Katrina Kaif Private Photos Leaked Pregnant Actress's Privacy Violated ನಟಿ ಕತ್ರಿನಾ ಕೈಫ್ ಗರ್ಭಿಣಿಯಾಗಿದ್ದಾಗ ಅವರ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿದ್ದ ಖಾಸಗಿ ಫೋಟೋಗಳು ಸೋರಿಕೆಯಾಗಿವೆ. ಅನುಮತಿಯಿಲ್ಲದೆ ತೆಗೆದ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಂಬೈ (ಅ.31): ನಟಿ ಕತ್ರಿನಾ ಕೈಫ್ ಅವರ ಪ್ರೈವೇಟ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಪತಿ ವಿಕ್ಕಿ ಕೌಶಾಲ್ ಅವರ ಮೊದಲ ಮಗುವಿಗೆ ಗರ್ಭಿಣಿಯಾಗಿರುವ ಕತ್ರಿನಾ ಕೈಫ್ ಶೀಘ್ರದಲ್ಲಿಯೇ ಮಗುವಿಗೆ ಜನ್ಮ ನೀಡುವ ಹಾದಿಯಲ್ಲಿದ್ದಾರೆ. ಈ ನಡುವೆ ಅವರ ಪ್ರೈವೇಟ್ ಫೋಟೋಗಳು ಲೀಕ್ ಆಗಿರುವುದು ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಗರ್ಭಿಣಿಯಾಗಿರುವ ಕತ್ರಿನಾ ಕೈಫ್ ಮುಂಬೈ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿ ನಿಂತಿರುವಾಗ ಫೋಟೋ ತೆಗೆಯಲಾಗಿದೆ. ಈ ಖಾಸಗಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಾಲಿವುಡ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅವರ ಅನುಮತಿಯಿಲ್ಲದೆ ತೆಗೆದ ಈ ಫೋಟೋಗಳಲ್ಲಿ ಗರ್ಭವತಿಯಾಗಿರುವ ಕತ್ರಿನಾ ಕೈಫ್ ಅವರ ಹೊಟ್ಟೆ ಸ್ಪಷ್ಟವಾಗಿ ಕಂಡಿದೆ.
ಕತ್ರಿನಾ ಯಾವಾಗಲೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅತ್ಯಂತ ಜಾಗರೂಕರಾಗುತ್ತಾರೆ. ಯಾವ ಮಾಹಿತಿಯನ್ನೂ ಅವರು ಹಂಚಿಕೊಳ್ಳುವುದಿಲ್ಲ. ಆದರೆ ಈ ಬಾರಿ ಅವರ ಗೌಪ್ಯತೆಗೆ ಬಹಿರಂಗವಾಗಿ ಧಕ್ಕೆ ತರಲಾಗಿದೆ. ಈ ಘಟನೆಯಿಂದ ಅಭಿಮಾನಿಗಳು ಮತ್ತು ಸಹನಟರು ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ.
ಆಗಿದ್ದೇನು?
ಮೀಡಿಯಾ ಪೋರ್ಟಲ್ ಜೂಮ್, ಕತ್ರಿನಾ ಕೈಫ್ ತಮ್ಮ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿರುವ ಫೋಟೋವನ್ನು ಪೋಸ್ಟ್ ಮಾಡಿತ್ತು. ಡೆಲಿವರಿ ಡಿನ ಹತ್ತಿರುವ ಬರುತ್ತಿದ್ದಂತೆ ಕತ್ರಿನಾ ಕೈಫ್ ಹೀಗೆ ಕಾಣುತ್ತಿದ್ದಾರೆ ಎಂದು ಫೋಟೋ ಸಹಿತ ಜೂಮ್ ಪೋಸ್ಟ್ ಮಾಡಿತ್ತು. ಇದನ್ನು ಕೆಲವು ಮಾಧ್ಯಮಗಳು ಸುದ್ದಿ ಮಾಡಿದ್ದವು. ಆದರೆ, ವಿರೋಧ ವ್ಯಕ್ತವಾಗುತ್ತಿದ್ದಂತೆ ಜೂಮ್ ತನ್ನ ಇನ್ಸ್‌ಟಾಗ್ರಾಮ್ ಖಾತೆಯಿಂದ ಫೋಟೋವನ್ನು ಡಿಲೀಟ್ ಮಾಡಿದೆ.
