ಬೆಂಗಳೂರು ಕೇವಲ ಟ್ರಾಫಿಕ್‌ಗೆ ಅಷ್ಟೇ ಅಲ್ಲ, ಮಾನವೀಯತೆಯಲ್ಲಿಯೂ ಅದ್ಭುತವೆಂದು ಹಿಂದಿ ಭಾಷಿಕ ಟೆಕ್ಕಿಯೊಬ್ಬರು ಹೇಳಿದ್ದಾರೆ. ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ಪರದಾಡುತ್ತಿದ್ದ ಟೆಕ್ಕಿಗೆ, ಸಹಾಯ ಕೇಳದಿದ್ದರೂ ರಾಪಿಡೋ ಚಾಲಕ ತನ್ನ ಬೈಕ್‌ನಿಂದ ಪೆಟ್ರೋಲ್ ತೆಗದುಕೊಟ್ಟು, ಹಣ ಪಡೆಯದೇ ಸಹಾಯ ಮಾಡಿದ್ದಾರೆ. 

ಬೆಂಗಳೂರು (ಅ.02): ಟ್ರಾಫಿಕ್ (ಸಂಚಾರ ದಟ್ಟಣೆ), ಕಠಿಣ ಜೀವನಶೈಲಿ ಮತ್ತು ತಂತ್ರಜ್ಞಾನದ ಓಟದಲ್ಲಿ ಕೆಲವೊಮ್ಮೆ ಮರೆಯಾಗುವ ಮಾನವೀಯತೆ ಮತ್ತು ಸಹಾಯ ಮನೋಭಾವ ಬೆಂಗಳೂರಿನಲ್ಲಿ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿ ಒಂದು ಹೃದಯಸ್ಪರ್ಶಿ ಘಟನೆ ಬೆಳಕಿಗೆ ಬಂದಿದೆ. ರಸ್ತೆಯಲ್ಲಿ ಪೆಟ್ರೋಲ್ ಖಾಲಿಯಾಗಿ ಪರದಾಡುತ್ತಿದ್ದ ಟೆಕ್ಕಿಯೊಬ್ಬರಿಗೆ ರಾಪಿಡೋ ಬೈಕ್ ಚಾಲಕರೊಬ್ಬರು ತಮ್ಮ ಬೈಕ್‌ನಿಂದಲೇ ಪೆಟ್ರೋಲ್ ತೆಗೆದುಕೊಟ್ಟು ನೆರವಾಗಿದ್ದಾರೆ. ಈ ಘಟನೆಯನ್ನು ಟೆಕ್ಕಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ದುರ್ಗಾ ಪೂಜೆಯ ಸಂದರ್ಭದಲ್ಲಿ ಸ್ಕೂಟರ್ ನಿಂತು ಹೋಗಿತ್ತು:

ದುರ್ಗಾ ಪೂಜಾ ಆಚರಣೆಗಾಗಿ ಟೆಕ್ಕಿಯೊಬ್ಬರು ಸ್ನೇಹಿತರೊಂದಿಗೆ ಪ್ರಯಾಣಿಸಲು ಸ್ಕೂಟರ್ ಬಾಡಿಗೆಗೆ ಪಡೆದಿದ್ದರು. ಆದರೆ, ಮೊದಲ ಪೆಟ್ರೋಲ್ ಬಂಕ್ ತಲುಪುವ ಮೊದಲೇ ರಸ್ತೆಯ ಮಧ್ಯದಲ್ಲಿ ಸ್ಕೂಟರ್‌ನಲ್ಲಿ ಇಂಧನ ಖಾಲಿಯಾಯಿತು. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚು ಇರುವುದರಿಂದ, ಸ್ಕೂಟರ್ ಅನ್ನು ತಳ್ಳಿಕೊಂಡು ಪೆಟ್ರೋಲ್ ಬಂಕ್ ತಲುಪುವುದು ಅಸಾಧ್ಯವಾಗಿತ್ತು. ಕೂಡಲೇ ಟೆಕ್ಕಿ ರಾಪಿಡೋ ಬುಕ್ ಮಾಡಿ, ಚಾಲಕರಿಗೆ ತಮ್ಮ ಪರಿಸ್ಥಿತಿಯನ್ನು ವಿವರಿಸಿ, ಹತ್ತಿರದ ಪೆಟ್ರೋಲ್ ಬಂಕ್‌ಗೆ ಹೋಗೋಣ ಎಂದು ಹೇಳಿದ್ದಾರೆ. ಆದರೆ, ಬಂಕ್‌ಗಳಲ್ಲಿ ಬಾಟಲಿಯಲ್ಲಿ ಪೆಟ್ರೋಲ್ ನೀಡುವುದಿಲ್ಲ ಎಂಬುದೂ ಅವರಿಗೆ ತಿಳಿದಿತ್ತು.

