ಆರ್‌ಎಸ್‌ಎಸ್ ಗೀತೆ ಹಾಡಿ ಕ್ಷಮೆ ಕೇಳಿದ ಡಿಕೆ ಶಿವಕುಮಾರ್ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ಹಿಂದುತ್ವದ ಮುಖವಾಡ ತೊಟ್ಟ ಡಿಕೆಶಿಗೆ ಹೈಕಮಾಂಡ್ ಬೆಂಬಲವಿಲ್ಲ ಎಂದು ಟೀಕಿಸಿದ್ದಾರೆ.
ಬೆಂಗಳೂರು: ಆರ್‌ಎಸ್‌ಎಸ್ ಗೀತೆ ಹೇಳಿದ್ದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಕ್ಷಮೆ ಕೇಳಿರುವ ವಿಷಯಕ್ಕೆ ಮಾಜಿ ಸಚಿವ, ಬಿಜೆಪಿ ನಾಯಕ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ. "ನಮಸ್ತೇ ಸದಾ ವತ್ಸಲೇ" ಎಂದರೆ ಕ್ಷಮೆ ಕೇಳಬೇಕು, ಆದರೆ "ಪಾಕಿಸ್ತಾನ್ ಜಿಂದಾಬಾದ್" ಎಂದರೂ ನೋ ಇಶ್ಯೂ! ಇದು ಕಾಂಗ್ರೆಸ್ ನ ಮನೋಭಾವ. ದೇಶದ್ರೋಹಿಗಳಿಗೆ ಮಾತ್ರ ಹೈಕಮಾಂಡ್ ಕರುಣೆ ಬದಲಾಗಿ ರಾಷ್ಟ್ರಭಕ್ತರಿಗಲ್ಲ. ಇದೇನಾ ನಿಮ್ಮ ಕಾಂಗ್ರೆಸ್ಸಿನವರ ಹೃದಯಲ್ಲಿ ಅಡಗಿರುವ ರಾಷ್ಟ್ರಭಕ್ತಿ ಎಂದು ಸಿ.ಟಿ. ರವಿ ಪ್ರಶ್ನೆ ಮಾಡಿದ್ದಾರೆ. ಧರ್ಮದ ಮುಂದೆ ಅಧರ್ಮವಾಗಲಿ, ಮುಖವಾಡದ ನಟನೆಯಾಗಲಿ ಹೆಚ್ಚು ಕಾಲ ಉಳಿಯಲಾರದು ಡಿಕೆ ಶಿವಕುಮಾರ್. ತಮ್ಮ ಹಿಂದುತ್ವದ ಮುಖವಾಡದ ಹಿಂದಿರುವ ಸತ್ಯ ಹೊರತರಲು ನಿಮ್ಮ ಹೈಕಮಾಂಡೇ ಬರಬೇಕಾಯಿತು ನೋಡಿ ಎಂದು ವ್ಯಂಗ್ಯ ಮಾಡಿದ್ದಾರೆ.
ಆಗಾಗ ನಾನೂ ಅಪ್ಪಟ ಹಿಂದೂ, ನಾನು ಶಿವಭಕ್ತ ಎನ್ನುತ್ತಿದ್ದ ಮಾನ್ಯ ಉಪಮುಖ್ಯಮಂತ್ರಿಗಳ ಕುರ್ಚಿ ಈಗ ಹೈ ಕಮಾಂಡ್ ಧಾಳಕ್ಕೆ ಸಿಲುಕಿ ಅಲುಗಾಡುತ್ತಿದೆ ಎಂದಾಗ, ಗೋಸುಂಬೆಯಂತೆ ಬಣ್ಣ ಬದಲಾಯಿಸಿ ಕ್ಷಮೆ ಕೇಳಿದ್ದೀರಿ ಎಂದಾದರೆ ಎಲ್ಲಿ ಹೋಯಿತು ನಿಮ್ಮ ಸ್ವಾಭಿಮಾನ ಎಂದು ಡಿ.ಕೆ.ಶಿವಕುಮಾರ್ ಅವರನ್ನು ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ನಕಲಿ ಗಾಂಧಿ ಕುಟುಂಬಕ್ಕೆ ಸಂಪೂರ್ಣ ಶರಣಾಗತರಾಗಿ, ಕುಕ್ಕರಿನಲ್ಲಿ ಬಾಂಬ್ ಇಟ್ಟ ಉಗ್ರಗಾಮಿಗಳು ನನ್ನ ಬ್ರದರ್ಸ್ ಎನ್ನುವ ತಮಗೆ ಹೈಕಮಾಂಡ್ ಮುಂದೆ ಸಮರ್ಥಿಸಿಕೊಳ್ಳುವ ಧೈರ್ಯವಾದರೂ ಎಲ್ಲಿಂದ ಬಂದೀತು. ಅಷ್ಟಕ್ಕೂ ನೀವು ರಾಷ್ಟ್ರವೇ ಶ್ರೇಷ್ಠ ಎಂದು ಉಚ್ಚರಿಸಿ, ಹೈಕಮಾಂಡ್ ಮುಂದೆ ಕ್ಷಮೆ ಕೇಳುವ ಪರಿಸ್ಥಿತಿಗೆ ಬಂದಿದ್ದೀರಿ ಎಂದಾದರೆ ನಿಮ್ಮ ವೈಯಕ್ತಿಕ ವರ್ಚಸ್ಸು ಏನಾಯಿತು? ಭರತ ಭೂಮಿಯಲ್ಲಿದ್ದು ಭಾರತಾಂಬೆಯನ್ನು ಪ್ರಾರ್ಥಿಸುವ ಒಂದಷ್ಟು ಸಾಲು ಪಟಿಸುವ ಸ್ವಾತಂತ್ರ್ಯವೂ ಕಾಂಗ್ರೆಸ್ ನಾಯಕರಿಗಿಲ್ಲ, ವಾಕ್ ಸ್ವಾತಂತ್ರ್ಯವಂತೂ ಮೊದಲೇ ಇಲ್ಲ. ಹೀಗಿರುವಾಗ ಕಾಂಗ್ರೆಸ್ ನಾಯಕರ ಪಾಲಿಗೆ ಪಕ್ಷದಲ್ಲಿ ಇನ್ಯಾವ ಸ್ವಾತಂತ್ರ್ಯ ಬಾಕಿ ಉಳಿದಿದೆ ? ಇದು ಹೀಗೆಯೇ ಮುಂದುವರೆದರೆ ಮುಂದೊಂದು ದಿನ ರಾಷ್ಟ್ರಗೀತೆ ಹೇಳುವುದೂ ಕಾಂಗ್ರೆಸ್ ನಲ್ಲಿ ಅಪರಾಧವಾದೀತು ಎಂದು ಎಕ್ಸ್ ಖಾತೆಯಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಬರೆದುಕೊಂಡಿದ್ದಾರೆ.
