ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ವಿಶ್ವ ನಂ.1 ಆಟಗಾರ ಯಾನಿಕ್‌ ಸಿನ್ನರ್‌, ಹಾಲಿ ಚಾಂಪಿಯನ್‌ ಬಾರ್ಬೊರಾ ಕ್ರೆಜಿಕೋವಾ, 5 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡತಿ ಇಗಾ ಸ್ವಿಯಾಟೆಕ್‌ ಮೊದಲ ಸುತ್ತಿನಲ್ಲಿ ಜಯ ಸಾಧಿಸಿದ್ದಾರೆ.

ಲಂಡನ್‌: ಈ ಬಾರಿ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ವಿಶ್ವ ನಂ.1 ಆಟಗಾರ ಯಾನಿಕ್‌ ಸಿನ್ನರ್‌, ಹಾಲಿ ಚಾಂಪಿಯನ್‌ ಬಾರ್ಬೊರಾ ಕ್ರೆಜಿಕೋವಾ, 5 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡತಿ ಇಗಾ ಸ್ವಿಯಾಟೆಕ್‌ ಶುಭಾರಂಭ ಮಾಡಿದ್ದಾರೆ.

ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ 3 ಬಾರಿ ಗ್ರ್ಯಾನ್‌ಸ್ಲಾಂ ವಿಜೇತ, ಇಟಿಲಿಯ ಸಿನ್ನರ್‌ ತಮ್ಮದೇ ದೇಶದ ಲ್ಯೂಕಾ ನಾರ್ಡಿ ವಿರುದ್ಧ 6-4, 6-3, 6-0 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಆದರೆ 24ನೇ ಶ್ರೇಯಾಂಕಿತ, ಗ್ರೀಸ್‌ನ ಸಿಟ್ಸಿಪಾಸ್ ಮೊದಲ ಸುತ್ತಲ್ಲೇ ಸೋತು ಹೊರಬಿದ್ದರು.

ಮಹಿಳಾ ಸಿಂಗಲ್ಸ್‌ನಲ್ಲಿ ಪೋಲೆಂಡ್‌ನ ಸ್ವಿಯಾಟೆಕ್‌ ತಮ್ಮ ಮೊದಲ ಪಂದ್ಯದಲ್ಲಿ ರಷ್ಯಾದ ಪೋಲಿನಾ ಕುದೆರ್‌ಮೆಟೋವಾ ವಿರುದ್ಧ 7-5, 6-1 ನೇರ ಗೇಮ್‌ಗಳಲ್ಲಿ ಜಯಭೇರಿ ಬಾರಿಸಿದರು. ಕಳೆದ ವರ್ಷ ತಮ್ಮ ಚೊಚ್ಚಲ ವಿಂಬಲ್ಡನ್‌ ಗೆದ್ದಿದ್ದ ಚೆಕ್‌ ಗಣರಾಜ್ಯದ ಕ್ರೆಜಿಕೋವಾ, ಫಿಲಿಪ್ಪೀನ್ಸ್‌ನ ಅಲೆಕ್ಸಾಂಡ್ರಾ ಈಲಾ ವಿರುದ್ಧ 3-6, 6-2, 6-1 ಸೆಟ್‌ಗಳಲ್ಲಿ ಗೆದ್ದು 2ನೇ ಸುತ್ತಿಗೇರಿದರು. ಚೀನಾದ 5ನೇ ಶ್ರೇಯಾಂಕಿತ ಝೆಂಗ್‌, ಅಮೆರಿಕದ 3ನೇ ಶ್ರೇಯಾಂಕಿತೆ ಜೆಸ್ಸಿಕಾ ಪೆಗುಲಾ ಆರಂಭಿಕ ಸುತ್ತಿನಲ್ಲೇ ಪರಾಭವಗೊಂಡರು.

246.23 ಕಿ.ಮೀ. ವೇಗ: ವಿಂಬಲ್ಡನ್‌ನಲ್ಲೇ ವೇಗದ ಸರ್ವ್ ಮಾಡಿದ ಎಂಪೆಟ್ಶಿ

ಲಂಡನ್‌: ಫ್ರಾನ್ಸ್‌ನ ಟೆನಿಸಿಗ ಜಿಯೋವಾನಿ ಎಂಪೆಟ್ಶಿ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೂರ್ನಿಯ ಇತಿಹಾಸದಲ್ಲೇ ಅತಿ ವೇಗದ ಸರ್ವ್‌ ಮಾಡಿದ ದಾಖಲೆ ಬರೆದಿದ್ದಾರೆ. ಸೋಮವಾರ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಅಮೆರಿಕದ ಟೇಲರ್‌ ಫ್ರಿಟ್ಜ್‌ ವಿರುದ್ಧ ಜಿಯೋವಾನಿ ಪ್ರತಿ ಗಂಟೆಗೆ 246.23 ಕಿ.ಮೀ. ವೇಗದಲ್ಲಿ ಸರ್ವ್‌ ಮಾಡಿದರು. ಈ ಮೂಲಕ 2010ರಲ್ಲಿ ಅಮೆರಿಕದ ಟೇಲರ್‌ ಡೆಂಟ್‌ ನಿರ್ಮಿಸಿದ್ದ ದಾಖಲೆ ಮುರಿದರು. 

