ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕ್ರಿಶ್ಚಿಯನ್ ಕುರುಬ, ಲಿಂಗಾಯತ ದಲಿತ, ಬ್ರಾಹ್ಮಣ ಕ್ರಿಶ್ಚಿಯನ್ ಎಂಬುದನ್ನು ಸೃಷ್ಟಿ ಮಾಡಿದ್ದು ನಾನಲ್ಲ. ಕಾಂತರಾಜು ವರದಿಯಲ್ಲಿ ಜನರೇ ಸ್ವಯಂಪ್ರೇರಿತರಾಗಿ ಅದನ್ನು ಬರೆಸಿದ್ದಾರೆ.
ಮೈಸೂರು (ಅ.04): ನಾವು ಜಾತಿಗಳನ್ನು ಎಲ್ಲಿ ಒಡೆಯುತ್ತಿದ್ದೇವೆಂದು ತೋರಿಸಿ. ಬಿಜೆಪಿಯವರು ಮೋದಿ ಮೆಚ್ಚಿಸಲು ಏನೇನೋ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು. ಜಾತಿ ಗಣತಿ ಕುರಿತಾದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಕ್ರಿಶ್ಚಿಯನ್ ಕುರುಬ, ಲಿಂಗಾಯತ ದಲಿತ, ಬ್ರಾಹ್ಮಣ ಕ್ರಿಶ್ಚಿಯನ್ ಎಂಬುದನ್ನು ಸೃಷ್ಟಿ ಮಾಡಿದ್ದು ನಾನಲ್ಲ. ಕಾಂತರಾಜು ವರದಿಯಲ್ಲಿ ಜನರೇ ಸ್ವಯಂಪ್ರೇರಿತರಾಗಿ ಅದನ್ನು ಬರೆಸಿದ್ದಾರೆ. ಅದಕ್ಕೆ ನಾನು ಏನು ಮಾಡಲು ಸಾಧ್ಯ. ಜನ ಮತಾಂತರವಾಗಿದ್ದರೆ ಅದನ್ನು ಬರೆಸುತ್ತಾರೆ.
ಅದನ್ನು ಬರೆಸಬೇಡಿ ಎಂದು ಹೇಳಲು ನಾನು ಯಾರು ಎಂದು ಪ್ರಶ್ನಿಸಿದರು. ನಾವು ಮಾಡುತ್ತಿರುವುದು ಜಾತಿ ಗಣತಿ ಅಲ್ಲ. ಇದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ. ಕೇಂದ್ರದವರು ಜಾತಿ ಗಣತಿ ಮಾಡಿದರೆ ಅದು ಸರಿನಾ?. ನಾವು ಮಾಡಿದರೆ ತಪ್ಪಾ?. ಇದು ಯಾವ ನ್ಯಾಯ ಹೇಳಿ. ಬಿಜೆಪಿಯವರು ರಾಜಕೀಯಕ್ಕೆ ಅಷ್ಟೇ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾತಿ ಗಣತಿ ತೀವ್ರ ಪ್ರಗತಿಯಲ್ಲಿದೆ. ಮೂರೂವರೆ ಕೋಟಿ ಜನರ ಗಣತಿಯಾಗಿದೆ. ಇನ್ನೂ 3- 4 ದಿನ ಬಾಕಿ ಇದೆ. ಅಷ್ಟರೊಳಗೆ ರಾಜ್ಯದ ಒಂದೂವರೆ ಕೋಟಿ ಮನೆಯ ಗಣತಿ ಆಗುತ್ತದೆ. ನಿಗದಿತ ಅವಧಿಯೊಳಗೆ ಗಣತಿ ಪೂರ್ಣಗೊಳಿಸುತ್ತಾರೆ ಎಂಬ ವಿಶ್ವಾಸ ಇದೆ. ಇಲ್ಲದಿದ್ದರೆ ಅಂದಿನ ಸ್ಥಿತಿ ನೋಡಿ ತೀರ್ಮಾನ ಮಾಡುತ್ತೇವೆ. ಆರಂಭದ ಮೂರು ದಿನ ತಾಂತ್ರಿಕ ದೋಷದಿಂದ ಸ್ವಲ್ಪ ಸಮಸ್ಯೆ ಆಗಿದೆ. ನಂತರ ಯಾವ ಸಮಸ್ಯೆಯೂ ಉಂಟಾಗಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಟಾರ್ಗೆಟ್ ದಾಟಿದ ಜಾತಿಗಣತಿ
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿಗಣತಿ) ಆಮೆಗತಿಯ ಪ್ರಗತಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿ ಗುರಿ ನಿಗದಿಪಡಿಸಿದ ಬೆನ್ನಲ್ಲೇ ಸಮೀಕ್ಷಾ ಕಾರ್ಯ ಚುರುಕುಗೊಂಡಿದ್ದು, ಭಾನುವಾರ 12 ಲಕ್ಷ ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಭೆ ನಡೆಸಿ ನಿಗದಿಪಡಿಸಿದ್ದ (11.85 ಲಕ್ಷ) ನಿತ್ಯ ಸಮೀಕ್ಷಾ ಗುರಿ ನಿಗದಿಪಡಿಸಿದ್ದರು. ಇದರ ಗುರಿಯನ್ನು ಮೀರಿ ಭಾನುವಾರ ಸಾಧನೆ ಮಾಡಲಾಗಿದ್ದು, ಶೇ.10ರ ಬದಲು ಸುಮಾರು ಶೇ.11ರಷ್ಟು ಮನೆಗಳ ಸಮೀಕ್ಷೆಯನ್ನು ಒಂದೇ ದಿನ ನಡೆಸಲಾಗಿದೆ. ಇದರೊಂದಿಗೆ ಈವರೆಗೆ ಒಟ್ಟು 26 ಲಕ್ಷ ಕುಟುಂಬಗಳ 90 ಲಕ್ಷ ಮಂದಿ ವಿವರ ದಾಖಲು ಮಾಡಿದಂತಾಗಿದೆ.
ಸೆ.22 ರಿಂದ ಆರಂಭವಾದ ಸಮೀಕ್ಷೆಯಲ್ಲಿ ಸರ್ವರ್, ನೆಟ್‌ವರ್ಕ್, ಆ್ಯಪ್ ಸಮಸ್ಯೆ ಸೇರಿ ಹಲವು ಕಾರಣಗಳನ್ನು ಮೊದಲ ಐದು ದಿನ ಕೇವಲ 4.36 ಲಕ್ಷ ಕುಟುಂಬಗಳ ಸಮೀಕ್ಷೆ ನಡೆಸಲಾಗಿತ್ತು. ಈ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒಗಳೊಂದಿಗೆ ವರ್ಚುಯಲ್ ಸಭೆ ನಡೆಸಿ, ಸೆ.27 ರಿಂದ ಅ.7 ರವರೆಗೆ ಒಟ್ಟು ಸಮೀಕ್ಷಾ ಗುರಿಯ ಶೇ.10ರಷ್ಟು ಕುಟುಂಬಗಳ ಸಮೀಕ್ಷೆ ನಡೆಸಬೇಕು. ಅರ್ಥತ್ ನಿತ್ಯ ಕಡ್ಡಾಯವಾಗಿ 11,85,623 ಕುಟುಂಬಗಳ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ತಿಳಿಸಿದ್ದರು.
