ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ತಿದ್ದರೆ ಆರ್‌ಎಸ್‌ಎಸ್ ನಿಷೇಧ ಮಾಡಲಿ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಸವಾಲು ಹಾಕಿದ್ದಾರೆ. ರಾಜ್ಯ ಸರ್ಕಾರಕ್ಕೆ ಆರ್‌ಎಸ್‌ಎಸ್ ನಿಷೇಧಿಸುವ ಅಧಿಕಾರವೇ ಇಲ್ಲ, ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಹಲವು ನಾಯಕರು RSSನವರೇ ಆಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು (ಅ.12): ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ತಿದ್ದರೆ ಇಂದೇ ಆರ್‌ಎಸ್‌ಎಸ್ ನಿಷೇಧ ಮಾಡಲಿ. ಅದು ಸಾಧ್ಯವೇ ಇಲ್ಲ. ಕಾರಣ ರಾಜ್ಯ ಸರ್ಕಾರಕ್ಕೆ ಆರ್‌ಎಸ್‌ಎಸ್ ನಿಷೇಧ ಮಾಡುವ ಅಧಿಕಾರವೇ ಇಲ್ಲ. ಆದರೂ ಸುಮ್ಮನೆ ಮಾತನಾಡುವ ಚಟ ತೋರಿಸುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ಬುದ್ಧಿ ಭ್ರಮಣೆಯಾಗಿದೆ. ಈ ದೇಶದ ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯದ ರಾಜ್ಯಪಾಲರು, ಕೇಂದ್ರ ಗೃಹ ಸಚಿವರು ಹೀಗೆ ಎಲ್ಲರೂ ರಾಷ್ಟ್ರೀಯ ಸ್ವಯಂಸೇವಕ ಸಂಘದವರೇ ಆಗಿದ್ದಾರೆ. ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವ ಕಾಂಗ್ರೆಸ್ ಪಕ್ಷವನ್ನು ಮೊದಲು ನಿಷೇಧ ಮಾಡಬೇಕಿದೆ. ಕಾಂಗ್ರೆಸ್ ಪಕ್ಷ ಇದೀಗ ಕೆಲವೇ ರಾಜ್ಯಗಳಿಗೆ ಸೀಮಿತವಾಗಿದೆ. ಆದರೆ ಆರ್‌ಎಸ್‌ಎಸ್ ಇಡೀ ದೇಶದಲ್ಲಿದೆ. ಆರ್‌ಎಸ್‌ಎಸ್ ಮುಟ್ಟಲು ಯಾರಿಗೂ ಸಾಧ್ಯವಿಲ್ಲ. ಈ ಸಂಘವು ದೇಶದ ಯುವಜನರಿಗೆ ರಾಷ್ಟ್ರೀಯತೆಯನ್ನು ಕಲಿಸುವ ಒಂದು ಕೇಂದ್ರವಾಗಿದೆ. ಅಲ್ಲಿಗೆ ಯಾರು ಬೇಕಾದರೂ ಹೋಗಿ ಭಾಗವಹಿಸಬಹುದು. ಕಾಂಗ್ರೆಸ್‌ಗೆ ಆರ್‌ಎಸ್‌ಎಸ್ ನಿಷೇಧ ಮಾಡುವಷ್ಟು ತಾಕತ್ತು ಇಲ್ಲ ಎಂದರು.
ಆನೆಗೆ ಸೊಳ್ಳೆ ಕಥೆ ಹೇಳಿದಂತಿದೆ:
ಒಬ್ಬ ಸಚಿವನನ್ನು ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಆನೆಗೆ ಸೊಳ್ಳೆ ಬಂದು ಕಥೆ ಹೇಳುವಂತೆ ಆಗಿದೆ. ಸಿಎಂ ಸಿದ್ದರಾಮಯ್ಯನವರಿಗೆ ಏನು ಮಾಡುತ್ತಿದ್ದೇನೆ ಎಂದು ತಿಳಿದಿಲ್ಲ. ಸಚಿವ ಜಮೀರ್ ಅಹ್ಮದ್ ಆರ್‌ಎಸ್‌ಎಸ್ ಬಗ್ಗೆ ಮಾತನಾಡಿಲ್ಲ. ಅವರಷ್ಟು ಬುದ್ಧಿ ಉಳಿದ ಸಚಿವರಿಗೆ ಇಲ್ಲ. ದೇಶದ ಜನರು ಆರ್‌ಎಸ್‌ಎಸ್ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿದ್ದಾರೆ. ಆದ್ದರಿಂದ ಇಂತಹ ಸಂಘಟನೆಯನ್ನು ಏನೂ ಮಾಡಲು ಸಾಧ್ಯವಿಲ್ಲ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಕಾರ್ಯಕರ್ತರು, ಶಾಸಕರು, ಇದೇ ಆರ್‌ಎಸ್‌ಎಸ್ ನಾಯಕರ ಬಳಿಗೆ ಹೋಗಬೇಕಾಗುತ್ತದೆ ಎಂದರು.
ಪಾಕಿಸ್ತಾನ ಜನ ಮೋದಿ ದ್ವೇಷಿಸಿ, ರಾಹುಲ್ ಗಾಂಧಿ ಇಷ್ಟಪಡ್ತಾರೆ:
ಪಾಕಿಸ್ತಾನದ ಜನರು ಪ್ರಧಾನಿ ಮೋದಿಯನ್ನು ದ್ವೇಷ ಮಾಡಿ, ರಾಹುಲ್ ಗಾಂಧಿಯನ್ನು ಇಷ್ಟಪಡುತ್ತಾರೆ. ಆಪರೇಶನ್ ಸಿಂದೂರದ ವೇಳೆಯಲ್ಲೇ ಕಾಂಗ್ರೆಸ್‌ನ ಧೋರಣೆ ಗೊತ್ತಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ತಿದ್ದರೆ ಇಂದೇ ಆರ್‌ಎಸ್‌ಎಸ್ ನಿಷೇಧ ಮಾಡಲಿ. ಅಂತಹ ಅಧಿಕಾರ ಕಾಂಗ್ರೆಸ್‌ಗೆ ಇಲ್ಲ. ಅಧಿಕಾರವೇ ಇಲ್ಲದೆ ಮಾತನಾಡುವ ಚಟವನ್ನು ತೋರಿಸುತ್ತಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇತ್ತೀಚೆಗೆ ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ಆರ್‌ಎಸ್‌ಎಸ್ ಗೀತೆ ಹಾಡಿದ್ದಾರೆ. ಕಾಂಗ್ರೆಸ್‌ನ ದೊಡ್ಡ ನಾಯಕರು ಆರ್‌ಎಸ್‌ಎಸ್‌ನಲ್ಲೇ ಇದ್ದು ಬಂದಿದ್ದರು. ಕಾಂಗ್ರೆಸ್ ನಾಯಕರ ಮಾತುಗಳನ್ನು ಅವರ ಶಾಸಕರೇ ಕೇಳುವುದಿಲ್ಲ ಎಂದರು.
