ಸಾರಿಗೆ ಬಸ್-ಟ್ರಾಕ್ಟರ್ ನಡುವೆ ಭೀಕರ ಅಪಘಾತ, ನಾಲ್ವರ ಕಾಲು ಮುರಿತ, ರಾಯಚೂರು ಸೀತಾ ನಗರದ ಬಳಿ ಈ ಅಫಘಾತ ಸಂಭವಿಸಿದೆ. ಹಲವರು ಗಾಯಗೊಂಡಿದ್ದು, ರೀಮ್ಸ್ ಆಸ್ಪತ್ರೆಯಲ್ಲಿ ಗಾಯಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.  

ರಾಯಚೂರು (ಅ.20) ಮಂಡ್ಯದಲ್ಲಿ ಕೆಎಸ್ಆರ್‌ಟಿಸಿ ಬಸ್ ಅಪಘಾತದ ಭೀಕರತೆ ಬೆನ್ನಲ್ಲೇ ಇದೀಗ ರಾಯಚೂರಿನಲ್ಲಿ ಸಾರಿಗೆ ಬಸ್ ಹಾಗೂ ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕಲ್ಮಾಲ ಬಳಿಯ ಸೀತಾ ನಗರ ಬಳಿ ಘಟನೆ ನಡೆದಿದೆ. ರಾಯಚೂರಿನಿಂದ ಲಿಂಗಸೂಗೂರು ಹೊರಟ ಬಸ್‌ಗೆ ಹತ್ತಿ ತುಂಬಿದ ಟ್ಯ್ರಾಕ್ಟರ್ ಡಿಕ್ಕಿಯಾಗಿದೆ. ಅತೀ ವೇಗದಲ್ಲಿ ಡಿಕ್ಕಿಯಾದ ಕಾರಣ ಅಪಘಾತದ ತೀವ್ರತೆ ಹೆಚ್ಚಾಗಿದೆ. ಘಟನೆಯಲ್ಲಿ ಬಸ್‌ನಲ್ಲಿದ್ದ ನಾಲ್ವರು ಪ್ರಯಾಣಿಕರ ಕಾಲು ಮುರಿತಗೊಂಡಿದೆ. ಹಲವು ಪ್ರಯಾಣಿಕರಿಗೆ ಗಾಯವಾಗಿದೆ. ಗಾಯಾಳುಗಳನ್ನು ರೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್‌ನಲ್ಲಿ ಹಲವರಿಗೆ ಗಂಭೀರ ಗಾಯ

ಅತೀ ವೇಗದಲ್ಲಿದ್ದ ಸಾರಿಗೆ ಬಸ್ ಹಾಗೂ ಟ್ರಾಕ್ಟರ್ ಡಿಕ್ಕಿಯಾದ ಕಾರಣ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ನರಸಮ್ಮ (50) ಲಕ್ಷ್ಮೀ (55) ಹುಸೇನ್ (54) ಹಾಗೂ ಕಲಂದಾರ್( 4 ) ಕಾಲು ಮುರಿತಗೊಂಡಿದೆ. ಕಲ್ಮಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ಆ್ಯಂಬುಲೆನ್ಸ್ ಮೂಲಕ ಗಾಯಾಳುಗಳನ್ನು ರೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಾಗಲಕೋಟೆಯಲ್ಲಿ ಕ್ರೂಸರ್ ಅಪಘಾತ

ಬಾಗಲಕೋಟೆಯಲ್ಲಿ ಕ್ರೂಸರ್ ವಾಹನ ಅಪಘಾತಗೊಂಡು 7 ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಗೊರಬಾಳದ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ಅಪಘಾತ ಸಂಭವಿಸಿದೆ. ಚಾಲನಕ ನಿಯಂತ್ರಣ ತಪ್ಪಿದ ಕ್ರೂಸರ್ ವಾಹನ 8 ಅಡಿ ಆಳಕ್ಕೆ ಬಿದ್ದಿದೆ. ಈ ವೇಳೆ ಹೈಟೆನ್ಶನ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ನಿಂತಿದೆ. ಹುಲಿಜಂತಿ ಮಾಳಿಂಗರಾಯ ದರ್ಶನಕ್ಕೆ ಹೊರಟಿದ್ದ ಭಕ್ತರು ಕ್ರೂಸರ್ ವಾಹನದ ಮೂಲಕ ತೆರಳುವಾಗ ಈ ಘಟನೆ ನಡೆದಿದೆ. ಕ್ರೂಸರ್ ವಾಹನದಲ್ಲಿ ಒಟ್ಟು 15 ಪ್ರಯಾಣಿಕರಿದ್ದರು.

ಸಾಗರದಲ್ಲಿ ಪ್ರವಾಸಿಗರ ಬಸ್ ಪಲ್ಟಿ - ತಪ್ಪಿತು ದೊಡ್ಡ ಅನಾಹುತ

ಬಳೆ ಪದ್ಮಾವತಿ ದರ್ಶನಕ್ಕೆ ಆಗಮಿಸುತ್ತಿದ್ದ ಪ್ರವಾಸಿಗರ ಖಾಸಗಿ ಬಸ್ ಪಲ್ಟಿಯಾಗಿ ಅಪಘಾತ ಸಂಭವಿಸಿರುವ ಘಟನೆ ಸಾಗರ ತಾಲೂಕಿನ ಆಡುಗಟ್ಟ ಬಳಿ ನಿನ್ನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ 45ಕ್ಕೂ ಹೆಚ್ಚು ಪ್ರವಾಸಿಗರರು ಖಾಸಗಿ ಬಸ್ ನಲ್ಲಿ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನ ಮುಗಿಸಿ ಕೊಂಡು ಕಾರ್ಗಲ್ ಸಮೀಪದಲ್ಲಿರುವ ಬಳೆ ಪದ್ಮಾವತಿ ದರ್ಶನಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಬಸ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಅಪಘಾತ ಸಂದರ್ಭದಲ್ಲಿ ಬಸ್ಸಿನಲ್ಲಿ ಇದ್ದ 18 ಪ್ರವಾಸಿಗರರಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಘಟನೆಯ ಮಾಹಿತಿ ಸಿಕ್ಕಿದ ತಕ್ಷಣ ಸಾಗರ ತಾಲೂಕಿನ ಕಾರ್ಗಲ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ದೊಡ್ಡಾಯಿಸಿ ಗಾಯಾಳುಗಳನ್ನು ಸ್ಥಳೀಯರ ಸಹಕಾರದೊಂದಿಗೆ ರಕ್ಷಣೆ ಮಾಡಿ ಸಾಗರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಕೊಡಲಾಯಿತು.