Taliban Bans Wi-Fi in Northern Afghanistan ಆಗಸ್ಟ್ 2021 ರಿಂದ ಅಫ್ಘಾನಿಸ್ತಾನ ತಾಲಿಬಾನ್ ಆಳ್ವಿಕೆಯಲ್ಲಿದೆ. ತಾಲಿಬಾನ್ ಅಧಿಕಾರಕ್ಕೆ ಬಂದಾಗಿನಿಂದ, ನಾಗರಿಕರ ಮೇಲೆ ವಿವಿಧ ನಿರ್ಬಂಧಗಳನ್ನು ವಿಧಿಸಲಾಗಿದೆ. ಈಗಲೂ ಸಹ, ತಾಲಿಬಾನ್ ಒಂದು ಪ್ರಮುಖ ವಿಷಯವನ್ನು ನಿಷೇಧಿಸಿದೆ. 

ನವದೆಹಲಿ (ಸೆ.17): ಆಗಸ್ಟ್ 2021 ರಿಂದ ಅಫ್ಘಾನಿಸ್ತಾನ ತಾಲಿಬಾನ್ ಆಳ್ವಿಕೆಯಲ್ಲಿದೆ. ತಾಲಿಬಾನ್ ಅಧಿಕಾರಕ್ಕೆ ಬಂದಾಗಿನಿಂದ, ನಾಗರಿಕರ ಮೇಲೆ ವಿವಿಧ ನಿರ್ಬಂಧಗಳನ್ನು ವಿಧಿಸಲಾಗಿದೆ. ಅಲ್ಲಿ ಮಹಿಳೆಯರ ಮೇಲೆ ಹಲವು ನಿರ್ಬಂಧಗಳಿದ್ದು, ಇದೇ ಕಾರಣಕ್ಕೆ ವಿಶ್ವದ ಹಲವು ದೇಶಗಳು ತಾಲಿಬಾನ್ ಅನ್ನು ಟೀಕಿಸುತ್ತಿವೆ. ಈಗ ತಾಲಿಬಾನ್ ಮತ್ತೊಂದು ತುಗ್ಲಕ್‌ ನಿರ್ಧಾರವನ್ನು ತೆಗೆದುಕೊಂಡಿದೆ. ಇದು ಸಾವಿರಾರು ನಾಗರಿಕರ ಮೇಲೆ ಪರಿಣಾಮ ಬೀರುತ್ತಿದೆ. ಈ ನಿರ್ಧಾರ ನಿಖರವಾಗಿ ಏನು ಅನ್ನೋದರ ವಿವರ ಇಲ್ಲಿದೆ.

ವರದಿಗಳ ಪ್ರಕಾರ, ಉತ್ತರ ಅಫ್ಘಾನಿಸ್ತಾನದ ಬಾಲ್ಖ್ ಪ್ರಾಂತ್ಯದಲ್ಲಿ ತಾಲಿಬಾನ್ ಸರ್ಕಾರ ಫೈಬರ್-ಆಪ್ಟಿಕ್ ಇಂಟರ್ನೆಟ್ ಅಥವಾ ವೈಫೈ ಅನ್ನು ನಿಷೇಧಿಸಿದೆ. ಪರಿಣಾಮವಾಗಿ, ನಾಗರಿಕರು ಇನ್ನು ಮುಂದೆ ವೈಫೈ ಬಳಸಲು ಸಾಧ್ಯವಾಗುವುದಿಲ್ಲ. ಅನೇಕ ಜನರ ಮನೆಗಳು, ವ್ಯವಹಾರಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ವೈಫೈ ಅನ್ನು ದಿಢೀರ್‌ ಆಗಿ ಸ್ಥಗಿತಗೊಳಿಸಲಾಗಿದೆ. ಅಫ್ಘಾನಿಸ್ತಾನದಲ್ಲಿ ಅಧಿಕಾರ ವಹಿಸಿಕೊಂಡ ನಂತರ ತಾಲಿಬಾನ್ ವಿಧಿಸಿದ ಮೊದಲ ಪ್ರಮುಖ ಇಂಟರ್ನೆಟ್ ನಿಷೇಧ ಇದಾಗಿದೆ.

