‘ಇಸ್ಲಾಂ ಒಂದು ಧರ್ಮ ಸಂದೇಶ’ ಪುಸ್ತಕದಲ್ಲಿ ಆಚಾರ್ಯ ವಿನೋಭಾ ಭಾವೆಯವರು ಇಸ್ಲಾಂ ಎಂದರೆ ಶಾಂತಿ, ಪೈಗಂಬರ್ ಎಂದರೆ ಶಾಂತಿದೂತ ಅನ್ನುವುದನ್ನು ತುಂಬಾ ಅರ್ಥಪೂರ್ಣವಾಗಿ ವಿವರಿಸಿದ್ದಾರೆ.

ಡಾ.ಮೊಹಮ್ಮದ ಅಶ್ರಫ್ ದ ಸಮುದ್ರಿ, ಪ್ರಾಧ್ಯಾಪಕರು.

ಮೆಕ್ಕಾ ಶಹರದಲ್ಲಿ ಪ್ರವಾದಿಯವರ ಪಕ್ಕದ ಮನೆಯಲ್ಲಿ ಮುದುಕಿಯೊಬ್ಬಳು ವಾಸವಾಗಿದ್ದಳು. ಪ್ರವಾದಿಯವರು ಪ್ರತಿ ದಿವಸ ಸ್ನಾನ ಮಾಡಿ ಶುಚಿ ಬಟ್ಟೆ ಧರಿಸಿ ಮನೆಯಿಂದ ಹೊರಗೆ ಹೋಗುವಾಗ ಮುದುಕಿ ತಮ್ಮ ಮನೆಯ ಕಸವನ್ನು ಅವರ ಮೇಲೆ ಹಾಕುತ್ತಿದ್ದಳು. ಮತ್ತೆ ಪ್ರವಾದಿಯವರು ಅಶುಚಿ ಬಟ್ಟೆ ಬದಲಾಯಿಸಿ ಹೋಗುತ್ತಿದ್ದರು. ಅವಳಿಗೆ ಏನನ್ನೂ ಹೇಳುತ್ತಿರಲಿಲ್ಲ. ಹೀಗೆ ಒಂದು ದಿವಸ ಆ ಮುದುಕಿ ಇವರ ಮೇಲೆ ಕಸವನ್ನು ಹಾಕಲಿಲ್ಲ. ವಿಚಾರಿಸಲಾಗಿ ಮುದುಕಿ ಅನಾರೋಗ್ಯದಿಂದ ಬಳಲುತ್ತಿದ್ದಳು. ಇದನ್ನು ಅರಿತ ಪ್ರವಾದಿಯವರು ಅವಳ ಮನೆಗೆ ಹೋಗಿ ಅವಳ ಶುಶ್ರೂಷೆ ಮಾಡುತ್ತಾರೆ. ಪ್ರತಿ ನಿತ್ಯ ದ್ವೇಷ-ಅಸೂಯೆಯಿಂದ ಕಿರಿಕಿರಿ ಮಾಡುವ ಜೀವಾಪಾಯದಲ್ಲಿ ಇರುವ ಮುದುಕಿಯನ್ನು ತಮ್ಮ ಶುಶ್ರೂಷೆಯಿಂದ ಪಾರು ಮಾಡುವುದರ ಮೂಲಕ ಹಗೆತನ ಸಾಧಿಸದೆ ಅವಳ ಕಷ್ಟಕ್ಕೆ ನೆರವಾಗುವುದರ ಮೂಲಕ ಅವಳಲ್ಲಿದ್ದ ದ್ವೇಷ ಹಾಗೂ ಅಸೂಯೆಯನ್ನು ಹೋಗಲಾಡಿಸುತ್ತಾರೆ. ಅವಳ ಮನಃಪರಿವರ್ತನೆಗೆ ಕಾರಣೀಭೂತರಾಗುವುದಲ್ಲದೆ ಮಾದರಿ ನಡವಳಿಕೆಗೆ ಸಾಕ್ಷಿಯಾಗುತ್ತಾರೆ. ಇದು ಪೈಗಂಬರರ ಬಗ್ಗೆ ಒಂದು ದೃಷ್ಟಾಂತ.