ಡೆಂಟ್‌ ಪ್ರತಿ ಗಂಟೆಗೆ 238.1 ಕಿ.ಮೀ. ವೇಗದಲ್ಲಿ ಸರ್ವ್‌ ಮಾಡಿದ್ದರು. ಜಿಯೋವಾನಿ ಒಟ್ಟಾರೆ ಟೆನಿಸ್‌ ಇತಿಹಾಸದಲ್ಲೇ 9ನೇ ಅತಿ ವೇಗದ ಸರ್ವ್‌ ದಾಖಲೆ ಬರೆದಿದ್ದಾರೆ. 2012ರಲ್ಲಿ ಆಸ್ಟ್ರೇಲಿಯಾದ ಸ್ಯಾಮ್‌ ಗ್ರೋಥ್‌ ಪ್ರತಿ ಗಂಟೆಗೆ 263.4 ಕಿ.ಮೀ. ವೇಗದಲ್ಲಿ ಸರ್ವ್‌ ಮಾಡಿದ್ದು ಈಗಲೂ ದಾಖಲೆ.

ಶಟ್ಲರ್‌ ಆಯುಶ್‌ ಸಾಧನೆಗೆ ಸಿಎಂ, ಡಿಸಿಎಂ ಶ್ಲಾಘನೆ

ಬೆಂಗಳೂರು: ಯುಎಸ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಕರ್ನಾಟಕದ ಯುವ ಶಟ್ಲರ್‌ ಆಯುಶ್‌ ಶೆಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಭಿನಂದನೆ ಸಲ್ಲಿಸಿದ್ದಾರೆ.

‘ವೃತ್ತಿ ಜೀವನದ ಮೊದಲ ಸೂಪರ್-300 ಟೂರ್ನಿಯಲ್ಲೇ ಪ್ರಶಸ್ತಿ ಗೆದ್ದಿರುವ ಈ ಯುವ ಪ್ರತಿಭೆ ಕರ್ನಾಟಕದವನು ಎನ್ನುವುದು ಮತ್ತಷ್ಟು ಖುಷಿ ಹಾಗೂ ಹೆಮ್ಮೆಯ ವಿಚಾರ. ಇವರ ಕ್ರೀಡಾ ಬದುಕು ಇನ್ನಷ್ಟು ಪ್ರಶಸ್ತಿ, ಪುರಸ್ಕಾರಗಳಿಂದ ಕೂಡಿರಲಿ, ಮುಂದೆಯೂ ದೇಶದ ಹಿರಿಮೆಯನ್ನು ಹೆಚ್ಚಿಸಲಿ ಎಂದು ಹಾರೈಸುತ್ತೇನೆ’ ಎಂದು ಸಿದ್ದರಾಮಯ್ಯ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ‘ಕರ್ನಾಟಕದ ಯುವ ಪ್ರತಿಭೆಯಿಂದ ಚಾರಿತ್ರಿಕ ಸಾಧನೆ. ಭವಿಷ್ಯದಲ್ಲಿ ಕರ್ನಾಟಕ, ಭಾರತವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ’ ಎಂದು ಡಿಕೆಶಿ ಹಾರೈಸಿದ್ದಾರೆ.

ಬ್ಯಾಡ್ಮಿಂಟನ್‌: ತಾನ್ವಿ ಜೂನಿಯರ್‌ ವಿಶ್ವ ನಂ.1

ನವದೆಹಲಿ: ಯುಎಸ್‌ ಓಪನ್‌ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ರನ್ನರ್‌ ಆಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಭಾರತದ ತಾನ್ವಿ ಶರ್ಮಾ ಮಹಿಳಾ ಸಿಂಗಲ್ಸ್‌ ಕಿರಿಯರ ವಿಭಾಗದ ವಿಶ್ವ ರ್‍ಯಾಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೂರನೇ ಆಟಗಾರ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 16 ವರ್ಷದ ತಾನ್ವಿ 14 ಪಂದ್ಯಗಳಿಂದ 19,730 ರೇಟಿಂಗ್‌ ಅಂಕ ಗಳಿಸಿದ್ದಾರೆ. ಅವರು ಥಾಯ್ಲೆಂಡ್‌ನ ಅನ್ಯಾಪತ್ ಫಿಚಿತ್ ಪ್ರೀಚಾಸಕ್‌ರನ್ನು ಹಿಂದಿಕ್ಕಿ ನಂ.1 ಪಟ್ಟ ಅಲಂಕರಿಸಿದ್ದಾರೆ. ಈ ಹಿಂದೆ ಭಾರತದ ತಸ್ನೀಮ್‌ ಮೀರ್‌, ಅನುಪಮಾ ಉಪಾಧ್ಯಾಯ ಕೂಡಾ ವಿಶ್ವ ನಂ.1 ಆಗಿದ್ದರು.