ನಟ ದರ್ಶನ್‌ಗೆ ಸತತ ಎರಡನೇ ವರ್ಷ ಕುಟುಂಬ ಸಮೇತ ಗಣೇಶ ಹಬ್ಬ ಆಚರಣೆ ಸಂಭ್ರಮ ಇಲ್ಲದಾಗಿದೆ. ಕಳೆದ ವರ್ಷ ಗಣೇಶ ಹಬ್ಬದ ವೇಳೆ ಬಳ್ಳಾರಿ ಜೈಲಿನಲ್ಲಿದ್ದರೆ, ಈ ವರ್ಷ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಬಳ್ಳಾರಿಯಲ್ಲಿ ಗಣೇಶ ಹಬ್ಬ ಆಚರಿಸಿದರೂ ದರ್ಶನ್‌ಗೆ ಗಣೇಶ ದರ್ಶನ ಆಗಲಿಲ್ಲ.

ಬೆಂಗಳೂರು (ಆ.28) ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜಾಮೀನು ಪಡೆದು ಹೊರಬಂದಿದ್ದ ಸ್ಯಾಂಡಲ್‌ವುಟ್ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿತ್ತು. ಹೀಗಾಗಿ ಮತ್ತೆ ಜೈಲು ಸೇರಿದ್ದಾರೆ. ಕಳೆದ ದಿನಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಸತತ 2ನೇ ವರ್ಷವೂ ಗಣೇಶ ಹಬ್ಬದ ಸಂಭ್ರಮ ಮಿಸ್ ಆಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳದ ವರ್ಷ ಅರೆಸ್ಟ್ ಆಗಿದ್ದ ನಟ ದರ್ಶನ್ ಗಣೇಶ ಹಬ್ಬ ಸಂದರ್ಭದಲ್ಲಿ ಜೈಲಿನಲ್ಲಿದ್ದರು. ಇದೀಗ ಈ ಬಾರಿಯೂ ನಟ ದರ್ಶನ್‌ಗೆ ಗಣೇಶ ಹಬ್ಬದ ಸಂಭ್ರಮ ಇಲ್ಲದಾಗಿದೆ. ಈ ಬಾರಿ ಪರಪ್ಪನ ಅಗ್ರಹಾರ ಜೈಲಿನಲ್ಲೇ ಗಣೇಶ ಹಬ್ಬ ಆಚರಿಸಬೇಕಾಗಿದೆ.

ಕಳೆದ ವರ್ಷ ಗಣೇಶ ಹಬ್ಬಕ್ಕೂ ಮೊದಲು ಬಳ್ಳಾರಿಗೆ ಶಿಫ್ಟ್

ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟ ದರ್ಶನ್, ಜೈಲಿನಲ್ಲಿ ರಾಜಾತಿಥ್ಯ ಪಡೆದಿರುವುದು ಬೆಳಕಿಗೆ ಬಂದಿತ್ತು. ಜೈಲಿನಲ್ಲಿ ಆಟಾಟೋಪ ಮಾಡಿದ ಪರಿಣಾಮ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿದ್ದರು. ಬಳ್ಳಾರಿ ಜೈಲಿಗೆ ಶಿಫ್ಟ್ ಆದ ತಿಂಗಳು ಬಳಿಕ ಕಳೆದ ವರ್ಷ ಗಣೇಶ ಹಬ್ಬ ಬಂದಿತ್ತು. ಬಳ್ಳಾರಿ ಜೈಲಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಗಣೇಶ ಹಬ್ಬ ಆಚರಿಸಲಾಗಿತ್ತು. ಆದರೆ ನಟ ದರ್ಶನ್ ಜೈಲಿನಲ್ಲಿ ಗಣೇಶ ದರ್ಶನ ಮಾಡಿರಲಿಲ್ಲ. ಯಾವುದೇ ಆಚರಣೆಗೂ ಬರದೇ ಜೈಲಿನ ಕೊಠಡಿಯಲ್ಲೇ ಉಳಿದುಕೊಂಡಿದ್ದರು. ಕಳೆದ ವರ್ಷ ಸಾಲು ಸಾಲು ರಜೆ ಇದ್ದ ಕಾರಣ ಕುಟುಂಬಸ್ಥರ ಭೇಟಿಗೂ ಅವಕಾಶ ಸಿಕ್ಕಿರಲಿಲ್ಲ.