‘ಇಸ್ಲಾಂ ಒಂದು ಧರ್ಮ ಸಂದೇಶ’ ಪುಸ್ತಕದಲ್ಲಿ ಆಚಾರ್ಯ ವಿನೋಭಾ ಭಾವೆಯವರು ಇಸ್ಲಾಂ ಎಂದರೆ ಶಾಂತಿ, ಪೈಗಂಬರ್ ಎಂದರೆ ಶಾಂತಿದೂತ ಅನ್ನುವುದನ್ನು ತುಂಬಾ ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ಮನಸ್ಸಿನ ಹಿಡಿತವಿಲ್ಲದೆ ಮನಸಿನ ಬೇಕು ಬೇಡಗಳನ್ನು ಪೂರೈಸಲು ಮಾಡಬಾರದ ಕೆಲಸಗಳನ್ನು ಮಾಡಿ ಸಮಾಜದ ಎಲ್ಲರ ಶಾಂತಿಯನ್ನು ಕದಡಿ ಇವತ್ತಿನ ಈ ಪರಿಸ್ಥಿತಿಗೆ ಬಂದಿದ್ದೇವೆ. ಇನ್ನೊಬ್ಬರ ಬಗ್ಗೆ ವ್ಯತಿರಿಕ್ತವಾಗಿ ಮಾತನಾಡಿ ಮೊದಲು ನಮ್ಮ ಶಾಂತಿ ಹಾಗೂ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಹೀಗಾಗಿ ಪೈಗಂಬರರು ಕೆಲವೊಂದಿಷ್ಟು ಜನರ ಪ್ರಾರ್ಥನೆ ಸ್ವೀಕೃತಿ ಆಗುವುದಿಲ್ಲ ಎಂದಿದ್ದಾರೆ. ಅವರಲ್ಲಿ ಇನ್ನೊಬ್ಬರ ಕುರಿತು ಚಾಡಿ ಮಾತನಾಡುವವರು ಅಗ್ರರು. ಇಂಥವರಿಂದ ಸಮಾಜಕ್ಕೆ ಯಾವುದೇ ರೀತಿಯ ಕೊಡುಗೆ ಸಾಧ್ಯವಿಲ್ಲ. ಇವರು ಎಲ್ಲರ ನೆಮ್ಮದಿಯನ್ನು ಹಾಳು ಮಾಡುತ್ತಾರೆ.

ಶಾಂತಿಯ ಇನ್ನೊಂದು ಅರ್ಥ ಸಹಿಷ್ಣುತೆ. ಇಸ್ಲಾಂ ಧರ್ಮದಲ್ಲಿ ಪರಧರ್ಮ ಸಹಿಷ್ಣುತೆಗೆ ಬಹಳಷ್ಟು ಮಹತ್ವವಿದೆ. ಅನ್ಯ ಧರ್ಮದವರನ್ನು ಪ್ರೀತಿಯಿಂದ ಹಾಗೂ ಅಂತಃಕರಣದಿಂದ ಕಾಣಬೇಕು. ಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ಚಾಚಬೇಕು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರಮುಖ ಆದ್ಯತೆ ಕೊಟ್ಟು ಅವರನ್ನು ಸ್ವಾವಲಂಬಿಗಳನ್ನಾಗಿಸುವಲ್ಲಿ ಪೈಗಂಬರರು ಅಗ್ರರು. ಈ ರೀತಿಯ ತಿಳುವಳಿಕೆ ಸಮಾಜದಲ್ಲಿ ವೈಯಕ್ತಿಕ ಹಾಗೂ ಸಾಮೂಹಿಕ ನಿರ್ಣಯಗಳನ್ನು ತೆಗೆದುಕೊಳ್ಳಲು ಬುನಾದಿಯಾಗಿ ನಿಲ್ಲುತ್ತವೆ. ಹೆಣ್ಣು ಮಕ್ಕಳಿಗೆ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣಕ್ಕೆ ಪ್ರಮುಖ ಆದ್ಯತೆ ಕೊಟ್ಟು ಅವರನ್ನು ಶಕ್ತಿಯುತ ಹಾಗೂ ಆರೋಗ್ಯವಂತ ಸಮಾಜವನ್ನು ಕಟ್ಟಲು ಮನುಕುಲವನ್ನು ಸದೃಢರನ್ನಾಗಿ ಮಾಡುವಲ್ಲಿ ಪೈಗಂಬರರ ಪಾತ್ರ ಪ್ರಶಂಸನೀಯ.