ಫೋಟೋ ವೈರಲ್ ಆಗಿದ್ದಕ್ಕೆ ಅಸಮಾಧಾನ
ಫೋಟೋಗಳು ವೈರಲ್ ಆದ ತಕ್ಷಣ, ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಮಾಧ್ಯಮಗಳು ಮತ್ತು ಛಾಯಾಗ್ರಾಹಕರ ಮೇಲೆ ತಮ್ಮ ಕೋಪವನ್ನು ವ್ಯಕ್ತಪಡಿಸಿದರು. ಅಭಿಮಾನಿಗಳು ಇದನ್ನು "ಗೌಪ್ಯತೆ ಉಲ್ಲಂಘನೆ" ಮತ್ತು "ಕ್ರಿಮಿನಲ್ ಕೃತ್ಯ" ಎಂದು ಕರೆದರು ಮತ್ತು ಪೊಲೀಸ್ ಕ್ರಮಕ್ಕೆ ಒತ್ತಾಯಿಸಿದರು. ಸೆಲೆಬ್ರಿಟಿಗಳು ಸಾಮಾನ್ಯ ಜನರಂತೆ ತಮ್ಮ ಜೀವನವನ್ನು ನಡೆಸಲು ಬಯಸುತ್ತಾರೆ ಮತ್ತು ಅವರ ಗೌಪ್ಯತೆಯನ್ನು ಗೌರವಿಸಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಸೋನಾಕ್ಷಿ ಸಿನ್ಹಾ ಸಿಟ್ಟು
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮೀಡಿಯಾ ಪೋರ್ಟಲ್‌ಗಳ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ಬರೆದುಕೊಂಡಿರುವ ಆಕೆ, "ನಿಮ್ಮಿಂದ ಏನು ತಪ್ಪಾಗಿದೆ? ಒಬ್ಬ ಮಹಿಳೆಯ ಅನುಮತಿಯಿಲ್ಲದೆ ಆಕೆಯ ಸ್ವಂತ ಮನೆಯಲ್ಲಿ ಅವರ ಫೋಟೋಗಳನ್ನು ತೆಗೆದು ಸಾರ್ವಜನಿಕಗೊಳಿಸುವುದು ಸರಿಯೇ? ನೀವು ಅಪರಾಧಿಗಳಿಗಿಂತ ಕಡಿಮೆಯಿಲ್ಲ. ನಾಚಿಕೆಗೇಡಿನ ಸಂಗತಿ!" ಎಂದು ಟೀಕಿಸಿದ್ದಾರೆ. ಸೋನಾಕ್ಷಿ ಅವರ ಪ್ರತಿಕ್ರಿಯೆ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಸಾವಿರಾರು ಲೈಕ್‌ಗಳು ಮತ್ತು ಬೆಂಬಲವನ್ನು ಗಳಿಸಿ, ಗೌಪ್ಯತೆಯ ಕುರಿತಾದ ಚರ್ಚೆಯನ್ನು ಮತ್ತಷ್ಟು ಹೆಚ್ಚಿಸಿತು.
ಹಿಂದೆಯೂ ಆಗಿತ್ತು ಇಂಥ ಘಟನೆಗಳು
ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ. ಇತ್ತೀಚೆಗೆ, ಆಲಿಯಾ ಭಟ್ ಅವರ ಖಾಸಗಿ ಫೋಟೋಗಳನ್ನು ಅವರ ಮನೆಯ ಹೊರಗೆ ತೆಗೆದು ಪ್ರಸಾರ ಮಾಡಲಾಯಿತು. ನಂತರ ಆಲಿಯಾ ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಕರೆ ನೀಡಿದರು. ತಾನು ಮನೆಯಲ್ಲಿ ಶಾಂತಿಯುತವಾಗಿ ಕುಳಿತಿದ್ದಾಗ ಯಾರೋ ತನ್ನನ್ನು ನೋಡುತ್ತಿರುವಂತೆ ಭಾಸವಾಯಿತು ಎಂದು ಅವರು ಬರೆದಿದ್ದಾರೆ.