ವೈಫೈಗೆ ನಿಷೇಧ ಹೇರಿದ್ದರೂ, ಮೊಬೈಲ್ ಇಂಟರ್ನೆಟ್ ಕಾರ್ಯನಿರ್ವಹಿಸುತ್ತಿದೆ. ಇದು ನಾಗರಿಕರಿಗೆ ಕೊಂಚ ಪರಿಹಾರವನ್ನು ನೀಡಿದೆ. ತಾಲಿಬಾನ್‌ನ ಸರ್ವೋಚ್ಚ ನಾಯಕ ಹಿಬ್ತುಲ್ಲಾ ಅಖುಂಡ್‌ಜಾದಾ ವೈಫೈ ಸ್ಥಗಿತಗೊಳಿಸಲು ಆದೇಶಿಸಿದ ನಂತರ, ಎಲ್ಲಾ ಕೇಬಲ್ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ. ಅಫ್ಘಾನಿಸ್ತಾನದಲ್ಲಿ ಹುಡುಗಿಯರು ಪ್ರಪಂಚದೊಂದಿಗೆ ಸಂಪರ್ಕ ಸಾಧಿಸಲು ಮತ್ತು ಶಿಕ್ಷಣ ಪಡೆಯಲು ವೈಫೈ ಒಂದು ಸಾಧನವಾಗಿತ್ತು, ಆದರೆ ಈಗ ಸರ್ಕಾರದ ಈ ನಿರ್ಧಾರವು ಅವರ ಶಿಕ್ಷಣಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ.

ವೈಫೈ ಸ್ಥಗಿತಗೊಳಿಸುವ ನಿರ್ಧಾರವೇಕೆ?

ತಾಲಿಬಾನ್ ಸರ್ಕಾರ ವೈಫೈ ಸ್ಥಗಿತ ಮಾಡಲು ನಿರ್ಧರಿಸಿದ್ದೇಕೆ ಅನ್ನೋದರ ಬಗ್ಗೆ ಪ್ರತಿಕ್ರಿಯಿಸಿದೆ. ಪ್ರಾಂತೀಯ ವಕ್ತಾರ ಹಾಜಿ ಅತಾವುಲ್ಲಾ ಜೈದ್, 'ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ, ಇಂಟರ್ನೆಟ್ ಅಗತ್ಯವನ್ನು ಪೂರೈಸಲು ದೇಶದಲ್ಲಿ ಪರ್ಯಾಯ ವ್ಯವಸ್ಥೆಯನ್ನು ರಚಿಸಲಾಗುವುದು' ಎಂದು ಹೇಳಿದರು. ಪ್ರಸ್ತುತ, ಈ ನಿಷೇಧವನ್ನು ಬಾಲ್ಖ್ ಪ್ರಾಂತ್ಯದಲ್ಲಿ ಮಾತ್ರ ವಿಧಿಸಲಾಗಿದೆ. ಹಾಗಾದರೆ, ಭವಿಷ್ಯದಲ್ಲಿ ದೇಶಾದ್ಯಂತ ಈ ನಿಷೇಧವನ್ನು ವಿಧಿಸಲಾಗುತ್ತದೆಯೇ? ಎನ್ನುವ ಬಗ್ಗೆಯೂ ಪ್ರಶ್ನೆಗಳು ಉದ್ಭವಿಸಿವೆ.

ಭಯೋತ್ಪಾದಕರು ಬಾಂಬ್ ದಾಳಿ ನಡೆಸುವುದನ್ನು ತಡೆಯಲು ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ತಾಲಿಬಾನ್ ಈ ಹಿಂದೆ ಧಾರ್ಮಿಕ ಹಬ್ಬಗಳ ಸಮಯದಲ್ಲಿ ಮೊಬೈಲ್ ನೆಟ್‌ವರ್ಕ್‌ಗಳನ್ನು ಸ್ಥಗಿತಗೊಳಿಸಿತ್ತು. ಈಗ ತಾಲಿಬಾನ್ ಬ್ರಾಡ್‌ಬ್ಯಾಂಡ್ ಅನ್ನು ನಿಷೇಧಿಸಿದೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಈ ನಿಷೇಧವನ್ನು ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.