ವಿನೋಬಾ ಭಾವೆಯವರು ಹೇಳಿದ ಕತೆ: ಆಚಾರ್ಯ ವಿನೋಬಾ ಭಾವೆಯವರು ಪಾಲಕರೊಬ್ಬರು ಕರೆತಂದ 3 ವರ್ಷದ ಮಗುವಿನೊಂದಿಗೆ ಮಗುವಾಗಿ ಆಟ ಆಡಿ ಪ್ರಸನ್ನಚಿತ್ತರಾಗಿ ಬಂದ ಸಂದರ್ಭದಲ್ಲಿ ಅವರ ಶಿಷ್ಯ ‘ಗುರುಗಳೆ! ಆ ಮಗು ಮುಸಲ್ಮಾನ ದಂಪತಿಗೆ ಸೇರಿದ್ದು’ ಅಂತ ಹೇಳುತ್ತಾರೆ. ಆಗ ಆಚಾರ್ಯರು ಮಗು ಮನುಷ್ಯ ಜಾತಿಗೆ ಸೇರಿದ್ದು, ನಾನೂ ಒಬ್ಬ ಮನುಷ್ಯ, ಕ್ರೂರ ಪ್ರಾಣಿಯಾಗಿದ್ದರೆ ನಾವಿಬ್ಬರೂ ಇಂತಹ ಸಂತಸ ಕ್ಷಣಗಳನ್ನು ಕಳೆಯಲು ಸಾಧ್ಯವಿತ್ತಾ? ಮಗು ಬೆಳೆಯಲಿ, ಶಿಕ್ಷಣ ಪಡೆಯಲಿ, ಸಂಸ್ಕಾರ ತೆಗೆದುಕೊಳ್ಳಲಿ ಎಂದು ಮನುಷ್ಯತ್ವ ಹಾಗೂ ಶಿಕ್ಷಣದ ಮಹತ್ವವನ್ನು ಹೇಳುತ್ತಾರೆ.

ಧರ್ಮ ಮಾರ್ಗದಲ್ಲಿ ಸಂಪಾದಿಸಬೇಕು: ನಮ್ಮ ಜೀವನದ ಪ್ರತಿಯೊಂದು ಗಳಿಕೆ (ಸಂಪಾದನೆ) ನಮ್ಮ ಪ್ರಾಮಾಣಿಕ ಕೆಲಸ ಹಾಗೂ ಧರ್ಮಮಾರ್ಗದಲ್ಲಿ ಇರಬೇಕು. ಇನ್ನೊಬ್ಬರ ಮನಸು ನೋಯಿಸಿ ಮೋಸದಿಂದ ಸಂಪಾದಿಸಬಾರದು. ಅದನ್ನೇ ಹಲಾಲ್ ಸಂಪಾದನೆ ಎನ್ನುವರು. ಪ್ರತಿ ಪ್ರಾರ್ಥನೆಯಲ್ಲಿ ಹಾಗೂ ಕೆಲಸದಲ್ಲಿ ಪೈಗಂಬರರು ತಮ್ಮನ್ನು ತಾವು ಧರ್ಮ ಮಾರ್ಗದ ಸಂಪಾದನೆಗೆ ಸೀಮಿತಗೊಳಿಸುತ್ತಿದ್ದರು. ನಾವು ಶ್ರಮ ಜೀವಿಗಳು, ಪ್ರಾಮಾಣಿಕರು ಆಗುವುದರೊಂದಿಗೆ ಇನ್ನೊಬ್ಬರ ಪರಿಶ್ರಮಕ್ಕೂ ಬೆಲೆಯನ್ನು ಗೌರವವನ್ನು ಕೊಡುವ ಗುಣಗಳನ್ನು ಅಳವಡಿಸಿಕೊಳ್ಳಬೇಕು (ಬೆಳೆಸಿಕೊಳ್ಳಬೇಕು). ಒಬ್ಬ ಕಾರ್ಮಿಕನಿಂದ ಕೆಲಸ ಮಾಡಿಸಿಕೊಂಡು ಅವನ ಬೆವರಹನಿ ಆರುವ ಮೊದಲೇ ಅವನಿಗೆ ಸಂದುವ ಸಂಭಾವನೆಯನ್ನು ತಲುಪಿಸಬೇಕು ಅನ್ನುವುದು ಪೈಗಂಬರರ ಪ್ರತಿಪಾದನೆ. ಹೀಗೆ ಅವರು ಸಮಾಜದ ಎಲ್ಲ ಸ್ತರದ ವ್ಯಕ್ತಿಗಳು ಹಾಗೂ ಅವರ ಕೆಲಸಕ್ಕೆ ಗೌರವವನ್ನು ಕೊಡುತ್ತಿದ್ದರು.

