ಗುಜರಾತ್ ಜೈಂಟ್ಸ್ ವಿರುದ್ಧದ ಹೈವೋಲ್ಟೇಜ್ ಕಬಡ್ಡಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 28-24 ಅಂಕಗಳಿಂದ ಜಯಭೇರಿ ಬಾರಿಸಿದೆ. ಈ ಮೂಲಕ ಸತತ ಸೋಲಿನ ಬಳಿಕ ಗೆಲುವಿನ ಹಳಿಗೆ ಮರಳಿದ ಬುಲ್ಸ್, ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದೆ.

ಜೈಪುರ: ರಕ್ಷಣಾತ್ಮಕ ಆಟಕ್ಕೆ ಸಾಕ್ಷಿಯಾದ ಬೆಂಗಳೂರು ಬುಲ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವಿನ ಹೈವೋಲ್ವೇಜ್ ಹಣಾಹಣಿಯಲ್ಲಿ ಮಾಜಿ ಚಾಂಪಿಯನ್ ಬುಲ್ಸ್ ತಂಡ 28-24 ಅಂಕಗಳಿಂದ ಜಯಭೇರಿ ಬಾರಿಸಿತು. ಆ ಮೂಲಕ ಈ ಆವೃತ್ತಿಯಲ್ಲಿ 5ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿಯಿತು.

ಮೊದಲ 3 ಪಂದ್ಯಗಳಲ್ಲಿ ಸೋಲುಂಡಿದ್ದ ಬುಲ್ಸ್, ಆ ಬಳಿಕ ಸತತ 4 ಜಯ ಸಾಧಿಸಿತ್ತು. ಆದರೆ ಕಳೆದ ಪಂದ್ಯದಲ್ಲಿ ತಂಡ ಸೋಲುಂಡಿತ್ತು. ಇದೀಗ ಜಯದ ಹಳಿಗೆ ವಾಪಸಾಗಿದೆ. ಇದೇ ವೇಳೆ ಜೈಂಟ್ಸ್ 6ನೇ ಸೋಲಿಗೆ ಗುರಿಯಾಗಿ ಕೊನೆ ಸ್ಥಾನದಲ್ಲಿದೆ. ಮೊದಲಾರ್ಧದಲ್ಲಿ 2 ಬಾರಿ ಆಲೌಟ್ ಆಗುವುದನ್ನು ತಪ್ಪಿಸಿಕೊಂಡ ಬುಲ್ಸ್ 20 ನಿಮಿಷಗಳ ಆಟದ ಮುಕ್ತಾಯಕ್ಕೆ 17-13ರ ಮುನ್ನಡೆ ಗಳಿಸಿತು. ದ್ವಿತೀಯಾರ್ಧದಲ್ಲೂ ಉತ್ತಮ ಡಿಫೆನ್ಸ್ ಪ್ರದರ್ಶಿಸಿದ ಬುಲ್ಸ್ 4 ಅಂಕಗಳ ಜಯ ಸಾಧಿಸಿತು.

ಬೆಂಗಳೂರು ಬುಲ್ಸ್ ಪರ ರೈಡರ್ ಆಕಾಶ್ ಶಿಂಧೆ 7 ಅಂಕ ಗಳಿಸಿದರೆ, ನಾಯಕ ಯೋಗೇಶ್ 6 ಟ್ಯಾಕಲ್ ಅಂಕ ಪಡೆದರು. ಬುಲ್ಸ್ ತನ್ನ ಮುಂದಿನ ಪಂದ್ಯವನ್ನು ಸೆ.25ರಂದು ಯು.ಪಿ. ಯೋಧಾಸ್ ವಿರುದ್ಧ ಆಡಲಿದೆ. ಸೋಮವಾರದ 2ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಯು.ಪಿ. ಯೋಧಾಸ್ 39-22 ಅಂಕಗಳಲ್ಲಿ ಜಯಿಸಿತು.

ಅ.1ಕ್ಕೆ ಮುಂಬೈಗೆ ಬೋಲ್ಡ್

ಮುಂಬೈ: ಅ.1ರಂದು ಮುಂಬೈನಲ್ಲಿ ನಡೆಯಲಿರುವ ಬಿಎಫ್‌ಸಿ ಮತ್ತು ಮುಂಬೈ ಸಿಟಿ ಎಫ್‌ಸಿ ನಡುವಿನ ಪ್ರದರ್ಶನ ಫುಟ್ಬಾಲ್ ಪಂದ್ಯದಲ್ಲಿ ಭಾಗಿಯಾಗಲು ತಾರಾ ಓಟಗಾರ ಉಸೇನ್‌ ಬೋಲ್ಟ್ ಭಾರತಕ್ಕೆ ಬರಲಿದ್ದಾರೆ. ಪೂಮಾ ಆಯೋಜಿಸುತ್ತಿರುವ ಈ ಪಂದ್ಯಗಳು ಸೆ.30ರಿಂದ ಆರಂಭವಾಗಲಿದ್ದು, ಜಮೈಕಾದ ತಾರೆ ಅ.1ರಂದು ಉಭಯ ತಂಡಗಳ ಪರ ತಲಾ ಅರ್ಧ ಅವಧಿಗೆ ಆಡಲಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಬೋಲ್ಟ್ ಜತೆಗೆ ಅನೇಕ ಫುಟ್ಬಾಲ್ ತಾರೆಗಳು, ಬಾಲಿವುಡ್ ಕಲಾವಿದರ ಭಾಗವಹಿಸಲಿದ್ದಾರೆ.

ಇಂದಿನಿಂದ ಕೊರಿಯಾ ಓಪನ್: ಕನ್ನಡಿಗ ಆಯುಷ್ ಮೇಲೆ ಹೆಚ್ಚಿನ ನಿರೀಕ್ಷೆ

ಸುವೊನ್ (ಕೊರಿಯಾ): ಮಂಗಳವಾರ ಇಲ್ಲಿ ಆರಂಭಗೊ ಳ್ಳಲಿರುವ ಕೊರಿಯಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕರ್ನಾಟಕದ ಆಯುಷ್‌ ಶೆಟ್ಟಿ ಹಾಗೂ ತಾರಾ ಶಟ್ಲರ್ ಎಚ್.ಎಸ್.ಪ್ರಣಯ್, ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಅನುಪಮಾ ಉಪಾಧ್ಯಾಯ ಮೇಲೆ ನಿರೀಕ್ಷೆ ಇಡಲಾಗಿದೆ. ಸಾತ್ವಿಕ್ -ಚಿರಾಗ್ ಈ ಟೂರ್ನಿಗೆ ಗೈರಾಗಲಿದ್ದಾರೆ.