ಡಿಕೆಶಿ ಹೇಳಿಕೆಗೆ ವಿಜಯೇಂದ್ರ ಆಕ್ರೋಶ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ನಿಮ್ಮ ಪಕ್ಷದಲ್ಲಿ ನಿಮಗೆ ಎದುರಾಗಿರುವ ಕಂಟಕದಿಂದ ಪಾರಾಗಲು ಚಾಮುಂಡಿ ಬೆಟ್ಟ ಹಾಗೂ ಸಂಪ್ರದಾಯದ ದಸರೆಯನ್ನು ಬಳಸಿಕೊಳ್ಳಬೇಡಿ, ಬಂಡೆಯೆಂದು ಬೀಗುತ್ತಿದ್ದ ನೀವು ಈಗಾಗಲೇ ಮುದ್ದೆಯಾಗಿ ಹೋಗಿದ್ದೀರಿ, ಚಾಮುಂಡಿ ತಾಯಿಯನ್ನು ಕೆಣಕಲು ಹೋದರೆ ರಾಜಕೀಯವಾಗಿ ಭಸ್ಮವಾಗಿ ಹೋಗುವಿರಿ ಎಚ್ಚರ ಎಂದು ವಿಜಯೇಂದ್ರ ಹೇಳಿದ್ದಾರೆ.
ಪೈಪೋಟಿಯ ಮೇಲೆ ನೀವೂ, ನಿಮ್ಮ ಕಾಂಗ್ರೆಸಿಗರು ಹಿಂದೂ ಧರ್ಮದ ಅವಹೇಳನ, ಹಿಂದೂ ಧಾರ್ಮಿಕ ಕೇಂದ್ರಗಳ ಅಪಪ್ರಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದೀರಿ, ಇದೀಗ ಹಿಂದೂ ಪರಂಪರೆಯ ವಿಜಯ ದಶಮಿ ಹಬ್ಬವನ್ನು ಮಲಿನ ಮಾಡಲು ಹೊರಟಿದ್ದೀರಿ, ಮಹಿಷಾಸುರ ಮರ್ದಿನಿ ನಿಮ್ಮನ್ನು ಮರ್ದನ ಮಾಡುವ ಕಾಲ ದೂರವಿಲ್ಲ, “ಚಾಮುಂಡಿ ತಾಯಿ ಶ್ರದ್ಧೆಯ ಭಕ್ತರ ಸ್ವತ್ತು, ಅದನ್ನು ಮುಟ್ಟಲು ಹೋದರೆ ಕಾದಿದೆ ನಿಮಗೆ ಆಪತ್ತು ಎಂದು ಎಚ್ಚರಿಸಿದ್ದಾರೆ.
ಕಾಂಗ್ರೆಸ್‌ನಿಂದ ಪದೇ ಪದೇ ಓಲೈಕೆ ರಾಜಕಾರಣ
ಧರ್ಮಸ್ಥಳದ ಬಳಿಕ ನಾಡದೇವತೆ ಚಾಮುಂಡಿ ದೇವಿಯ ಜಾಗಕ್ಕೆ ಕಣ್ಣು ಹಾಕಿದ ಕಾಂಗ್ರೆಸ್! ಕಾಂಗ್ರೆಸ್ ಹೈಕಮಾಂಡ್ ಮೆಚ್ಚಿಸಲು ಡಿಸಿಎಂ ಡಿಕೆ ಶಿವಕುಮಾರ್ ಅವರು ಚಾಮುಂಡಿ ಬೆಟ್ಟ ಹಿಂದುಗಳದ್ದಲ್ಲ ಎಂದು ಘೋಷಿಸಿದ್ದಾರೆ. ಈ ಹಿಂದೆ ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ಮಾಡಿ ಹೈಕಮಾಂಡ್ ಒಲೈಸಿದ್ದ ಡಿಕೆಶಿ ಇಂದು ಚಾಮುಂಡಿ ಬೆಟ್ಟಕ್ಕೂ ಕನ್ನ ಹಾಕಲು ಮುಂದಾಗಿದ್ದಾರೆ. ಒಲೈಕೆ ರಾಜಕಾರಣಕ್ಕಾಗಿ ಹಿಂದೂಗಳ ಭಾವನೆಗೆ ಪದೇ ಪದೇ ಧಕ್ಕೆ ತರುತ್ತಿರುವ ಕಾಂಗ್ರೆಸ್ ಪಕ್ಷ, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ನಶಿಸಿ ಹೋಗಲಿದೆ ಇದು ಖಚಿತ- ನಿಶ್ಚಿತ ಎಂದು ಕರ್ನಾಟಕ ಬಿಜೆಪಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.