ಈ ರೀತಿ ಶ್ರಮವಹಿಸುವ ಬಡ ಕಾರ್ಮಿಕರ ಅನಿವಾರ್ಯತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದ ಶ್ರೀಮಂತರು, ಜಮೀನ್ದಾರರು ಇಂತಹ ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡಿಸಿಕೊಂಡು ಶೋಷಣೆ ಮಾಡುತ್ತಿದ್ದದ್ದು ಸಾಮಾನ್ಯವಾಗಿತ್ತು. ಹಜರತ್ ಬಿಲಾಲ್ ಎಂಬ ಗುಲಾಮರನ್ನು ಖರೀದಿಸಿ ತಮ್ಮೊಂದಿಗೆ ಪೈಗಂಬರರು ಕರೆದೊಯ್ಯುತ್ತಾರೆ. ಬಿಲಾಲರಿಗೆ ಒಂದು ಗುಲಾಮಗಿರಿಯಿಂದ ಇನ್ನೊಂದು ಗುಲಾಮಗಿರಿ ಎನ್ನುವ ಹಾಗೆ ಇಂತಹ ಜೀವನ ರೂಢಿಯಾಗಿರುತ್ತದೆ. ಜೀವನ ಹೀಗೆ ಅಂತ ತಿಳಿದು ಅವರು ಪೈಗಂಬರರ ಸೇವೆಯಲ್ಲಿ ನಿರತರಾಗಿರುತ್ತಾರೆ. ಆದರೆ ಪೈಗಂಬರರು ಬಿಲಾಲರಿಗೆ ಇವತ್ತಿನಿಂದ ನೀನು ಯಾರ ಗುಲಾಮನೂ ಅಲ್ಲ, ಮುಕ್ತ ಜೀವನ ನಡೆಸು ಎಂದು ಹೇಳಿ ಗುಲಾಮಗಿರಿಗೆ ಹಾಗೂ ವರ್ಣಾಶ್ರಮಕ್ಕೆ ಮುಕ್ತಿಯನ್ನು ಹೇಳುತ್ತಾರೆ.

ಬೆಳಕು ತೋರಿಸಿದ ಪ್ರವಾದಿ: ಪೈಗಂಬರರು ಜಗತ್ತಿಗೆ ಬೆಳಕನ್ನು ತೋರಿಸಿದ ಪ್ರವಾದಿ. ಅವರು ಆಗರ್ಭ ಶ್ರೀಮಂತ ಮಹಿಳೆಯನ್ನು ಮದುವೆಯಾಗಿ ತಮ್ಮ ಹಾಗೂ ಹೆಂಡತಿಯ ಸಿರಿ ಸಂಪತ್ತನ್ನು ಧರ್ಮದ ಮಾರ್ಗದಲ್ಲಿ ಹಂಚಿ ತ್ಯಾಗಮಾಡಿ ಕೃತಾರ್ಥರಾದವರು. ಶ್ರೀಮಂತಿಕೆಯಲ್ಲಿ ಹುಟ್ಟಿ ಶ್ರೀಮಂತಿಕೆಯನ್ನು ಅನುಭವಿಸಿ ಕೊನೆಕಾಲದಲ್ಲಿ ಅವರಲ್ಲಿ ಇದ್ದದ್ದು ಕೇವಲ ಉಟ್ಟಬಟ್ಟೆ (ಅದೂ ಹರಿದು ತೇಪೆ ಹಾಕಿದ ಶುಚಿಯಾದ ಬಟ್ಟೆ) ಹೊದಿಸಿದ ಶಾಲು. ಒಂದು ಗಡಿಗೆ ನೀರು ಒಪ್ಪತ್ತು ಗಂಜಿಗೆ ಆಗುವಷ್ಟು ಹಿಟ್ಟು ಹಾಗೂ ಎರಡು ಖರ್ಜೂರ್ ಬಿಟ್ಟರೆ ಮನೆಯಲ್ಲಿ ದೀಪ ಹಚ್ಚಲು ಎಣ್ಣೆ ಕೂಡ ಇರಲಿಲ್ಲ. ಜಗತ್ತಿಗೆ ಬೆಳಕು ತೋರಿಸಿದ ಪ್ರವಾದಿಯ ಮನೆಯಲ್ಲಿ ಮನೆ ದೀಪ ಬೆಳಗಲು ಎಣ್ಣೆ ಸಹ ಇರಲಿಲ್ಲ ಅಂದರೇ ಸರ್ವಸ್ವವನ್ನು ಧರ್ಮಮಾರ್ಗದಲ್ಲಿ ತ್ಯಾಗ ಮಾಡಿ (ಖರ್ಚು ಮಾಡಿ) ತಾವು ಮಾಡಿದ ಸತ್ಕಾರ್ಯ ದೇವರನ್ನು ಒಲಿಸಲು ಸಂಪಾದಿಸಿದ ಪುಣ್ಯ, ಧರ್ಮ ಮಾತ್ರ ತಮ್ಮ ಜೊತೆಗೆ ಕರೆದುಕೊಂಡು ಹೋದ ಜಗಜ್ಯೋತಿಯೇ ಮಹಮ್ಮದ್ ಪೈಗಂಬರರು.

ದಯೆ ಎಂಬುವುದು ನಮ್ಮನ್ನು ಹಿಂಸೆಯಿಂದ ದೂರ ಮಾಡಿ ಪ್ರೀತಿ ಅಂತಃಕರಣ ಸೇವೆಗಳಿಗೆ ಹತ್ತಿರ ಮಾಡುತ್ತದೆ. ನಾವು ಹಜ್ ಉಮ್ರಾಹ್ ಯಾತ್ರೆಗಳನ್ನು ಕೈಗೊಂಡ ಸಂದರ್ಭದಲ್ಲಿ ಪರಿಮಳವಿಲ್ಲದ ಆಹಾರ ಸೇವನೆ, ಕೂದಲು ಉಗುರುಗಳನ್ನು ಕತ್ತರಿಸದೇ ಇರುವುದು, ಗಿಡಗಂಟೆಗಳನ್ನು ಕಡಿಯದೆ, ಪ್ರಾಣಿಗಳಿಗೆ ತೊಂದರೆ ಕೊಡದೆ, ಪರಿಸರಕ್ಕೆ ಹಾನಿ ಉಂಟು ಮಾಡದೆ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಬೇಕು. ಹೀಗೆ ಕಟ್ಟುನಿಟ್ಟಿನ ನಿಯಮಗಳು ನಮ್ಮ ಮನಃಪರಿವರ್ತನೆಗೆ ಮುನ್ನುಡಿಯಾಗಿರಬೇಕು. ಪರಿಸರ, ಪ್ರಾಣಿ ಹಾಗೂ ಅನ್ಯ ಜೀವಕ್ಕೆ ದಯೆ ತೋರಲು ಪ್ರೇರಣಾ ಶಕ್ತಿಗಳಾಗಿ ಕೆಲಸಗಳನ್ನು ಮಾಡುತ್ತವೆ. ಹಿಂಸೆ, ಅಸೂಯೆ, ದ್ವೇಷ, ಈರ್ಶೆ ದೂರೀಕರಿಸಿ, ಪ್ರೀತಿ, ಅಂತಃಕರಣ, ದಯೆ, ಸೇವೆ, ಪರಸ್ಪರ ವಿಶ್ವಾಸದಿಂದ ಬದುಕಲು ಸಮಾಜದಲ್ಲಿ ಸಾಮರಸ್ಯ ಸೌಹಾರ್ದತೆಗಳನ್ನು ತಾನಾಗಿಯೇ ಬರುವಂತೆ ಮಾಡುತ್ತವೆ.

ಪೈಗಂಬರರು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಹಾಗೂ ಮಾನವೀಯತೆಯನ್ನು ಆಚರಣೆಯಲ್ಲಿ ತರಲು ತತ್ವಸಿದ್ಧಾಂತಗಳನ್ನು ಪ್ರತಿಪಾದಿಸಿದರು. ಇದೇ ಕಾರಣಕ್ಕೆ ಪವಿತ್ರ ಕುರಾನ್ನಲ್ಲಿ ಓ ಮನುಜರೆ ಓ ಸತ್ಯ ಪರಿಪಾಲಕರೆ ಎಂದು ಮನುಷ್ಯ ಜಾತಿಗೆ ಸಂಬೋಧಿಸಲಾಗಿದೆ ವಿನಃ ಓ ಮುಸಲ್ಮಾನರೆ ಎಂದು ಎಲ್ಲಿಯೂ ಹೇಳಿಲ್ಲ. ಈ ಎಲ್ಲ ತತ್ವ ಸಿದ್ಧಾಂತಗಳನ್ನು ಅರ್ಥೈಸಿ, ಅಳವಡಿಸಿಕೊಂಡಲ್ಲಿ ಸೌಹಾರ್ದತೆ, ಶಾಂತಿ, ನೆಮ್ಮದಿ ಸಮೃದ್ಧಿ ತಾನಾಗಿಯೇ ನೆಲೆಸುತ್ತದೆ ಎಂಬುದು ಪ್ರವಾದಿ ಅವರ ಸಂದೇಶವಾಗಿದೆ.