ನೇಪಾಳದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೂಕುಸಿತ ಮತ್ತು ಪ್ರವಾಹ ಉಂಟಾಗಿದೆ. 43 ಜನರು ಸಾವನ್ನಪ್ಪಿದ್ದು, ಕಠ್ಮಂಡು ಕಣಿವೆಯನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳು ಸಂಪೂರ್ಣವಾಗಿ ಬಂದ್ ಆಗಿವೆ. ಜನರನ್ನು ಮನೆಯೊಳಗೆ ಇರುವಂತೆ ಮತ್ತು ಪ್ರಯಾಣವನ್ನು ತಪ್ಪಿಸುವಂತೆ ಸರ್ಕಾರ ಮನವಿ

Nepal natural disaster update: ನೇಪಾಳದಲ್ಲಿ ಭಾರೀ ಮಳೆಯಿಂದಾಗಿ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದಿಂದ ಭಾರತದ ನೆರೆಯ ರಾಷ್ಟ್ರವು ನೈಸರ್ಗಿಕ ವಿಕೋಪಕ್ಕೆ ಸಿಲುಕಿದೆ. ಸಶಸ್ತ್ರ ಪೊಲೀಸ್ ಪಡೆಯ ಪ್ರಧಾನ ಕಚೇರಿಯ ಪ್ರಕಾರ, ಶುಕ್ರವಾರ (ಅಕ್ಟೋಬರ್ 3, 2025) ದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ 43 ಜನರು ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ.

ಭಾರತದ ಡಾರ್ಜಿಲಿಂಗ್ ಗಡಿಯ ಇಲಾಮ್ ಜಿಲ್ಲೆಯಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿವೆ.ಇಲಾಮ್ ಜಿಲ್ಲಾ ಮುಖ್ಯ ಅಧಿಕಾರಿ ಸುನೀತಾ ನೇಪಾಳ ಅವರು ಐಎಎನ್‌ಎಸ್‌ಗೆ ತಿಳಿಸಿದ ಪ್ರಕಾರ, ಶನಿವಾರದ ಭೂಕುಸಿತದಲ್ಲಿ ಮೂರು ಮನೆಗಳು ಕುಸಿದಿದ್ದು, ಹೆಚ್ಚಿನ ಮನೆಗಳು ಹಾನಿಗೊಳಗಾಗಿರುವುದರಿಂದ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ.

ಕಠ್ಮಂಡುವಿನಲ್ಲಿ ಅತಿ ಹೆಚ್ಚು ಮಳೆ:

ಇಲಾಮ್ ಜಿಲ್ಲಾ ಆಡಳಿತ ಕಚೇರಿ (ಡಿಎಒ) ಹಾನಿಯ ಕುರಿತು ವಿವರವಾದ ವರದಿಯನ್ನು ಕೋರಿದೆ.ಕಠ್ಮಂಡುವಿನ ಲಲಿತಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಇಲಾಮ್‌ನಿಂದ ಝಾಪಾ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಮೆಚಿ ಹೆದ್ದಾರಿಯಲ್ಲಿ ಹಲವೆಡೆ ಭೂಕುಸಿತ ಸಂಭವಿಸಿದೆ.

ಜಲವಿಜ್ಞಾನ ಮತ್ತು ಹವಾಮಾನ ಇಲಾಖೆಯ ಪ್ರಕಾರ, ಶುಕ್ರವಾರದಿಂದ ಭಾರೀ ಮಳೆಯಾಗುತ್ತಿದ್ದರೂ, ಭಾನುವಾರ (ಅಕ್ಟೋಬರ್ 5, 2025) ಬೆಳಿಗ್ಗೆ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಆದರೆ, ಪೂರ್ವ ಕೋಶಿ ಪ್ರಾಂತ್ಯದ ಗುಡ್ಡಗಾಡು ಜಿಲ್ಲೆಗಳಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಭಾರೀ ಮಳೆಯಾಗುವ ಮುನ್ಸೂಚನೆಯಿದೆ.

ಭಾರೀ ಮಳೆಗೆ ಹೆದ್ದಾರಿಗಳು ಬಂದ್:

ಕಠ್ಮಂಡು ಕಣಿವೆಯನ್ನು ಸಂಪರ್ಕಿಸುವ ಪೃಥ್ವಿ, ಬಿಪಿ ಮತ್ತು ಅರಾನಿಕೊ ಹೆದ್ದಾರಿಗಳು ಭೂಕುಸಿತದಿಂದ ಸಂಪೂರ್ಣವಾಗಿ ನಿರ್ಬಂಧಿತವಾಗಿವೆ. ನೇಪಾಳ ಸರ್ಕಾರವು ಕಠ್ಮಂಡು ಕಣಿವೆಯ ಒಳಗೆ ಮತ್ತು ಹೊರಗೆ ವಾಹನ ಸಂಚಾರವನ್ನು ನಿಷೇಧಿಸಿದೆ.

ನೇಪಾಳದ ಮಧ್ಯಂತರ ಪ್ರಧಾನಿ ಸುಶೀಲಾ ಕರ್ಕಿ ಅವರು ವೀಡಿಯೊ ಸಂದೇಶದಲ್ಲಿ, ನಾಗರಿಕರು ಮನೆಯೊಳಗೆ ಇರಲು ಮತ್ತು ತೀರಾ ಅಗತ್ಯವಿಲ್ಲದಿದ್ದರೆ ಪ್ರಯಾಣ ತಪ್ಪಿಸಲು ಮನವಿ ಮಾಡಿದ್ದಾರೆ. ಅವರು ಜನರ ಸುರಕ್ಷತೆಗೆ ಭರವಸೆ ನೀಡಿದ್ದಾರೆ.