ಕೇಳದಿದ್ದರೂ ನೆರವಿಗೆ ಧಾವಿಸಿದ ಚಾಲಕ:

ಟೆಕ್ಕಿಯವರ ಸಂಕಷ್ಟವನ್ನು ಅರಿತ ರಾಪಿಡೋ ಚಾಲಕರು ಒಂದು ಕ್ಷಣವೂ ಯೋಚಿಸದೆ ತಮ್ಮ ಬೈಕ್‌ನ ಟ್ಯಾಂಕ್‌ನಿಂದಲೇ ಪೆಟ್ರೋಲ್ ತೆಗೆದು ಟೆಕ್ಕಿಯವರ ಸ್ಕೂಟರ್‌ಗೆ ಹಾಕಿದ್ದಾರೆ. ಇಲ್ಲಿ ಟೆಕ್ಕಿ ಸಹಾಯಕ್ಕಾಗಿ ಕೇಳದಿದ್ದರೂ, ಚಾಲಕರೇ ಸ್ವತಃ ಮುಂದೆ ಬಂದು ನೆರವಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ ಟೆಕ್ಕಿ, 'ನಾನು ಹಿಂದಿಯಲ್ಲಿ ಮಾತನಾಡುತ್ತಿದ್ದೆ. ಚಾಲಕರು ನನ್ನೊಂದಿಗೆ ಸಹಕಾರದಿಂದ ವರ್ತಿಸಿದರು. ನಂತರ ಸ್ಕೂಟರ್ ಸ್ಟಾರ್ಟ್ ಮಾಡಲು ಸಹಾಯ ಮಾಡಿದರು. ಮುಖ್ಯವಾಗಿ, ಅವರು ನೀಡಿದ ಪೆಟ್ರೋಲ್‌ಗೆ ಹಣ ಕೇಳಿದಾಗ ಅದನ್ನು ತೆಗೆದುಕೊಳ್ಳಲು ಸಹ ನಿರಾಕರಿಸಿದರು' ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ.

Scroll to load tweet…

ಇದು ಅಸಾಮಾನ್ಯವೇನಲ್ಲ ಎಂದ ನೆಟ್ಟಿಗರು:

ಈ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ 'ಬೆಂಗಳೂರು ಅದ್ಭುತ' (Bengaluru is awesome!) ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅನೇಕ ನೆಟ್ಟಿಗರು, 'ಗಲಾಟೆ ಮಾಡುವ ಜನರ ಮಾತು ಕೇಳಬೇಡಿ. ಸಮಾಜದಲ್ಲಿ ಇಂತಹ ಹೃದಯವಂತರು ಹತ್ತಾರು ಪಟ್ಟು ಹೆಚ್ಚಿದ್ದಾರೆ, ಆದರೆ ಮಾಧ್ಯಮಗಳು ಅದನ್ನು ತೋರಿಸುವುದಿಲ್ಲ' ಎಂದು ಹೇಳಿದ್ದಾರೆ.

ಇದೇ ರೀತಿ, ಇನ್ನೊಬ್ಬರು 'ನಾನು 2019 ರಲ್ಲಿ ಮೊದಲ ಬಾರಿಗೆ ಬೆಂಗಳೂರಿಗೆ ಬಂದಾಗ ವಿಮಾನ ನಿಲ್ದಾಣದಿಂದ ಕ್ಯಾಬ್‌ಗೆ ₹1000 ಬಾಡಿಗೆಯಾಗಿತ್ತು. ಆದರೆ ನನ್ನ ಬಳಿ ₹900 ನಗದು ಮಾತ್ರ ಇತ್ತು. ಉಳಿದ ₹100 ಅನ್ನು ಯುಪಿಐ ಮೂಲಕ ಪಾವತಿಸಲು ಮುಂದಾದಾಗ, ಆ ಚಾಲಕ 'ಬೇಡ ಸರ್, ಪರವಾಗಿಲ್ಲ' ಎಂದು ಹೇಳಿ ₹100 ಅನ್ನು ತೆಗೆದುಕೊಳ್ಳಲಿಲ್ಲ ಎಂದು ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಮತ್ತೊಬ್ಬರು, ಕಾಲಿಗೆ ಪೆಟ್ಟಾಗಿ ರಕ್ತ ಬರುತ್ತಿದ್ದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಊಬರ್ ಬೈಕ್ ಚಾಲಕ, ಆಸ್ಪತ್ರೆ ಮುಚ್ಚಿದ್ದರಿಂದ ಮತ್ತೊಂದು ಆಸ್ಪತ್ರೆಗೆ ಕರೆದೊಯ್ದು, ಹೆಚ್ಚುವರಿ ಹಣ ಕೊಡಲು ಹೋದಾಗ ಬಸ್ ಆಪ್ ಥಿಕ್ ಹೋ ಜಾಯಿಂಯೇ (ನೀವು ಬೇಗ ಗುಣಮುಖರಾಗಿ) ಎಂದು ಹೇಳಿ ಹಣ ನಿರಾಕರಿಸಿದ್ದಾಗಿ ಹೇಳಿದ್ದಾರೆ.

ಒಟ್ಟಿನಲ್ಲಿ, ಈ ಸಣ್ಣ ಸಣ್ಣ ಘಟನೆಗಳು ಬೆಂಗಳೂರಿನ ಗಡಿಬಿಡಿಯ ಜೀವನದ ನಡುವೆಯೂ ಜನರ ನಡುವೆ ಇರುವ ಪ್ರೀತಿ ಮತ್ತು ಸಹಕಾರದ ಸಣ್ಣ ಹೊಳಹುಗಳನ್ನು ಪರಿಚಯಿಸಿವೆ.