಕೋವಿಚ್ ಜಗಳವಾಡುತ್ತಿರುವುದು ಕಾಣಬಹುದು. ನಂತರ ಅಲ್ಕಾನ್ ಹೂಕುಂಡ ಎಸೆಯುತ್ತಾರೆ.
ಈ ಕಂಪನಿಯಲ್ಲಿ ಜಾಂಕೋವಿಚ್ ಕಳೆದ ನಾಲ್ಕು ವರ್ಷಗಳಿಂದ ಈ ಕೆಲಸ ಮಾಡ್ತಿದ್ದಾರೆ. ShiftDelete.net ನ ಎಡಿಟರ್-ಇನ್-ಚೀಫ್ ಆಗಿದ್ದಾರೆ. ಈ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ವೈದ್ಯಕೀಯ ವರದಿ ಪಡೆಯಲಾಗಿದೆ. ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ. 'ಇದರ ಬೆಲೆ ನೀವು ತೆರಬೇಕಾಗುತ್ತದೆ. ಕ್ಯಾಮೆರಾ ದಾಖಲೆಗಳನ್ನು ಅಳಿಸಿದರೆ ನೀವು ಗಂಡಸರೇ ಅಲ್ಲ ಎಂದು ಹೇಳಿದ್ದಾರೆ. ಅವು ನಿಮ್ಮ ಫೋನಿನಲ್ಲಿ 24/7 ಇವೆ ಎಂದು ನನಗೆ ತಿಳಿದಿದೆ' ಎಂದು ಸಮೇತ್ ತಮ್ಮ ಎಕ್ಸ್ (ಟ್ವಿಟರ್) ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಸಿಇಒ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಜಗಳದ ವೇಳೆ ಕೋಪ ಬಂದಿದ್ದರಿಂದ ಹೂಕುಂಡವಲ್ಲ, ಹೂಕುಂಡದಲ್ಲಿದ್ದ ಹೂವಿನ ಗಿಡವನ್ನು ಕಿತ್ತು ಎಸೆದಿದ್ದಾಗಿ ಹೇಳಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಗಳನ್ನು ಪೊಲೀಸರಿಗೆ ನೀಡಲಾಗಿದೆ ಎಂದು ಹಕ್ಕಿ ಅಲ್ಕಾನ್ ಹೇಳಿದ್ದಾರೆ. ಸಮೇತ್ ತಮ್ಮ ಸಹೋದರನಂತೆ ಎಂದೂ, ಕೋಪದಲ್ಲಿ ಆದ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
