ರಿಷಬ್‌ ಶೆಟ್ಟಿ ನಾಯಕನಾಗಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ ಚಾಪ್ಟರ್‌ 1’ ಇದೀಗ ಪ್ರಚಾರ ಕಾರ್ಯ ಆರಂಭಿಸಿದೆ. ಅದರ ಮೊದಲ ಹೆಜ್ಜೆಯಾಗಿ ಈ ವಿನ್ಯಾಸ ಮೂಡಿಬಂದಿದೆ.

ಪಿವಿಆರ್‌ ಐನಾಕ್ಸ್‌ ಜೊತೆಗೆ ಹೊಂಬಾಳೆ ಫಿಲಂಸ್‌ ಕೈ ಜೋಡಿಸಿದೆ. ಹೊಂಬಾಳೆ ಬ್ಯಾನರ್‌ನಲ್ಲಿ ನಿರ್ಮಾಣಗೊಂಡು ಅಕ್ಟೋಬರ್‌ 2ರಂದು ಹೊರಬರುತ್ತಿರುವ ಬಹು ನಿರೀಕ್ಷಿತ ‘ಕಾಂತಾರ ಚಾಪ್ಟರ್‌ 1’ ಸಿನಿಮಾದ ಶೀರ್ಷಿಕೆಯಲ್ಲಿರುವ ಬೆಂಕಿಯ ವಿನ್ಯಾಸವನ್ನು ಐನಾಕ್ಸ್‌ ಲೋಗೋದಲ್ಲಿ ಬಳಸಲಾಗಿದೆ. ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಗೆ ಈ ಹೊಸ ಲೋಗೋವನ್ನು ಐನಾಕ್ಸ್‌ ಬಿಡುಗಡೆ ಮಾಡಿದೆ.

ಹೊಂಬಾಳೆ ಫಿಲ್ಮ್ಸ್‌ನ ನಿರ್ಮಾಪಕ ಮತ್ತು ಸ್ಥಾಪಕ ವಿಜಯ್ ಕಿರಗಂದೂರು ಈ ಬಗ್ಗೆ ಮಾತನಾಡಿ, ‘ಭಾರತದ ಅತಿ ದೊಡ್ಡ ಮಲ್ಟಿಪ್ಲೆಕ್ಸ್ ಚೈನ್ ಪಿವಿಆರ್ ಐನಾಕ್ಸ್, ನಮ್ಮ ಕಾಂತಾರ ಚಾಪ್ಟರ್‌ 1 ಚಿತ್ರವನ್ನು ಈ ಅನನ್ಯ ರೀತಿಯಲ್ಲಿ ಸಂಭ್ರಮಿಸುತ್ತಿರುವುದು ಹೆಮ್ಮೆಯ ತಂದಿದೆ ’ ಎಂದಿದ್ದಾರೆ. ಐನಾಕ್ಸ್ ಲಿಮಿಟೆಡ್‌ನ ಸಿಇಓ ಗೌತಮ್ ದತ್ತಾ, ‘ಸ್ವಾತಂತ್ರ್ಯೋತ್ಸವದಂದು ಎಲ್ಲಾ ಪಿವಿಆರ್ ಐನಾಕ್ಸ್ ಚಿತ್ರಮಂದಿರಗಳಲ್ಲಿ ಕಾಂತಾರ ಸಿನಿಮಾದ ಅಗ್ನಿ ವಿನ್ಯಾಸದ ಅನಿಮೇಷನ್ ಹೊಂದಿರುವ ಲೋಗೋವನ್ನು ನೋಡಬಹುದು.

ಇದು ಕಾಂತಾರ ಚಿತ್ರದ ಶಕ್ತಿ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ. ಪ್ರೇಕ್ಷಕರನ್ನು ಕಥಾ ಪ್ರಪಂಚಕ್ಕೆ ಕರೆದೊಯ್ಯುವ ಸಾಧನವಾಗಿ ಒಂದು ಬ್ರಾಂಡ್ ಗುರುತನ್ನೂ ಕೂಡ ಹೇಗೆ ಕ್ರಿಯೇಟಿವ್‌ ಆಗಿ ಬಳಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ’ ಎಂದರು. ರಿಷಬ್‌ ಶೆಟ್ಟಿ ನಾಯಕನಾಗಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ ಚಾಪ್ಟರ್‌ 1’ ಇದೀಗ ಪ್ರಚಾರ ಕಾರ್ಯ ಆರಂಭಿಸಿದೆ. ಅದರ ಮೊದಲ ಹೆಜ್ಜೆಯಾಗಿ ಈ ವಿನ್ಯಾಸ ಮೂಡಿಬಂದಿದೆ.

ಪಿವಿಆರ್ ಐನಾಕ್ಸ್ ಮತ್ತು ಹೊಂಬಾಳೆ ಫಿಲ್ಮ್ಸ್ ಮುಂದಿನ ವಾರಗಳಲ್ಲಿ ಹೊಸ ಆಲೋಚನೆಗಳೊಂದಿಗೆ ಮುಂದೆ ಬರಲಿವೆ. 'ಕಾಂತಾರ' ಚಿತ್ರದ ಬಿಡುಗಡೆಗೆ ಮುನ್ನವೇ ಪ್ರೇಕ್ಷಕರಿಗೆ ಮತ್ತಷ್ಟು ಉತ್ಸಾಹವನ್ನು ತುಂಬಿ, ಅವರನ್ನು ಚಿತ್ರದ ಜಗತ್ತಿಗೆ ಕರೆದೊಯ್ಯುವ ಗುರಿ ಹೊಂದಿವೆ. ಇಂತಹ ಉಪಕ್ರಮಗಳ ಮೂಲಕ, ಪಿವಿಆರ್ ಐನಾಕ್ಸ್, ಹೊಂಬಾಳೆ ಫಿಲ್ಮ್ಸ್ ಜೊತೆ ಸೇರಿ ಭಾರತದಲ್ಲಿ ಸಿನಿಮಾದ ಭವಿಷ್ಯವನ್ನು ರೂಪಿಸುವಲ್ಲಿ ತನ್ನ ನಾಯಕತ್ವವನ್ನು ಪುನರುಚ್ಚರಿಸುತ್ತಿದೆ. ಕೋಟ್ಯಂತರ ಜನರ ಮನಸ್ಸನ್ನು ಗೆಲ್ಲುವ, ಮತ್ತು ಅತ್ಯಾಕರ್ಷಕ ಅನುಭವಗಳನ್ನು ನೀಡಲು ಈ ಸಂಸ್ಥೆಗಳು ಸಿದ್ಧವಾಗಿವೆ.