ಸ್ಪೀಕರ್‌ ಯು.ಟಿ.ಖಾದರ್‌ ಕೈಗೊಂಡಿರುವ ಕ್ರಮಗಳಲ್ಲಿ ಭ್ರಷ್ಟಾಚಾರವಾಗಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಕುರಿತು ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಯಾಗಲಿ ಎಂದು ಸಂಸದ ಕಾಗೇರಿ ಪುನರುಚ್ಚರಿಸಿದ್ದಾರೆ.

ಬೆಂಗಳೂರು (ನ.01): ಸ್ಪೀಕರ್‌ ಯು.ಟಿ.ಖಾದರ್‌ ಆಡಳಿತ ಸುಧಾರಣೆ ಭಾಗವಾಗಿ ಕೈಗೊಂಡಿರುವ ಕ್ರಮಗಳಲ್ಲಿ ಭ್ರಷ್ಟಾಚಾರವಾಗಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಕುರಿತು ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಯಾಗಲಿ ಎಂದು ಮಾಜಿ ಸ್ಪೀಕರ್‌, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪುನರುಚ್ಚರಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಂವಿಧಾನಬದ್ಧವಾದ ಸ್ಪೀಕರ್‌ ಸ್ಥಾನಕ್ಕೆ ವಿಶೇಷ ಗೌರವವಿದೆ. ಆದರೆ, ಕೆಲ ಪ್ರಕರಣಗಳಿಂದ ಆ ಪೀಠದ ಘನತೆ, ಗೌರವಕ್ಕೆ ಚ್ಯುತಿಯಾಗುತ್ತಿದೆ.

ಹೀಗಾಗಿ ಸ್ಪೀಕರ್ ಯು.ಟಿ.ಖಾದರ್‌ ಕೈಗೊಂಡಿರುವ ಕ್ರಮಗಳ ಕುರಿತು ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಮಾಡಿಲಿ. ತನಿಖೆಯಲ್ಲಿ ಯು.ಟಿ.ಖಾದರ್‌ ಅವರು ಎಲ್ಲ ಆರೋಪಗಳಿಂದ ಮುಕ್ತರಾಗಲಿ. ಆ ಮೂಲಕ ಸಾರ್ವಜನಿಕ ವಲಯದಲ್ಲಿನ ಚರ್ಚೆ ಅಂತ್ಯವಾಗಲಿದೆ ಎಂದರು. ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಗೆ ವಹಿಸಿದರೆ ತನಿಖಾ ನೇತೃತ್ವ ವಹಿಸುವ ನ್ಯಾಯಮೂರ್ತಿಗಳು ಅಪೇಕ್ಷಿಸಿದರೆ ದಾಖಲೆಗಳನ್ನು ಸಲ್ಲಿಸುವ ಬಗ್ಗೆ ಚಿಂತಿಸುತ್ತೇನೆ. ಅಭಿಪ್ರಾಯಗಳನ್ನು ಹೇಳಲು ನಮಗೆ ಸ್ವಾತಂತ್ರ್ಯವಿದೆ. ಹಾಲಿ ನ್ಯಾಯಮೂರ್ತಿಗಳಿಂದ ತನಿಖೆಯಾಗಲಿ ಎಂಬುದಷ್ಟೇ ನನ್ನ ಒತ್ತಾಯ ಎಂದು ಹೇಳಿದರು.

ಸ್ಪೀಕರ್‌ ಕಚೇರಿ ಆರ್‌ಟಿಐ ವ್ಯಾಪ್ತಿಗೆ ತನ್ನಿ

ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅವರ ನಡೆ ದಿನದಿಂದ ದಿನಕ್ಕೆ ವಿವಾದಕ್ಕೀಡಾಗುತ್ತಿದೆ. ಸ್ಪೀಕರ್ ಕಚೇರಿ ಮೂಲಕ ನಡೆದ ಕಾಮಗಾರಿಗಳಲ್ಲಿ ಹಗರಣಗಳ ವಾಸನೆ ಬರುತ್ತಿದೆ. ಈ ಕುರಿತು ಹೈಕೋರ್ಟ್‌ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಕಾಲಮಿತಿಯಲ್ಲಿ ತನಿಖೆ ನಡೆಸಿ ವರದಿ ನೀಡಬೇಕು ಎಂದು ಮಾಜಿ ಸ್ಪೀಕರ್‌, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದರು. ಜತೆಗೆ ಸ್ಪೀಕರ್‌ ಕಚೇರಿಯನ್ನು ಆರ್‌ಟಿಐ ವ್ಯಾಪ್ತಿಗೆ ತರಲು ಒತ್ತಾಯಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸ್ಪೀಕರ್ ಯು.ಟಿ. ಖಾದರ್ ವಿರುದ್ಧ ಹಲವಾರು ಆರೋಪಗಳು ಕೇಳಿ ಬರುತ್ತಿವೆ. ಸ್ಪೀಕರ್ ಕಚೇರಿ ಮೂಲಕ ನಡೆದ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದೊಂದು ಸಂವಿಧಾನ ಬದ್ಧ ಪೀಠವಾಗಿದೆ. ಆದರೆ, ಈಗ ಈ ಪೀಠಕ್ಕೆ ಅಗೌರವ ತರುವ ಕಾರ್ಯಗಳು ನಡೆಯುತ್ತಿವೆ ಎಂದರು. ಸಂವಿಧಾನದಲ್ಲಿ ಶಾಸಕಾಂಗಕ್ಕೆ ದೊಡ್ಡ ಜವಾಬ್ದಾರಿ ಇದೆ. ಸಭಾಪತಿಗಳ ಪೀಠಕ್ಕೆ ಇರುವ ಪರಮಾಧಿಕಾರ ಇನ್ಯಾವುದಕ್ಕೂ ಇಲ್ಲ. ಇಂತಹ ಪೀಠಕ್ಕೆ ಖಾದರ ಕಳಂಕ ತರುತ್ತಿದ್ದಾರೆ. ಅವರ ನಡವಳಿಕೆಯಿಂದ ಸಂವಿಧಾನ ಬದ್ಧವಾದ ಸಭಾಧ್ಯಕ್ಷ ಸ್ಥಾನ ವಿವಾದದ ಕೇಂದ್ರವಾಗುತ್ತಿದೆ ಎಂದು ಆರೋಪಿಸಿದರು.