ಕಳೆದ ಕೆಲ ಸಮಯದಲ್ಲಿ ಭಾರತ- ಪಾಕ್‌ ಸೇರಿದಂತೆ ವಿಶ್ವಾದ್ಯಂತ 7 ಯುದ್ಧ ನಿಲ್ಲಿಸಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದ ಅಮೆರಿಕ, ಇದೀಗ ಸ್ವತಃ ತಾನೇ ವಿಶ್ವವನ್ನು ವಿನಾಶ ಮಾಡುವ ಶಕ್ತಿ ಹೊಂದಿರುವ ಅಣ್ವಸ್ತ್ರ ಪರೀಕ್ಷೆಯತ್ತ ಹೆಜ್ಜೆ ಇಟ್ಟಿದೆ.

ಬುಸನ್‌: ಕಳೆದ ಕೆಲ ಸಮಯದಲ್ಲಿ ಭಾರತ- ಪಾಕ್‌ ಸೇರಿದಂತೆ ವಿಶ್ವಾದ್ಯಂತ 7 ಯುದ್ಧ ನಿಲ್ಲಿಸಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದ ಅಮೆರಿಕ, ಇದೀಗ ಸ್ವತಃ ತಾನೇ ವಿಶ್ವವನ್ನು ವಿನಾಶ ಮಾಡುವ ಶಕ್ತಿ ಹೊಂದಿರುವ ಅಣ್ವಸ್ತ್ರ ಪರೀಕ್ಷೆಯತ್ತ ಹೆಜ್ಜೆ ಇಟ್ಟಿದೆ. ವಿಚಿತ್ರವೆಂದರೆ ಯುದ್ಧ ನಿಲ್ಲಿಸಿದ್ದಕ್ಕೆ ತನಗೆ ನೊಬೆಲ್‌ ಶಾಂತಿ ಪ್ರಶಸ್ತಿ ಸಿಗಬೇಕೆಂದು ಗೋಗರೆದಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರೇ ತಮ್ಮ ಅಧಿಕಾರಿಗಳಿಗೆ ಶೀಘ್ರವೇ ಅಣ್ವಸ್ತ್ರ ಪರೀಕ್ಷೆ ನಡೆಸಿ ಎಂದು ಸೂಚಿಸಿದ್ದಾರೆ.

ಟ್ರಂಪ್‌ ಅವರ ಈ ಹೇಳಿಕೆ, ಜಗತ್ತಿನಲ್ಲಿ ಮತ್ತೊಂದು ಸುತ್ತಿನ ಶೀತಲ ಸಮರ ಆರಂಭದ ಆತಂಕ ಹುಟ್ಟುಹಾಕಿದೆ. ಜೊತೆಗೆ ಅಣ್ವಸ್ತ್ರ ಪರೀಕ್ಷೆಗೆ 1992ರಲ್ಲಿ ತಾನೇ ಹಾಕಿಕೊಂಡ ನಿರ್ಬಂಧವನ್ನು ಒಂದು ವೇಳೆ ಅಮೆರಿಕ ಉಲ್ಲಂಘಿಸಿದ್ದೇ ಆದಲ್ಲಿ, ಅದು ಅಮೆರಿಕ - ರಷ್ಯಾ- ಚೀನಾ ನಡುವೆ ಸಂಘರ್ಷಕ್ಕೆ ನಾಂದಿ ಹಾಡಬಹುದು ಎಂದು ವಿಶ್ಲೇಷಿಸಲಾಗಿದೆ.

ಪರೀಕ್ಷೆ ನಡೆಸಿ:

ಪ್ರಸ್ತುತ ದಕ್ಷಿಣ ಕೊರಿಯಾದಲ್ಲಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರನ್ನು ಭೇಟಿಯಾಗುವ ಕೆಲ ನಿಮಿಷಗಳ ಮೊದಲ ಅಣ್ವಸ್ತ್ರ ಪರೀಕ್ಷೆ ಪರೀಕ್ಷೆ ಮಾಡುವಂತೆ ರಕ್ಷಣಾ ಸಚಿವಾಲಯಕ್ಕೆ ಸೂಚಿಸಿದ ಬಗ್ಗೆ ಟ್ರುತ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅದರಲ್ಲಿ, ‘ಅತಿ ಹೆಚ್ಚು ಅಣ್ವಸ್ತ್ರಗಳಿರುವುದು ಅಮೆರಿಕದ ಬಳಿ. 2ನೇ ಸ್ಥಾನದಲ್ಲಿ ರಷ್ಯಾ ಹಾಗೂ 3ನೇ ಸ್ಥಾನದಲ್ಲಿ ಚೀನಾ ಇದೆ. ಇನ್ನೈದು ವರ್ಷಗಳಲ್ಲಿ ಮೂರೂ ರಾಷ್ಟ್ರಗಳ ತಾಕತ್ತು ಸಮವಾಗುತ್ತದೆ. ಬೇರೆ ರಾಷ್ಟ್ರಗಳು ಅಣ್ವಸ್ತ್ರ ಪರೀಕ್ಷೆ ನಡೆಸುತ್ತಿರುವುದರಿಂದ, ಅವರಿಗೆ ಸಮನಾಗಿ ನಿಲ್ಲಲು ನಾನೂ ಸಹ ಅದಕ್ಕೆ ಆದೇಶಿಸಿದ್ದೇನೆ’ ಎಂದಿದ್ದಾರೆ.

1992ರ ಅಕ್ಟೋಬರ್‌ನಲ್ಲಿ ಏಕಪಕ್ಷೀಯವಾಗಿ ಅಣ್ವಸ್ತ್ರ ಪರೀಕ್ಷೆ ನಿಷೇಧ

ಶೀತಲಸಮರದ ಬಳಿಕ ಅಂದು ಅಧ್ಯಕ್ಷರಾಗಿದ್ದ ಜಾರ್ಜ್‌ ಬುಷ್‌ ಅವರು 1992ರ ಅಕ್ಟೋಬರ್‌ನಲ್ಲಿ ಏಕಪಕ್ಷೀಯವಾಗಿ ಅಣ್ವಸ್ತ್ರ ಪರೀಕ್ಷೆ ನಡೆಸುವುದನ್ನು ನಿಷೇಧಿಸುವುದಾಗಿ ಘೋಷಿಸಿದ್ದರು. ಇಂದಿನವರೆಗೂ ಪಾಲನೆಯಾಗುತ್ತಿದ್ದು, ಅಮೆರಿಕ ಕೇವಲ ಅಣುಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯದ ಕ್ಷಿಪಣಿಗಳ ಪರೀಕ್ಷೆ ನಡೆಸುತ್ತಿತ್ತೇ ಹೊರತು, ಅವುಗಳನ್ನು ಸ್ಫೋಟಿಸುತ್ತಿರಲಿಲ್ಲ. ಜತೆಗೆ ಅಣ್ವಸ್ತ್ರಗಳ ಸಾಮರ್ಥ್ಯ ಹಾಗೂ ಕಾರ್ಯಕ್ಷಮತೆಯನ್ನು ಕಂಪ್ಯೂಟರ್‌ ಮಾಡೆಲಿಂಗ್‌ ಮೂಲಕ ಪರೀಕ್ಷಿಸುತ್ತಿತ್ತು. ಆದರೆ ಟ್ರಂಪ್‌ ಈಗ ಅದನ್ನು ಉಲ್ಲಂಘಿಸಲು ಮುಂದಾಗಿದ್ದಾರೆ. ಈ ಬಗ್ಗೆ ವೈಟ್‌ಹೌಸ್‌ ಅಥವಾ ರಕ್ಷಣಾ ಸಚಿವಾಲಯದಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಾದರೂ, ಹಲವು ಅಣುಶಕ್ತ ದೇಶಗಳು ಸಂಘರ್ಷದಲ್ಲಿ ತೊಡಗಿರುವ ಹೊತ್ತಿನಲ್ಲಿ ಇದು ಮಹತ್ವ ಪಡೆದುಕೊಂಡಿದೆ.

ಇತ್ತೀಚೆಗಷ್ಟೇ ನೀರೊಳಗೆ ಕಾರ್ಯಾಚರಿಸುವ ಅಣು ಸಾಮರ್ಥ್ಯದ ಡ್ರೋನ್ ಮತ್ತು ಹೊಸ ಪರಮಾಣು ಚಾಲಿತ ಕ್ರೂಸ್ ಕ್ಷಿಪಣಿಯನ್ನು ರಷ್ಯಾ ಪರೀಕ್ಷಿಸಿತ್ತು ಎಂಬುದು ಗಮನಾರ್ಹ.