ಈ ಬಾರಿಯೂ ಗಣೇಶ ಹಬ್ಬ ಜೈಲಿನಲ್ಲೇ

ಈ ಬಾರಿಯೂ ನಟ ದರ್ಶನ್ ಗಣೇಶ ಹಬ್ಬ ಜೈಲಿನಲ್ಲೇ ಆಚರಿಸಬೇಕಾಗಿದೆ. ಪರಪ್ಪನ ಅಗ್ರಹಾರದಲ್ಲೂ ಗಣೇಶ ಹಬ್ಬ ಆಚರಿಸಲಾಗುತ್ತದೆ.

ಜೈಲಿನಲ್ಲಿ ದರ್ಶನ್ ಗ್ಯಾಂಗ್ ಮೇಲೆ ಹದ್ದಿನ ಕಣ್ಣು

ನಟ ದರ್ಶನ್ ಹಾಗೂ ಆತನ ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇವರ ಮೇಲೆ ಜೈಲು ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದಾರೆ. ಕಳೆದ ಬಾರಿ ಜೈಲಿನ ಲಾನ್‌ನಲ್ಲಿ ಕುಳಿತು ಸಿಗರೇಟು ಸೇದಿದ್ದ ದರ್ಶನ್ ಹಾಗೂ ಗ್ಯಾಂಗ್‌ಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿತ್ತು. ದಿನದ 24 ಗಂಟೆಯೂ ಜೈಲು ಸಿಬ್ಬಂದಿ ಗ್ಯಾಂಗ್ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ನೂತನ ಮಹಿಳಾ ಕೇಂದ್ರ ಕಾರಾಗೃಹ ಕೊಠಡಿ ಸಂಖ್ಯೆ 1 ರಲ್ಲಿ ದರ್ಶನ್ ಹಾಕಲಾಗಿದೆ. ಈ ಕೊಠಡಿಯಲ್ಲಿ 500 ಖೈದಿಗಳ ಸಾಮರ್ಥ್ಯ ಹೊಂದಿದೆ. ಸದ್ಯ ದರ್ಶನ್ ಹಾಗೂ ಆತನ ಗ್ಯಾಂಗ್ ಇದೇ ಕೊಠಡಿಯಲ್ಲಿದೆ. ದರ್ಶನ್ ಗ್ಯಾಂಗ್ ಮೇಲೆ ನಿಗಾವಹಿಸಲು ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ. ಇಬ್ಬರು ಜೈಲರ್, ಇಬ್ಬರು ಅಸಿಸ್ಟೆಂಟ್ ಜೈಲರ್ ಗಳಿಂದ ಉಸ್ತುವಾರಿ ವಹಿಸಲಾಗಿದೆ.

ಜೈಲಿನಲ್ಲಿ ದರ್ಶನ್ ಜೊತೆ ಯಾರ ಭೇಟಿಗೂ ಇಲ್ಲ ಅವಕಾಶ ನೀಡಿಲ್ಲ, ಇತ್ತ ಸಿಬ್ಬಂದಿ ಕೂಡ ವಿನಾ ಕಾರಣ ಮಾತನಾಡುವಂತಿಲ್ಲ. ಜೈಲು ಸಿಬ್ಬಂದಿಗೆ ಬಾಡಿ ಕ್ಯಾಮೆರಾ ನೀಡಲಾಗಿದೆ. ಬಾಡಿ ಕ್ಯಾಮೆರಾ ವಿಡಿಯೋಗಳನ್ನು ಹಿರಿಯ ಅಧಿಕಾರಿಗಳು ಗಮನಿಸುತ್ತಿದ್ದಾರೆ. ಜೈಲು ಕೊಠಡಿಯಲ್ಲಿ ಸುಮ್ಮನೆ ಇರಬೇಕು ಅಥವಾ ಪುಸ್ತಕ ಓದಲು ಅವಕಾಶ ನೀಡಲಾಗಿದೆ.